
ನಾಗ್ಪುರ: ಈ ಋತುವಿನ ದೇಸಿ ಕ್ರಿಕೆಟ್‌ನಲ್ಲಿ ವಿದರ್ಭ ಪರ ಅಭೂತಪೂರ್ವ ಪ್ರದರ್ಶನ ನೀಡಿರುವ ಕರುಣ್ ನಾಯರ್ ಮತ್ತೆ ಭಾರತ ತಂಡದ ಕದ ತಟ್ಟುತ್ತಿದ್ದಾರೆ. ಅವರು 2017ರ ಬಳಿಕ ಮತ್ತೊಮ್ಮೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ.
33 ವರ್ಷದ ಕರುಣ್ ಈ ಋತುವಿನ ದೇಸಿ ಕ್ರಿಕೆಟ್‌ನಲ್ಲಿ ಒಟ್ಟು 24 ಪಂದ್ಯಗಳನ್ನಾಡಿದ್ದು, 9 ಶತಕಗಲೊಂದಿಗೆ 1894 ರನ್ ಕಲೆಹಾಕಿದ್ದಾರೆ. ವಿಜಯ್ ಹಜಾರೆಯಲ್ಲಿ 5 ಶತಕಗಳೊಂದಿಗೆ 779 ರನ್, ಮುಷ್ತಾಕ್ ಅಲಿ ಟಿ20ಯಲ್ಲಿ 6 ಪಂದ್ಯಗಳಲ್ಲೇ 255 ರನ್‌ಗಳಿಸಿರುವ ಕನ್ನಡಿಗ ಕರುಣ್, ರಣಜಿಯಲ್ಲಿ 4 ಶತಕಗಳೊಂದಿಗೆ 860 ರನ್ ಬಾರಿಸಿದ್ದಾರೆ.
ಭಾರತ ಪರ ಟೆಸ್ಟ್‌ನಲ್ಲಿ ತ್ರಿಶತಕ ಸಿಡಿಸಿದ ಕೇವಲ 2ನೇ ಆಟಗಾರ ಎನಿಸಿಕೊಂಡಿರುವ ಕರುಣ್, 2017ರ ಬಳಿಕ ತಂಡಕ್ಕೆ ಆಯ್ಕೆಯಾಗಿಲ್ಲ. ಸದ್ಯ ದೇಸಿ ಕ್ರಿಕೆಟ್‌ನಲ್ಲಿ ಅಬ್ಬರಿಸುತ್ತಿರುವ ಅವರನ್ನು ರಾಷ್ಟ್ರೀಯ ತಂಡಕ್ಕೆ ಪರಿಗಣಿಸಲಾಗುತ್ತದೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.
ವಿದರ್ಭ ಮುಡಿಗೆ ಮೂರನೇ ರಣಜಿ ಕಿರೀಟ
ನಾಗ್ಪುರ: ದೇಸಿ ಪ್ರಥಮ ದರ್ಜೆ ಕ್ರಿಕೆಟ್ ಟೂರ್ನಿಯಾಗಿರುವ ರಣಜಿ ಟ್ರೋಫಿಯಲ್ಲಿ ವಿದರ್ಭ ತಂಡ 3ನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾನುವಾರ ಕೊನೆಗೊಂಡ 2024-25ರ ಆವೃತ್ತಿಯ ಫೈನಲ್‌ನಲ್ಲಿ ಕೇರಳ ವಿರುದ್ಧ ವಿದರ್ಭ ಡ್ರಾ ಸಾಧಿಸಿತು. ಆದರೆ ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ ವಿದರ್ಭ ಪ್ರಶಸ್ತಿ ತನ್ನದಾಗಿಸಿಕೊಂಡಿತ್ತು.
ತಲಾ 2 ಇನ್ನಿಂಗ್ಸ್‌ಗಳ ಆಟ ಮುಕ್ತಾಯಗೊಂಡು, ಫಲಿತಾಂಶ ಸಿಗದಿದ್ದರೆ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಪಡೆದ ತಂಡವನ್ನು ವಿಜೇತವೆಂದು ಘೋಷಿಸಲಾಗುತ್ತದೆ. ಈ ಪಂದ್ಯದಲ್ಲಿ ವಿದರ್ಭ ಮೊದಲ ಇನ್ನಿಂಗ್ಸ್‌ನಲ್ಲಿ 379 ರನ್ ಕಲೆಹಾಕಿದ್ದರೆ, ಕೇರಳ 342 ರನ್‌ಗೆ ಆಲೌಟಾಗಿತ್ತು. ಈ ಮೂಲಕ ಟ್ರೋಫಿಯನ್ನು ಬಹುತೇಕ ಖಚಿತ ಪಡಿಸಿಕೊಂಡಿತ್ತು. 2ನೇ ಇನ್ನಿಂಗ್ಸ್‌ನಲ್ಲಿ ವಿದರ್ಭ, 4ನೇ ದಿನದಂತ್ಯಕ್ಕೆ 4 ವಿಕೆಟ್‌ಗೆ 249 ರನ್ ಗಳಿಸಿತ್ತು. ಪಂದ್ಯದ ಕೊನೆ ದಿನವಾದ ಭಾನುವಾರ 9 ವಿಕೆಟ್‌ಗೆ 375 ರನ್ ಗಳಿಸಿದ್ದಾಗ ಪಂದ್ಯವನ್ನು ಡ್ರಾಗೊಳಿಸಲಾಯಿತು. ಕರುಣ್ ನಾಯರ್ 135ಕ್ಕೆ ಔಟಾದರೆ, ದರ್ಶನ್ ನಲ್ಕಂಡೆ ಔಟಾಗದೆ 51 ರನ್ ಸಿಡಿಸಿದರು.
ಸ್ಕೋರ್: ವಿದರ್ಭ 379/10 ಮತ್ತು 375/9 (ಕರುಣ್ 135, ದರ್ಶನ್ ಔಟಾಗದೆ 51, ಆದಿತ್ಯ 4-96), ಕೇರಳ 342/10
ಪಂದ್ಯಶ್ರೇಷ್ಠ: ದಾನಿಶ್ ಮಲೇವಾರ್, ಸರಣಿಶ್ರೇಷ್ಠ: ಹರ್ಷ ದುಬೆ
ವಿದರ್ಭಕ್ಕೆ ₹8 ಕೋಟಿ ಬಹುಮಾನ
ಚಾಂಪಿಯನ್ ವಿದರ್ಭ ತಂಡಕ್ಕೆ ಬಿಸಿಸಿಐ ಕಡೆಯಿಂದ ₹5 ಕೋಟಿ ನಗದು ಬಹುಮಾನ ಲಭಿಸಿದೆ. ಜೊತೆಗೆ ವಿದರ್ಭ ಕ್ರಿಕೆಟ್ ಸಂಸ್ಥೆ ತಂಡಕ್ಕೆ ₹3 ಕೋಟಿ ನಗದು ಬಹುಮಾನ ಘೋಷಿಸಿದೆ. ಇದೇ ವೇಳೆ ರನ್ನರ್-ಅಪ್ ಕೇರಳ ತಂಡ ಬಿಸಿಸಿಐನಿಂತ ₹3 ಕೋಟಿ ನಗದು ಬಹುಮಾನ ಪಡೆಯಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.