ಆರ್‌ಸಿಬಿಗೆ ಇಂದು ರಾಯಲ್ಸ್‌ ಚಾಲೆಂಜ್; ಹಸಿರು ಜೆರ್ಸಿಯಲ್ಲಿಂದು ಬೆಂಗಳೂರು ಕಣಕ್ಕೆ

Published : Apr 13, 2025, 10:05 AM ISTUpdated : Apr 13, 2025, 10:22 AM IST
ಆರ್‌ಸಿಬಿಗೆ ಇಂದು ರಾಯಲ್ಸ್‌ ಚಾಲೆಂಜ್; ಹಸಿರು ಜೆರ್ಸಿಯಲ್ಲಿಂದು ಬೆಂಗಳೂರು ಕಣಕ್ಕೆ

ಸಾರಾಂಶ

ಜೈಪುರದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್‌ಸಿಬಿ ಜಯಕ್ಕಾಗಿ ಕಾಯುತ್ತಿದೆ. ಆರ್‌ಸಿಬಿ ತವರಿನಲ್ಲಿ ಸೋತರೂ, ಹೊರಗೆ ಗೆದ್ದಿದೆ. ರಾಯಲ್ಸ್ ತವರಿನಲ್ಲಿ ಮೊದಲ ಪಂದ್ಯವಾಡಲಿದ್ದು, ಗೆಲುವಿಗಾಗಿ ಎದುರು ನೋಡುತ್ತಿದೆ. ಕೊಹ್ಲಿ, ಸಾಲ್ಟ್ ಉತ್ತಮ ಲಯದಲ್ಲಿದ್ದು, ರಾಯಲ್ಸ್ ವೇಗಿಗಳಿಂದ ಸವಾಲು ಎದುರಾಗಬಹುದು. ಆರ್‌ಸಿಬಿ ಹಸಿರು ಜೆರ್ಸಿಯಲ್ಲಿ ಆಡಿದಾಗ ಸೋತಿದ್ದೇ ಹೆಚ್ಚು. ಪಿಚ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಕ್ಕೂ ಸಹಕಾರಿಯಾಗಲಿದೆ.

ಜೈಪುರ: ಈ ಬಾರಿ ಕೋಲ್ಕತಾ, ಚೆನ್ನೈ, ಮುಂಬೈ ಭದ್ರಕೋಟೆಗಳನ್ನು ಭೇದಿಸಿ ಗೆದ್ದಿರುವ ಆರ್‌ಸಿಬಿ, ತವರಿನಾಚೆ ತನ್ನ ಗೆಲುವಿನ ನಾಗಾಲೋಟ ಮುಂದುವರಿಸುವ ನಿರೀಕ್ಷೆಯಲ್ಲಿದೆ. ತವರಿನ ಅಂಗಳದಲ್ಲಿ ಎರಡೆರಡು ಸೋಲು ಕಂಡರೂ, ಭಾನುವಾರ ಜೈಪುರದಲ್ಲಿ ರಾಜಸ್ಥಾನ ರಾಯಲ್ಸ್‌ ವಿರುದ್ಧ ಜಯಭೇರಿ ಬಾರಿಸಲು ಆರ್‌ಸಿಬಿ ಕಾತರಿಸುತ್ತಿದೆ.

ಆರ್‌ಸಿಬಿ ಈ ಸಲ ಆಡಿರುವ 5 ಪಂದ್ಯಗಳ ಪೈಕಿ 2ರಲ್ಲಿ ಸೋತಿದೆ. ಈ ಎರಡೂ ಸೋಲುಗಳು ತನ್ನ ತವರಿನಲ್ಲೇ ಎದುರಾಗಿದ್ದು ತಂಡದ ಆತ್ಮವಿಶ್ವಾಸಕ್ಕೆ ಪೆಟ್ಟು ನೀಡಿದೆ. ಆದರೆ ತವರಿನಾಚೆ ಬಲಿಷ್ಠ ತಂಡಗಳನ್ನೇ ಬಗ್ಗುಬಡಿದಿರುವ ಉತ್ಸಾಹವೂ ತಂಡಕ್ಕಿದೆ. ಮತ್ತೊಂದೆಡೆ ರಾಯಲ್ಸ್ 5 ಪಂದ್ಯಗಳ ಪೈಕಿ ಕೇವಲ 2 ಗೆಲುವು ಸಾಧಿಸಿದ್ದು, ಜಯದ ಹಳಿಗೆ ಮರಳಲು ಕಾಯುತ್ತಿದೆ. ತಂಡ ಟೂರ್ನಿಯಲ್ಲಿ ಮೊದಲ ಬಾರಿ ತನ್ನ ತವರು ಜೈಪುರದಲ್ಲಿ ಆಡಲಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ RCB ಸೋಲಿಗೆ ಸಿದ್ದರಾಮಯ್ಯರನ್ನು ಟ್ರೋಲ್ ಮಾಡಿದ ನೆಟ್ಟಿಗರು!

ಬ್ಯಾಟರ್ಸ್‌ಗೆ ಸವಾಲು: ಆರ್‌ಸಿಬಿ ಈ ಸಲವೂ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದು ಬ್ಯಾಟಿಂಗ್‌ ವಿಭಾಗದಲ್ಲಿ. ವಿರಾಟ್‌ ಕೊಹ್ಲಿ, ಫಿಲ್‌ ಸಾಲ್ಟ್‌, ರಜತ್‌ ಪಾಟೀದಾರ್‌ ಉತ್ತಮ ಲಯದಲ್ಲಿದ್ದು, ಮತ್ತೊಂದು ದೊಡ್ಡ ಇನ್ನಿಂಗ್ಸ್‌ ವಿಶ್ವಾಸದಲ್ಲಿದೆ. ಆದರೆ ರಾಯಲ್ಸ್‌ ವೇಗಿಗಳಾದ ಜೋಫ್ರಾ ಆರ್ಚರ್‌ ಹಾಗೂ ಸಂದೀಪ್‌ ಶರ್ಮಾರಿಂದ ಆರ್‌ಸಿಬಿ ಬ್ಯಾಟರ್ಸ್‌ಗೆ ಕಠಿಣ ಸವಾಲು ಎದುರಾಗಬಹುದು. ಅದರಲ್ಲೂ, ಐಪಿಎಲ್‌ನಲ್ಲಿ ಸಂದೀಪ್‌ ಬೌಲಿಂಗ್‌ನಲ್ಲಿ ಕೊಹ್ಲಿ 16 ಪಂದ್ಯಗಳ ಪೈಕಿ 7ರಲ್ಲಿ ಔಟಾಗಿದ್ದಾರೆ. ಇದು ಯಾವುದೇ ಬೌಲರ್‌ ಪೈಕಿ ಗರಿಷ್ಠ. ಹೀಗಾಗಿ ಕೊಹ್ಲಿ ಹಾಗೂ ಸಂದೀಪ್‌ ನಡುವಿನ ಹಣಾಹಣಿ ಕುತೂಹಲ ಕೆರಳಿಸಿದೆ.

ಬೌಲಿಂಗ್‌ ವಿಭಾಗದಲ್ಲಿ ಆರ್‌ಸಿಬಿಗೆ ಹೇಜಲ್‌ವುಡ್‌, ಭುವನೇಶ್ವರ್‌ ಬಲ ಒದಗಿಸಲಿದ್ದಾರೆ. ಆದರೆ ಸ್ಪಿನ್ನರ್‌ಗಳು ಇನ್ನಷ್ಟು ಸ್ಥಿರ ಪ್ರದರ್ಶನ ತೋರಬೇಕಾದ ಅಗತ್ಯವಿದೆ. ಕೃನಾಲ್‌ ಪಾಂಡ್ಯ, ಸುಯಶ್‌ ಶರ್ಮಾ ಮತ್ತಷ್ಟು ಪರಿಣಾಮಕಾರಿ ದಾಳಿ ಸಂಘಟಿಸಬೇಕಿದೆ.

ಮತ್ತೊಂದೆಡೆ ರಾಜಸ್ಥಾನದಲ್ಲಿ ಸ್ಫೋಟಕ ಯುವ ಬ್ಯಾಟರ್‌ಗಳಿದ್ದಾರೆ. ನಾಯಕ ಸಂಜು ಸ್ಯಾಮ್ಸನ್‌, ಯಶಸ್ವಿ ಜೈಸ್ವಾಲ್‌, ರಿಯಾನ್ ಪರಾಗ್‌, ನಿತೀಶ್‌ ರಾಣಾ ಅಬ್ಬರಿಸಬೇಕಿದೆ. ಧ್ರುವ್‌ ಜುರೆಲ್‌, ಹೆಟ್ಮೇಯರ್‌ ಲಯ ಕಂಡುಕೊಳ್ಳಬೇಕಾದ ಅವಶ್ಯಕತೆಯಿದೆ.

ಇದನ್ನೂ ಓದಿ: RCB ವಿರುದ್ಧ ಸೇಡು ತೀರಿಸಿಕೊಂಡು 'ಕಾಂತಾರ' ನೆನೆದ KL Rahul;‌ ನಂಗೆ ಈ ಗ್ರೌಂಡ್‌ ಪಿಚ್‌ ಗೊತ್ತು ಎಂದ ಕನ್ನಡಿಗ

ಹಸಿರು ಜೆರ್ಸಿ ಧರಿಸಿ ಆಡಿದಾಗ 9 ಸೋಲು!

ಆರ್‌ಸಿಬಿ ಈ ಪಂದ್ಯದಲ್ಲಿ ಹಸಿರು ಬಣ್ಣದ ಜೆರ್ಸಿ ಧರಿಸಿ ಆಡಲಿದೆ. ಪರಿಸರ ಸಂರಕ್ಷಣೆ ಜಾಗೃತಿಗಾಗಿ ಪ್ರತಿ ವರ್ಷ ಒಂದು ಪಂದ್ಯದಲ್ಲಿ ಆರ್‌ಸಿಬಿ ಹಸಿರು ಜೆರ್ಸಿ ಆಡುತ್ತದೆ. ಆದರೆ ತಂಡ ಹಸಿರು ಜೆರ್ಸಿನಲ್ಲಿ ಆಡಿದಾಗ ಸೋತಿದ್ದೇ ಹೆಚ್ಚು. ಈ ವರೆಗೂ 14 ಪಂದ್ಯಗಳ ಪೈಕಿ 9ರಲ್ಲಿ ಸೋತಿದೆ. 4ರಲ್ಲಿ ಮಾತ್ರ ಗೆಲುವು ಸಾಧಿಸಿದ್ದು, 1 ಪಂದ್ಯ ರದ್ದುಗೊಂಡಿದೆ.

ಮುಖಾಮುಖಿ: 31

ಆರ್‌ಸಿಬಿ: 15

ರಾಜಸ್ಥಾನ: 14

ಫಲಿತಾಂಶವಿಲ್ಲ: 2

ಸಂಭಾವ್ಯ ಆಟಗಾರರು

ಆರ್‌ಸಿಬಿ: ಫಿಲ್‌ ಸಾಲ್ಟ್‌, ವಿರಾಟ್ ಕೊಹ್ಲಿ, ದೇವದತ್‌ ಪಡಿಕ್ಕಲ್, ರಜತ್‌ ಪಾಟೀದಾರ್(ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್/ಬೆಥೆಲ್‌, ಜಿತೇಶ್‌ ಶರ್ಮಾ, ಟಿಮ್ ಡೇವಿಡ್‌, ಕೃನಾಲ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್, ಜೋಶ್ ಹೇಜಲ್‌ವುಡ್‌, ಯಶ್ ದಯಾಳ್‌, ಸುಯಶ್‌ ಶರ್ಮಾ.

ರಾಜಸ್ಥಾನ: ಸಂಜು ಸ್ಯಾಮ್ಸನ್(ನಾಯಕ), ಯಶಸ್ವಿ ಜೈಸ್ವಾಲ್‌, ನಿತೀಶ್‌ ರಾಣಾ, ರಿಯಾನ್‌ ಪರಾಗ್, ಧ್ರುವ್‌ ಜುರೆಲ್‌, ಶಿಮ್ರೋನ್ ಹೆಟ್ಮೇಯರ್‌, ವನಿಂದು ಹಸರಂಗ, ಜೋಪ್ರಾ ಆರ್ಚರ್‌, ಮಹೀಶ್ ತೀಕ್ಷಣ, ತುಷಾರ್‌ ದೇಶಪಾಂಡೆ/ಕಾರ್ತಿಕೇಯ, ಸಂದೀಪ್‌ ಶರ್ಮಾ, ಫಝಲ್‌ಹಕ್ ಫಾರೂಖಿ.

ಇದನ್ನೂ ಓದಿ: ಸೈಟು, ಕೆಲಸ ರಿಜೆಕ್ಟ್ ಮಾಡಿ 4 ಕೋಟಿ ಪಡೆದ ವಿನೇಶ್ ಫೋಗಟ್!

ಪಂದ್ಯ: ಮಧ್ಯಾಹ್ನ 3.30ಕ್ಕೆ

ಪಿಚ್‌ ರಿಪೋರ್ಟ್‌

ಜೈಪುರ ಕ್ರೀಡಾಂಗಣ ಪಿಚ್‌ ಸ್ಪರ್ಧಾತ್ಮಕವಾಗಿದ್ದು, ಮೊದಲ ಇನ್ನಿಂಗ್ಸ್‌ ಸರಾಸರಿ ಮೊತ್ತ 162. ಇಲ್ಲಿ 57 ಐಪಿಎಲ್‌ ಪಂದ್ಯಗಳು ನಡೆದಿದ್ದು, 37ರಲ್ಲಿ ಚೇಸಿಂಗ್‌ ತಂಡ ಗೆದ್ದಿದೆ. ಟಾಸ್‌ ಗೆಲ್ಲುವ ತಂಡ ಫೀಲ್ಡಿಂಗ್‌ ಆಯ್ಕೆ ಮಾಡಿಕೊಳ್ಳಬಹುದು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!
ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?