
ಕೋಲ್ಕತಾ: ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಶನಿವಾರದ ಪಂದ್ಯ ಮಳೆಯಿಂದಾಗಿ ರದ್ದಗೊಂಡಿದೆ. ಹೀಗಾಗಿ ಎರಡೂ ತಂಡಗಳು ತಲಾ ಒಂದು ಅಂಕ ಪಡೆದವು. ಇದರೊಂದಿಗೆ ಮುಂಬೈ ಇಂಡಿಯನ್ಸ್ ತಂಡವನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರುವಲ್ಲಿ ಪಂಜಾಬ್ ಕಿಂಗ್ಸ್ ಯಶಸ್ವಿಯಾಗಿದೆ.
ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ತಂಡ ಆಡಿರುವ 9 ಪಂದ್ಯಗಳಲ್ಲಿ ಗೆಲುವು, 3 ಸೋಲಿನೊಂದಿಗೆ 11 ಅಂಕಗಳಿಸಿದ್ದು, ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ. ಅಜಿಂಕ್ಯ ರಹಾನೆ ಸಾರಥ್ಯದ ಕೋಲ್ಕತಾ ಆಡಿರುವ 9 ಪಂದ್ಯಗಳ ಪೈಕಿ ಕೇವಲ 3ರಲ್ಲಿ ಗೆದ್ದಿದ್ದು, 5ರಲ್ಲಿ ಸೋತಿದೆ. ತಂಡ 7 ಅಂಕದೊಂದಿಗೆ ಪಟ್ಟಿಯಲ್ಲಿ 7ನೇ ಸ್ಥಾನದಲ್ಲೇ ಬಾಕಿಯಾಗಿದೆ.
ಶನಿವಾರದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ 20 ಓವರಲ್ಲಿ 4 ವಿಕೆಟ್‌ಗೆ 201 ರನ್ ಕಲೆಹಾಕಿತು. ಸ್ಫೋಟಕ ಆಟವಾಡಿದ ಪ್ರಿಯಾನ್ಸ್ ಆರ್ಯಾ ಹಾಗೂ ಪ್ರಬ್‌ಸಿಮ್ರನ್ ಸಿಂಗ್ ತಂಡ ದೊಡ್ಡ ಮೊತ್ತ ಕಲೆಹಾಕಲು ನೆರವಾದರು. ಪ್ರಿಯಾನ್ಸ್ 35 ಎಸೆತಕ್ಕೆ 69, ಪ್ರಬ್‌ಸಿಮ್ರನ್ 49 ಎಸೆತಗಳಲ್ಲಿ 83 ರನ್ ಸಿಡಿಸಿದರು. ಆದರೆ ಇವರಿಬ್ಬರು ಔಟಾದ ಬಳಿಕ ತಂಡ ಕುಸಿಯಿತು. ಕೊನೆ 36 ಎಸೆತಗಳಲ್ಲಿ ಕೇವಲ 41 ರನ್ ಸಿಡಿಸಿತು.
ಇದನ್ನೂಓದಿ: ಸನ್‌ರೈಸರ್ಸ್ ಎದುರು ಮ್ಯಾಚ್ ಸೋತರೂ ಧೋನಿ ಮನಗೆದ್ದ ಮರಿ ಎಬಿಡಿ!
ದೊಡ್ಡ ಗುರಿ ಬೆನ್ನತ್ತಲು ಬಂದ ಕೆಕೆಆರ್ ಮೊದಲ ಓವರ್‌ನಲ್ಲಿ 7 ರನ್ ಗಳಿಸಿತು. ಇದರ ಬೆನ್ನಲ್ಲೇ ಮಳೆ ಸುರಿಯಲು ಆರಂಭಿಸಿತು. ಬಳಿಕ ಕೆಲ ಗಂಟೆಗಳ ಕಾಲ ಧಾರಾಕಾರ ಮಳೆ ಮುಂದುವರಿದ ಕಾರಣ ರಾತ್ರಿ 11 ಗಂಟೆ ವೇಳೆ ಪಂದ್ಯ ರದ್ದುಗೊಳಿಸಲು ಮ್ಯಾಚ್ ರೆಫ್ರಿಗಳು ನಿರ್ಧರಿಸಿದರು.
ಕೆಕೆಆರ್ ಸೋಲಿನಿಂದ ಬಚಾವ್ ಮಾಡಿದ ಮಳೆರಾಯ: ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡದ ಬ್ಯಾಟರ್‌ಗಳು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ಹೀಗಾಗಿ ಪಂಜಾಬ್ ಎದುರಿನ ಪಂದ್ಯವು ಕೆಕೆಆರ್ ಪಾಲಿಗೆ ಒಂದು ರೀತಿ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿಕೊಂಡಿತ್ತು. ಆದರೆ ಕೆಕೆಆರ್ ಬೌಲರ್‌ಗಳು ಈ ಪಂದ್ಯದಲ್ಲಿ ಮತ್ತೊಮ್ಮೆ ದುಬಾರಿಯಾಗುವ ಮೂಲಕ 200+ ರನ್ ಬಿಟ್ಟುಕೊಟ್ಟರು. ಕೆಕೆಆರ್ ಸದ್ಯದ ಬ್ಯಾಟಿಂಗ್ ಪ್ರದರ್ಶನ ಗಮನಿಸಿದರೆ, ಈ ಪಂದ್ಯದಲ್ಲೂ ಹಾಲಿ ಚಾಂಪಿಯನ್‌ಗೆ ಸೋಲು ಕಟ್ಟಿಟ್ಟ ಬುತ್ತಿ ಎನ್ನುವ ಮಾತುಗಳು ಕೇಳಿಬಂದಿದ್ದವು. ಆದರೆ ಮಳೆರಾಯ ನಿರಂತರವಾಗಿ ಸುರಿದಿದ್ದರಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಮತ್ತೊಂದು ಸೋಲಿನ ಮುಖಭಂಗದಿಂದ ಪಾರಾಯಿತು.
ಇದನ್ನೂ ಓದಿ: ರನ್ ಗಳಿಸಲು ಮತ್ತೆ ಪರದಾಡಿದ ದೀಪಕ್ ಹೂಡಾ! ಸಿಎಸ್‌ಕೆ ಬ್ಯಾಟರ್‌ಗೆ ಮತ್ತೆ ನಿರಾಸೆ!
ಫಲಿತಾಂಶ ಸಿಗಬೇಕಿದ್ದರೆ ಕೋಲ್ಕತಾ ಕನಿಷ್ಠ 5 ಓವರ್ ಬ್ಯಾಟ್ ಮಾಡ ಬೇಕಿತ್ತು. ಆದರೆ ಮಳೆ ನಿಲ್ಲದ ಕಾರಣ ಪಂದ್ಯ ಪುನಾರಂಭಿಸಲು ಸಾಧ್ಯವಾಗಲಿಲ್ಲ. ಉಭಯ ತಂಡಗಳ ಈ ಹಿಂದಿನ ಮುಖಾಮುಖಿಯಲ್ಲಿ ಪಂಜಾಬ್ ತಂಡ ಗೆದ್ದಿತ್ತು. ಕಡಿಮೆ ಮೊತ್ತದ ಥಿಲ್ಲರ್‌ಗೆ ಸಾಕ್ಷಿಯಾಗಿದ್ದ ಪಂದ್ಯದಲ್ಲಿ ಪಂಜಾಬ್ ವೀರೋಚಿತ ಗೆಲುವು ತನ್ನದಾಗಿಸಿಕೊಂಡಿತ್ತು.
ಅಜಿಂಕ್ಯ ರಹಾನೆ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡವು ತನ್ನ ಪಾಲಿನ ಮುಂದಿನ ಪಂದ್ಯದಲ್ಲಿ ಬಲಿಷ್ಠ ಡೆಲ್ಲಿ ಕ್ಯಾಪಿಟಲ್ದ್ ತಂಡವನ್ನು ಎದುರಿಸಲಿದೆ. ಈ ಪಂದ್ಯವು ಏಪ್ರಿಲ್ 29ರಂದು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇನ್ನೊಂದೆಡೆ ಪಂಜಾಬ್ ಕಿಂಗ್ಸ್ ತಂಡವು ಏಪ್ರಿಲ್ 30ರಂದು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.