ರಾಜಸ್ಥಾನ ರಾಯಲ್ಸ್ ಎದುರಿನ ಪಂದ್ಯಕ್ಕೆ ಆರ್‌ಸಿಬಿ ತಂಡದಲ್ಲಿ 2 ಮಹತ್ವದ ಬದಲಾವಣೆ?

Published : Apr 13, 2025, 01:56 PM ISTUpdated : Apr 13, 2025, 02:06 PM IST
ರಾಜಸ್ಥಾನ ರಾಯಲ್ಸ್ ಎದುರಿನ ಪಂದ್ಯಕ್ಕೆ ಆರ್‌ಸಿಬಿ ತಂಡದಲ್ಲಿ 2 ಮಹತ್ವದ ಬದಲಾವಣೆ?

ಸಾರಾಂಶ

ಜೈಪುರದಲ್ಲಿ ನಡೆಯುವ ಐಪಿಎಲ್‌ನ 28ನೇ ಪಂದ್ಯದಲ್ಲಿ ಆರ್‌ಸಿಬಿ ಮತ್ತು ರಾಜಸ್ಥಾನ ರಾಯಲ್ಸ್ ಮುಖಾಮುಖಿಯಾಗಲಿವೆ. ಕೊನೆಯ ಪಂದ್ಯದಲ್ಲಿ ಸೋತ ಆರ್‌ಸಿಬಿ ಗೆಲುವಿಗಾಗಿ ಕಾಯುತ್ತಿದೆ. ತಂಡದಲ್ಲಿ ಎರಡು ಬದಲಾವಣೆಗಳಾಗುವ ಸಾಧ್ಯತೆಯಿದೆ; ಪಡಿಕ್ಕಲ್ ಬದಲಿಗೆ ಸ್ವಸ್ತಿಕ್ ಚಿಕಾರ ಮತ್ತು ಲಿವಿಂಗ್‌ಸ್ಟೋನ್ ಬದಲಿಗೆ ಬೆಥೆಲ್ ಆಡುವ ನಿರೀಕ್ಷೆಯಿದೆ. ಆರ್‌ಸಿಬಿ ಹಸಿರು ಜೆರ್ಸಿಯಲ್ಲಿ ಆಡಲಿದ್ದು, ಈ ಜೆರ್ಸಿಯಲ್ಲಿ ಸೋಲಿನ ಸರಾಸರಿಯನ್ನು ಬದಲಿಸಲು ಪ್ರಯತ್ನಿಸಲಿದೆ.

ಬೆಂಗಳೂರು: 18ನೇ ಅವೃತ್ತಿಯ ಐಪಿಎಲ್ ಟೂರ್ನಿಯ 28ನೇ ಪಂದ್ಯದಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಸೂಪರ್ ಸಂಡೆಯ ಮೊದಲ ಪಂದ್ಯಕ್ಕೆ ಜೈಪುರದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂ ಆತಿಥ್ಯ ವಹಿಸಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ತಂಡವು ಎರಡು ಮಹತ್ವದ ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ.

ಉಭಯ ತಂಡಗಳು ತಾವಾಡಿದ ಕೊನೆಯ ಪಂದ್ಯದಲ್ಲಿ ಸೋಲು ಅನುಭವಿಸಿದೆ. ಅದರಲ್ಲೂ ಆರ್‌ಸಿಬಿ ತಂಡವು ತವರಿನಲ್ಲಿ ಸತತ ಎರಡನೇ ಸೋಲು ಅನುಭವಿಸಿದ್ದು, ಇದೀಗ ಗೆಲುವಿನ ಹಳಿಗೆ ಮರಳಲು ಎದುರು ನೋಡುತ್ತಿದೆ. ಇವತ್ತಿನ ಪಂದ್ಯವು ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಿಗೆ ಸಾಕಷ್ಟು ಮಹತ್ವದ್ದೆನಿಸಿದೆ. ಯಾಕೆಂದ್ರೆ ಆರ್‌ಸಿಬಿ ಆಡಿರುವ 5 ಪಂದ್ಯಗಳ ಪೈಕಿ ತವರಿನಲ್ಲಿ ಎರಡು ಪಂದ್ಯಗಳನ್ನು ಸೋತಿದ್ದರೇ, ಮೂರು ಪಂದ್ಯಗಳನ್ನು ತವರಿನಾಚೆ ಜಯಿಸಿದೆ. ಹೀಗಾಗಿ ಇದೀಗ ತವರಿನಾಚೆ ಮತ್ತೊಂದು ಪಂದ್ಯ ಗೆಲ್ಲಲು ಆರ್‌ಸಿಬಿ ಎದುರು ನೋಡುತ್ತಿದೆ. ಇನ್ನು ಇದೆಲ್ಲದರ ನಡುವೆ ಆರ್‌ಸಿಬಿ ತಂಡವು ಇಂದಿನ ಪಂದ್ಯದಲ್ಲಿಎರಡು ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.

ಆರ್‌ಸಿಬಿಗೆ ಇಂದು ರಾಯಲ್ಸ್‌ ಚಾಲೆಂಜ್; ಹಸಿರು ಜೆರ್ಸಿಯಲ್ಲಿಂದು ಬೆಂಗಳೂರು ಕಣಕ್ಕೆ

ಆರ್‌ಸಿಬಿ ಆರಂಭಿಕರಾಗಿ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಕಣಕ್ಕಿಳಿಯಲಿದ್ದಾರೆ. ಇನ್ನು ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿಯುವ ದೇವದತ್ ಪಡಿಕ್ಕಲ್‌ಗೆ ಇವತ್ತಿನ ಪಂದ್ಯದಲ್ಲಿ ವಿಶ್ರಾಂತಿ ನೀಡಿ ಯುವ ಬ್ಯಾಟರ್ ಸ್ವಸ್ತಿಕ್ ಚಿಕಾರಗೆ ಆರ್‌ಸಿಬಿ ಮಣೆ ಹಾಕುವ ಸಾಧ್ಯತೆಯಿದೆ. ಸ್ವಸ್ತಿಕ್ ಚಿಕಾರ ದೇಶಿ ಟಿ20 ಕ್ರಿಕೆಟ್‌ನಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿ ಗಮನ ಸೆಳೆದಿದ್ದಾರೆ. ಇನ್ನು ಕಳೆದ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ ನೀರಸ ಪ್ರದರ್ಶನ ತೋರಿದ್ದರು.

ಇನ್ನುಳಿದಂತೆ ನಾಲ್ಕನೇ ಕ್ರಮಾಂಕದಲ್ಲಿ ರಜತ್ ಪಾಟೀದಾರ್, ಕಾಣಿಸಿಕೊಳ್ಳಲಿದ್ದು, ಮಧ್ಯಮ ಕ್ರಮಾಂಕದಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್ ಅವರ ಸ್ಥಾನದ ಬಗ್ಗೆ ಪ್ರಶ್ನೆಗಳು ಏಳಲಾರಂಭಿಸಿವೆ. ಹೀಗಾಗಿ ಲಿವಿಂಗ್‌ಸ್ಟೋನ್‌ಗೆ ವಿಶ್ರಾಂತಿ ನೀಡಿ ಇಂಗ್ಲೆಂಡ್ ಯುವ ಎಡಗೈ ಬ್ಯಾಟರ್ ಜೇಕೋಬ್ ಬೆಥೆಲ್‌ಗೆ ಆರ್‌ಸಿಬಿ ಮಣೆ ಹಾಕುವ ಸಾಧ್ಯತೆಯಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇನ್ನುಳಿದಂತೆ ಯಾವುದೇ ಬದಲಾವಣೆ ಆಗುವ ಸಾಧ್ಯತೆ ಕಡಿಮೆಯಿದೆ. ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ, ಆಲ್ರೌಂಡರ್ ಟಿಮ್ ಡೇವಿಡ್ ಹಾಗೂ ಕೃನಾಲ್ ಪಾಂಡ್ಯ ಇಂದು ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ತೋರಬೇಕಿದೆ. 

246 ರನ್‌ ಚೇಸ್‌ ಮಾಡಿ ಗೆದ್ದ ಸನ್‌ರೈಸರ್ಸ್‌; ಅಭಿಷೇಕ್ ಆರ್ಭಟಕ್ಕೆ ಪಂಜಾಬ್ ಧೂಳೀಪಟ

ಇನ್ನು ಬೌಲಿಂಗ್ ವಿಭಾಗದಲ್ಲಿ ಯಶ್ ದಯಾಳ್ ಹಾಗೂ ಅನುಭವಿ ವೇಗಿಗಳಾದ ಜೋಶ್ ಹೇಜಲ್‌ವುಡ್ ಹಾಗೂ ಭುವನೇಶ್ವರ್ ಕುಮಾರ್ ಮಾರಕ ದಾಳಿ ಸಂಘಟಿಸಬೇಕಿದೆ. ಇನ್ನು ತಜ್ಞ ಸ್ಪಿನ್ನರ್ ಸುಯಾಶ್ ಶರ್ಮಾ ಅವರ ಮೇಲೂ ಸಾಕಷ್ಟು ನಿರೀಕ್ಷೆಗಳಿವೆ.

ಸಂಭಾವ್ಯ ಆಟಗಾರರು

ಆರ್‌ಸಿಬಿ: ಫಿಲ್‌ ಸಾಲ್ಟ್‌, ಕೊಹ್ಲಿ, ದೇವದತ್‌/ಸ್ವಸ್ತಿಕ್ ಚಿಕಾರ, ರಜತ್‌(ನಾಯಕ), ಲಿವಿಂಗ್‌ಸ್ಟೋನ್/ಬೆಥೆಲ್‌, ಜಿತೇಶ್‌, ಡೇವಿಡ್‌, ಕೃನಾಲ್‌, ಭುವನೇಶ್ವರ್‌, ಹೇಜಲ್‌ವುಡ್‌, ದಯಾಳ್‌, ಸುಯಶ್‌.

ಇತಿಹಾಸದ ಎದುರು ಹೋರಾಡಲು ಆರ್‌ಸಿಬಿ ರೆಡಿ

ಆರ್‌ಸಿಬಿ ತಂಡವಿಂದು ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೆ ಜೈಪುರದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂ ಆತಿಥ್ಯ ವಹಿಸಿದೆ. ಈ ಬಾರಿ ತವರಿನಾಚೆಯೇ ಮೂರು ಗೆಲುವು ದಾಖಲಿಸಿರುವ ಆರ್‌ಸಿಬಿ, ಇದೀಗ ಮತ್ತೊಂದು ಗೆಲುವಿನ ಕನಸು ಕಾಣುತ್ತಿದೆ. ಇವತ್ತಿನ ಪಂದ್ಯದಲ್ಲಿ ಆರ್‌ಸಿಬಿ ಇತಿಹಾಸದ ಎದುರು ಹೋರಾಡಬೇಕಿದೆ. ಯಾಕಂದ್ರೆ ಇವತ್ತು ಆರ್‌ಸಿಬಿ ಹಸಿರು ಜೆರ್ಸಿ ತೊಟ್ಟು ಕಣಕ್ಕಿಳಿಯುತ್ತಿದೆ.

ಆರ್‌ಸಿಬಿ ಕ್ರಿಕೆಟ್ ಆಡುವುದರ ಜತೆಜತೆಗೆ ಹಲವು ಸಮಾಜಮುಖಿ ಕೆಲಸಗಳನ್ನ ಮಾಡುತ್ತಾ ಬಂದಿದೆ. ಈ ಪೈಕಿ ಗೋ ಗ್ರೀನ್ ಕ್ಯಾಂಪೇನ್ ಕೂಡಾ ಒಂದು. 2011ರಿಂದ ಪರಿಸರ ಸಂರಕ್ಷಣೆ ಜಾಗೃತಿಗಾಗಿ ಪ್ರತಿ ವರ್ಷ ಆರ್‌ಸಿಬಿ ಒಂದು ಪಂದ್ಯದಲ್ಲಿ ಗ್ರೀನ್ ಜೆರ್ಸಿ ತೊಟ್ಟು ಕಣಕ್ಕಿಳಿಯುತ್ತಾ ಬಂದಿದೆ. ಆದ್ರೆ ಆರ್‌ಸಿಬಿ ಹಸಿರು ಜೆರ್ಸಿ ತೊಟ್ಟು ಕಣಕ್ಕಿಳಿದಾಗ ಗೆದ್ದಿದ್ದಕ್ಕಿಂತ ಸೋತಿದ್ದೇ ಹೆಚ್ಚು ಅನ್ನೋದು ವಿಪರ್ಯಾಸ.

ಆರ್‌ಸಿಬಿ ಇದುವರೆಗೂ 14 ಸೀಸನ್‌ನಲ್ಲಿ ಹಸಿರು ಜೆರ್ಸಿ ತೊಟ್ಟು ಕಣಕ್ಕಿಳಿದಿದೆ. ಈ ಪೈಕಿ 9 ಪಂದ್ಯಗಳಲ್ಲಿ ಆರ್‌ಸಿಬಿ ಸೋತಿದೆ. ಇನ್ನು 4 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಇನ್ನೊಂದು ಪಂದ್ಯ ರದ್ದಾಗಿತ್ತು. ಹೀಗಾಗಿ ಇವತ್ತಿನ ಪಂದ್ಯದಲ್ಲಿ ಆರ್‌ಸಿಬಿ, ರಾಜಸ್ಥಾನ ಮಣಿಸುವ ಮೂಲಕ ಗ್ರೀನ್ ಜೆರ್ಸಿಗೆ ಅಂಟಿದ ಸೋಲಿನ ಕಳಂಕ ತೊಡೆದುಹಾಕುತ್ತಾ ಕಾದು ನೋಡಬೇಕಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಭಾರತ-ದಕ್ಷಿಣ ಆಫ್ರಿಕಾ 2ನೇ ಟಿ20: ಮತ್ತೊಂದು ಗೆಲುವಿನ ವಿಶ್ವಾಸದಲ್ಲಿ ಟೀಂ ಇಂಡಿಯಾ!
ಚಿನ್ನಸ್ವಾಮಿಯಲ್ಲಿ ಮತ್ತೆ ಐಪಿಎಲ್ : ಇಂದು ನಿರ್ಧಾರ