ಜೋ ರೂಟ್‌ ಭಾರತದೆದುರು ಏಕದಿನ ಸರಣಿ ಆಡೋದು ಡೌಟ್‌..!

By Suvarna NewsFirst Published Feb 20, 2021, 11:22 AM IST
Highlights

ಟೆಸ್ಟ್ ಸರಣಿ ಮುಕ್ತಾಯವಾಗುತ್ತಿದ್ದಂತೆ ಭಾರತ ವಿರುದ್ದ ಆರಂಭವಾಗಲಿರುವ ಸೀಮಿತ ಓವರ್‌ಗಳ ಸರಣಿಗೆ ತನ್ನ ಸ್ಟಾರ್ ಬ್ಯಾಟ್ಸ್‌ಮನ್‌ ಜೋ ರೂಟ್‌ಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಲಂಡನ್‌(ಫೆ.20): ಇಂಗ್ಲೆಂಡ್‌ ತಂಡವು ಮುಂಬರುವ ಭಾರತ ವಿರುದ್ದದ ಏಕದಿನ ಸರಣಿಯಲ್ಲಿ ತನ್ನ ಸ್ಟಾರ್ ಬ್ಯಾಟ್ಸ್‌ಮನ್‌ ಜೋ ರೂಟ್‌ ಅನುಪಸ್ಥಿಯಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಸದ್ಯ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ತಲಾ ಒಂದೊಂದು ಪಂದ್ಯ ಜಯಿಸಿದ್ದು, ಇನ್ನುಳಿದ ಎರಡು ಪಂದ್ಯಗಳನ್ನು ಗೆಲ್ಲಲು ಉಭಯ ತಂಡಗಳು ತುದಿಗಾಲಿನಲ್ಲಿ ನಿಂತಿವೆ. ಈ ಟೆಸ್ಟ್ ಸರಣಿ ಮುಕ್ತಾಯವಾದ ಬಳಿಕ ಇಂಗ್ಲೆಂಡ್‌ ತಂಡವು ಭಾರತ ವಿರುದ್ದ ಸೀಮಿತ ಓವರ್‌ಗಳ ಸರಣಿಯಾಡಲಿದ್ದು, ಮೊದಲಿಗೆ 5 ಪಂದ್ಯಗಳ ಟಿ20 ಸರಣಿ ಆ ಬಳಿಕ 3 ಪಂದ್ಯಗಳ ಏಕದಿನ ಸರಣಿಯಾಡಲಿದೆ.

ಭಾರತ- ಇಂಗ್ಲೆಂಡ್‌ ನಡುವಿನ ಟೆಸ್ಟ್ ಸರಣಿ ಮಾರ್ಚ್‌ 08ರಂದು ಮುಕ್ತಾಯವಾಗಲಿದ್ದು, ಮಾರ್ಚ್‌ 12ರಿಂದ 5 ಪಂದ್ಯಗಳ ಏಕದಿನ ಸರಣಿ ಆರಂಭವಾಗಿ ಮಾರ್ಚ್ 20ಕ್ಕೆ ಮುಕ್ತಾಯವಾಗಲಿದೆ. ಇದರ ಬೆನ್ನಲ್ಲೇ ಮಾರ್ಚ್‌ 23ರಿಂದ 28ರವರೆಗೆ 3 ಪಂದ್ಯಗಳ ಏಕದಿನ ಸರಣಿ ಜರುಗಲಿದೆ. 

ಡೈಲಿ ಮೇಲ್‌ ವರದಿ ಪ್ರಕಾರ, ಭಾರತ ವಿರುದ್ದದ ಟೆಸ್ಟ್ ಸರಣಿ ಮುಕ್ತಾಯವಾಗುತ್ತಿದ್ದಂತೆ ರೊಟೇಷನ್ ಪಾಲಿಸಿ ಅನ್ವಯ ಇಂಗ್ಲೆಂಡ್‌ ಟೆಸ್ಟ್ ತಂಡದ ನಾಯಕ ಜೋ ರೂಟ್‌ಗೆ ವಿಶ್ರಾಂತಿ ನೀಡಲಾಗುತ್ತದೆ ಎಂದು ವರದಿಯಾಗಿದೆ. ರೂಟ್‌ ಮಾತ್ರವಲ್ಲದೇ ಆಲ್ರೌಂಡರ್‌ ಕ್ರಿಸ್‌ ವೋಕ್ಸ್‌ಗೂ ಸೀಮಿತ ಓವರ್‌ಗಳ ಸರಣಿಯಿಂದ ವಿಶ್ರಾಂತಿ ನೀಡಲಾಗುತ್ತದೆ ಎಂದು ವರದಿಯಾಗಿದೆ. ಮುಂಬರುವ ಟಿ20 ವಿಶ್ವಕಪ್ ಹಾಗೂ ಆಷಸ್‌ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಬಹು ಮಾದರಿ ಕ್ರಿಕೆಟ್ ಆಡುವ ಆಟಗಾರರಿಗೆ ವಿಶ್ರಾಂತಿ ನೀಡಲು ಇಂಗ್ಲೆಂಡ್‌ ಕ್ರಿಕೆಟ್ ಆಡಳಿತ ಮಂಡಳಿ ತಿಳಿಸಿದೆ.

ಇಂಗ್ಲೆಂಡ್‌ ವಿರುದ್ದದ ಕೊನೆಯ 2 ಟೆಸ್ಟ್ ಪಂದ್ಯಗಳಿಗೆ ಬಲಿಷ್ಠ ಟೀಂ ಇಂಡಿಯಾ ಪ್ರಕಟ..!
 
ಇತ್ತೀಚೆಗಷ್ಟೇ ಬೆನ್‌ ಸ್ಟೋಕ್ಸ್‌, ಜೋಫ್ರಾ ಆರ್ಚರ್‌, ಜಾನಿ ಬೇರ್‌ಸ್ಟೋವ್‌, ಜೇಮ್ಸ್‌ ಆಂಡರ್‌ಸನ್‌ ಹಾಗೂ ಜೋಸ್‌ ಬಟ್ಲರ್‌ಗೆ ಇಂಗ್ಲೆಂಡ್‌ ಕ್ರಿಕೆಟ್‌ ಆಡಳಿತ ಮಂಡಳಿ ವಿಶ್ರಾಂತಿಯನ್ನು ನೀಡಿತ್ತು. ಇದೀಗ ಟೆಸ್ಟ್ ನಾಯಕ ರೂಟ್‌ಗೆ ಭಾರತ ವಿರುದ್ದದ ಸೀಮಿತ ಓವರ್‌ಗಳ ಸರಣಿಯಿಂದ ವಿಶ್ರಾಂತಿ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.

click me!