
ಚೆನ್ನೈ(ಮೇ.15): ಮಹೇಂದ್ರ ಸಿಂಗ್ ಧೋನಿ ಇನ್ನು ಕೆಲವು ವರ್ಷಗಳ ಕಾಲ ಕ್ರಿಕೆಟ್ ಆಡುವುದರಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಅನುಕೂಲವಾಗುತ್ತದೆ. ಇದರ ಜತೆಗೆ ಶತಮಾನಕ್ಕೊಬ್ಬರು ಧೋನಿಯಂತಹ ಆಟಗಾರನನ್ನು ಕಾಣಲು ಸಾಧ್ಯ ಎಂದು ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
2023ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕೊನೆಯ ಬಾರಿಗೆ ತವರಿನಲ್ಲಿ ಐಪಿಎಲ್ ಪಂದ್ಯವನ್ನಾಡಿತು. ಐಪಿಎಲ್‌ಗೆ ಧೋನಿ ಈ ವರ್ಷವೇ ವಿದಾಯ ಘೋಷಿಸಲಿದ್ದಾರೆ ಎನ್ನುವ ಮಾತುಗಳು ಜೋರಾಗಿ ಕೇಳಿಬರುತ್ತಿರುವ ಬೆನ್ನಲ್ಲೇ ಟೀಂ ಇಂಡಿಯಾ ಮಾಜಿ ನಾಯಕ ಗವಾಸ್ಕರ್, ಪ್ರತಿಯೊಬ್ಬರು ಧೋನಿ ಮತ್ತಷ್ಟು ವರ್ಷ ಕ್ರಿಕೆಟ್ ನೋಡಲು ಬಯಸುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪಂದ್ಯ ಮುಕ್ತಾಯದ ಬಳಿಕ ಎಂ ಎ ಚಿದಂಬರಂ ಸ್ಟೇಡಿಯಂ ಒಂದು ರೀತಿ ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಚೆಪಾಕ್ ಮೈದಾನದಲ್ಲಿ ಕಿಕ್ಕಿರಿದು ಕೂಡಿದ್ದ ಅಭಿಮಾನಿಗಳ ಸಮ್ಮುಖದಲ್ಲಿ ವಿಶ್ವಕಪ್ ವಿಜೇತ ತಂಡದ ನಾಯಕ ಧೋನಿಯ ಆಟೋಗ್ರಾಫ್‌ವಿರುವ ಶರ್ಟ್‌ನ್ನು ಪಡೆದುಕೊಂಡರು. ತಮ್ಮ ತಂಡವನ್ನು ಮೈದಾನಕ್ಕೆ ಬಂದು ಬೆಂಬಲಿಸಿದ ಅಭಿಮಾನಿಗಳಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.
IPL 2023 ಹೈದರಾಬಾದ್ ಮಣಿಸಿ ಟೈಟಾನ್ಸ್‌ಗೆ ಪ್ಲೇ-ಆಫ್‌ಗೇರುವ ಗುರಿ
ಕೆವಿನ್ ಪೀಟರ್‍ಸನ್ ಈ ಮೊದಲೇ ಮಾತನಾಡುತ್ತಾ ಇಂಪ್ಯಾಕ್ಟ್ ಪ್ಲೇಯರ್ ಬಗ್ಗೆ ಹೇಳುತ್ತಿದ್ದರು. ಇಂಪ್ಯಾಕ್ಟ್ ಪ್ಲೇಯರ್ ರೂಪದಲ್ಲಿ ಅವರು ತಂಡದ ಜತೆಗಿದ್ದು ಆಡಬಹುದು. ಧೋನಿ ಅವರಂತಹ ಆಟಗಾರರು ತಲೆಮಾರಿಗೊಬ್ಬರಲ್ಲ, ಶತಮಾನಕ್ಕೊಬ್ಬರು ಬರುತ್ತಾರೆ. ಹೀಗಾಗಿಯೇ ಅವರನ್ನು ಜನರು ಹೆಚ್ಚು ಹೆಚ್ಚು ನೋಡಲು ಬಯಸುತ್ತಾರೆ. ಇದು ಅವರ ಕೊನೆಯ ಐಪಿಎಲ್ ಆಗದೇ ಇರಲಿ ಎಂದು ಹಾರೈಸೋಣ ಜತೆಗೆ ಇನ್ನಷ್ಟು ಕಾಲ ಆಡಲಿ ಎಂದು ಆಶಿಸೋಣ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ಚೆನ್ನೈಗೆ ಇನ್ನೂ ಸಿಗದ ಪ್ಲೇ-ಆಫ್ ಟಿಕೆಟ್!
ಚೆಪಾಕ್‌ನಲ್ಲಿ ಭಾನುವಾರ ನಡೆದ ಪಂದ್ಯವನ್ನು ಕೋಲ್ಕತಾ ನೈಟ್ರೈಡರ್ಸ್ 6 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಇದರಿಂದಾಗಿ ಚೆನ್ನೈ ಸೂಪರ್ ಕಿಂಗ್‌್ಸಗೆ ಇನ್ನೂ ಪ್ಲೇ-ಆಫ್‌ಗೆ ಪ್ರವೇಶ ಸಿಕ್ಕಿಲ್ಲ. ಮತ್ತೊಂದೆಡೆ ಕೆಕೆಆರ್ ಪ್ಲೇ-ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಕೋಲ್ಕತಾದ ಸಂಘಟಿತ ಪ್ರದರ್ಶನದ ಎದುರು ಚೆನ್ನೈ ತನ್ನ ತವರಿನಲ್ಲೇ ಮುಗ್ಗರಿಸಿತು. ಮೊದಲು ಬ್ಯಾಟ್ ಮಾಡಿ 6 ವಿಕೆಟ್‌ಗೆ 144 ರನ್ ಗಳಿಸಿದ ಚೆನ್ನೈ, ಬೌಲಿಂಗ್ ವೇಳೆ ಪವರ್-ಪ್ಲೇನಲ್ಲಿ ಯಶಸ್ಸು ಸಾಧಿಸಿದರೂ ನಿತೀಶ್ ರಾಣಾ ಹಾಗೂ ರಿಂಕು ಸಿಂಗ್‌ರನ್ನು ಕಟ್ಟಿಹಾಕಲು ಆಗದೆ ಸೋಲುಂಡಿತು. 4ನೇ ವಿಕೆಟ್‌ಗೆ 99 ರನ್ ಜೊತೆಯಾಟವಾಡಿದ ರಾಣಾ ಹಾಗೂ ರಿಂಕು, ತಲಾ ಅರ್ಧಶತಕ ಬಾರಿಸಿ ತಂಡವನ್ನು 18.3 ಓವರಲ್ಲಿ ಗೆಲುವಿನ ದಡ ಸೇರಿಸಿದರು.
ಕೆಕೆಆರ್ 4.3 ಓವರಲ್ಲಿ 33 ರನ್‌ಗೆ 3 ವಿಕೆಟ್ ಕಳೆದುಕೊಂಡಿತು. ಗುರ್ಬಾಜ್(01), ವೆಂಕಿ ಅಯ್ಯರ್(09) ಹಾಗೂ ಜೇಸನ್ ರಾಯ್(12) ಪೆವಿಲಿಯನ್ ಸೇರಿದರು. ತಂಡ ಸಂಕಷ್ಟದಲ್ಲಿದ್ದಾಗ ಜೊತೆಯಾದ ರಾಣಾ ಹಾಗೂ ರಿಂಕು, ಚೆನ್ನೈನ ಸ್ಪಿನ್ನರ್‌ಗಳನ್ನು ಸಮರ್ಥವಾಗಿ ಎದುರಿಸಿ ರನ್ ಕಲೆಹಾಕಿದರು. 43 ಎಸೆತದಲ್ಲಿ 4 ಬೌಂಡರಿ, 3 ಸಿಕ್ಸರ್‌ನೊಂದಿಗೆ 54 ರನ್ ಗಳಿಸಿ ರಿಂಕು ಔಟಾಗುವ ವೇಳೆಗೆ ಕೆಕೆಆರ್ ಗೆಲುವಿನ ಹೊಸ್ತಿಲು ತಲುಪಿತ್ತು. ರಾಣಾ, 44 ಎಸೆತದಲ್ಲಿ 6 ಬೌಂಡರಿ, 1 ಸಿಕ್ಸರ್‌ನೊಂದಿಗೆ 57 ರನ್ ಗಳಿಸಿ ಔಟಾಗದೆ ಉಳಿದರು.
ಇದಕ್ಕೂ ಮುನ್ನ ಬ್ಯಾಟಿಂಗ್‌ಗೆ ಅಷ್ಟಾಗಿ ನೆರವು ನೀಡದ ಪಿಚ್‌ನಲ್ಲಿ ಚೆನ್ನೈ ನಿರೀಕ್ಷೆಗೂ ಕಡಿಮೆ ಮೊತ್ತ ದಾಖಲಿಸಿತು. ಅಗ್ರ ಕ್ರಮಾಂಕದ ಸಾಧಾರಣ ಆಟದಿಂದ ಅಲ್ಪಮೊತ್ತಕ್ಕೆ ಕುಸಿಯುವ ಭತಿಯಲ್ಲಿದ್ದ ಸಿಎಸ್‌ಕೆ ಪಾಲಿಗೆ ಶಿವಂ ದುಬೆ ಮತ್ತೊಮ್ಮೆ ಆಪದ್ಭಾಂದವರಾದರು. 34 ಎಸೆತದಲ್ಲಿ 1 ಬೌಂಡರಿ, 3 ಸಿಕ್ಸರ್‌ನೊಂದಿಗೆ 48 ರನ್ ಸಿಡಿಸಿದರು. ಸುನಿಲ್ ನರೇನ್ 4 ಓವರಲ್ಲಿ ಕೇವಲ 15 ರನ್ ನೀಡಿ 2 ವಿಕೆಟ್ ಕಬಳಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.