ಇಶಾನ್ ಕಿಶನ್ ಅವರ ಸ್ಪೋಟಕ ಶತಕ ಮತ್ತು ಟ್ರ್ಯಾವಿಸ್ ಹೆಡ್ ಅವರ ಅರ್ಧಶತಕದ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವು ರಾಜಸ್ಥಾನ ರಾಯಲ್ಸ್ ವಿರುದ್ಧ 286 ರನ್ ಗಳಿಸಿದೆ. ಇದು ಐಪಿಎಲ್ ಇತಿಹಾಸದಲ್ಲಿ ದಾಖಲಾದ ಎರಡನೇ ಗರಿಷ್ಠ ಸ್ಕೋರ್ ಆಗಿದೆ.
ಹೈದರಾಬಾದ್: ಇಶಾನ್ ಕಿಶನ್ ಸ್ಪೋಟಕ ಶತಕ ಹಾಗೂ ಟ್ರ್ಯಾವಿಸ್ ಹೆಡ್ ವಿಸ್ಪೋಟಕ ಅರ್ಧಶತಕದ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವು ರಾಜಸ್ಥಾನ ರಾಯಲ್ಸ್ ಎದುರು 6 ವಿಕೆಟ್ ಕಳೆದುಕೊಂಡು 286 ರನ್ ಕಲೆಹಾಕಿದೆ. ಈ ಮೂಲಕ ರಾಯಲ್ಸ್ ಪಡೆಗೆ ಸವಾಲಿನ ಗುರಿ ನೀಡಿದೆ. ಅಂದಹಾಗೆ ಇದು ಐಪಿಎಲ್ ಇತಿಹಾಸದಲ್ಲಿ ದಾಖಲಿಸಿದ ಎರಡನೇ ಗರಿಷ್ಠ ಸ್ಕೋರ್ ಎನಿಸಿಕೊಂಡಿತು. ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಆರ್‌ಸಿಬಿ ಎದುರು 3 ವಿಕೆಟ್ ಕಳೆದುಕೊಂಡು 287 ರನ್ ಗಳಿಸಿತ್ತು.
ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಆತಿಥೇಯ ಸನ್‌ರೈಸರ್ಸ್ ಹೈದರಾಬಾದ್ ತಂಡವು ಸ್ಪೋಟಕ ಆರಂಭ ಪಡೆಯಿತು. ಮೊದಲ ವಿಕೆಟ್‌ಗೆ ಅಭಿಷೇಕ್ ಶರ್ಮಾ ಹಾಗೂ ಟ್ರ್ಯಾವಿಸ್ ಹೆಡ್ 3.1 ಓವರ್‌ಗಳಲ್ಲಿ 45 ರನ್‌ಗಳ ಜತೆಯಾಟವಾಡಿದರು. ಅಭಿಷೇಕ್ ಶರ್ಮಾ 11 ಎಸೆತಗಳನ್ನು ಎದುರಿಸಿ 5 ಬೌಂಡರಿ ಸಹಿತ 24 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಇದನ್ನೂ ಓದಿ: CSK vs MI: ಯಾವ ಟೀಮ್ IPLನಲ್ಲಿ ಜಾಸ್ತಿ ಮ್ಯಾಚ್ ಗೆದ್ದಿದೆ?
ಇನ್ನು ಎರಡನೇ ವಿಕೆಟ್‌ಗೆ ಜತೆಯಾದ ಟ್ರ್ಯಾವಿಸ್ ಹೆಡ್ ಹಾಗೂ ಇಶಾನ್ ಕಿಶನ್ ರಾಜಸ್ಥಾನ ರಾಯಲ್ಸ್ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ರಾಯಲ್ಸ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಈ ಜೋಡಿ ಕೇವಲ 39 ಎಸೆತಗಳನ್ನು ಎದುರಿಸಿ 85 ರನ್‌ಗಳ ಜತೆಯಾಟವಾಡಿದರು. ಮತ್ತೊಮ್ಮೆ ಸ್ಪೋಟಕ ಬ್ಯಾಟಿಂಗ್ ನಡೆಸಿದ ಟ್ರ್ಯಾವಿಸ್ ಹೆಡ್ 31 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 67 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು.
ಅಬ್ಬರಿಸಿದ ಇಶಾನ್ ಕಿಶನ್: ಇದೇ ಮೊದಲ ಬಾರಿಗೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಕಣಕ್ಕಿಳಿದಿರುವ ತಾವಾಡಿದ ಮೊದಲ ಪಂದ್ಯದಲ್ಲೇ ಸ್ಪೋಟಕ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಕೇವಲ 45 ಎಸೆತಗಳನ್ನು ಎದುರಿಸಿದ ಇಶಾನ್ ಕಿಶನ್ 10 ಆಕರ್ಷಕ ಬೌಂಡರಿ ಹಾಗೂ 6 ಸಿಕ್ಸರ್ ಸಹಿತ ಶತಕ ಮೂರಂಕಿ ಮೊತ್ತ ದಾಖಲಿಸಿದರು. ಅಂತಿಮವಾಗಿ ಇಶಾನ್ ಕಿಶನ್ 47 ಎಸೆತಗಳನ್ನು ಎದುರಿಸಿ 11 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ ಅಜೇಯ 106 ರನ್ ಸಿಡಿಸಿದರು.
ಇದನ್ನೂ ಓದಿ: ಈ ಎರಡು IPL ತಂಡಗಳು ಭಾರತ-ಪಾಕಿಸ್ತಾನ ಇದ್ದಂಗೆ ಎಂದ ಹರ್ಭಜನ್ ಸಿಂಗ್!
ಇನ್ನು ಮಧ್ಯಮ ಕ್ರಮಾಂಕದಲ್ಲಿ ಇಶಾನ್ ಕಿಶನ್ ಹಾಗೂ ನಿತೀಶ್ ಕುಮಾರ್ ರೆಡ್ಡಿ 29 ಎಸೆತಗಳಲ್ಲಿ72 ರನ್‌ಗಳ ಜತೆಯಾಟವಾಡಿದರು. ನಿತೀಶ್ ಕುಮಾರ್ 15 ಎಸೆತಗಳಲ್ಲಿ 30 ರನ್ ಸಿಡಿಸಿದರೆ, ಸ್ಪೋಟಕ ಬ್ಯಾಟರ್ ಹೆನ್ರಿಚ್ ಕ್ಲಾಸೆನ್ 14 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 34 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು.