IPL 2023: ರಾಜಸ್ಥಾನ ರಾಯಲ್ಸ್‌ ಚಾಲೆಂಜ್‌ಗೆ ರೆಡಿಯಾದ ಆರ್‌ಸಿಬಿ

By Kannadaprabha NewsFirst Published Apr 23, 2023, 9:16 AM IST
Highlights

* ಮತ್ತೊಂದು ಹೈವೋಲ್ಟೇಜ್ ಕದಕ್ಕೆ ಎಂ ಚಿನ್ನಸ್ವಾಮಿ ಮೈದಾನ ಆತಿಥ್ಯ
* ಬಲಿಷ್ಠ ಬ್ಯಾಟಿಂಗ್‌ ಪಡೆ ಹೊಂದಿರುವ ಉಭಯ ತಂಡಗಳ ನಡುವೆ ಹೋರಾಟ
* ಈ ಪಂದ್ಯಕ್ಕೂ ಆರ್‌ಸಿಬಿ ವೇಗಿ ಜೋಶ್ ಹೇಜಲ್‌ವುಡ್‌ ಡೌಟ್

ಬೆಂಗಳೂರು(ಏ.23): ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್‌ ಮತ್ತೊಂದು ಜಯದೊಂದಿಗೆ ಪ್ಲೇ-ಆಫ್‌ ಸ್ಥಾನದತ್ತ ಭರವಸೆಯ ಹೆಜ್ಜೆಯನ್ನಿಡಲು ಕಾತರಿಸುತ್ತಿದ್ದು, ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್‌ ಚಾಲೆಂಜ​ರ್‍ಸ್ ಬೆಂಗಳೂರು(ಆರ್‌ಸಿಬಿ) ವಿರುದ್ಧ ಸೆಣಸಲಿದೆ. ಆಡಿರುವ 6 ಪಂದ್ಯಗಳಲ್ಲಿ ರಾಯಲ್ಸ್‌ 4ರಲ್ಲಿ ಗೆದ್ದರೆ, ಆರ್‌ಸಿಬಿ ತಲಾ 3 ಜಯ, ಸೋಲು ಕಂಡಿದ್ದು, ಸ್ಥಿರತೆ ಕಂಡುಕೊಳ್ಳಲು ಎದುರು ನೋಡುತ್ತಿದೆ.

ಎರಡೂ ತಂಡಗಳಲ್ಲಿ ಬಲಿಷ್ಠ ಬ್ಯಾಟರ್‌ಗಳಿದ್ದು, ಬ್ಯಾಟರ್‌ಗಳ ಸ್ವರ್ಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೊಮ್ಮೆ ರನ್‌ ಹೊಳೆ ಹರಿಯುವ ನಿರೀಕ್ಷೆ ಇದೆ. ಒಂದು ಕಡೆ ವಿರಾಟ್‌ ಕೊಹ್ಲಿ, ಫಾಫ್‌ ಡು ಪ್ಲೆಸಿ, ಗ್ಲೆನ್‌ ಮ್ಯಾಕ್ಸ್‌ವೆಲ್‌ ಇದ್ದರೆ ಮತ್ತೊಂದು ಪಡೆ ಜೋಸ್‌ ಬಟ್ಲರ್‌, ಯಶಸ್ವಿ ಜೈಸ್ವಾಲ್‌, ಸಂಜು ಸ್ಯಾಮ್ಸನ್‌, ಶಿಮ್ರೊನ್‌ ಹೆಟ್ಮೇಯರ್‌ರಂತಹ ಘಟಾನುಘಟಿಗಳಿದ್ದರೆ. ಹೀಗಾಗಿ ಎರಡೂ ತಂಡಗಳ ಬೌಲರ್‌ಗಳು ಒತ್ತಡದಲ್ಲೇ ಕಣಕ್ಕಿಳಿಯಬೇಕಾಗಬಹುದು.

Latest Videos

ಆರ್‌ಸಿಬಿಗೆ ತನ್ನ ಬೌಲರ್‌ಗಳ ಲಯದ್ದೇ ಚಿಂತೆಯಾದರೆ, ರಾಜಸ್ಥಾನ ತನ್ನ ಕೆಳ ಮಧ್ಯಮ ಕ್ರಮಾಂಕದ ಬಗ್ಗೆ ತಲೆಕೆಡಿಸಿಕೊಂಡಿದೆ. ಆರ್‌ಸಿಬಿಯ ಮಧ್ಯಮ ಕ್ರಮಾಂಕ ತೀರಾ ದುರ್ಬಲವಾಗಿದ್ದು, ಮೂವರು ತಾರಾ ಬ್ಯಾಟರ್‌ಗಳು ಸಿಡಿದರಷ್ಟೇ ತಂಡಕ್ಕೆ ಉಳಿಗಾಲ.

IPL 2023: ಕೊನೇ ಓವರ್‌ನಲ್ಲಿ 16 ರನ್‌ ರಕ್ಷಿಸಿಕೊಂಡ ಆರ್ಶ್‌ದೀಪ್‌, ಪಂಜಾಜ್‌ಗೆ ವಿಜಯದೀಪ!

ರಾಜಸ್ಥಾನದ ಬೌಲಿಂಗ್‌ ಪಡೆಯೂ ಬಲಿಷ್ಠವಾಗಿದ್ದು ಟ್ರೆಂಟ್‌ ಬೌಲ್ಟ್‌, ಸಂದೀಪ್‌ ಶರ್ಮಾರ ಆರಂಭಿಕ ಸ್ಪೆಲ್‌ ಮಾರಕವಾಗಬಹುದು. ಇನ್ನು ಮೂವರು ವಿಶ್ವ ಶ್ರೇಷ್ಠ ಸ್ಪಿನ್ನರ್‌ಗಳ ಬಲವೂ ರಾಯಲ್ಸ್‌ಗಿದೆ. ಮಧ್ಯಾಹ್ನದ ಪಂದ್ಯವಾಗಿರುವ ಕಾರಣ, ಯಜುವೇಂದ್ರ ಚಹಲ್‌ ಹಾಗೂ ಆರ್‌.ಅಶ್ವಿನ್‌ ಜೊತೆ 3ನೇ ಸ್ಪಿನ್ನರ್‌ ಆಗಿ ಆ್ಯಡಂ ಜಂಪಾ ಕೂಡ ಕಣಕ್ಕಿಳಿಯಬಹುದು.

ಆರ್‌ಸಿಬಿ ಬೌಲಿಂಗ್‌ ಪಡೆಯನ್ನು ಮೊಹಮದ್‌ ಸಿರಾಜ್‌ ಮುನ್ನಡೆಸಲಿದ್ದು, ಈ ಆವೃತ್ತಿಯಲ್ಲಿ ಅವರು 82 ಡಾಟ್‌ ಬಾಲ್‌ಗಳನ್ನು ಹಾಕಿದ್ದಾರೆ. ಹಸರಂಗ ಕೂಡ ಉತ್ತಮ ಲಯದಲ್ಲಿದ್ದಾರೆ. ಇವರಿಬ್ಬರ ಪ್ರದರ್ಶನ ಪಂದ್ಯದ ಫಲಿತಾಂಶ ನಿರ್ಧರಿಸಬಹುದು.

ಒಟ್ಟು ಮುಖಾಮುಖಿ: 27

ಆರ್‌ಸಿಬಿ: 13

ರಾಜಸ್ಥಾನ: 12

ಫಲಿತಾಂಶವಿಲ್ಲ: 02

ಸಂಭವನೀಯ ಆಟಗಾರರ ಪಟ್ಟಿ

ಆರ್‌ಸಿಬಿ: ವಿರಾಟ್ ಕೊಹ್ಲಿ(ನಾಯಕ), ಫಾಫ್‌ ಡು ಪ್ಲೆಸಿಸ್, ಮಹಿಪಾಲ್‌ ಲೋಮ್ರಾರ್, ಗ್ಲೆನ್‌ ಮ್ಯಾಕ್ಸ್‌ವೆಲ್‌, ಸುಯಶ್‌ ಪ್ರಭುದೇಸಾಯಿ, ಶಾಬಾಜ್‌ ಅಹಮದ್, ದಿನೇಶ್‌ ಕಾರ್ತಿಕ್‌, ವನಿಂದು ಹಸರಂಗ, ಹರ್ಷಲ್‌ ಪಟೇಲ್‌, ವೇಯ್ನ್ ಪಾರ್ನೆಲ್‌, ಮೊಹಮ್ಮದ್ ಸಿರಾಜ್‌.

ರಾಜಸ್ಥಾನ: ಜೋಸ್ ಬಟ್ಲರ್‌, ಯಶಸ್ವಿ ಜೈಸ್ವಾಲ್‌, ಸಂಜು ಸ್ಯಾಮ್ಸನ್‌(ನಾಯಕ), ದೇವದತ್ ಪಡಿಕ್ಕಲ್‌, ಶಿಮ್ರೊನ್‌ ಹೆಟ್ಮೇಯರ್‌, ರಿಯಾನ್‌ ಪರಾಗ್, ರವಿಚಂದ್ರನ್‌ ಅಶ್ವಿನ್‌, ಆ್ಯಡಂ ಜಂಪಾ, ಟ್ರೆಂಟ್ ಬೌಲ್ಟ್‌, ಸಂದೀಪ್‌ ಶರ್ಮಾ, ಯುಜುವೇಂದ್ರ ಚಹಲ್‌.

ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್, ಜಿಯೋ ಸಿನಿಮಾ

ಪಿಚ್‌ ರಿಪೋರ್ಟ್‌

ಈ ಪಂದ್ಯಕ್ಕೆ ಬಳಸಲು ಸಿದ್ಧಗೊಂಡಿರುವ ಪಿಚ್‌ ಮೇಲೆ ಸ್ವಲ್ಪ ಪ್ರಮಾಣದಲ್ಲಿ ಹುಲ್ಲಿದ್ದು, ಉತ್ತಮ ಲೆಂಥ್‌ಗಳಲ್ಲಿ ಬೌಲ್‌ ಮಾಡುವ ವೇಗಿಗಳಿಗೆ ಅನುಕೂಲವಾಗಬಹುದು. ಮಧ್ಯಾಹ್ನದ ಪಂದ್ಯವಾಗಿರುವ ಕಾರಣ ಇಬ್ಬನಿಯ ಸಮಸ್ಯೆ ಇರುವುದಿಲ್ಲ. ಹೀಗಾಗಿ ಟಾಸ್‌ ಅಷ್ಟೊಂದು ನಿರ್ಣಾಯಕವೆನಿಸದು. ಎರಡೂ ಇನ್ನಿಂಗ್ಸ್‌ಗಳಲ್ಲಿ ಸ್ಪರ್ಧಾತ್ಮಕ ಮೊತ್ತ ನಿರೀಕ್ಷೆ ಮಾಡಬಹುದು.

ಈ ಪಂದ್ಯದಲ್ಲೂ ಕೊಹ್ಲಿಯೇ ನಾಯಕ?

ಸಿಎಸ್‌ಕೆ ವಿರುದ್ಧದ ಪಂದ್ಯದ ವೇಳೆ ಪಕ್ಕೆಲುಬಿನ ಗಾಯಕ್ಕೆ ತುತ್ತಾಗಿದ್ದ ಫಾಫ್‌ ಡು ಪ್ಲೆಸಿ, ಕಳೆದ ಪಂದ್ಯದಲ್ಲಿ ಕೇವಲ ಬ್ಯಾಟರ್‌ ಆಗಷ್ಟೇ ಆಡಿದ್ದರು. ಹೀಗಾಗಿ ವಿರಾಟ್‌ ಕೊಹ್ಲಿ ತಂಡವನ್ನು ಮುನ್ನಡೆಸಿದ್ದರು. ಡು ಪ್ಲೆಸಿ ಸಂಪೂರ್ಣವಾಗಿ ಚೇತರಿಸಿಕೊಂಡಂತೆ ಕಾಣುತ್ತಿಲ್ಲ. ಈ ಪಂದ್ಯಕ್ಕೂ ಕೊಹ್ಲಿಯೇ ನಾಯಕರಾಗಬಹುದು. ಡು ಪ್ಲೆಸಿ ಬ್ಯಾಟರ್‌ ಆಗಿ ಆಡಿ, ಇಂಪ್ಯಾಕ್ಟ್ ಆಟಗಾರನಾಗಿ ವೈಶಾಖ್‌ ಅಥವಾ ಸ್ಪಿನ್ನರ್‌ ಕಣ್‌ರ್‍ ಶರ್ಮಾ ಕಣಕ್ಕಿಳಿಯುವ ಸಾಧ್ಯತೆ ಇದೆ.

ಕನ್ನಡಿಗ ಮನೋಜ್‌ಗೆ ಸಿಗುತ್ತಾ ಅವಕಾಶ?

ಆರ್‌ಸಿಬಿಯಲ್ಲಿರುವ ಕರ್ನಾಟಕದ ಇಬ್ಬರು ಆಟಗಾರರ ಪೈಕಿ ವೇಗಿ ವೈಶಾಖ್‌ ವಿಜಯ್‌ಕುಮಾರ್‌ ಈಗಾಗಲೇ ತಂಡಕ್ಕೆ ಪಾದಾರ್ಪಣೆ ಮಾಡಿ ಗಮನ ಸೆಳೆದಿದ್ದಾರೆ. ಆಲ್ರೌಂಡರ್‌ ಮನೋಜ್‌ ಭಾಂಡ್ಗೆ ಅವಕಾಶಕ್ಕಾಗಿ ಕಾಯುತ್ತಿದ್ದು, ತಂಡದ ಆಡಳಿತ ಅವರನ್ನು ಆಯ್ಕೆಗೆ ಪರಿಗಣಿಸುತ್ತಾ ಎನ್ನುವ ಕುತೂಹಲವಿದೆ.

ಚಿನ್ನಸ್ವಾಮಿಯಲ್ಲಿ ಅತಿಹೆಚ್ಚು ವಿಕೆಟ್‌ ಕಬಳಿಸಿರುವ ಚಹಲ್‌!

8 ವರ್ಷ ಕಾಲ ಆರ್‌ಸಿಬಿ ತಂಡದಲ್ಲಿ ಆಡಿದ್ದ ಯಜುವೇಂದ್ರ ಚಹಲ್‌ರನ್ನು 2022ರ ಹರಾಜಿಗೂ ಮುನ್ನ ತಂಡದಿಂದ ಕೈಬಿಡಲಾಗಿತ್ತು. ಚಹಲ್‌ ತಮ್ಮ ಐಪಿಎಲ್‌ ವೃತ್ತಿಬದುಕಿನಲ್ಲಿ ಮೊದಲ ಬಾರಿಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿರುದ್ಧ ಆಡಲಿದ್ದು ಸಹಜವಾಗಿಯೇ ಮೇಲುಗೈ ಸಾಧಿಸಲು ಎದುರು ನೋಡುತ್ತಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚಹಲ್‌ ಒಟ್ಟು 51 ವಿಕೆಟ್‌ ಕಬಳಿಸಿದ್ದು, ಮತ್ತಿನ್ಯಾರೂ 30 ವಿಕೆಟ್‌ ಸಹ ಪಡೆದಿಲ್ಲ. ಈ ವರ್ಷ ಆರ್‌ಸಿಬಿ, ಸ್ಪಿನ್ನರ್‌ಗಳ ಎದುರು ತಿಣುಕಾಡುತ್ತಿರುವಂತೆ ಕಾಣುತ್ತಿದ್ದು ಚಹಲ್‌ರನ್ನು ರಾಯಲ್ಸ್‌ ಟ್ರಂಪ್‌ಕಾರ್ಡ್‌ ಆಗಿ ಬಳಸಬಹುದು.
 

click me!