ಆರ್‌ಸಿಬಿಗೆ ಈಗಲೂ ಪ್ಲೇ ಆಫ್‌ ಗ್ಯಾರಂಟಿಯಿಲ್ಲ, ಟೇಬಲ್ ಟಾಪರ್ ಆಗಲು ಬೆಂಗಳೂರು ಏನು ಮಾಡ್ಬೇಕು?

Published : May 12, 2025, 03:30 PM IST
ಆರ್‌ಸಿಬಿಗೆ ಈಗಲೂ ಪ್ಲೇ ಆಫ್‌ ಗ್ಯಾರಂಟಿಯಿಲ್ಲ, ಟೇಬಲ್ ಟಾಪರ್ ಆಗಲು ಬೆಂಗಳೂರು ಏನು ಮಾಡ್ಬೇಕು?

ಸಾರಾಂಶ

11 ಪಂದ್ಯಗಳಲ್ಲಿ 8 ಗೆಲುವುಗಳೊಂದಿಗೆ ಆರ್‌ಸಿಬಿ ಪ್ಲೇಆಫ್‌ಗೆ ಬಹುತೇಕ ಅರ್ಹತೆ ಪಡೆದಿದೆ. ಬಾಕಿ ಇರುವ ಮೂರು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಟಾಪ್-2 ಸ್ಥಾನ ಗಳಿಸುವ ಸಾಧ್ಯತೆ ಇದೆ. ಈ ಬಾರಿ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಕನಸು ನನಸಾಗುವುದೇ ಎಂಬುದನ್ನು ಕಾದು ನೋಡಬೇಕಿದೆ.

ಬೆಂಗಳೂರು: 2025ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯು ಭಾರತ–ಪಾಕಿಸ್ತಾನ ನಡುವಿನ ಯುದ್ಧ ಭೀತಿಯಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದರೂ, ಇದೀಗ ಪುನರಾರಂಭವಾಗಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಪ್ಲೇಆಫ್ ಪ್ರವೇಶದತ್ತ ದಿಟ್ಟ ಹೆಜ್ಜೆ ಇಡುತ್ತಿದೆ.

ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ ಈಗಾಗಲೇ 11 ಪಂದ್ಯಗಳಲ್ಲಿ 8 ಗೆಲುವುಗಳೊಂದಿಗೆ 16 ಅಂಕಗಳನ್ನು ಗಳಿಸಿದೆ. ಮತ್ತೆ ಮೂರು ಲೀಗ್ ಹಂತದ ಪಂದ್ಯಗಳು ಬಾಕಿಯಿದ್ದು, ಇವುಗಳಲ್ಲಿ ಕನಿಷ್ಠ ಒಂದು ಪಂದ್ಯ ಗೆದ್ದರೆ, ತಂಡ ಪ್ಲೇಆಫ್‌ಗೆ ಪ್ರವೇಶ ಪಡೆಯುವ ಸಾಧ್ಯತೆ ಇದೆ. ಆರ್‌ಸಿಬಿ ತಂಡವು ಲಖನೌ ಸೂಪರ್ ಜೈಂಟ್ಸ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಪಂದ್ಯಗಳನ್ನು ಆಡುವುದು ಬಾಕಿ ಉಳಿದಿದೆ. ಈ ಮೂರು ತಂಡಗಳು ಈ ಸೀಸನ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡದ ಕಾರಣ, ಆರ್‌ಸಿಬಿಗೆ ಪ್ಲೇಆಫ್ ಪ್ರವೇಶದ ದಾರಿ ಸುಲಭವಾಗುವ ಸಾಧ್ಯತೆಯಿದೆ.

ಆರ್‌ಸಿಬಿಯು ಟಾಪ್-2 ಸ್ಥಾನವನ್ನು ಪಡೆಯಲು ಬಯಸುತ್ತಿದೆ, ಏಕೆಂದರೆ ಈ ಸ್ಥಾನವು ಫೈನಲ್‌ಗೆ ತಲುಪಲು ಎರಡು ಅವಕಾಶಗಳನ್ನು ನೀಡುತ್ತದೆ. ಆರ್‌ಸಿಬಿಯು ತನ್ನ ಬಾಕಿ ಎಲ್ಲಾ ಪಂದ್ಯಗಳನ್ನು ಗೆದ್ದರೆ, 22 ಅಂಕಗಳನ್ನು ಗಳಿಸಿ ಟಾಪ್-2 ಸ್ಥಾನವನ್ನು ಖಚಿತಪಡಿಸಿಕೊಳ್ಳಬಹುದು.

ಆರ್‌ಸಿಬಿಯ ಪ್ಲೇಆಫ್ ಪ್ರವೇಶದ ಸಾಧ್ಯತೆಗಳು ಈ ಕೆಳಗಿನಂತಿವೆ:

ಒಂದು ಗೆಲುವು (18 ಅಂಕಗಳು): ಪ್ಲೇಆಫ್ ಪ್ರವೇಶ ಬಹುತೇಕ ಖಚಿತ.

ಎರಡು ಗೆಲುವುಗಳು (20 ಅಂಕಗಳು): ಟಾಪ್-2 ಸ್ಥಾನ ಪಡೆಯುವ ಉತ್ತಮ ಸಾಧ್ಯತೆ.

ಮೂರು ಗೆಲುವುಗಳು (22 ಅಂಕಗಳು): ಟಾಪ್-2 ಸ್ಥಾನ ಖಚಿತ.

ಆರ್‌ಸಿಬಿಯು ತನ್ನ ಬಾಕಿ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ಈ ಬಾರಿ ಐಪಿಎಲ್ ಟ್ರೋಫಿಯನ್ನು ಗೆಲ್ಲುವ ಕನಸು ನನಸಾಗುವ ಸಾಧ್ಯತೆ ಹೆಚ್ಚಿದೆ.

ಚೊಚ್ಚಲ ಐಪಿಎಲ್ ಟ್ರೋಫಿ ನಿರೀಕ್ಷೆಯಲ್ಲಿರುವ ಆರ್‌ಸಿಬಿ:

ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 18ನೇ ಸೀಸನ್ ಆಡುತ್ತಿದೆ. ಕಳೆದ 17 ಐಪಿಎಲ್ ಸೀಸನ್‌ನಲ್ಲಿ ಪಾಲ್ಗೊಂಡಿದ್ದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಈವರೆಗೂ ಒಮ್ಮೆಯೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. 2009ರಲ್ಲಿ ಮೊದಲ ಸಲ ಫೈನಲ್‌ಗೇರಿದ್ದ ಆರ್‌ಸಿಬಿ, ಪ್ರಶಸ್ತಿ ಸುತ್ತಿನಲ್ಲಿ ಡೆಕ್ಕನ್ ಚಾರ್ಜಸ್‌ಗೆ ಶರಣಾಗುವ ಮೂಲಕ ನಿರಾಸೆ ಅನುಭವಿಸಿತ್ತು. ಇದಾದ ಬಳಿಕ 2011ರಲ್ಲಿ ಎರಡನೇ ಬಾರಿಗೆ ಆರ್‌ಸಿಬಿ ಫೈನಲ್ ಪ್ರವೇಶಿಸಿತ್ತು. ಆದರೆ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಎದುರು ಮುಗ್ಗರಿಸಿ ಕಪ್ ಗೆಲ್ಲುವ ಅವಕಾಶ ಕೈಚೆಲ್ಲಿತ್ತು. ಇನ್ನು 2016ರಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ತಂಡವು ಅದ್ಬುತ ಪ್ರದರ್ಶನ ನೀಡುವ ಮೂಲಕ ಫೈನಲ್ ಪ್ರವೇಶಿಸಿತ್ತು. ಆದರೆ ಫೈನಲ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ಎದುರು ಮುಗ್ಗರಿಸುವ ಮೂಲಕ ಮೂರನೇ ಸಲವೂ ಕಪ್ ಗೆಲ್ಲುವ ಅವಕಾಶ ಕೈಚೆಲ್ಲಿತು.

ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಸಂಘಟಿತ ಪ್ರದರ್ಶನ ತೋರುವ ಮೂಲಕ ಈ ಬಾರಿ ಐಪಿಎಲ್ ಟ್ರೋಫಿ ಗೆಲ್ಲಬಲ್ಲ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ. ಇದುವರೆಗೂ ರಜತ್ ಪಾಟೀದಾರ್ ಪಡೆ ತವರಿನಾಚೆ ಆಡಿದ ಎಲ್ಲಾ ಪಂದ್ಯಗಳನ್ನು ಗೆಲ್ಲುವ ಮೂಲಕ ತಂಡ ಸಾಕಷ್ಟು ಬಲಿಷ್ಠವಾಗಿದೆ ಎನ್ನುವ ದಿಟ್ಟ ಸಂದೇಶವನ್ನು ರವಾನಿಸಿದೆ. ವಿರಾಟ್ ಕೊಹ್ಲಿ, ಭುವನೇಶ್ವರ್ ಕುಮಾರ್, ಯಶ್ ದಯಾಳ್, ಟಿಮ್ ಡೇವಿಡ್, ಜೆಕೊಬ್ ಬೆಥೆಲ್ ಸೇರಿದಂತೆ ಆರ್‌ಸಿಬಿ ತಂಡದ ಎಲ್ಲಾ ಆಟಗಾರರು ಪರಿಸ್ಥಿತಿಗನುಗುಣವಾಗಿ ಆಡುತ್ತಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸುವಂತೆ ಮಾಡಿದೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮದುವೆ ಮುಂದೂಡಿಕೆ ಬಳಿಕ ಸ್ಮೃತಿ ಮಂಧನಾ ಮೊದಲ ಪೋಸ್ಟ್: ನಿಶ್ಚಿತಾರ್ಥ ಉಂಗುರ ನಾಪತ್ತೆ! ಏನಾಯ್ತು ಎಂದ ಫ್ಯಾನ್ಸ್
ದಕ್ಷಿಣ ಆಫ್ರಿಕಾ ಎದುರಿನ ನಿರ್ಣಾಯಕ ಪಂದ್ಯಕ್ಕೆ ಭಾರತ ತಂಡದಲ್ಲಿ ಒಂದು ಮೇಜರ್ ಚೇಂಜ್?