
ಬೆಂಗಳೂರು: ಟೀಂ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಶಮಿಗೆ ಜೀವ ಬೆದರಿಕೆ ಬಂದಿದ್ದು, ಚರ್ಚೆಗೆ ಗ್ರಾಸವಾಗಿದೆ. ಸೋಮವಾರ ಬಂದ ಇಮೇಲ್‌ನಲ್ಲಿ ₹1 ಕೋಟಿ ಬೇಡಿಕೆ ಇಡಲಾಗಿದೆ. ಐಪಿಎಲ್ 2025 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ ಶಮಿ ₹1 ಕೋಟಿ ಕೊಡದಿದ್ದರೆ ಜೀವ ತೆಗೆಯುವುದಾಗಿ ಬೆದರಿಕೆ ಹಾಕಲಾಗಿದೆ. ಇತ್ತೀಚೆಗೆ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್‌ಗೂ ಇದೇ ರೀತಿ ಬೆದರಿಕೆ ಬಂದಿತ್ತು.
ವರದಿಗಳ ಪ್ರಕಾರ, ಶಮಿಗೆ ಬಂದ ಇಮೇಲ್‌ನಲ್ಲಿ ₹1 ಕೋಟಿ ಕೊಡದಿದ್ದರೆ ಜೀವ ತೆಗೆಯುವುದಾಗಿ ಹೇಳಲಾಗಿದೆ. ಶಮಿ ಸಹೋದರ ಮೊಹಮ್ಮದ್ ಹಸೀಬ್ ಅಮ್ರೋಹ ಎಸ್ಪಿಗೆ ದೂರು ನೀಡಿದ್ದಾರೆ. ರಾಜಪೂತ್ ಸಿಂಧರ್ ಹೆಸರಿನಿಂದ ಬಂದ ಮೇಲ್‌ನಲ್ಲಿ ಪ್ರಭಾಕರ್ ಎಂದು ಹೆಸರು ನೀಡಲಾಗಿದೆ.
ಆರೋಪಿಗಳಿಗಾಗಿ ಹುಡುಕುತ್ತಿರುವ ಅಮ್ರೋಹ ಪೊಲೀಸರು
ಅಮ್ರೋಹ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸೈಬರ್ ಸೆಲ್‌ಗೆ ಇಮೇಲ್ ಕಳುಹಿಸಲಾಗಿದೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ಇಮೇಲ್ ಬಂದಿತ್ತು ಎಂದು ಶಮಿ ಸಹೋದರ ಹೇಳಿದ್ದಾರೆ. ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಅನುಭವಿ ವೇಗಿ ಮೊಹಮ್ಮದ್ ಶಮಿ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಟೀಂ ಇಂಡಿಯಾ ಫೈನಲ್ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಭಾರತದಲ್ಲೇ ನಡೆದಿದ್ದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಶಮಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಆಗಿ ಹೊರಹೊಮ್ಮಿದ್ದರು. ಇನ್ನು ಇದಾದ ಬಳಿಕ ಒಂದು ವರ್ಷಗಳ ಕಾಲ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದ ಶಮಿ, 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೂ ಮುನ್ನ ಭಾರತ ತಂಡ ಕೂಡಿಕೊಂಡಿದ್ದರು. ಇನ್ನು ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲೂ ಶಮಿ 5 ಪಂದ್ಯಗಳನ್ನಾಡಿ 9 ವಿಕೆಟ್ ಕಬಳಿಸುವ ಮೂಲಕ ಭಾರತ ಪರ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನಕ್ಕೇರಿದ್ದರು. ಇದಷ್ಟೇ ಅಲ್ಲದೇ ದಶಕದ ಬಳಿಕ ಭಾರತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಜಯಿಸುವಲ್ಲಿ ಶಮಿ ಪ್ರಮುಖ ಪಾತ್ರ ವಹಿಸಿದ್ದರು.
ಐಪಿಎಲ್ 2025 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿರುವ ಶಮಿ
ಮೊಹಮ್ಮದ್ ಶಮಿ ಐಪಿಎಲ್‌ನ 18ನೇ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದಾರೆ. ಅನುಭವಿ ವೇಗಿ ಮೊಹಮ್ಮದ್ ಶಮಿ, ಸನ್‌ರೈಸರ್ಸ್ ಪರ 9 ಪಂದ್ಯಗಳಲ್ಲಿ 6 ವಿಕೆಟ್ ಪಡೆದಿದ್ದಾರೆ. ಉತ್ತಮ ಲಯದಲ್ಲಿ ಇಲ್ಲದ ಶಮಿಯನ್ನು ಡೆಲ್ಲಿ ಕ್ಯಾಪಿಟಲ್ಸ್ ಎದುರಿನ ಪಂದ್ಯದಿಂದ ಕೈಬಿಡಲಾಗಿತ್ತು. ಸನ್‌ರೈಸರ್ಸ್ ಹೈದರಾಬಾದ್ ತಂಡವು ಈಗಾಗಲೇ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿದೆ.
ಭಾರತ ತಂಡದ ಕೋಚ್ ಗಂಭೀರ್‌ಗೆ ಜೀವ ಬೆದರಿಕೆ!
ನವದೆಹಲಿ: ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಗೌತಮ್ ಗಂಭೀರ್‌ಗೆ ಜೀವ ಬೆದರಿಕೆ ಇ-ಮೇಲ್‌ಗಳು ಬಂದಿದ್ದು, ಈ ಸಂಬಂಧ ಇಲ್ಲಿನ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರ ದಾಳಿ ನಡೆದ ಮರುದಿನವೇ ಗಂಭೀರ್‌ಗೆ ಅನುಮಾನಾಸ್ಪದ ಜಿಮೇಲ್ ಖಾತೆಯಿಂದ ಬೆದರಿಕೆ ಮೇಲ್ ಬಂದಿದೆ.
ಇ-ಮೇಲ್‌ನಲ್ಲಿ ‘ನಿನ್ನನ್ನು ಕೊಲ್ಲುತ್ತೇನೆ’ ಎಂದು ಬರೆದಿದ್ದು, ಮೇಲೆ ಕಳುಹಿಸಿರುವ ವ್ಯಕ್ತಿಯು ತನ್ನನ್ನು ತಾನು ‘ಐಸಿಸ್ ಕಾಶ್ಮೀರ’ ಎಂದು ಗುರುತಿಸಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಗಂಭೀರ್‌ಗೆ ಬೆದರಿಕೆ ಇ-ಮೇಲ್‌ಗಳು ಬಂದಿರುವುದು ಇದೇ ಮೊದಲಲ್ಲ. 2022ರಲ್ಲಿ ಇದೇ ರೀತಿಯ ಜೀವ ಬೆದರಿಕೆ ಸಂದೇಶಗಳು ಬಂದಿದ್ದವು. ಆಗ ಅವರ ಭದ್ರತೆಯನ್ನು ಹೆಚ್ಚಿಸಲಾಗಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.