ಅಹಮದಾಬಾದ್‌ನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್, ಗುಜರಾತ್ ಟೈಟಾನ್ಸ್ ವಿರುದ್ಧ 11 ರನ್‌ಗಳ ಜಯ ಸಾಧಿಸಿದೆ. ಶ್ರೇಯಸ್ ಅಯ್ಯರ್ ಅವರ 97 ರನ್ ಮತ್ತು ವೈಶಾಖ್ ಅವರ ಉತ್ತಮ ಬೌಲಿಂಗ್ ಪಂಜಾಬ್ ಗೆಲುವಿಗೆ ಕಾರಣವಾಯಿತು.
ಅಹಮದಾಬಾದ್: 18ನೇ ಆವೃತ್ತಿ ಐಪಿಎಲ್‌ನಲ್ಲಿ ಮತ್ತೆ ರನ್ ಹೊಳೆ ಹರಿದಿದೆ. ತಲಾ 230+ ರನ್‌ಗಳಿಗೆ ಸಾಕ್ಷಿಯಾದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಪಂಜಾಬ್ ಕಿಂಗ್ 11 ರನ್ ರೋಚಕ ಗೆಲುವು ಸಾಧಿಸಿದೆ.
ದೊಡ್ಡ ಮೊತ್ತದ ಸ್ಪಷ್ಟ ಗುರಿಯೊಂದಿಗೆ ಬ್ಯಾಟಿಂಗ್‌ಗೆ ಇಳಿದ ಪಂಜಾಬ್, ಆರಂಭದಲ್ಲೇ ಸ್ಫೋಟಕ ಆಟಕ್ಕೆ ಒತ್ತುಕೊಟ್ಟಿತು. ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 243 ರನ್ ಕಲೆಹಾಕಿತು. ಆರಂಭಿಕ ಆಟಗಾರ ಪ್ರಿಯಾನ್ಸ್ ಆರ್ಯ 23 ಎಸೆತಗಳಲ್ಲಿ 47 ರನ್ ಸಿಡಿಸಿ ಔಟಾದರು. ಪವರ್-ಪ್ಲೇನಲ್ಲಿ 73 ರನ್ ಗಳಿಸಿದ ತಂಡ ಕೊನೆವರೆಗೂ ಅಬ್ಬರಿಸಿತು. ನಾಯಕ ಶ್ರೇಯಸ್ ಅಯ್ಯರ್ 42 ಎಸೆತಗಳಲ್ಲಿ 5 ಬೌಂಡರಿ, 9 ಸಿಕ್ಸರ್‌ಗಳೊಂದಿಗೆ 97 ರನ್ ಸಿಡಿಸಿದರು. 20ನೇ ಓವರ್‌ನಲ್ಲಿ ಶ್ರೇಯಸ್‌ಗೆ ಕ್ರೀಸ್ ಸಿಗದ ಕಾರಣ ಶತಕ ಗಳಿಸಲಾಗಲಿಲ್ಲ. ಕೊನೆ ಓವರ್‌ನಲ್ಲಿ 5 ಬೌಂಡರಿ ಸಿಡಿಸಿದ ಶಶಾಂಕ್ ಸಿಂಗ್, 16 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ ಔಟಾಗದೆ
44 ರನ್ ಬಾರಿಸಿದರು.
ಇದನ್ನೂ ಓದಿ: ಸಿಟ್ಟಿನಲ್ಲಿ ಮಲಗುವ ಮಂಚಕ್ಕೆ ಒದ್ದ ಮಯಾಂಕ್; ಐಪಿಎಲ್ ಆಡೋದು ಮತ್ತಷ್ಟು ತಡ!
ಹೋರಾಟ ವ್ಯರ್ಥ: ಬೃಹತ್ ಗುರಿ ಬೆನ್ನತ್ತಿದ ಗುಜರಾತ್, ಉತ್ತಮ ಹೋರಾಟದ ವ್ಯರ್ಥವಾಗಿಯೂ 5 ವಿಕೆಟ್‌ಗೆ 232 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಶುಭ್ಮನ್ ಗಿಲ್ 33, ಸಾಯಿ ಸುದರ್ಶನ್ 41 ಎಸೆತಗಳಲ್ಲಿ 74, ಜೋಸ್ ಬಟ್ಲರ್ 33 ಎಸೆತಗಳಲ್ಲಿ 54 ರನ್ ಸಿಡಿಸಿದರು. 14 ಓವರಲ್ಲಿ 169 ರನ್ ಗಳಿಸಿದ್ದ ಕೊನೆ 6 ಓವರಲ್ಲಿ 75 ರನ್ ಬೇಕಿತ್ತು. ಆದರೆ ವಿಜಯ್‌ಕುಮಾರ್ ವೈಶಾಖ್, ಮಾರ್ಕೊ ಯಾನ್ಸನ್ ಮಾರಕ ದಾಳಿ ಪಂಜಾಬ್‌ಗೆ ಗೆಲುವು ತಂದುಕೊಟ್ಟಿತು. ಶೆರ್ಫಾನೆ ರುಥ ಫೋರ್ಡ್ 46 ರನ್ ಗಳಿಸಿದರು.
ಸ್ಕೋರ್: ಪಂಜಾಬ್ 243/5 (ಶ್ರೇಯಸ್ 97*, ಪ್ರಿಯಾನ್ 47, ಶಶಾಂಕ್ 44*, ಸಾಯ್ ಕಿಶೋರ್ 3-30),
ಗುಜರಾತ್ 232/5 (ಸುದರ್ಶನ್ 74, ಬಟ್ಲರ್ 54, ರುಥಫೋರ್ಡ್ 46, ಅರ್ಶ್‌ದೀಪ್ 2-36)
ಪಂದ್ಯಶ್ರೇಷ್ಠ: ಶ್ರೇಯಸ್ ಅಯ್ಯರ್
ಇದನ್ನೂ ಓದಿ: IPL 2025: ಡೆಲ್ಲಿಯನ್ನು ಗೆಲ್ಲಿಸಿದ ಅಶುತೋಷ್ ಶರ್ಮಾ ಸಾಹಸ!
ಪಂಜಾಬ್ ಗೆಲುವಲ್ಲಿ ಕನ್ನಡಿಗ ವೇಗಿ ವೈಶಾಖ್ ಇಂಪ್ಯಾಕ್ಟ್
14ನೇ ಓವರ್ ವೇಳೆ ಪಂಜಾಬ್‌ನ ಇಂಪ್ಯಾಕ್ಟ್ ಆಟಗಾರನಾಗಿ ಮೈದಾನಕ್ಕಿಳಿದ ಕನ್ನಡಿಗ ವಿ.ವೈಶಾಖ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 15ನೇ ಓವರ್‌ನಲ್ಲಿ 5 ಮತ್ತು 17ನೇ ಓವರ್‌ನಲ್ಲಿ 3 ವೈಡ್ ಸಹಿತ 5 ರನ್ ಬಿಟ್ಟುಕೊಟ್ಟ ವೈಶಾಖ್, ಗುಜರಾತ್ ಮೇಲೆ ತೀವ್ರ ಒತ್ತಡ ಹೇರಿದರು. 19ನೇ ಓವರ್‌ನಲ್ಲಿ 18 ರನ್ ನೀಡಿದರೂ, ಪಂದ್ಯ ಅದಾಗಲೇ ಪಂಜಾಬ್ ಪರ ವಾಲಿತ್ತು.
19 ನೇ ಬಾರಿ: ಗ್ಲೆನ್ ಮ್ಯಾಕ್ಸ್‌ವೆಲ್ ಐಪಿಎಲ್‌ನಲ್ಲಿ 19ನೇ ಬಾರಿ ಸೊನ್ನೆಗೆ ಔಟಾದರು. ಇದು ಯಾವುದೇ ಆಟಗಾರರ ಪೈಕಿ ಗರಿಷ್ಠ.
18ನೇ ಆವೃತ್ತಿಯ ಐಪಿಎಲ್‌ನಲ್ಲಿ ಒಟ್ಟು 6 ತಂಡಗಳು ತಲಾ 200ಕ್ಕೂ ಹೆಚ್ಚು ರನ್ ಕಲೆಹಾಕಿವೆ.