
ಬೆಂಗಳೂರು: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅದ್ಭುತ ಪ್ರದರ್ಶನ ತೋರುವ ಮೂಲಕ ಗಮನ ಸೆಳೆಯುತ್ತಿದೆ. ಆರ್‌ಸಿಬಿ ತಂಡದ ಅದ್ಭುತ ಪ್ರದರ್ಶನ ನೋಡಿದ ಫ್ಯಾನ್ಸ್ ಈ ಸಲ ಕಪ್ ನಮ್ದೇ ಎಂದು ಘೋಷಣೆ ಕೂಗುತ್ತಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿ ಹೊಸ ನಾಯಕ ರಜತ್ ಪಾಟೀದಾರ್ ಮಾರ್ಗದರ್ಶನದಲ್ಲಿ ಕಣಕ್ಕಿಳಿದಿದ್ದು, ಎದುರಾಳಿ ತಂಡವನ್ನು ಅನಾಯಾಸವಾಗಿ ಸೋಲಿಸುತ್ತಾ ಪ್ಲೇ ಆಫ್ ಹೊಸ್ತಿಲಲ್ಲಿ ಬಂದು ನಿಂತಿದೆ.
ಇನ್ನು ಪ್ರತಿ ಬಾರಿಯಂತೆ ಈ ಬಾರಿ ಕೂಡಾ ವಿರಾಟ್ ಕೊಹ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರನ್ ಮಷೀನ್ ಎನಿಸಿಕೊಂಡಿದ್ದು, ಮಿಂಚಿನ ಪ್ರದರ್ಶನದ ಮೂಲಕ ಆರ್‌ಸಿಬಿ ಪಡೆಗೆ ಆಸರೆಯಾಗಿದ್ದಾರೆ. ಇನ್ನು 2021ರಲ್ಲಿ ದಿಢೀರ್ ಎನ್ನುವಂತೆ ವಿರಾಟ್ ಕೊಹ್ಲಿ, ಆರ್‌ಸಿಬಿ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದರು. ಇದೀಗ ಇದೇ ಮೊದಲ ಬಾರಿಗೆ ತಾವು ಆರ್‌ಸಿಬಿ ನಾಯಕತ್ವದಿಂದ ಕೆಳಗಿಳಿದಿದ್ದು ಯಾಕೆ ಎನ್ನುವುದರ ಕುರಿತಂತೆ ಸ್ಪಷ್ಟನೆ ನೀಡಿದ್ದಾರೆ.
ಅಷ್ಟಕ್ಕೂ ವಿರಾಟ್ ಕೊಹ್ಲಿ ಆರ್‌ಸಿಬಿ ನಾಯಕತ್ವದಿಂದ ಕೆಳಗಿಳಿದಿದ್ದು ಯಾಕೆ?
ಆರ್‌ಸಿಬಿ ಪಾಡ್‌ಕಾಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಈ ವಿಚಾರವಾಗಿ ಮನಬಿಚ್ಚಿ ಮಾತನಾಡಿದ್ದಾರೆ. "ನಿಜ ಹೇಳಬೇಕೆಂದರೆ, ಒಂದು ಸಮಯದಲ್ಲಿ ಇದನ್ನು ನಿಭಾಯಿಸುವುದು ಕಠಿಣ ಎನಿಸತೊಡಗಿತ್ತು. ಯಾಕೆಂದರೆ ನನ್ನ ಕ್ರಿಕೆಟ್ ವೃತ್ತಿಜೀವನದಲ್ಲಿ ಏನೇನೆಲ್ಲಾ ನಡೆಯುತ್ತಾ ಇತ್ತು. ನಾನು 7-8 ವರ್ಷಗಳಿಂದ ಭಾರತ ತಂಡವನ್ನು, 9 ವರ್ಷಗಳ ಕಾಲ ಆರ್‌ಸಿಬಿ ತಂಡದ ನಾಯಕರಾಗಿ ಕಾರ್ಯ ನಿರ್ವಹಿಸಿದ್ದೇನೆ. ಆಗ ನಾನು ಚೆನ್ನಾಗಿ ಬ್ಯಾಟಿಂಗ್ ಮಾಡಬೇಕು ಎಂದು ಎಲ್ಲರೂ ನಿರೀಕ್ಷಿಸುತ್ತಿದ್ದರು. ನಾನು ಕ್ಯಾಪ್ಟನ್ ಆದರೆ, ನನ್ನ ಗಮನ ಬೇರೆಡೆ ಹೋಗುತ್ತದೆ ಎಂದೇನೂ ನನಗನಿಸಿಲ್ಲ. ಒಂದು ವೇಳೆ ನಾನು ಕ್ಯಾಪ್ಟನ್ ಆಗಿರದಿದ್ದರೂ ಬ್ಯಾಟರ್ ಅಂತು ಮಾಡುತ್ತೇನೆ. ಹೀಗಾಗಿ ನಾನು ಏನು ಮಾಡಬೇಕು ಎನ್ನುವ ಗೊಂದಲಕ್ಕೆ ಸಿಲುಕಿದೆ.
ಹೀಗಾಗಿ ನಾನು ಸಾಕಷ್ಟು ಕಠಿಣ ಸವಾಲುಗಳನ್ನು ಎದುರಿಸಿದೆ. ಈ ಕಾರಣಕ್ಕಾಗಿಯೇ ನಾಯಕತ್ವವನ್ನು ತೊರೆದೆ. ನಾನು ಆಟವನ್ನು ಎಂಜಾಯ್ ಮಾಡಬೇಕು. ನಾನು ನನ್ನ ಪಾಡಿಗೆ ಕ್ರಿಕೆಟ್ ಆಡಬೇಕು. ಯಾರೂ ನನ್ನನ್ನು ಜಡ್ಜ್ ಮಾಡುವಂತಿರಬಾರದು. ಈ ಕಾರಣದಿಂದಾಗಿ ನಾನು ಆರ್‌ಸಿಬಿ ನಾಯಕತ್ವವನ್ನು ತೊರೆದೆ ಎಂದು ವಿರಾಟ್ ಕೊಹ್ಲಿ ಕೊನೆಗೂ ಸ್ಪಷ್ಟನೆ ನೀಡಿದ್ದಾರೆ.
ಆರೆಂಜ್ ಕ್ಯಾಪ್ ಒಡೆಯ ವಿರಾಟ್ ಕೊಹ್ಲಿ:
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ 18 ಆವೃತ್ತಿಗಳಲ್ಲೂ ಒಂದೇ ತಂಡವನ್ನು ಪ್ರತಿನಿಧಿಸಿದ ಏಕೈಕ ಆಟಗಾರ ಎನ್ನುವ ಹೆಗ್ಗಳಿಕೆ ವಿರಾಟ್ ಕೊಹ್ಲಿ ಅವರ ಹೆಸರಿನಲ್ಲಿದೆ. ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲೂ ಗರಿಷ್ಠ ರನ್ ಸಿಡಿಸುವ ಮೂಲಕ ಕೊಹ್ಲಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದರು. ಇದೀಗ ಸತತ ಎರಡನೇ ಬಾರಿಗೆ ಆರೆಂಜ್ ಕ್ಯಾಪ್ ಟ್ರೋಫಿ ತಮ್ಮದಾಗಿಸಿಕೊಳ್ಳುವತ್ತ ವಿರಾಟ್ ಕೊಹ್ಲಿ ಮುನ್ನುಗ್ಗುತ್ತಿದ್ದಾರೆ. ಕೊಹ್ಲಿ ಸದ್ಯ ಆರ್‌ಸಿಬಿ ಪರ 11 ಪಂದ್ಯಗಳನ್ನಾಡಿ 7 ಅರ್ಧಶತಕ ಸಹಿತ 505 ರನ್ ಬಾರಿಸಿ ಆರೆಂಜ್ ಕ್ಯಾಪ್ ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ.
ಸದ್ಯ ಆರ್‌ಸಿಬಿ ತಂಡವು 11 ಪಂದ್ಯಗಳ ಅಂತ್ಯದ ವೇಳೆಗೆ 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಆಡಿದ ಹನ್ನೊಂದು ಪಂದ್ಯಗಳಲ್ಲಿ ಆರ್‌ಸಿಬಿ ತಂಡವು ತವರಿನಲ್ಲಿ ಮೂರು ಸೋಲು ಅನುಭವಿಸಿದ್ದು, ಇನ್ನುಳಿದ ಎಲ್ಲಾ ಪಂದ್ಯಗಳನ್ನು ಜಯಿಸಿದೆ. ಇನ್ನುಳಿದ ಮೂರು ಪಂದ್ಯಗಳ ಪೈಕಿ ಇನ್ನೊಂದು ಪಂದ್ಯ ಜಯಿಸಿದರೆ, ಅಧಿಕೃತವಾಗಿ ಪ್ಲೇ ಆಫ್‌ಗೆ ಲಗ್ಗೆಯಿಡಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.