* ವೃತ್ತಿಜೀವನದ 76ನೇ ಶತಕ ಸಿಡಿಸಿ ಮಿಂಚಿದ ವಿರಾಟ್ ಕೊಹ್ಲಿ
* ಟೆಸ್ಟ್ ಕ್ರಿಕೆಟ್‌ನಲ್ಲಿ 29ನೇ ಶತಕ ಬಾರಿಸಿದ ಕಿಂಗ್ ಕೊಹ್ಲಿ
* ಅನುಷ್ಕಾ ಶರ್ಮಾ ಪೋಸ್ಟ್ ವೈರಲ್
ಪೋರ್ಟ್ ಆಫ್ ಸ್ಪೇನ್(ಜು.22): ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ 500ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡುತ್ತಿದ್ದು, 76ನೇ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ವಿರಾಟ್ ಕೊಹ್ಲಿ ಬಾರಿಸಿದ ಆಕರ್ಷಕ ಶತಕದ ನೆರವಿನಿಂದ ಟೀಂ ಇಂಡಿಯಾ, ವೆಸ್ಟ್ ಇಂಡೀಸ್ ಎದುರಿನ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 438 ರನ್ ಬಾರಿಸುವಲ್ಲಿ ಯಶಸ್ವಿಯಾಗಿದೆ. ವೆಸ್ಟ್ ಇಂಡೀಸ್ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಲು ವಿಫಲವಾಗಿದ್ದ ವಿರಾಟ್ ಕೊಹ್ಲಿ, ಇದೀಗ ಎರಡನೇ ಟೆಸ್ಟ್ ಪಂದ್ಯದಲ್ಲಿ 206 ಎಸೆತಗಳನ್ನು ಎದುರಿಸಿ 121 ರನ್ ಬಾರಿಸುವಲ್ಲಿ ಯಶಸ್ವಿಯಾದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಇದು ವಿರಾಟ್ ಕೊಹ್ಲಿ ಬಾರಿಸಿದ 29ನೇ ಶತಕ ಎನಿಸಿಕೊಂಡಿತು. ಈ ಮೂಲಕ ಕ್ರಿಕೆಟ್ ದಂತಕಥೆ ಸರ್ ಡಾನ್ ಬ್ರಾಡ್ಮನ್ ಶತಕಗಳ ದಾಖಲೆ(29) ಸರಿಗಟ್ಟುವಲ್ಲಿ ವಿರಾಟ್ ಕೊಹ್ಲಿ ಯಶಸ್ವಿಯಾಗಿದ್ದಾರೆ.
ಒಂದು ಹಂತದಲ್ಲಿ 182ಕ್ಕೆ 4 ವಿಕೆಟ್ ಕಳೆದುಕೊಂಡ ಭಾರತಕ್ಕೆ ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಆಸರೆಯಾದರು. ಇವರಿಬ್ಬರ ಜವಾಬ್ದಾರಿಯುತ ಆಟದಿಂದಾಗಿ ಮೊದಲ ದಿನದಂತ್ಯಕ್ಕೆ 4 ವಿಕೆಟ್‌ಗೆ 288 ರನ್ ಗಳಿಸಿದ ಭಾರತ 2ನೇ ದಿನವಾದ ಶನಿವಾರವೂ ಮೇಲುಗೈ ಸಾಧಿಸಿತು. ಈ ಜೋಡಿ 5ನೇ ವಿಕೆಟ್‌ಗೆ 159 ರನ್ ಜೊತೆಯಾಟವಾಡಿ ತಂಡವನ್ನು ಮೇಲೆತ್ತಿತು. 500ನೇ ಅಂತಾರಾಷ್ಟ್ರೀಯ ಪಂದ್ಯವಾಡುತ್ತಿರುವ ವಿರಾಟ್ ಕೊಹ್ಲಿ ಟೆಸ್ಟ್‌ನಲ್ಲಿ 29ನೇ ಹಾಗೂ ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 76ನೇ ಶತಕ ಪೂರ್ತಿಗೊಳಿಸಿದರು. 206 ಎಸೆತಗಳಲ್ಲಿ 11 ಬೌಂಡರಿಗಳೊಂದಿಗೆ 121 ರನ್ ಸಿಡಿಸಿದ ಅವರು ರನ್‌ಔಟ್ ಆದರೆ, ಜಡೇಜಾ ಟೆಸ್ಟ್‌ನಲ್ಲಿ 19ನೇ ಅರ್ಧಶತಕ ಪೂರ್ಣಗೊಳಿಸಿದರು. ಅವರು 152 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ 61 ರನ್ ಸಿಡಿಸಿದರು.
ಕ್ರಿಕೆಟ್ ದಂತಕಥೆ ಬ್ರಿಯನ್ ಲಾರಾ ಅಪರೂಪದ ದಾಖಲೆ ಮುರಿದ ಕಿಂಗ್ ಕೊಹ್ಲಿ..!
ಮೊದಲ ದಿನದಾಟದಂತ್ಯದ ವೇಳೆಗೆ ಅಜೇಯ 87 ರನ್ ಬಾರಿಸಿದ್ದ ವಿರಾಟ್ ಕೊಹ್ಲಿ, ಎರಡನೇ ದಿನದಾಟದ ಆರಂಭದಲ್ಲೇ ಶೆನೊನ್ ಗೇಬ್ರಿಲ್ ಬೌಲಿಂಗ್‌ನಲ್ಲಿ ಆಕರ್ಷಕ ಕವರ್ ಡ್ರೈವ್ ಬೌಂಡರಿ ಬಾರಿಸುವ ಮೂಲಕ ಮೂರಂಕಿ ಮೊತ್ತ ದಾಖಲಿಸುವಲ್ಲಿ ಸಫಲರಾದರು. ವಿರಾಟ್ ಕೊಹ್ಲಿ ಶತಕ ಬಾರಿಸಿದ ಕ್ಷಣದ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಪತ್ನಿ ಅನುಷ್ಕಾ ಶರ್ಮಾ, ಹಾರ್ಟ್ ಎಮೊಜಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ವಿರುಷ್ಕಾ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
Anushka Sharma's Instagram story for King Kohli. pic.twitter.com/Azj3edz6RB
— Johns. (@CricCrazyJohns)ವಿದೇಶಿ ನೆಲದಲ್ಲಿ ಶತಕದ ಬರ ನೀಗಿಸಿಕೊಂಡ ಕೊಹ್ಲಿ: ವಿಂಡೀಸ್ ಎದುರಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಕರ್ಷಕ ಶತಕ ಸಿಡಿಸುವ ಮೂಲಕ ಬರೋಬ್ಬರಿ 5 ವರ್ಷಗಳ ಬಳಿಕ ವಿದೇಶಿ ನೆಲದಲ್ಲಿ ಶತಕದ ಬರ ನೀಗಿಸಿಕೊಳ್ಳುವಲ್ಲಿ ಯಶಸ್ವಿಯಾದರು. 2018ರ ಡಿಸೆಂಬರ್‌ನಲ್ಲಿ ಪರ್ತ್‌ನಲ್ಲಿ ಆಸ್ಟ್ರೇಲಿಯಾ ಎದುರು ವಿದೇಶಿ ನೆಲದಲ್ಲಿ ಕೊನೆಯ ಟೆಸ್ಟ್ ಶತಕ ಸಿಡಿಸಿದ್ದರು. ಇದಾದ ಬಳಿಕ ಪದೇ ಪದೇ ವಿದೇಶಿ ನೆಲದಲ್ಲಿ ಮೂರಂಕಿ ಮೊತ್ತ ದಾಖಲಿಸಲು ವಿರಾಟ್ ಕೊಹ್ಲಿ ವಿಫಲವಾಗುತ್ತಾ ಬಂದಿದ್ದರು. ಇದೀಗ ತಮ್ಮ ಕ್ರಿಕೆಟ್ ವೃತ್ತಿಜೀವನದ 500ನೇ ಇಂಟರ್ ನ್ಯಾಷನಲ್ ಪಂದ್ಯವನ್ನಾಡುತ್ತಿರುವ ವಿರಾಟ್ ಕೊಹ್ಲಿ ಶತಕ ಸಿಡಿಸುವ ಮೂಲಕ, ಈ ಪಂದ್ಯವನ್ನು ಸ್ಮರಣೀಯವಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.