ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯ ಆಟಗಾರರ ಹರಾಜು
15 ಲಕ್ಷ ರುಪಾಯಿಗೆ ಶಿವಮೊಗ್ಗ ಲಯನ್ಸ್ ಪಾಲಾದ ಅಭಿನವ್ ಮನೋಹರ್
ಮಯಾಂಕ್ ಅಗರ್‌ವಾಲ್‌ಗೆ ಜಾಕ್‌ಪಾಟ್
ಬೆಂಗಳೂರು(ಜು.23): ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಆಯೋಜಿಸುವ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯ ಆಟಗಾರರ ಹರಾಜಿನಲ್ಲಿ ತಾರಾ ಬ್ಯಾಟರ್‌ಗಳಾದ ಅಭಿನವ್ ಮನೋಹರ್ ಹಾಗೂ ಮಯಾಂಕ್ ಅಗರ್‌ವಾಲ್ ದುಬಾರಿ ಆಟಗಾರರಾಗಿ ಹೊರಹೊಮ್ಮಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದ 700ಕ್ಕೂ ಹೆಚ್ಚು ಆಟಗಾರರ ಪೈಕಿ ಒಟ್ಟು 106 ಮಂದಿ 6 ವಿವಿಧ ತಂಡಗಳಿಗೆ ಸೇರ್ಪಡೆಯಾದರು.
ನಿರೀಕ್ಷೆಯಂತೆಯೇ ಅನುಭವಿ ಆಟಗಾರರಿಗೆ ಫ್ರಾಂಚೈಸಿಗಳು ಮಣೆ ಹಾಕಿದವು. ‘ಎ’ ವಿಭಾಗದಲ್ಲಿದ್ದು 2 ಲಕ್ಷ ರು. ಮೂಲಬೆಲೆ ಹೊಂದಿದ್ದ ಅಭಿನವ್ 15 ಲಕ್ಷ ರು.ಗೆ ಶಿವಮೊಗ್ಗ ತಂಡಕ್ಕೆ ಬಿಕರಿಯಾಗಿದ್ದು, ಟೂರ್ನಿಯ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ ಎನ್ನುವ ಹಿರಿಮೆಗೆ ಪಾತ್ರರಾದರು.
Maharaja Trophy T20 ಹರಾಜು: ದುಬಾರಿ ಮೊತ್ತಕ್ಕೆ ಶಿವಮೊಗ್ಗ ಪಾಲಾದ ಪಿಂಚ್ ಹಿಟ್ಟರ್ ಅಭಿಮನ್ ಮನೋಹರ್
ಅಂತಾರಾಷ್ಟ್ರೀಯ ಆಟಗಾರ, ಐಪಿಎಲ್‌ನಲ್ಲಿ ಹಲವು ವರ್ಷಗಳ ಅನುಭವ ಹೊಂದಿರುವ ಮಯಾಂಕ್ 14 ಲಕ್ಷ ರು.ಗೆ ಬೆಂಗಳೂರು ಬ್ಲಾಸ್ಟರ್ಸ್ ಪಾಲಾದರು. ಉಳಿದಂತೆ ದೇವದತ್ ಪಡಿಕ್ಕಲ್‌ರನ್ನು 13 ಲಕ್ಷ ರು.ಗೆ ಹಾಲಿ ಚಾಂಪಿಯನ್ ಗುಲ್ಬರ್ಗಾ ಮಿಸ್ಟಿಕ್ಸ್ ಖರೀದಿಸಿದರೆ, ಮನೀಶ್ ಪಾಂಡೆಗೆ 10.6 ಲಕ್ಷ ರು. ನೀಡಿ ಹುಬ್ಬಳ್ಳಿ ಟೈಗರ್ಸ್ ತನ್ನತ್ತ ಸೆಳೆಯಿತು.
ಯುವಕರಿಗೂ ಆದ್ಯತೆ
ಕಳೆದ ಆವೃತ್ತಿಯ ಮಹಾರಾಜ ಟ್ರೋಫಿಯಲ್ಲಿ ಮಿಂಚಿದ್ದ, ಇತ್ತೀಚೆಗೆ ದೇಸಿ ಟೂರ್ನಿಗಳಲ್ಲಿ ಗಮನ ಸೆಳೆದಿದ್ದ ಆಟಗಾರರಿಗೂ ಹರಾಜಿನಲ್ಲಿ ಬೇಡಿಕೆ ಕಂಡು ಬಂತು. ಬ್ಯಾಟರ್‌ಗಳಾದ ಎಲ್.ಆರ್.ಚೇತನ್, ರೋಹನ್ ಪಾಟೀಲ್, ನಿಕಿನ್ ಜೋಸ್, ಲುವ್ನಿತ್ ಸಿಸೋಡಿಯಾ, ಆಲ್ರೌಂಡರ್ ಮನೋಜ್ ಭಾಂಡ್ಗೆ, ವೇಗಿಗಳಾದ ವಿದ್ವತ್ ಕಾವೇರಪ್ಪ, ವೈಶಾಖ್ ವಿಜಯ್‌ಕುಮಾರ್, ಎಂ.ವೆಂಕಟೇಶ್, ವಿದ್ಯಾಧರ್ ಪಾಟೀಲ್ ಸಹ ಉತ್ತಮ ಮೊತ್ತಕ್ಕೆ ಬಿಕರಿಯಾದರು.
ಗರಿಷ್ಠ ಮಿತಿ ತಲುಪಿದ ತಂಡಗಳು
ಪ್ರತಿ ಫ್ರಾಂಚೈಸಿಗೆ ಆಟಗಾರರ ಖರೀದಿಗೆ ತಲಾ 50 ಲಕ್ಷ ರು. ಬಳಸುವ ಅವಕಾಶವಿತ್ತು. ಈ ಪೈಕಿ ಗುಲ್ಬರ್ಗಾ ಗರಿಷ್ಠ ಅಂದರೆ 49.55 ಲಕ್ಷ ರು. ಖರ್ಚು ಮಾಡಿದರೆ, ಮಂಗಳೂರು ಡ್ರ್ಯಾಗನ್ಸ್ ಎಲ್ಲರಿಗಿಂತ ಕಡಿಮೆ, 47.05 ಲಕ್ಷ ರು. ಬಳಸಿತು. ಪ್ರತಿ ತಂಡವು ಕನಿಷ್ಠ 16, ಗರಿಷ್ಠ 18 ಆಟಗಾರರನ್ನು ಖರೀದಿಸಬಹುದಿತ್ತು. ಎಲ್ಲಾ 6 ತಂಡಗಳು ತಲಾ 18 ಆಟಗಾರರನ್ನು ಖರೀದಿಸಿದವು. ಒಟ್ಟಾರೆ 6 ತಂಡಗಳು ಸೇರಿ 2.90 ಕೋಟಿ ರು. ಖರ್ಚು ಮಾಡಿದವು. ಈ ಬಾರಿ ಟೂರ್ನಿ ಆ.14ರಿಂದ 30ರ ವರೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಯಾವ ಆಟಗಾರರು ಯಾವ ತಂಡಕ್ಕೆ?
ಮಂಗಳೂರು ಡ್ರ್ಯಾಗನ್ಸ್ & ಗುಲ್ಬರ್ಗಾ ಮಿಸ್ಟಿಕ್ಸ್ ತಂಡಗಳು:
ಬೆಂಗಳೂರು ಬ್ಲಾಸ್ಟರ್ಸ್ & ಹುಬ್ಳಿ ಟೈಗರ್ಸ್
ಮೈಸೂರು ವಾರಿಯರ್ಸ್ & ಶಿವಮೊಗ್ಗ ಲಯನ್ಸ್