ಧೋನಿಗೆ ಧೋನಿಯೇ ಸಾಟಿ, ಚೆನ್ನೈಗೆ ಮಹಿಯ ಫಿಟ್ನೆಸ್ ತೀರಾ ಅನಿವಾರ್ಯ..!

Published : Apr 01, 2023, 04:14 PM IST
ಧೋನಿಗೆ ಧೋನಿಯೇ ಸಾಟಿ, ಚೆನ್ನೈಗೆ ಮಹಿಯ ಫಿಟ್ನೆಸ್ ತೀರಾ ಅನಿವಾರ್ಯ..!

ಸಾರಾಂಶ

40ನೇ ವಯಸ್ಸಿನಲ್ಲೂ ಮಿಂಚುತ್ತಿರುವ ಕ್ಯಾಪ್ಟನ್ ಕೂಲ್ ಎಂ ಎಸ್ ಧೋನಿ ಕೊಂಚ ದಣಿದಂತೆ ಕಾಣುತ್ತಿದ್ದರೂ ಧೋನಿ ಫಿಟ್‌ ಆಗಿರುವುದು ಸಿಎಸ್‌ಕೆಗೆ ಅನಿವಾರ್ಯ ಅಭಿಮಾನಿಗಳಲ್ಲಿ ಫಿಟ್ನೆಸ್ ಬಗ್ಗೆ ಕಿಂಚಿತ್ತೂ‌ ಅನುಮಾನವೇ ಇಲ್ಲ

- ನವೀನ್ ಸಾಗರ್

ಬೆಂಗಳೂರು: ಧೋನಿ ಫಿಟ್ನೆಸ್ ಲೆವೆಲ್ ತಗ್ಗಿರೋದು ಸಹಜವೇ. ಅವನಿಗೆ ಈಗಾಗ್ಲೇ ನಲವತ್ತು ದಾಟಿದೆ. ಆಟದ ಅಖಾಡದಲ್ಲಿ ಅದು ಸಂಧ್ಯಾ ಕಾಲ. ಮುದುಕರೆಂದು ಪರಿಗಣಿಸಿಬಿಡುವ ವಯಸ್ಸು. ಇಂಜುರಿ ಇಲ್ಲದೆ ಬ್ರೇಕ್ ತಗೊಳ್ಳದೇ  ದೇಶಕ್ಕಾಗಿ ಫ್ರಾಂಚೈಸಿಗಾಗಿ ಸತತ ಪಂದ್ಯಗಳನ್ನು ಆಡಿದ್ದಾನೆ ಧೋನಿ. ಜೊತೆ ರನ್ನರ್ ಒಂದು‌ರನ್ ಪೂರೈಸೋ ಹೊತ್ತಿಗೆ ಈತ ಎರಡನೇ ರನ್ ಮುಗಿಸಿರುತ್ತಿದ್ದ. ಥರ್ಟಿ ಯಾರ್ಡ್ ಸರ್ಕಲ್ಲಿನಷ್ಟು ದೂರದಲ್ಲಿ ಕೀಪಿಂಗ್ ನಿಂತಿದ್ದರೂ ಕೈಲಿ ಬಾಲ್ ಹಿಡಿದು ಓಡಿ ಬಂದು ರನ್ ಔಟ್ ಮಾಡುತ್ತಿದ್ದ. ಬರೀ ಇಪ್ಪತ್ತೆರಡು ಯಾರ್ಡ್ ಕ್ರಮಿಸಬೇಕಿರೋ ಬ್ಯಾಟರ್ ನನ್ನು ರೇಸ್ ಮಾಡುವ ಪರಿ ಅದು.

ಕೀಪರ್ ಬ್ಯಾಟ್ಸ್‌ ಮನ್ನೋ.. ಬ್ಯಾಟಿಂಗ್ ಕೀಪರ್ರೋ ಅನಿಸುವಷ್ಟು ಎರಡಕ್ಕೂ ನ್ಯಾಯ ಸಲ್ಲಿಸಿ ನಾಯಕತ್ವದಲ್ಲೂ ಗೆದ್ದಾತ ಧೋನಿ. ಖುದ್ದು ಅಷ್ಟು ಫಿಟ್ ಇಲ್ಲದೇ ಆತ ಸೀನಿಯರ್ ಗಳ ಫಿಟ್ನೆಸ್ ಹಾಗೂ ರನ್ನಿಂಗ್ ಬಗ್ಗೆ ಕಟುನಿರ್ಧಾರ ತಗೊಳ್ಳೋದು ಸಾಧ್ಯ ಇರಲಿಲ್ಲ. ಅಂಥ ಧೋನಿ ಮೊದಲ‌ ಬಾರಿ ಸುಸ್ತಾದ್ನಾ ಅನಿಸಿದ್ದು ಈಗ ಎರಡು ಐಪಿಎಲ್ ಮುಂಚೆ. ರನ್ ಓಡಿ ಸುಸ್ತಾಗಿ ಏದುಸಿರು ಬಿಡ್ತಾ ಇದ್ದಾಗ.. ಕ್ರ್ಯಾಂಪ್ ಗೆ‌ ಒಳಗಾದಾಗ.  ನ್ಯೂಜಿಲೆಂಡ್ ಮೇಲೆ ವರ್ಲ್ಡ್ ಕಪ್‌‌ ಸೆಮೀಸ್ ನಲ್ಲಿ ರನೌಟ್ ಆದ ಧೋನಿ ಜಸ್ಟ್ ಸೆಂಟಿಮೀಟರ್ ಲೆಕ್ಕದಲ್ಲಿ ಹಿಂದೆಬಿದ್ದಿದ್ದ. ಆದರೆ ಆ ರನ್ನಿಂಗ್ ಕೂಡ ಅವನ ಫಿಟ್ನೆಸ್ ಬೆಸ್ಟಲ್ಲೇ ಇತ್ತು.

ನಿನ್ನೆಯ ಪಂದ್ಯದ ನಂತರ ಧೋನಿ ಫಿಟ್ನೆಸ್ ಬಗ್ಗೆ ಒಂದಷ್ಟು ಮಾತುಗಳು ಕೇಳಿಬರುತ್ತಿವೆ.  ಕೀಪಿಂಗಿನಲ್ಲಿ ಬಲಕ್ಕೆ ಡೈವ್ ಮಾಡಿ ಬಾಲ್ ತಡೆಯಲು ಹೋದಾಗ ಮಂಡಿ ಹೊರಳಿದಂತಾಗಿ ಮುಖ ಕಿವುಚಿದ್ದು ಕೂಡಲೇ ಫಿಸಿಯೋ ಬಂದದ್ದು ನಿಮಿಷಾರ್ಧದಲ್ಲಿ ಮತ್ತೆ ಕೀಪಿಂಗ್ ಗೆ ರೆಡಿ ಆಗಿದ್ದು ನಾನೂ ಗಮನಿಸಿದೆ. ಅದರಿಂದ ಧೋನಿಯೆಂಬ ಫಿನಿಷರ್ ಫಿನಿಷ್ಡ್ ಎಂದು ಅಳೆದು ಮುಗಿಸಿಬಿಡೋದಾ?

ಅಂಥ ಅದೆಷ್ಟು ಘಟನೆಗಳು ಆಟದಂಗಳದಲ್ಲಿ ಹದಿಹರೆಯದವರ ದೇಹಕ್ಕೂ ಆಗೋದಿಲ್ವಾ? ನಿನ್ನೆ ವಿಲಿಯಂಸನ್ ಕ್ಯಾಚ್ ಪಡೆಯಲು ಹೋಗಿ ಇಂಜುರಿ ಮಾಡಿಕೊಳ್ಳಲಿಲ್ವಾ? ಇನ್ನೂ ಕೊಹ್ಲಿ ವಯಸ್ಸಿನ ಆಟಗಾರ ಆತ. ಬುಮ್ರಾ ಇಂಜುರಿ ರೆಕಾರ್ಡ್ ಅವನ ಆನ್ ಗ್ರೌಂಡ್ ರೆಕಾರ್ಡನ್ನೇ ಮೀರಿಸೋ‌ಹಾಗಿದೆ. ಆಟದಲ್ಲಿ ಇವೆಲ್ಲ ಸಹಜವೇ. ಧೋನಿಯನ್ನು‌ ಮಾತ್ರ ಅದ್ಯಾಕೆ ಆ ಸ್ಕ್ಯಾನರಲ್ಲಿಯೇ ಹಾಕಿ ನೋಡಬೇಕು. ಎಲ್ಲರ ಊಹೆಯಂತೆ ಇದು ಅವನ ಕೊನೆಯ ಐಪಿಎಲ್ ಅಂತಲೇ ಒಪ್ಕೊಳೋಣ. ಅದಕ್ಕೂ ತಾನು ಹೊರೆಯಾಗಬಾರದು ಎಂಬ ಮನೋಭಾವ ಧೋನಿಗೆ ಇದ್ದೇ ಇರುತ್ತದೆ. ಧೋನಿ ಕಳೆದ ಒಂದುತಿಂಗಳಿಂದ ಚೆನ್ನೈ ನೆಟ್ ಗಳಲ್ಲಿ ಬೆವರು‌ಹರಿಸಿದ್ದಾ‌ನೆ. ತನ್ನ ಮೇಲೆ ತನಗೆ ನಂಬಿಕೆ ಬಾರದೇ ಹೋದರೆ ಆವೃತ್ತಿ ಆರಂಭಕ್ಕೆ ಮೊದಲೇ ವಿದಾಯ ಹೇಳಲೂ ಸಿದ್ಧನಾಗಿದ್ದ ಧೋನಿ. 

ತನ್ನಲ್ಲಿನ್ನೂ ಫಿಟ್ನೆಸ್ ಇದೆ ಹಾಗೂ ಹೊಡೆತಗಳಿಗೆ ಬೇಕಾದ ಪವರ್ ಹಾಗೂ ಟೈಮಿಂಗ್ ಇದೆ ಅನ್ನೋದು ಖಾತರಿ ಮಾಡಿಕೊಂಡೇ ಆತ ನಾಯಕತ್ವ ಒಪ್ಪಿಕೊಂಡು ಕಣಕ್ಕಿಳಿದಿದ್ದಾನೆ. ನಿನ್ನೆಯ ಒಂದು ಬೌಂಡರಿ ಒಂದು ಸಿಕ್ಸ್ ಅದರ ಪ್ರೂಫ್ ಅಂತೇನೂ ಅಲ್ಲ. ಇನ್ನೂ ದೊಡ್ಡ ಆಟವೇ ಬಾಕಿ ಇದೆ. ಶಿವಂ ದುಬೆ ಅಂಬಟಿ ರಾಯುಡು ನಿನ್ನೆ ಟೈಮ್‌ಮಾಡಲಾಗದೆ ಒದ್ದಾಡುತ್ತಿದ್ದಾಗ ಧೋನಿ ಬೇಗ ಬಂದಿದ್ರೆ...ಅಂತ ಅನಿಸುತ್ತಿತ್ತು. ಯಾಕಂದ್ರೆ ಧೋನಿ ಈ ವಯಸ್ಸಿನಲ್ಲೂ ಆ ವಿಶ್ವಾಸ ಕೊಡಬಲ್ಲ ಆಟಗಾರನಾಗಿಯೇ ಉಳಿದಿದ್ದಾನೆ. ಇನ್ನಿಂಗ್ಸಿನ ಕೊನೆಯ ಎಸೆತದಲ್ಲಿ ಸಿಂಗಲ್ ತಗೊಂಡಾಗ ಮಾತ್ರ.. ಮೊದಲೆಲ್ಲ ಇದು ಈಸಿಯಾಗಿ ಡಬಲ್ ತಗೋತಿದ್ದ ಅನಿಸಿದ್ದು ಬಿಟ್ರೆ ಅವನ ಫಿಟ್ನೆಸ್ ಬಗ್ಗೆ ಕಿಂಚಿತ್ತೂ‌ ಅನುಮಾನವೇ ಇಲ್ಲ.

ಆದರೆ ಐಪಿಎಲ್ ಮತ್ತು ಚೆನ್ನೈಗೆ ಧೋನಿಯ ಫಿಟ್ನೆಸ್ ತೀರಾ ಅನಿವಾರ್ಯವಾಗಿದೆ‌. ಆತ ಇಡೀ ಸೀಸನ್ ಗ್ರೌಂಡಲ್ಲಿ ಕಾಣಿಸಿಕೊಳ್ಳಲೇಬೇಕಿದೆ. ಹಾಗಾಗಿ ಆತ ಚಿಕ್ಕದಾಗಿ ಮುಖಕಿವುಚಿದರೂ....ಕೈಕಾಲು‌ ಒದರಿದರೂ ಫಿಸಿಯೋ ಟೀಮ್ ಜಾಗೃತವಾಗುತ್ತದೆ. ನಿನ್ನೆ ಆಗಿದ್ದು ಕೂಡ ಅಷ್ಟೆ. ಧೋನಿಯ ಗೈರುಹಾಜರಿಯನ್ನು ಐಪಿಎಲ್ ಭರಿಸುವುದು ಕಷ್ಟವಿದೆ.

ಗಮನಿಸಿರಬಹುದು ನಿನ್ನೆ ಚೆನ್ನೈ ನ ಮೂರನೇ ವಿಕೆಟ್ ಬಿದ್ದಾಗಿಂದ ಧೋನಿ ಈಗ ಬರಬಹುದು ಈಗ ಬರಬಹುದು ಎಂದು ಲಕ್ಷಕ್ಕೂ ಹೆಚ್ಚು ತುಂಬಿದ ಕ್ರೀಡಾಂಗಣ ಧೋನಿಮಂತ್ರ ಚೀರುತ್ತಿತ್ತು. ಅದೂ ಗುಜರಾತ್ ಟೀಮಿನ ಹೋಮ್‌ಗ್ರೌಂಡಿನಲ್ಲಿ! ಕೊನೆಗೂ ಆ ಎರಡು ಓವರ್ ಆತ ಕ್ರೀಸಿನಲ್ಲಿ ಇದ್ದದ್ದು ಟಿವಿ ನೋಡ್ತಿರೋವ್ರಿಗೂ ಕ್ರೀಡಾಂಗಣದಲ್ಲಿ ಇದ್ದವರಿಗೂ ಪೈಸಾ ವಸೂಲ್ ಎಂಬಭಾವ ತಂದುಬಿಟ್ಟಿತ್ತು.. ಏನೋ ಧನ್ಯತೆ. ಅಫ್ ಕೋರ್ಸ್ ಧೋನಿ ಕೂಡ ಒಂದು ಸಿಕ್ಸ್ ಒಂದು ಫೋರ್ ಮೂಲಕ ನಮ್ಮೆಲ್ಲರ ಗರ್ವಕ್ಕೆ ಹೆಮ್ಮೆಗೆ ಇನ್ನಷ್ಟು ಇಂಬುಕೊಟ್ಟ.
ಐಪಿಎಲ್ ನ ಎಲ್ಲ ಪಂದ್ಯಗಳನ್ನೂ ಮನರಂಜನೆಗಾಗಿ ನೋಡ್ತೀನಿ. ಧೋನಿಯ‌‌ ಪಂದ್ಯಗಳನ್ನು ಎಮೋಷನ್ ಗಾಗಿ ನೋಡ್ತೀನಿ.

ಇದು ಕೊನೆಯ ಐಪಿಎಲ್ಲೇ ಆಗಿದ್ದರೆ ಧೋನಿ ಕಡೇಪಕ್ಷ ನಾಲ್ಕೈದು ಮ್ಯಾಚುಗಳಲ್ಲಾದರೂ ಮೇಲಿನ ಕ್ರಮಾಂಕದಲ್ಲಿ ಆಡಲಿ ಅನ್ನೋದು ನನ್ನಾಸೆ.  ಆತನ ಫಿಟ್ನೆಸ್ ಬಗ್ಗೆ ಅಭಿಮಾನಿಗಳಾಗಿ ನಮಗೆ ಯಾವ ಅನುಮಾನವೂ ಇಲ್ಲ. ಒತ್ತಡ ಇಲ್ಲದೆ ಆಡಲಿ ಅಂತಷ್ಟೇ ಆಸೆ. ಪ್ರೂವ್ ಮಾಡೋಕೆ ಆಡೊ ಅಗತ್ಯ ಇಲ್ಲವೇ ಇಲ್ಲ. All the best MSD

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜೈಸ್ವಾಲ್‌ ಸಖತ್‌ ಸೆಂಚುರಿ, ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ!
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌