IPL ಹರಾಜಿನಲ್ಲಿ RCB ಈ ಇಬ್ಬರನ್ನು ಖರೀದಿಸಿದ್ರೆ, ಈ ಸಲ ಕಪ್‌ ನಮ್ದೇ...!

By Naveen Kodase  |  First Published Dec 8, 2023, 1:28 PM IST

ಐಪಿಎಲ್ ಆಟಗಾರರ ಹರಾಜಿಗೂ ಮುನ್ನ ಆರ್‌ಸಿಬಿ ಫ್ರಾಂಚೈಸಿಯು ಹರ್ಷಲ್ ಪಟೇಲ್, ಜೋಶ್ ಹೇಜಲ್‌ವುಡ್, ವನಿಂದು ಹಸರಂಗ ಸೇರಿದಂತೆ 11 ಆಟಗಾರರನ್ನು ತಂಡದಿಂದ ರಿಲೀಸ್ ಮಾಡಿದೆ. ಇದಷ್ಟೇ ಅಲ್ಲದೇ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯಿಂದ ಆಸೀಸ್ ಸ್ಟಾರ್ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ಅವರನ್ನು ಟ್ರೇಡಿಂಗ್ ಮಾಡಿಕೊಂಡಿದ್ದು, ಇದೀಗ ಹರಾಜಿಗೆ 23.25 ಕೋಟಿ ರುಪಾಯಿಗಳನ್ನು ಉಳಿಸಿಕೊಂಡಿದೆ.


ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಜನಪ್ರಿಯ ಹಾಗೂ ಅಪಾರ ಅಭಿಮಾನಿಗಳನ್ನು ಹೊಂದಿರುವ ಫ್ರಾಂಚೈಸಿಯಾಗಿದೆ. ಚೊಚ್ಚಲ ಆವೃತ್ತಿಯಿಂದಲೂ ಐಪಿಎಲ್ ಆಡುತ್ತಾ ಬಂದಿದ್ದರೂ ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 16 ಸೀಸನ್ ಕಳೆದರೂ ಒಮ್ಮೆಯೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಹೀಗಿದ್ದೂ ಆರ್‌ಸಿಬಿ ಮೇಲಿನ ಅಭಿಮಾನ ಫ್ಯಾನ್ಸ್‌ಗೆ ಗುಲಗಂಜಿಯಷ್ಟೂ ಕಡಿಮೆಯಾಗಿಲ್ಲ.

ಆರ್‌ಸಿಬಿ ಕಪ್ ಗೆದ್ದಿಲ್ಲ ಅಂದರೆ ಈ ತಂಡದ ಬಳಿ ಸ್ಟಾರ್ ಆಟಗಾರರು ಇಲ್ಲ ಎಂದರ್ಥವಲ್ಲ. ಈ ಬಾರಿಯ ಐಪಿಎಲ್‌ನಲ್ಲಿ ಈಗಾಗಲೇ ಆರ್‌ಸಿಬಿ ತಂಡದಲ್ಲಿ ರನ್ ಮಷೀನ್ ವಿರಾಟ್ ಕೊಹ್ಲಿ, ವಿಸ್ಪೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಫಾಫ್ ಡು ಪ್ಲೆಸಿಸ್ ಅವರಂತಹ ಟಿ20 ಸ್ಪೆಷಲಿಸ್ಟ್ ಬ್ಯಾಟರ್‌ಗಳ ಬಲವಿದೆ. ಹೀಗಿದ್ದೂ ಆರ್‌ಸಿಬಿ ಕಪ್ ಗೆಲ್ಲುವ ವಿಚಾರದಲ್ಲಿ ಕಳೆದ ಬಾರಿ ಕೂಡಾ ಎಡವಿತ್ತು.

Latest Videos

undefined

ಇದೀಗ ಬಿಸಿಸಿಐ 2024ರ ಐಪಿಎಲ್ ಆಟಗಾರರ ಹರಾಜಿಗೆ ನಿಗದಿಪಡಿಸಿದೆ. ಇದೇ ಡಿಸೆಂಬರ್ 19ರಂದು ದುಬೈನಲ್ಲಿ ಐಪಿಎಲ್ ಆಟಗಾರರ ಹರಾಜು ನಡೆಯಲಿದೆ. ಇದೇ ಮೊದಲ ಬಾರಿಗೆ ಐಪಿಎಲ್ ಆಟಗಾರರ ಹರಾಜು ಭಾರತದಿಂದಾಚೆಗೆ ನಡೆಯಲಿದೆ. ಈ ಹರಾಜಿನಲ್ಲಿ ಒಂದು ವೇಳೆ ಆರ್‌ಸಿಬಿ ಫ್ರಾಂಚೈಸಿಯು ಇತ್ತೀಚೆಗಷ್ಟೇ ಮುಕ್ತಾಯವಾದ 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ಇಬ್ಬರು ಆಟಗಾರರನ್ನು ಖರೀದಿಸಿದರೆ ಬೆಂಗಳೂರು ಫ್ರಾಂಚೈಸಿ ಈ ಸಲ ಕಪ್ ತಮ್ಮದಾಗಿಸಿಕೊಳ್ಳಬಹುದು ಎನ್ನುವುದು ಕ್ರಿಕೆಟ್ ಪಂಡಿತರ ಲೆಕ್ಕಾಚಾರವಾಗಿದೆ.

ಈ ಹಿಂದೆ ಹರಾಜಿನಲ್ಲಿ ಮಾಡಿದ ಈ 6 ತಪ್ಪು RCB ಮಾಡದಿರಲಿ..! ನಿಮಗೆ ನೆನಪಿವೆಯಾ ಆರ್‌ಸಿಬಿ ಫ್ರಾಂಚೈಸಿ ಎಡವಟ್ಟುಗಳು?

ಹೌದು, ನಾವಿಂದು ಯಾರ ಹೆಸರು ಹೇಳುತ್ತಿದ್ದೇವೆ ಎಂದು ನಿಮ್ಮ ಊಹೆಗೆ ಬಂದಿರಬಹುದು. ಭಾರತದಲ್ಲೇ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಹಾಗೂ ನ್ಯೂಜಿಲೆಂಡ್‌ನ ರಚಿನ್ ರವೀಂದ್ರ ಅಮೋಘ ಪ್ರದರ್ಶನ ತೋರಿದ್ದರು. ಈ ಇಬ್ಬರು ಆಟಗಾರರನ್ನು ಖರೀದಿಸಲು ಫ್ರಾಂಚೈಸಿಗಳು ಸಾಕಷ್ಟು ಪೈಪೋಟಿ ನಡೆಸುವ ಸಾಧ್ಯತೆಯಿದೆ ಎನ್ನುವ ಮಾತುಗಳು ಕೇಳಿಬರಲಾರಂಭಿಸಿವೆ.

ಐಪಿಎಲ್ ಆಟಗಾರರ ಹರಾಜಿಗೂ ಮುನ್ನ ಆರ್‌ಸಿಬಿ ಫ್ರಾಂಚೈಸಿಯು ಹರ್ಷಲ್ ಪಟೇಲ್, ಜೋಶ್ ಹೇಜಲ್‌ವುಡ್, ವನಿಂದು ಹಸರಂಗ ಸೇರಿದಂತೆ 11 ಆಟಗಾರರನ್ನು ತಂಡದಿಂದ ರಿಲೀಸ್ ಮಾಡಿದೆ. ಇದಷ್ಟೇ ಅಲ್ಲದೇ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯಿಂದ ಆಸೀಸ್ ಸ್ಟಾರ್ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ಅವರನ್ನು ಟ್ರೇಡಿಂಗ್ ಮಾಡಿಕೊಂಡಿದ್ದು, ಇದೀಗ ಹರಾಜಿಗೆ 23.25 ಕೋಟಿ ರುಪಾಯಿಗಳನ್ನು ಉಳಿಸಿಕೊಂಡಿದೆ.

Good News: ನಿವೃತ್ತಿ ವಾಪಾಸ್ ಪಡೆದು ಟಿ20 ವಿಶ್ವಕಪ್ ಆಡಲು ತೀರ್ಮಾನಿಸಿದ ದಕ್ಷಿಣ ಆಫ್ರಿಕಾದ ಆರ್‌ಸಿಬಿ ಕ್ರಿಕೆಟಿಗ..!

ಈ ಇಬ್ಬರು ಆಟಗಾರರ ಮೇಲೆ ಆರ್‌ಸಿಬಿ ಫ್ರಾಂಚೈಸಿ ಕಣ್ಣು?:

ಚೊಚ್ಚಲ ಬಾರಿಗೆ ಐಪಿಎಲ್ ಟ್ರೋಫಿ ಗೆಲ್ಲುವ ಕನಸು ಕಾಣುತ್ತಿರುವ ಆರ್‌ಸಿಬಿ ಫ್ರಾಂಚೈಸಿಯು ಇದೀಗ ಟ್ರಾವಿಸ್ ಹೆಡ್ ಹಾಗೂ ರಚಿನ್ ರವೀಂದ್ರ ಅವರನ್ನು ಹರಾಜಿನಲ್ಲಿ ಖರೀದಿಸಲು ರಣತಂತ್ರ ಹೆಣೆಯುತ್ತಿದೆ ಎನ್ನಲಾಗುತ್ತಿದೆ. ಒಂದು ವೇಳೆ ಈ ಇಬ್ಬರು ಆಟಗಾರರನ್ನು ಖರೀದಿಸಿದರೆ, ಆರ್‌ಸಿಬಿ ಕಪ್ ಗೆಲ್ಲುವ ಸಾಧ್ಯತೆಗೆ ಮತ್ತಷ್ಟು ಹತ್ತಿರವಾಗಲಿದೆ. ಅಂದಹಾಗೆ ನಿಮಗೆ ಗೊತ್ತಿರಲಿ ಟ್ರಾವಿಸ್ ಹೆಡ್ 2015 ಹಾಗೂ 2016ರಲ್ಲಿ ಆರ್‌ಸಿಬಿ ತಂಡದ ಭಾಗವಾಗಿದ್ದರು.

ಈ ಬಾರಿಯ ಹರಾಜಿನಲ್ಲಿ ಟ್ರಾವಿಸ್ ಹೆಡ್ ದುಬಾರಿ ಮೊತ್ತಕ್ಕೆ ಸೇಲ್ ಆಗುವ ಸಾಧ್ಯತೆಯಿದ ಎಂದೆಲ್ಲಾ ಮಾಧ್ಯಮಗಳಲ್ಲಿ ವರದಿಯಾಗಿತ್ತಿದೆ. ಒಂದು ವೇಳೆ ಈ ಇಬ್ಬರು ಹರಾಜಿನಲ್ಲಿ ಆರ್‌ಸಿಬಿಗೆ ಖರೀದಿಸಲು ಸಾಧ್ಯವಾಗದೇ ಹೋದರೆ, ಆಫ್ಘಾನಿಸ್ತಾನದ ಅಝ್ಮತುಲ್ಲಾ ಒಮರ್‌ಝೈ, ಆಸ್ಟ್ರೇಲಿಯಾದ ಮಾರಕ ವೇಗಿಗಳಾದ ಮಿಚೆಲ್ ಸ್ಟಾರ್ಕ್ ಹಾಗೂ ಜೋಶ್ ಹೇಜಲ್‌ವುಡ್ ಅವರನ್ನು ಖರೀದಿಸಲು ಒಲವು ತೋರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಮುಂಬರುವ ಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸಿಯು ಅತ್ಯುತ್ತಮ ಆಟಗಾರರನ್ನು ಖರೀದಿಸಿ ಈ ಬಾರಿಯ ಟೂರ್ನಿಯಲ್ಲಾದರೂ ಐಪಿಎಲ್ ಟ್ರೋಫಿ ಜಯಿಸಲಿ ಎನ್ನುವುದು ರೆಡ್ ಆರ್ಮಿಯ ಹಾರೈಕೆಯಾಗಿದೆ. ಆರ್‌ಸಿಬಿ ಈ ಬಾರಿಯ ಹರಾಜಿನಲ್ಲಿ ಯಾವ ಆಟಗಾರರನ್ನು ಖರೀದಿಸಬೇಕು ಎನ್ನುವುದನ್ನು ಕಾಮೆಂಟ್ ಮಾಡಿ.
 

click me!