ಐಪಿಎಲ್‌ನಲ್ಲಿ ಇಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗುತ್ತಿವೆ. ಡೆಲ್ಲಿ ಎಲ್ಲಾ ವಿಭಾಗದಲ್ಲೂ ಬಲಿಷ್ಠವಾಗಿದ್ದು, ಮುಂಬೈ ಗೆಲುವಿಗಾಗಿ ಪರದಾಡುತ್ತಿದೆ.
ನವದೆಹಲಿ: ಈ ಬಾರಿ ಐಪಿಎಲ್‌ನಲ್ಲಿ ಸೋಲೇ ಕಾಣದ ಏಕೈಕ ತಂಡ ಡೆಲ್ಲಿ ಕ್ಯಾಪಿಟಲ್ಸ್. ಆಡಿರುವ 4 ಪಂದ್ಯಗಳಲ್ಲೂ ಜಯಭೇರಿ ಬಾರಿಸಿರುವ ಡೆಲ್ಲಿ, ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಾಡಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಂ ಆತಿಥ್ಯ ವಹಿಸಿದೆ.
ಲಖನೌ ಸೂಪರ್ ಜೈಂಟ್ಸ್, ಸನ್‌ರೈಸರ್ಸ್ ಹೈದ್ರಾಬಾದ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಆರ್‌ಸಿಬಿಯನ್ನು ಸೋಲಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ತಂಡ ಎಲ್ಲಾ ವಿಭಾಗದಲ್ಲೂ ಬಲಿಷ್ಠವಾಗಿದ್ದು, ಅಧಿಕಾರಯುತ ಗೆಲುವು ಸಾಧಿಸಿದೆ. ನಾಯಕತ್ವದ ಒತ್ತಡವಿಲ್ಲದೆ ಆಡುತ್ತಿರುವ ಕರ್ನಾಟಕದ ಕೆ.ಎಲ್.ರಾಹುಲ್, ತಮ್ಮ ಆಕರ್ಷಕ ಆಟದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅವರಿಂದ ತಂಡ ಮತ್ತೊಂದು ದೊಡ್ಡ ಇನ್ನಿಂಗ್ಸ್ ನಿರೀಕ್ಷೆಯಲ್ಲಿದೆ. ಇನ್ನುಳಿದಂತೆ ಜೇಕ್‌ಪ್ರೇಸರ್ ಮೆಕ್‌ಗರ್ಕ್, ಫಾಫ್ ಡು ಪ್ಲೆಸಿಸ್, ಟ್ರಿಸ್ಟಿನ್ ಸ್ಟಬ್ಸ್ ಹಾಗೂ ಅಶುತೋಶ್ ಶರ್ಮಾ ಅಬ್ಬರಿಸಿದರೆ, ಬೃಹತ್ ಮೊತ್ತ ದಾಖಲಾಗುವ ಸಾಧ್ಯತೆಯಿದೆ. ಇನ್ನು ಬೌಲಿಂಗ್‌ನಲ್ಲಿ ಮಿಚೆಲ್ ಸ್ಟಾರ್ಕ್, ಕುಲ್ದೀಪ್ ಯಾದವ್, ವಿಪ್ರಜ್ ನಿಗಮ್ ತಂಡಕ್ಕೆ ಆಧಾರಸ್ತಂಭ.
ಇದನ್ನೂ ಓದಿ: ಐಪಿಎಲ್ 2025 ರಲ್ಲಿ ಧೂಳೆಬ್ಬಿಸಿದ ಭಾರತದ ಟಾಪ್ 5 ಯುವ ಕ್ರಿಕೆಟಿಗರಿವರು!
ಇನ್ನು, 5 ಬಾರಿ ಚಾಂಪಿಯನ್ ಮುಂಬೈ 5 ಪಂದ್ಯಗಳಲ್ಲಿ ಕೇವಲ 1ರಲ್ಲಿ ಗೆದ್ದಿದೆ. ತಂಡದಲ್ಲಿ ಅನುಭವಿ ಹಾಗೂ ಹಲವು ಪ್ರತಿಭಾವಂತ ಯುವ ಆಟಗಾರರಿದ್ದರೂ ಗೆಲುವು ಸಿಗುತ್ತಿಲ್ಲ. ರೋಹಿತ್ ಶರ್ಮಾ ರನ್ ಗಳಿಸಲು ಪರದಾಡುತ್ತಿದ್ದಾರೆ. ರೋಹಿತ್ ಶರ್ಮಾ ಕಳೆದ 11 ಐಪಿಎಲ್ ಇನ್ನಿಂಗ್ಸ್‌ನಲ್ಲಿ ಕೇವಲ ಒಮ್ಮೆ ಮಾತ್ರ 20+ ರನ್ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ಫಾರ್ಮ್ ಮುಂಬೈ ಪಾಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇನ್ನು ಸೂರ್ಯಕುಮಾರ್ ಕೂಡಾ ಅಬ್ಬರಿಸುತ್ತಿಲ್ಲ. ಕೆಕೆಆರ್ ಎದುರು ರಿಯಾಲ್ ರಿಕೆಲ್ಟನ್ ಮತ್ತೊಮ್ಮೆ ಸ್ಪೋಟಕ ಆರಂಭ ಒದಗಿಸಿಕೊಡಲು ಎದುರು ನೋಡುತ್ತಿದ್ದಾರೆ. ವಿಲ್ ಜ್ಯಾಕ್ಸ್ ಹಾಗೂ ತಿಲಕ್ ವರ್ಮಾ ತಮ್ಮ ಸಾಮರ್ಥ್ಯಕ್ಕೆ ತಕ್ಕಂತ ಆಟ ಆಡಬೇಕಿದೆ. ನಾಯಕ ಹಾರ್ದಿಕ್ ಪಾಂಡ್ಯ ತಮ್ಮ ಆಲ್ರೌಂಡ್ ಪ್ರದರ್ಶನದ ಮೂಲಕ ತಂಡವನ್ನು ಗೆಲ್ಲಿಸಲು ಎದುರು ನೋಡುತ್ತಿದ್ದಾರೆ.
ಬೌಲಿಂಗ್‌ನಲ್ಲಿ ಜಸ್ಪ್ರೀತ್ ಬುಮ್ರಾಗೆ ಉತ್ತಮ ಬೆಂಬಲ ಸಿಗಬೇಕಿದೆ. ಹಾರ್ದಿಕ್ ಆಲ್ರೌಂಡ್ ಆಟ ತಂಡಕ್ಕೆ ನಿರ್ಣಾಯಕ. ದೀಪಕ್ ಚಹರ್ ಹಾಗೂ ಟ್ರೆಂಟ್ ಬೌಲ್ಟ್ ಪವರ್‌ಪ್ಲೇ ನಲ್ಲೇ ಎದುರಾಳಿ ಪಡೆಯ ವಿಕೆಟ್ ಕಬಳಿಸುವ ಮೂಲಕ ಉತ್ತಮ ಆರಂಭ ಒದಗಿಸಿಕೊಡುವ ವಿಶ್ವಾಸದಲ್ಲಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ RCB ಸೋಲಿಗೆ ಸಿದ್ದರಾಮಯ್ಯರನ್ನು ಟ್ರೋಲ್ ಮಾಡಿದ ನೆಟ್ಟಿಗರು!
ಬೃಹತ್ ಮೊತ್ತಕ್ಕೆ ಸಾಕ್ಷಿಯಾಗುತ್ತಾ ಡೆಲ್ಲಿ?
ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ 10 ಪಂದ್ಯಗಳ ಪೈಕಿ 8 ಪಂದ್ಯಗಳಲ್ಲಿ 200+ ರನ್ ದಾಖಲಾಗಿತ್ತು. ಹಾಗಾಗಿ ಇಂದು ನಡೆಯುವ ಪಂದ್ಯದಲ್ಲೂ ಬೃಹತ್ ಮೊತ್ತ ದಾಖಲಾಗುವ ಸಾಧ್ಯತೆಯಿದೆ. ಯಾಕೆಂದರೆ ಎರಡೂ ತಂಡದಲ್ಲೂ ಟಿ20 ಸ್ಪೆಷಲಿಸ್ಟ್ ಹೊಡಿಬಡಿ ಆಟಗಾರರು ಇದ್ದಾರೆ. ಹೀಗಾಗಿ ಇಂದು ಬೌಂಡರಿ-ಸಿಕ್ಸರ್‌ಗಳ ಸುರಿಮಳೆ ಸುರಿಯುವ ಸಾಧ್ಯತೆಯಿದೆ.
ಉಭಯ ತಂಡಗಳ ಸಂಭಾವ್ಯ ಆಟಗಾರರ ಪಟ್ಟಿ ಹೀಗಿದೆ:
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ರಿಯಾನ್ ರಿಕಲ್ಟನ್(ವಿಕೆಟ್ ಕೀಪರ್), ವಿಲ್ ಜ್ಯಾಕ್ಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ(ನಾಯಕ), ನಮನ್ ಧಿರ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ, ವಿಘ್ನೇಶ್ ಪುತೂರ್.
ಡೆಲ್ಲಿ ಕ್ಯಾಪಿಟಲ್ಸ್: ಜೇಕ್ ಫ್ರೇಸರ್ ಮೆಕ್‌ಗುರ್ಕ್, ಫಾಫ್ ಡು ಪ್ಲೆಸಿಸ್, ಅಭಿಷೇಕ್ ಪೊರೆಲ್, ಕೆ ಎಲ್ ರಾಹುಲ್(ವಿಕೆಟ್ ಕೀಪರ್), ಟ್ರಿಸ್ಟಿನ್ ಸ್ಟಬ್ಸ್, ಅಕ್ಷರ್ ಪಟೇಲ್(ನಾಯಕ), ಅಶುತೋಷ್ ಶರ್ಮಾ, ವಿಪ್ರಜ್ ನಿಗಮ್, ಮಿಚೆಲ್ ಸ್ಟಾರ್ಕ್, ಮೋಹಿತ್ ಶರ್ಮಾ, ಕುಲ್ದೀಪ್ ಯಾದವ್, ಮುಕೇಶ್ ಕುಮಾರ್.
ಪಂದ್ಯ: ಸಂಜೆ 7.30ಕ್ಕೆ