IPL 2023 ಹೈದರಾಬಾದ್‌ ಮಣಿಸಿ ಟೈಟಾನ್ಸ್‌ಗೆ ಪ್ಲೇ-ಆಫ್‌ಗೇರುವ ಗುರಿ

By Naveen KodaseFirst Published May 15, 2023, 11:37 AM IST
Highlights

ಅಹಮದಾಬಾದ್‌ನಲ್ಲಿಂದು ಹೈದರಾಬಾದ್‌ಗುಜರಾತ್ ಮುಖಾಮುಖಿ
ಇಂದು ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧ ಸೆಣಸು
ಸತತ ಎರಡನೇ ಬಾರಿಗೆ ಪ್ಲೇ ಆಫ್‌ಗೇರುವ ವಿಶ್ವಾಸದಲ್ಲಿ ಹಾರ್ದಿಕ್ ಪಾಂಡ್ಯ ಪಡೆ

ಅಹಮದಾಬಾದ್‌(ಮೇ.15): ಸೋಮವಾರ ಸಂಜೆ ತಂಡವೊಂದು ಸತತ 2ನೇ ವರ್ಷ ಪ್ಲೇ-ಆಫ್‌ ಪ್ರವೇಶಿಸಬಹುದು ಹಾಗೂ ಮತ್ತೊಂದು ತಂಡ ಸತತ 3ನೇ ಬಾರಿಗೆ ಗುಂಪು ಹಂತದಲ್ಲೇ ಹೊರಬೀಳಬಹುದು. ಗುಜರಾತ್‌ ಟೈಟಾನ್ಸ್‌ ಈ ಪಂದ್ಯವನ್ನು ಗೆದ್ದರೆ ಈ ಆವೃತ್ತಿಯಲ್ಲಿ ಪ್ಲೇ-ಆಫ್‌ಗೇರಿದ ಮೊದಲ ತಂಡ ಎನಿಸಿಕೊಳ್ಳಲಿದೆ. ಅದೂ ಒಂದು ಪಂದ್ಯ ಬಾಕಿ ಇರುವಂತೆಯೇ. ಆಗ ಸನ್‌ರೈಸ​ರ್ಸ್‌ ಹೈದರಾಬಾದ್ ಇನ್ನೂ 2 ಪಂದ್ಯ ಬಾಕಿ ಇರುವಂತೆಯೇ ಅಧಿಕೃತವಾಗಿ ಹೊರಬಿದ್ದಂತಾಗುತ್ತದೆ.

ಸನ್‌ರೈಸ​ರ್ಸ್‌ ಹೈದರಾಬಾದ್ ಈ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ಗೆ ಆಘಾತ ನೀಡಿದರೂ ಪ್ಲೇ-ಆಫ್‌ ರೇಸ್‌ನಲ್ಲಿ ಉಳಿಯುವ ಸಾಧ್ಯತೆ ತೀರಾ ಕಡಿಮೆ. ಕಳಪೆ ನೆಟ್‌ ರನ್‌ರೇಟ್‌ ಹೊಂದಿರುವ ಕಾರಣ ಉಳಿದ ಫಲಿತಾಂಶಗಳ ಮೇಲೆ ಅವಲಂಬಿತಗೊಳ್ಳಬೇಕಿದೆ. ಗುಜರಾತ್‌ ಟೈಟಾನ್ಸ್‌ ಕಳೆದ 4 ಪಂದ್ಯಗಳಲ್ಲಿ 2ರಲ್ಲಿ ಸೋತರೂ, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದೆ. 

ಹಾಲಿ ಚಾಂಪಿಯನ್‌ ತಂಡ ಬಲಿಷ್ಠ ಆರಂಭಿಕ ಜೋಡಿಯನ್ನು ಹೊಂದಿದ್ದು, ಮಧ್ಯಮ ಕ್ರಮಾಂಕ ಲಯದಲ್ಲಿದೆ. ಪ್ರಚಂಡ ಫಿನಿಶರ್‌ಗಳು, ಗುಣಮಟ್ಟದ ಬೌಲರ್‌ಗಳಿದ್ದಾರೆ. ವೃದ್ದಿಮಾನ್ ಸಾಹ ಹಾಗೂ ಶುಭ್‌ಮನ್‌ ಗಿಲ್ ಉತ್ತಮ ಆರಂಭ ಒದಗಿಸಿಕೊಡುತ್ತಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ನಾಯಕ ಹಾರ್ದಿಕ್ ಪಾಂಡ್ಯ, ಅಭಿನವ್ ಮನೋಹರ್, ವಿಜಯ್ ಶಂಕರ್ ಹಾಗೂ ಡೇವಿಡ್ ಮಿಲ್ಲರ್ ಬ್ಯಾಟಿಂಗ್ ಬೆನ್ನೆಲುಬು ಎನಿಸಿಕೊಂಡಿದ್ದಾರೆ. ಇನ್ನು ರಶೀದ್ ಖಾನ್ ಹಾಗೂ ರಾಹುಲ್ ತೆವಾಟಿಯಾ ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಮಿಂಚುತ್ತಾ ಬಂದಿದ್ದಾರೆ. ಮೊಹಮ್ಮದ್ ಶಮಿ, ಅಲ್ಜಾರಿ ಜೋಸೆಫ್, ನೂರ್ ಅಹಮ್ಮದ್‌ ಹಾಗೂ ಮೋಹಿತ್ ಶರ್ಮಾ ಮತ್ತೊಮ್ಮೆ ಮಾರಕ ದಾಳಿ ನಡೆಸಲು ತುದಿಗಾಲಿನಲ್ಲಿ ನಿಂತಿದ್ದಾರೆ.

IPL 2023 ರಿಂಕು, ರಾಣಾ ಆಟ, ಸಿಎಸ್‌ಕೆಗೆ ಸೋಲಿನ ಪಾಠ, ಪ್ಲೇ ಆಫ್ ರೇಸ್‌ನಲ್ಲಿ ಇದೀಗ ಕೆಕೆಆರ್!

ಮತ್ತೊಂದೆಡೆ ಸನ್‌ರೈಸ​ರ್ಸ್‌ ಹೈದರಾಬಾದ್ ಎಲ್ಲಾ ವಿಭಾಗಗಳಲ್ಲೂ ಕಳಪೆಯಾಗಿದೆ. ಕನಿಷ್ಠ 8 ಇನ್ನಿಂಗ್‌್ಸ ಆಡಿರುವ ಬ್ಯಾಟರ್‌ಗಳ ಪೈಕಿ ಒಬ್ಬ ಬ್ಯಾಟರ್‌ ಮಾತ್ರ 30ಕ್ಕಿಂತ ಹೆಚ್ಚಿನ ಸರಾಸರಿ ಹೊಂದಿದ್ದರೆ, ಕೇವಲ ಒಬ್ಬ ಬೌಲರ್‌ 10ಕ್ಕೂ ಹೆಚ್ಚು ವಿಕೆಟ್‌ ಕಬಳಿಸಿದ್ದಾರೆ. ಗುಜರಾತ್‌ನ 4 ಬೌಲರ್‌ಗಳು 10ಕ್ಕೂ ಹೆಚ್ಚು ವಿಕೆಟ್‌ ಪಡೆದಿದ್ದು, ತಂಡದ ಯಶಸ್ಸಿನಲ್ಲಿ ಸಮಪಾಲು ಹೊಂದಿದ್ದಾರೆ.

ಒಟ್ಟು ಮುಖಾಮುಖಿ: 02

ಗುಜರಾತ್‌: 01

ಹೈದರಾಬಾದ್‌: 01

ಸಂಭವನೀಯ ಆಟಗಾರರ ಪಟ್ಟಿ

ಗುಜರಾತ್‌: ವೃದ್ದಿಮಾನ್ ಸಾಹ, ಶುಭ್‌ಮನ್‌ ಗಿಲ್‌, ಹಾರ್ದಿಕ್‌ ಪಾಂಡ್ಯ(ನಾಯಕ), ವಿಜಯ್‌ ಶಂಕರ್‌, ಡೇವಿಡ್‌ ಮಿಲ್ಲರ್‌, ಅಭಿನವ್‌ ಮನೋಹರ್, ರಾಹುಲ್ ತೆವಾಟಿಯಾ, ರಶೀದ್‌ ಖಾನ್, ಅಲ್ಜಾರಿ ಜೋಸೆಫ್‌, ನೂರ್‌ ಅಹ್ಮದ್‌, ಮೊಹಮ್ಮದ್ ಶಮಿ, ಮೋಹಿತ್‌ ಶರ್ಮಾ.

ಹೈದರಾಬಾದ್‌: ಅನ್ಮೋಲ್‌, ಅಭಿಷೇಕ್‌ ಶರ್ಮಾ, ರಾಹುಲ್ ತ್ರಿಪಾಠಿ, ಏಯ್ಡನ್ ಮಾರ್ಕ್ರಮ್‌(ನಾಯಕ), ಗ್ಲೆನ್‌ ಫಿಲಿಫ್ಸ್‌, ಹೆನ್ರಿಚ್ ಕ್ಲಾಸೆನ್‌, ಅಬ್ದುಲ್ ಸಮದ್‌, ವಿವ್ರಾಂತ್‌, ಭುವನೇಶ್ವರ್ ಕುಮಾರ್, ಮಾರ್ಕೋ ಯಾನ್ಸನ್‌, ಮಯಾಂಕ್‌ ಮಾರ್ಕಂಡೆ, ಟಿ ನಟರಾಜನ್‌.

ಪಂದ್ಯ: ಸಂಜೆ 7.30ರಿಂದ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಸಿನಿಮಾ

ಪಿಚ್‌ ರಿಪೋರ್ಟ್

ಮೋದಿ ಕ್ರೀಡಾಂಗಣದಲ್ಲಿ ನಡೆದಿರುವ 6 ಪಂದ್ಯಗಳಲ್ಲಿ 5ರಲ್ಲಿ ಮೊದಲು ಬ್ಯಾಟ್‌ ಮಾಡಿದ ತಂಡ 175ಕ್ಕಿಂತ ಹೆಚ್ಚಿನ ಮೊತ್ತ ಕಲೆಹಾಕಿದೆ. ಹೀಗಾಗಿ ಟಾಸ್‌ ಗೆಲ್ಲುವ ತಂಡ ಮೊದಲು ಬ್ಯಾಟ್‌ ಮಾಡಿದರೆ ಅನುಕೂಲ ಹೆಚ್ಚು.

click me!