
ಮುಂಬೈ: ಈ ಬಾರಿ ಐಪಿಎಲ್‌ನ ಪ್ಲೇ-ಆಫ್ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ಎರಡು ತಂಡಗಳಾದ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟಾನ್ಸ್ ಮಂಗಳವಾರ ಪರಸ್ಪರ ಸೆಣಸಾಡಲಿವೆ. ಈ ಪಂದ್ಯದಲ್ಲಿ ಗೆಲ್ಲುವ ತಂಡದಷ್ಟೇ-ಆಫ್ ಸ್ಥಾನ ಬಹುತೇಕ ಖಚಿತವಾಗಲಿದೆ.
ತವರಿನಲ್ಲಿ ಆಡಿರುವ 5 ಪಂದ್ಯಗಳ ಪೈಕಿ 4ರಲ್ಲಿ ಗೆದ್ದಿರುವ ತಂಡ, ವಾಂಖೆಡೆಯಲ್ಲಿ ಇನ್ನೂ 2 ಪಂದ್ಯ ಆಡಬೇಕಿದೆ. ಹೀಗಾಗಿ ತಂಡ ಪ್ಲೇ-ಆಫ್ ಗೇರುವ ಸಾಧ್ಯತೆ ಹೆಚ್ಚಿದೆ. ಮತ್ತೊಂದೆಡೆ ಗುಜರಾತ್‌ಗೆ ಇನ್ನು 4 ಪಂದ್ಯ ಬಾಕಿಯಿದೆ. ಇದರಲ್ಲಿ 2 ಪಂದ್ಯಗಳನ್ನು ತವರಿನಲ್ಲಿ ಆಡಲಿದೆ. ಮುಂಬೈ ವಿರುದ್ಧ ಅದರದೇ ತವರಿನಲ್ಲಿ ಗೆಲ್ಲುವ ಮೂಲಕ ಪ್ಲೇ-ಆಫ್ ಹಾದಿಯನ್ನು ಮತ್ತಷ್ಟು ಸುಗಮ ಗೊಳಿಸುವುದು ತಂಡದ ಗುರಿ. ಅಲ್ಲದೆ, ಮುಂಬೈ ವಿರುದ್ಧ ಈ ಬಾರಿ ಮೊದಲ ಮುಖಾಮುಖಿಯಲ್ಲಿ ಗೆದ್ದಿದ್ದ ಗುಜರಾತ್, ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ.
ಗುಜರಾತ್ ಟೈಟಾನ್ಸ್ ತಂಡವು ಬ್ಯಾಟಿಂಗ್‌ನಲ್ಲಿ ಅಗ್ರಕ್ರಮಾಂಕದ ಬ್ಯಾಟರ್‌ಗಳಾದ ಸಾಯಿ ಸುದರ್ಶನ್, ನಾಯಕ ಶುಭ್‌ಮನ್ ಗಿಲ್ ಹಾಗೂ ಜೋಸ್ ಬಟ್ಲರ್ ಅವರನ್ನೇ ಹೆಚ್ಚಾಗಿ ನೆಚ್ಚಿಕೊಂಡಿದೆ. ಟೂರ್ನಿಯುದ್ದಕ್ಕೂ ಈ ಮೂವರು ಬ್ಯಾಟರ್‌ಗಳು ಗುಜರಾತ್ ಟೈಟಾನ್ಸ್ ಪರ ಸ್ಥಿರ ಪ್ರದರ್ಶನದ ಮೂಲಕ ಆಸರೆಯಾಗುತ್ತಿದ್ದಾರೆ. ಇನ್ನು ವಾಷಿಂಗ್ಟನ್ ಸುಂದರ್ ಹಾಗೂ ಶೆರ್ಫಾನೆ ರುದರ್‌ಫೋರ್ಡ್ ಕೂಡಾ ಆಗಾಗ ಅಬ್ಬರಿಸುತ್ತಿದ್ದಾರೆ. ಆದರೆ ಇವರಿಂದ ಸ್ಥಿರ ಪ್ರದರ್ಶನ ಮೂಡಿ ಬಂದಿಲ್ಲ. ಮುಂಬೈ ಇಂಡಿಯನ್ಸ್ ಪಾಳಯದಲ್ಲಿ ದೀಪಕ್ ಚಹರ್, ಟ್ರೆಂಟ್ ಬೌಲ್ಟ್ ಹಾಗೂ ಜಸ್ಪ್ರೀತ್ ಬುಮ್ರಾ ಅವರಂತಹ ವಿಶ್ವದರ್ಜೆಯ ವೇಗಿಗಳೆದುರು ಗಿಲ್, ಸುದರ್ಶನ್ ಹಾಗೂ ಬಟ್ಲರ್ ಯಾವ ರೀತಿ ತಿರುಗೇಟು ನೀಡಲಿದ್ದಾರೆ ಎಂದು ಕಾದು ನೋಡಬೇಕಿದೆ.
ಸದ್ಯ ಮುಂಬೈ ತಂಡ ಆಡಿರುವ 11ರಲ್ಲಿ 7 ಪಂದ್ಯ ಗೆದ್ದಿದ್ದರೆ, ಗುಜರಾತ್ 10 ಪಂದ್ಯಗಳಲ್ಲಿ 7 ಗೆಲುವು ದಾಖಲಿಸಿದೆ. 5 ಬಾರಿ ಚಾಂಪಿಯನ್ ಮುಂಬೈ ತಂಡಕ್ಕೆ ಉಳಿದ 3ರಲ್ಲಿ 2 ಪಂದ್ಯ ಗೆದ್ದರೆ ಅಧಿಕೃತವಾಗಿ ನಾಕೌಟ್‌ಗೇರಲಿದೆ. ಒಂದರಲ್ಲಿ ಗೆದ್ದರೂ ತಂಡಕ್ಕೆ ನಾಕೌಟ್ ರೇಸ್‌ನಲ್ಲಿ ಉಳಿದುಕೊಳ್ಳಲಿದೆ.
5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಆರಂಭಿಕ ವೈಫಲ್ಯಗಳನ್ನು ಮೆಟ್ಟಿನಿಂತು ಇದೀಗ ಸತತ ಗೆಲುವುಗಳನ್ನು ದಾಖಲಿಸುವ ಮೂಲಕ ಪ್ಲೇ ಆಫ್‌ನತ್ತ ದಾಪುಗಾಲಿಡುತ್ತಿದೆ. ಮಾಜಿ ನಾಯಕ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಟ್ರೆಂಟ್ ಬೌಲ್ಟ್ ಹಾಗೂ ಜಸ್ಪ್ರೀತ್ ಬುಮ್ರಾ ಸರಿಯಾದ ಸಮಯಕ್ಕೆ ಫಾರ್ಮ್‌ಗೆ ಮರಳಿದ್ದಾರೆ. ಅದರಲ್ಲೂ ನಾಯಕ ಹಾರ್ದಿಕ್ ಪಾಂಡ್ಯ ಆಲ್ರೌಂಡ್ ಪ್ರದರ್ಶನದ ಮೂಲಕ ಮಿಂಚುತ್ತಿದ್ದಾರೆ. ಇದರ ಜತೆಗೆ ವಿಲ್ ಜ್ಯಾಕ್ಸ್ ಹಾಗೂ ನಮನ್ ಧಿರ್, ರಿಯಲ್ ರಿಕೆಲ್ಟನ್ ಕೂಡಾ ಫಾರ್ಮ್‌ನಲ್ಲಿರುವುದು ತಂಡದ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ.
ಉಭಯ ತಂಡಗಳ ಸಂಭಾವ್ಯ ಆಟಗಾರರ ಪಟ್ಟಿ
ಮುಂಬೈ ಇಂಡಿಯನ್ಸ್: ರಿಯನ್ ರಿಕಲ್ಟನ್(ವಿಕೆಟ್ ಕೀಪರ್), ರೋಹಿತ್ ಶರ್ಮಾ, ವಿಲ್ ಜ್ಯಾಕ್ಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ(ನಾಯಕ), ನಮನ್ ಧಿರ್, ಕಾರ್ಬಿನ್ ಬೋಷ್, ದೀಪಕ್ ಚಹರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ, ಕರ್ಣ್ ಶರ್ಮಾ.
ಗುಜರಾತ್ ಟೈಟಾನ್ಸ್: ಸಾಯಿ ಸುದರ್ಶನ್, ಶುಭ್‌ಮನ್ ಗಿಲ್(ನಾಯಕ), ಜೋಸ್ ಬಟ್ಲರ್, ವಾಷಿಂಗ್ಟನ್ ಸುಂದರ್, ರಾಹುಲ್ ತೆವಾಟಿಯಾ, ಶಾರುಖ್ ಖಾನ್, ರಶೀದ್ ಖಾನ್, ಸಾಯಿ ಕಿಶೋರ್, ಗೆರಾಲ್ಡ್ ಕೋಟ್ಜಿ/ಕಗಿಸೋ ರಬಾಡ, ಮೊಹಮ್ಮದ್ ಸಿರಾಜ್, ಪ್ರಸಿದ್ದ್ ಕೃಷ್ಣ, ಇಶಾಂತ್ ಶರ್ಮಾ.
ಪಂದ್ಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.