
ಬರೋಬ್ಬರಿ 17 ವರ್ಷಗಳ ಬಳಿಕ ಚೆನ್ನೈ ಕ್ರೀಡಾಂಗಣದಲ್ಲಿ ಆರ್‌ಸಿಬಿ ಗೆಲುವಿನ ನಗೆ ಬೀರಿದೆ. ಶುಕ್ರವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ 50 ರನ್ ಗೆಲುವು ಸಾಧಿಸಿತು. ಇದರೊಂದಿಗೆ ಈ ಬಾರಿ ಟೂರ್ನಿಯಲ್ಲಿ ಆರ್‌ಸಿಬಿ ಸತತ 2ನೇ ಗೆಲುವು ದಾಖಲಿಸಿತು. ಮೊದಲ ಪಂದ್ಯದಲ್ಲಿ ಮುಂಬೈ ವಿರುದ್ಧ ಗೆದ್ದಿದ್ದ ಚೆನ್ನೈ, ಟೂರ್ನಿಯ ಮೊದಲ ಸೋಲು ಕಂಡಿತು.
ಇನ್ನು ದಕ್ಷಿಣ ಭಾರತದ ಸಾಂಪ್ರದಾಯಿಕ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆಯೇ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ವಾಸವಾಗಿರುವ ಆರ್‌ಸಿಬಿ ಮಾಜಿ ಮಾಲೀಕರಾದ ವಿಜಯ್ ಮಲ್ಯ ಸೋಷಿಯಲ್ ಮೀಡಿಯಾದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಮಲ್ಯ, 'ದಕ್ಷಿಣ ಭಾರತದ ಬದ್ದ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ಅವರದ್ದೇ ನೆಲದಲ್ಲಿ 17 ವರ್ಷಗಳ ಬಳಿಕ ಅಧಿಕಾರಯುತ ಗೆಲುವು ಸಾಧಿಸಿದ ಆರ್‌ಸಿಬಿ ತಂಡಕ್ಕೆ ಅಭಿನಂದನೆಗಳು. ಬ್ಯಾಟ್ ಹಾಗೂ ಬಾಲ್‌ನಲ್ಲಿ ಸಂಘಟಿತ ಪ್ರದರ್ಶನ ತೋರಿದ್ದೀರ. ದಿಟ್ಟವಾಗಿ ಆಡಿ' ಎಂದು 69 ವರ್ಷದ ಮಲ್ಯ ಟ್ವೀಟ್ ಮಾಡಿದ್ದಾರೆ.
ಪಂದ್ಯ ಹೇಗಿತ್ತು?
ಟಾಸ್ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಆರ್‌ಸಿಬಿ 7 ವಿಕೆಟ್ ನಷ್ಟದಲ್ಲಿ 196 ರನ್ ಗಳಿಸಿತು. ಚೆನ್ನೈ ಸ್ಪಿನ್ನರ್‌ಗಳನ್ನು ಸಮರ್ಥವಾಗಿ ಎದುರಿಸಿದ ತಂಡ ದೊಡ್ಡ ಮೊತ್ತ ಕಲೆಹಾಕಿತು. ನಾಯಕ ರಜತ್ ಪಾಟೀದಾರ್ 32 ಎಸೆತಗಳಲ್ಲಿ 51 ರನ್ ಗಳಿಸಿದರು. ಫಿಲ್ ಸಾಲ್ಟ್ 32, ವಿರಾಟ್ ಕೊಹ್ಲಿ 31, ದೇವದತ್ ಪಡಿಕ್ಕಲ್ 27 ರನ್ ಬಾರಿಸಿದರು.
ದೊಡ್ಡ ಗುರಿ ಬೆನ್ನತ್ತಿದ ಚೆನ್ನೈ 08 ವಿಕೆಟ್ ನಷ್ಟದಲ್ಲಿ 146 ರನ್ ಗಳಿಸಿ ಸೋಲೊಪ್ಪಿಕೊಂಡಿತು. 4.4 ಓವರ್‌ಗಳಲ್ಲಿ 26 ರನ್‌ಗೆ ಪ್ರಮುಖ 3 ವಿಕೆಟ್ ಕಳೆದುಕೊಂಡ ತಂಡ ಬಳಿಕ ಒತ್ತಡಕ್ಕೊಳಗಾಯಿತು. ರಚಿನ್ ರವೀಂದ್ರ 41 ರನ್ ಗಳಿಸಿದರೂ ತಂಡಕ್ಕೆ ಗೆಲುವು ಸಿಗಲಿಲ್ಲ.
ಇದನ್ನೂ ಓದಿ: IPL 2025 ಜಯದ ಹಳಿಗೆ ಬರಲು ಇಂದು ಮುಂಬೈ vs ಟೈಟಾನ್ಸ್ ಫೈಟ್
17 ವರ್ಷಗಳ ಬಳಿಕ ಚೆಪಾಕ್‌ನಲ್ಲಿ ಗೆದ್ದ ಆರ್‌ಸಿಬಿ:
ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ಆರ್‌ಸಿಬಿ ತಂಡವು ಗೆಲುವು ದಾಖಲಿಸಿತ್ತು. ಇದಾಗಿ 17 ವರ್ಷಗಳಲ್ಲಿ ಉಭಯ ತಂಡಗಳು 8 ಬಾರಿ ಮುಖಾಮುಖಿಯಾಗಿದ್ದವು. ಚೆಪಾಕ್‌ನಲ್ಲಿ ನಡೆದ 8 ಪಂದ್ಯದಲ್ಲೂ ಆರ್‌ಸಿಬಿ ಎದುರು ಸಿಎಸ್‌ಕೆ ಗೆಲುವಿನ ನಗೆ ಬೀರಿತ್ತು. ಇದೀಗ ಬರೋಬ್ಬರಿ 17 ವರ್ಷಗಳ ಬಳಿಕ ಚೆಪಾಕ್ ಮೈದಾನದಲ್ಲಿ ಚೆನ್ನೈ ಎದುರು ಆರ್‌ಸಿಬಿ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.