ದೇಶಿ ಕ್ರಿಕೆಟ್‌ನಲ್ಲಿ ಅವಕಾಶ ಸಿಗದೆ ಖಿನ್ನತೆಗೆ ಒಳಗಾಗಿದ್ದ ಅಶುತೋಷ್ ಶರ್ಮಾ ಈಗ ಐಪಿಎಲ್‌ನಲ್ಲಿ ಮಿಂಚುತ್ತಿದ್ದಾರೆ. ಪಂಜಾಬ್ ಕಿಂಗ್ಸ್ ಪರ ಉತ್ತಮ ಪ್ರದರ್ಶನ ನೀಡಿದ್ದ ಅವರು, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಗೆಲ್ಲಿಸಿದ್ದಾರೆ.
ವಿಶಾಖಪಟ್ಟಣಂ: ಉತ್ತಮ ಆಟವಾಡುತ್ತಿದ್ದ ಹೊರತಾಗಿಯೂ ದೇಸಿ ಕ್ರಿಕೆಟ್‌ನ ಮಧ್ಯಪ್ರದೇಶ ತಂಡದಲ್ಲಿ ಅವಕಾಶ ಸಿಗದೆ ಖಿನ್ನತೆಗೆ ಒಳಗಾಗಿದ್ದ ಯುವ ಕ್ರಿಕೆಟಿಗ ಅಶುತೋಷ್ ಶರ್ಮಾ ಈಗ ಐಪಿಎಲ್‌ನಲ್ಲಿ ಹೀರೋ ಆಗಿ ಗಮನಸೆಳೆಯುತ್ತಿದ್ದಾರೆ.
ಕಳೆದ ವರ್ಷ ಪಂಜಾಬ್ ಕಿಂಗ್ಸ್ ಪರ ಕೆಲ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಅಶುತೋಷ್, ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಆರಂಭಿಕ ಪಂದ್ಯದಲ್ಲೇ ತಮ್ಮ ಸಾಹಸಿಕ ಹೋರಾಟದಿಂದಾಗಿ ಗೆಲ್ಲಿಸಿದ್ದಾರೆ. ಆದರೆ ವರ್ಷಗಳ ಹಿಂದೆ, ‘ಕ್ರಿಕೆಟ್ ಮೈದಾನದ ಅನುಭವ ಪಡೆಯಲು ಸಹ ನನಗೆ ಅವಕಾಶವಿಲ್ಲದಾಗಿತ್ತು’ ಎಂದು ಸ್ವತಃ ಅಶುತೋಷ್ ಹೇಳಿಕೊಂಡಿದ್ದರು.
ತಮ್ಮ ಕ್ರಿಕೆಟ್ ಪಯಣದ ಬಗ್ಗೆ 2024ರ ಐಪಿಎಲ್ ವೇಳೆ ಮಾತನಾಡಿದ್ದ ಅಶುತೋಷ್, ‘ನಾನು ಜಿಮ್‌ಗೆ ಹೋಗಿ ಬಳಿಕ ಹೋಟೆಲ್ ಕೋಣೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದೆ. ನಾನೇನು ತಪ್ಪು ಮಾಡಿದ್ದೆ ಎಂದು ಎಂದು ಯಾರೂ ನನಗೆ ಹೇಳಲಿಲ್ಲ. ಮಧ್ಯಪ್ರದೇಶಕ್ಕೆ ಹೊಸ ಕೋಚ್ ಸೇರ್ಪಡೆಗೊಂಡ ಬಳಿಕ ಅವರು ನನ್ನನ್ನು ತಂಡದಿಂದಲೇ ಕೈಬಿಟ್ಟರು. ಅಭ್ಯಾಸ ಪಂದ್ಯದಲ್ಲಿ 45 ಎಸೆತಗಳಲ್ಲಿ 90 ರನ್ ಗಳಿಸಿದರೂ ಅವಕಾಶ ಸಿಗಲಿಲ್ಲ’ ಎಂದಿದ್ದರು.
‘ಹಿಂದಿನ ಋತುವಿನಲ್ಲಿ ಮುಷ್ತಾಕ್ ಅಲಿ ಟೂರ್ನಿಯ 6 ಪಂದ್ಯಗಳಲ್ಲಿ 3 ಅರ್ಧಶತಕಗಳನ್ನು ಗಳಿಸಿದ್ದೆ. ಆದರೆ ನನಗೆ ಮೈದಾನಕ್ಕೆ ಕಾಲಿಡಲೂ ಸಹ ಅವಕಾಶವಿರಲಿಲ್ಲ. ನಾನು ತುಂಬಾ ಖಿನ್ನತೆಗೆ ಒಳಗಾಗಿದ್ದೆ’ ಎಂದು ಅಶುತೋಷ್ ಹೇಳಿದ್ದರು. ಆದರೆ ಐಪಿಎಲ್‌ನಲ್ಲಿ ಈಗ ತಮ್ಮ ಸ್ಫೋಟಕ ಆಟದ ಮೂಲಕವೇ ಎಲ್ಲರ ಗಮನಸೆಳೆದಿರುವ 26 ವರ್ಷದ ಕ್ರಿಕೆಟಿಗ, ಭಾರತದ ಭವಿಷ್ಯದ ಫಿನಿಶರ್ ಎಂದೇ ಕರೆಸಿಕೊಳ್ಳುತ್ತಿದ್ದಾರೆ.
ಲಖನೌ ಎದುರು ಕೊನೆ 11 ಎಸೆತಕ್ಕೆ ಅಶು 46 ರನ್!
15ನೇ ಓವರ್ ಮುಕ್ತಾಯಕ್ಕೆ ಅಶುತೋಷ್ 20 ಎಸೆತಗಳಲ್ಲಿ ಕೇವಲ 20 ರನ್ ಗಳಿಸಿದ್ದರು. ಆದರೆ ಆ ಬಳಿಕ ಅಬ್ಬರಿಸಿದ 26 ವರ್ಷದ ಬ್ಯಾಟರ್, ಕೊನೆ 11 ಎಸೆತಗಳಲ್ಲೇ 3 ಬೌಂಡರಿ, 5 ಸಿಕ್ಸರ್‌ನೊಂದಿಗೆ 46 ರನ್ ಬಾರಿಸಿ ತಂಡವನ್ನು ಗೆಲ್ಲಿಸಿದರು.
ರಾಹುಲ್‌ಗೆ ಮಗು: ಡೆಲ್ಲಿ ತಂಡ ಬೇಬಿ ಸೆಲೆಬ್ರೇಷನ್
ವಿಶಾಖಪಟ್ಟಣಂ: ಕೆ.ಎಲ್.ರಾಹುಲ್ ಹಾಗೂ ಅಥಿಯಾ ಶೆಟ್ಟಿ ದಂಪತಿಗೆ ಹೆಣ್ಣು ಮಗು ಹುಟ್ಟಿದ ಹಿನ್ನೆಲೆಯಲ್ಲಿ ಸೋಮವಾರ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರು ‘ಬೇಬಿ ಸೆಲೆಬ್ರೇಷನ್’ ಮಾಡಿದರು. ಡೆಲ್ಲಿ ಆಟಗಾರ ರಾಹುಲ್ ಲಖನೌ ವಿರುದ್ಧ ಪಂದ್ಯಕ್ಕೆ ಗೈರಾಗಿದ್ದರು. ಪಂದ್ಯದ ಬಳಿಕ ಡ್ರೆಸ್ಸಿಂಗ್ ರೂಮ್‌ನಲ್ಲಿ ತಂಡದ ಆಟಗಾರರು ಮಗುವನ್ನು ಲಾಲಿಸುವ ರೀತಿ ಸಂಭ್ರಮಿಸಿ, ರಾಹುಲ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ. ಇದರ ಫೋಟೋ, ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.