ಐಪಿಎಲ್ 2025ರ ಉದ್ಘಾಟನಾ ಪಂದ್ಯ ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದ್ದು, ಮಳೆಯಿಂದಾಗಿ ಪಂದ್ಯ ನಡೆಯುವುದು ಅನುಮಾನವಾಗಿದೆ. ಹವಾಮಾನ ಇಲಾಖೆ ಕೋಲ್ಕತಾದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ.
ಕೋಲ್ಕತಾ: ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಮಾರ್ಚ್ 22ರಿಂದ ಆರಂಭವಾಗಲಿರುವ 18ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಡಲಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಐತಿಹಾಸಿಕ ಈಡನ್ ಗಾರ್ಡನ್ಸ್ ಮೈದಾನ ಆತಿಥ್ಯ ವಹಿಸಿದೆ.
ಮಿಲಿಯನ್ ಡಾಲರ್ ಟಿ20 ಲೀಗ್ ಎನಿಸಿಕೊಂಡಿರುವ ಐಪಿಎಲ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಇಡೀ ಕ್ರಿಕೆಟ್ ಜಗತ್ತೇ ತುದಿಗಾಲಿನಲ್ಲಿ ನಿಂತಿದೆ. ಆದರೆ ಐಪಿಎಲ್ ಜ್ವರ ಜೋರಾಗಿರುವ ಬೆನ್ನಲ್ಲೇ ಈ ಜೋಶ್‌ಗೆ ತಣ್ಣೀರೆರಚಲು ಮಳೆರಾಯ ಸಿದ್ದತೆ ನಡೆಸಿದಂತೆ ಕಂಡು ಬರುತ್ತಿದೆ. ಹೀಗಾಗಿ ಐಪಿಎಲ್ ಉದ್ಘಾಟನಾ ಪಂದ್ಯವು ನಡೆಯೋದೇ ಅನುಮಾನ ಎನ್ನುವಂತಹ ವಾತಾವರಣ ನಿರ್ಮಾಣವಾಗಿದೆ.
ಇದನ್ನೂ ಓದಿ: IPL 2025ಗೂ ಮುನ್ನ ರಾಜಸ್ಥಾನ ರಾಯಲ್ಸ್‌ಗೆ ಬಿತ್ತು ಬಲವಾದ ಪೆಟ್ಟು; ಸಂಜು ಸ್ಯಾಮ್ಸನ್ ಔಟ್, ಈತನೇ ಹೊಸ ಕ್ಯಾಪ್ಟನ್!
ಬದ್ದ ಎದುರಾಳಿಗಳ ನಡುವಿನ ಫೈಟ್‌ಗೆ ಕ್ಷಣಗಣನೆ:
ಐಪಿಎಲ್‌ನಲ್ಲಿ ಮುಂಬೈ-ಚೆನ್ನೈ, ಆರ್‌ಸಿಬಿ-ಚೆನ್ನೈ ನಡುವಿನ ಬದ್ದ ಎದುರಾಳಿಗಳ ಕಾಳಗದಂತೆ ಆರ್‌ಸಿಬಿ ಹಾಗೂ ಕೆಕೆಆರ್ ನಡುವಿನ ಫೈಟ್ ಕೂಡಾ ಕೊನೆಯ ಎಸೆತದವರೆಗೂ ಜಿದ್ದಾಜಿದ್ದಿನ ಕಾದಾಟಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆ. ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಈ ಬಾರಿ ಅಜಿಂಕ್ಯಾ ರಹಾನೆ ಮುನ್ನಡೆಸಲಿದ್ದು, ತವರಿನಲ್ಲಿ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಇನ್ನೊಂದೆಡೆ ರಜತ್ ಪಾಟೀದಾರ್ ಕೂಡಾ ಇದೇ ಮೊದಲ ಬಾರಿಗೆ ಆರ್‌ಸಿಬಿ ತಂಡದ ನಾಯಕರಾಗಿದ್ದು, ತಮ್ಮ ನಾಯಕತ್ವದಲ್ಲಿ ಮೊದಲ ಪಂದ್ಯ ಗೆದ್ದು ಸ್ಮರಣೀಯವಾಗಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಹೀಗಾಗಿ ಈ ಪಂದ್ಯ ಸಾಕಷ್ಟು ರೋಚಕತೆಗೆ ಸಾಕ್ಷಿಯಾಗುವ ನಿರೀಕ್ಷೆಯಿದೆ. ಆದರೆ ಮಳೆರಾಯ ಕೃಪೆ ತೋರಬೇಕಿದೆ.
ಇದನ್ನೂ ಓದಿ: ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಟಾಪ್ 5 ಬೌಲರ್‌ಗಳಿವರು!
ಕೆಕೆಆರ್-ಆರ್‌ಸಿಬಿ ಪಂದ್ಯಕ್ಕೆ ಹವಾಮಾನ ಹೇಗಿರಲಿದೆ?
ಭಾರತೀಯ ಹವಾಮಾನ ಇಲಾಖೆ ವರದಿಯ ಪ್ರಕಾರ, ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿಯಾಗಿರುವುದರಿಂದ ಕೋಲ್ಕತಾದಾದ್ಯಂತ ಮಾರ್ಚ್ 20ರಿಂದ 22ರವರೆಗೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಈಗಾಗಲೇ ಕೋಲ್ಕತಾದಾದ್ಯಂತ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಅವಧಿಯಲ್ಲಿ ಗುಡುಗು-ಸಿಡಿಲು ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಇನ್ನು ಪಂದ್ಯದ ಆರಂಭದ ಸಮಯದಲ್ಲಿ 10% ಮಳೆಯ ಮುನ್ಸೂಚನೆ ನೀಡಲಾಗಿದೆ. ಆದರೆ ಪಂದ್ಯ ಮುಗಿಯುವ ವೇಳೆಯಲ್ಲಿ ಅಂದರೆ ರಾತ್ರಿ 11 ಗಂಟೆಯ ಸುಮಾರಿಗೆ 70% ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಒಂದು ವೇಳೆ ಪಂದ್ಯಕ್ಕೆ ಮಳೆರಾಯ ಅಲ್ಪ ಅಡ್ಡಿ ಪಡಿಸಿದರೆ, ಓವರ್‌ಗಳನ್ನು ಕಡಿತಗೊಳಿಸಿ ಪಂದ್ಯವನ್ನು ಪೂರ್ಣಗೊಳಿಸುವ ಸಾಧ್ಯತೆಯಿದೆ. ಇನ್ನು ಇದಷ್ಟೇ ಅಲ್ಲದೇ ಡೆಕ್ವರ್ಥ್ ಲೂಯಿಸ್ ಅಳವಡಿಸಿಯೂ ಪಂದ್ಯದ ಫಲಿತಾಂಶ ಘೋಷಿಸುವ ಸಾಧ್ಯತೆಯಿದೆ. ಇನ್ನು ಪಂದ್ಯ ಸಂಪೂರ್ಣವಾಗಿ ವಾಷ್‌ಔಟ್ ಆದರೆ ಉಭಯ ತಂಡಗಳಿಗೆ ತಲಾ ಒಂದೊಂದು ಅಂಕವನ್ನು ಹಂಚಲಾಗುತ್ತದೆ.
ಇದನ್ನೂ ಓದಿ: ಐಪಿಎಲ್ ರೂಲ್ಸ್‌ನಲ್ಲಿ ಮಹತ್ವದ ಬದಲಾವಣೆ ಮಾಡಿದ ಬಿಸಿಸಿಐ! ಈ ರೂಲ್ಸ್ ನಿಮಗೆ ಗೊತ್ತಿರಲಿ
ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯ ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿದ ಕೋಲ್ಕತಾ ನೈಟ್ ರೈಡರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಮುಗ್ಗರಿಸುವ ಮೂಲಕ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಕನವರಿಕೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಮಣಿಸುವ ಮೂಲಕ ಶುಭಾರಂಭ ಮಾಡಲಿ ಎನ್ನುವುದು ಆರ್‌ಸಿಬಿ ಅಭಿಮಾನಿಗಳ ಹಾರೈಕೆಯಾಗಿದೆ. ಆದರೆ ಈ ಪಂದ್ಯಕ್ಕೆ ಮಳೆರಾಯ ಅಡ್ಡಿ ಪಡಿಸುತ್ತಾನೆಯೇ ಅಥವಾ ಯಾವುದೇ ಅಡಚಣೆಯಿಲ್ಲದೇ ಪಂದ್ಯ ನಡೆಯುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.