IPL 2023 ತವರಲ್ಲಿ ಡೆಲ್ಲಿ ಎದುರು ಲಖನೌ ಶುಭಾರಂಭ?

Published : Apr 01, 2023, 05:01 PM IST
IPL 2023 ತವರಲ್ಲಿ ಡೆಲ್ಲಿ ಎದುರು ಲಖನೌ ಶುಭಾರಂಭ?

ಸಾರಾಂಶ

ತವರಿನಲ್ಲಿ ರಾಹುಲ್‌ ಪಡೆಗೆ ಮೊದಲ ಪಂದ್ಯ ಶುಭಾರಂಭದ ನಿರೀಕ್ಷೆಯಲ್ಲಿ ಡೆಲ್ಲಿ-ಲಖನೌ ಪಡೆಗಳು ಕಳೆದ ಆವೃತ್ತಿಯಲ್ಲಿ ಡೆಲ್ಲಿ ಎದುರು ಎರಡೂ ಪಂದ್ಯ ಗೆದ್ದಿದ್ದ ಲಖನೌ

ಲಖನೌ(ಏ.01): ಕೆ.ಎಲ್‌.ರಾಹುಲ್‌ ನೇತೃತ್ವದ ಲಖನೌ ಸೂಪರ್‌ ಜೈಂಟ್ಸ್‌ ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ಮೊದಲ ಪಂದ್ಯವನ್ನಾಡಲಿದ್ದು, ಶನಿವಾರ ಡೆಲ್ಲಿ ಕ್ಯಾಪಿಟಲ್ಸ್‌ ಸವಾಲನ್ನು ಎದುರಿಸಲಿದೆ.

ರಿಷಭ್‌ ಪಂತ್‌ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಲು ಸಜ್ಜಾಗಿರುವ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮಿಷೆಲ್‌ ಮಾರ್ಷ್‌ ವಿಸ್ಫೋಟಕ ಆಟ ನೆರವಾಗಲಿದೆಯೇ ಎನ್ನುವ ಕುತೂಹಲಕ್ಕೆ ಮೊದಲ ಉತ್ತರ ಸಿಗಬಹುದು. ಇನ್ನು ಮತ್ತೆ ಟೀಂ ಇಂಡಿಯಾದಲ್ಲಿ ಕಾಯಂ ಸ್ಥಾನ ಗಿಟ್ಟಿಸಲು ಕಾಯುತ್ತಿರುವ ಕೆ.ಎಲ್‌.ರಾಹುಲ್‌, ತಮ್ಮ ಲಯದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದರ ಜೊತೆಗೆ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಲು ಎದುರು ನೋಡುತ್ತಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಡೇವಿಡ್‌ ವಾರ್ನರ್‌ ನಾಯಕನಾಗಿ ನೇಮಕಗೊಂಡಿದ್ದು, ಇತ್ತೀಚೆಗೆ ಭಾರತ ವಿರುದ್ಧ ಸರಣಿಯಲ್ಲಿ ಸಿಡಿಲಬ್ಬರದ ಆಟವಾಡಿದ ಮಾರ್ಷ್‌ ಮೇಲೆ ತಂಡ ಹೆಚ್ಚಾಗಿ ಅವಲಂಬಿತಗೊಂಡಿದೆ. ಪೃಥ್ವಿ ಶಾ, ಮನೀಶ್‌ ಪಾಂಡೆ, ರೋವ್ಮನ್‌ ಪೋವೆಲ್‌, ರೈಲಿ ರುಸ್ಸೌ ತಂಡದ ಬ್ಯಾಟಿಂಗ್‌ ಆಧಾರಸ್ತಂಭವೆನಿಸಿದ್ದಾರೆ. ಸರ್ಫರಾಜ್‌ ಖಾನ್‌ ಈ ಬಾರಿ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆ ಇದ್ದು, ವಿಕೆಟ್‌ ಕೀಪರ್‌-ಬ್ಯಾಟರ್‌ ಆಗಿ ಆಡಲಿದ್ದಾರೆ ಎನ್ನಲಾಗುತ್ತಿದೆ.

IPL 2023 ಎಂ ಎಸ್ ಧೋನಿ ಪಾದ ಮುಟ್ಟಿ ನಮಸ್ಕರಿಸಿದ ಗಾಯಕ ಅರಿಜಿತ್ ಸಿಂಗ್; ಧೋನಿ ಗಳಿಸಿದ್ದು ಇದೇ ಅಲ್ವಾ?

ಮತ್ತೊಂದೆಡೆ ಲಖನೌ ಸೂಪರ್ ಜೈಂಟ್ಸ್‌ ತನ್ನ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡರೆ ಯಾವುದೇ ಎದುರಾಳಿಗಳನ್ನು ಮಣಿಸುವ ಸಾಮರ್ಥ್ಯ ಹೊಂದಿದೆ. ಮೊದಲ ಪಂದ್ಯಕ್ಕೆ ಕ್ವಿಂಟನ್ ಡಿ ಕಾಕ್‌ ಅಲಭ್ಯರಾಗುವ ಸಾಧ್ಯತೆ ಇದ್ದು, ವಿಂಡೀಸ್‌ನ ಕೈಲ್‌ ಮೇಯ​ರ್‍ಸ್ ಮೇಲೆ ನಿರೀಕ್ಷೆ ಇದೆ. ಸ್ಟೋಯ್ನಿಸ್‌, ಕೃನಾಲ್‌, ಬದೋನಿ, ದೀಪಕ್‌ ಹೂಡ ಜೊತೆ ಮಧ್ಯಮ ಕ್ರಮಾಂಕದ ಹೊಣೆ ನಿಕೋಲಸ್‌ ಪೂರನ್‌ ಹೆಗಲಿಗೆ ಬೀಳಲಿದೆ. ಹಿರಿಯ ಸ್ಪಿನ್ನರ್‌ ಅಮಿತ್‌ ಮಿಶ್ರಾರನ್ನು ಲಖನೌ ‘ಇಂಪ್ಯಾಕ್ಟ್ ಆಟಗಾರ’ನಾಗಿ ಬಳಸಬಹುದು.

ಐಪಿಎಲ್ ಇತಿಹಾಸದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡಗಳು ಎರಡು ಬಾರಿ ಮುಖಾಮುಖಿಯಾಗಿದ್ದು, ಎರಡೂ ಪಂದ್ಯದಲ್ಲೂ ಕೆ ಎಲ್ ರಾಹುಲ್ ನೇತೃತ್ವದ ಲಖನೌ ಸೂಪರ್ ಜೈಂಟ್ಸ್ ತಂಡವು ಗೆಲುವಿನ ನಗೆ ಬೀರಿದೆ. ಇದೀಗ ಮೂರನೇ ಬಾರಿಯ ಮುಖಾಮುಖಿಯಲ್ಲಿಯಾದರೂ ಡೆಲ್ಲಿ ಕ್ಯಾಪಿಟಲ್ಸ್‌ ಗೆಲುವಿನ ಖಾತೆ ತೆರೆಯುತ್ತಾ ಕಾದು ನೋಡಬೇಕಿದೆ.

ಸಂಭವನೀಯ ಆಟಗಾರರ ಪಟ್ಟಿ

ಡೆಲ್ಲಿ: ಡೇವಿಡ್ ವಾರ್ನರ್‌(ನಾಯಕ), ಪೃಥ್ವಿ ಶಾ, ಮಿಚೆಲ್ ಮಾರ್ಷ್‌, ರಿಲೇ ರುಸ್ಸೌ, ಸರ್ಫರಾಜ್‌ ಖಾನ್, ರೋವ್ಮನ್ ಪೋವೆಲ್‌, ಅಕ್ಷರ್‌ ಪಟೇಲ್‌,  ಕಮ್ಲೇಶ್‌ ನಾಗರಕೋಟಿ, ಕುಲ್ದೀಪ್‌ ಯಾದವ್, ಚೇತನ್ ಸಕಾರಿಯಾ, ಖಲೀಲ್‌ ಅಹಮ್ಮದ್.

ಲಖನೌ: ಕೆ ಎಲ್ ರಾಹುಲ್‌(ನಾಯಕ), ಕೈಲ್‌ ಮೇಯ​ರ್ಸ್‌, ದೀಪಕ್ ಹೂಡಾ, ನಿಕೋಲಸ್ ಪೂರನ್‌, ಮಾರ್ಕಸ್ ಸ್ಟೋಯ್ನಿಸ್‌, ಆಯುಷ್ ಬದೋನಿ, ಕೃನಾಲ್‌ ಪಾಂಡ್ಯ, ಪ್ರೇರಕ್‌ ಮಂಕಡ್, ಜಯದೇವ್ ಉನಾದ್ಕತ್‌, ಆವೇಶ್‌ ಖಾನ್, ರವಿ ಬಿಷ್ಣೋಯ್‌.

ಪಂದ್ಯ: ಸಂ.7.30ರಿಂದ
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಸಿನಿಮಾ

ಪಿಚ್‌ ರಿಪೋರ್ಚ್‌

ಲಖನೌನಲ್ಲಿ 6 ಅಂ.ರಾ.ಟಿ20 ಪಂದ್ಯ ನಡೆದಿದ್ದು, 5ರಲ್ಲಿ ಮೊದಲು ಬ್ಯಾಟ್‌ ಮಾಡಿದ ತಂಡ ಗೆದ್ದಿದೆ. ಇಲ್ಲಿ ದೊಡ್ಡ ಮೊತ್ತ ದಾಖಲಾದ ಉದಾಹರಣೆ ಕಡಿಮೆ. ಟಾಸ್‌ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಹೆಚ್ಚು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜೈಸ್ವಾಲ್‌ ಸಖತ್‌ ಸೆಂಚುರಿ, ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ!
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌