
ಕೋಲ್ಕತಾ(ಮೇ.20): ಬಂಗಾಳದ ಐತಿಹಾಸಿಕ ಮೋಹನ್ ಬಗಾನ್ ಫುಟ್ಬಾಲ್ ಕ್ಲಬ್‌ನ ಜೆರ್ಸಿ ತೊಟ್ಟು ಶನಿವಾರ ಕಣಕ್ಕಿಳಿಯಲಿರುವ ಲಖನೌ ಸೂಪರ್ ಜೈಂಟ್ಸ್, ಈಡನ್ ಗಾರ್ಡನ್ಸ್‌ನಲ್ಲಿ ‘ತವರಿನ’ ಬೆಂಬಲ ಪಡೆದು ಕೋಲ್ಕತಾ ನೈಟ್ರೈಡರ್ಸ್ ವಿರುದ್ಧ ಜಯಭೇರಿ ಬಾರಿಸಲು ಕಾತರಿಸುತ್ತಿದೆ. ಈ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ಗೆದ್ದರೆ ಪ್ಲೇ-ಆಫ್ ಪ್ರವೇಶ ಖಚಿತವಾಗಲಿದೆ. ಒಂದು ವೇಳೆ ಸೋತರೆ ಆಗ ಮುಂಬೈ ಹಾಗೂ ಆರ್‌ಸಿಬಿಯ ಪಂದ್ಯಗಳ ಫಲಿತಾಂಶಕ್ಕಾಗಿ ಕಾಯಬೇಕಾಗುತ್ತದೆ.
ಲಖನೌ ಸೂಪರ್ ಜೈಂಟ್ಸ್ ಹಾಗೂ ಚೆನ್ನೈನ ನೆಟ್ ರನ್‌ರೇಟ್‌ನಲ್ಲಿ ದೊಡ್ಡ ಅಂತರವೇನೂ ಇಲ್ಲ. ಹೀಗಾಗಿ ಈ ಎರಡು ತಂಡಗಳು ಕೊನೆಯ ಪಂದ್ಯದಲ್ಲಿ ಬೃಹತ್ ಅಂತರದಲ್ಲಿ ಗೆದ್ದು, ನೆಟ್ ರನ್‌ರೇಟ್ ಉತ್ತಮಪಡಿಸಿಕೊಂಡು ಅಗ್ರ-2ರಲ್ಲಿ ಸ್ಥಾನ ಪಡೆಯಲು ಎದುರು ನೋಡಲಿವೆ. ಕ್ವಾಲಿಫೈಯರ್-1 ಪಂದ್ಯಕ್ಕೆ ಅರ್ಹತೆ ಪಡೆವ ತಂಡಗಳ ಪೈಕಿ ಗೆಲ್ಲುವ ತಂಡ ನೇರವಾಗಿ ಫೈನಲ್‌ಗೇರಲಿದ್ದು, ಸೋಲುವ ತಂಡಕ್ಕೆ ಪ್ಲೇ-ಆಫ್‌ಗೇರಲು ಇನ್ನೊಂದು ಅವಕಾಶ ಸಿಗಲಿದೆ.
ಕೆಕೆಆರ್‌ಗೆ ಹೋಲಿಸಿದರೆ ಎಲ್ಲಾ ವಿಭಾಗಗಳಲ್ಲೂ ಲಖನೌ ಸೂಪರ್ ಜೈಂಟ್ಸ್ ಬಲಿಷ್ಠವಾಗಿದ್ದು, ಈ ಪಂದ್ಯದಲ್ಲಿ ಸಂಘಟಿತ ಹೋರಾಟದಿಂದ ಗೆಲುವು ಒಲಿಸಿಕೊಳ್ಳಲು ಎದುರು ನೋಡುತ್ತಿದೆ. ಲಖನೌ ಸೂಪರ್ ಜೈಂಟ್ಸ್ ತಂಡವು ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪ್ಲೇ ಆಫ್ ಪ್ರವೇಶಿಸಿತ್ತಾದರೂ, ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ ಎದುರು ಮುಗ್ಗರಿಸಿತ್ತು. ಇದೀಗ ಮತ್ತೊಮ್ಮೆ ಈ ಪಂದ್ಯ ಗೆದ್ದು ಪ್ಲೇ ಆಫ್‌ಗೇರುವ ಲೆಕ್ಕಾಚಾರದಲ್ಲಿದೆ ಲಖನೌ ಸೂಪರ್ ಜೈಂಟ್ಸ್ ಪಡೆ.
IPL 2023 ಈಡೇರುತ್ತಾ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ-ಆಫ್ ಆಸೆ?
ಲಖನೌ ತಂಡವು ಬ್ಯಾಟಿಂಗ್ ವಿಭಾಗದಲ್ಲಿ ಕ್ವಿಂಟನ್ ಡಿ ಕಾಕ್, ನಿಕೋಲಸ್ ಪೂರನ್, ಮಾರ್ಕಸ್ ಸ್ಟೋನಿಸ್ ಹಾಗೂ ಕೃನಾಲ್ ಪಾಂಡ್ಯ ಅವರನ್ನು ನೆಚ್ಚಿಕೊಂಡಿದೆ. ಇನ್ನು ಬೌಲಿಂಗ್ ವಿಭಾಗದಲ್ಲಿ ರವಿ ಬಿಷ್ಣೋಯಿ, ನವೀನ್ ಉಲ್ ಹಕ್, ಮೊಹ್ಸಿನ್ ಖಾನ್ ಹಾಗೂ ಯಶ್ ಠಾಕೂರ್ ಅವರನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ.
ಇನ್ನೊಂದೆಡೆ ಈ ಹಿಂದಿನ ಎರಡೂ ಮುಖಾಮುಖಿಯಲ್ಲೂ ಲಖನೌ ಸೂಪರ್ ಜೈಂಟ್ಸ್ ಎದುರು ಸೋಲಿನ ಕಹಿಯುಂಡಿರುವ ಕೋಲ್ಕತಾ ನೈಟ್ ರೈಡರ್ಸ್ ತಂಡವು ಗೆಲುವಿನ ಹಳಿಗೆ ಮರಳಲು ಎದುರು ನೋಡುತ್ತಿದೆ. ಲಖನೌ ಎದುರು ಭಾರೀ ಅಂತರದ ಗೆಲುವು ಸಾಧಿಸಿ, ಉಳಿದ ತಂಡಗಳ ಪ್ರದರ್ಶನವು ತಮ್ಮ ಪರವಾಗಿ ಬಂದರೆ, ಕೆಕೆಆರ್ ಕೂಡಾ ನಾಲ್ಕನೇ ತಂಡವಾಗಿ ಪ್ಲೇ ಆಫ್ ಹಂತ ಪ್ರವೇಶಿಸುವ ಸಾಧ್ಯತೆಯಿದೆ. ಇದೆಲ್ಲಾ ಸಾಕಾರವಾಗಬೇಕಿದ್ದರೇ, ಪವಾಡವೇ ನಡೆಯಬೇಕಿದೆ.
ಒಟ್ಟು ಮುಖಾಮುಖಿ: 02
ಲಖನೌ ಸೂಪರ್ ಜೈಂಟ್ಸ್: 02
ಕೋಲ್ಕತಾ ನೈಟ್ ರೈಡರ್ಸ್: 00
ಸಂಭವನೀಯ ಆಟಗಾರರ ಪಟ್ಟಿ
ಲಖನೌ: ದೀಪಕ್ ಹೂಡಾ, ಕ್ವಿಂಟನ್ ಡಿ ಕಾಕ್, ಪ್ರೇರಕ್ ಮಂಕಡ್, ಕೃನಾಲ್ ಪಾಂಡ್ಯ(ನಾಯಕ), ಮಾರ್ಕಸ್ ಸ್ಟೋಯ್ನಿಸ್, ನಿಕೋಲಸ್ ಪೂರನ್, ಆಯುಷ್ ಬದೋನಿ, ನವೀನ್ ಉಲ್ ಹಕ್, ರವಿ ಬಿಷ್ಣೋಯ್, ಸ್ವಪ್ನಿಲ್ ಸಿಂಗ್, ಮೊಹ್ಸಿನ್ ಖಾನ್, ಯಶ್ ಠಾಕೂರ್.
ಕೆಕೆಆರ್: ಜೇಸನ್ ರಾಯ್, ರೆಹಮನುಲ್ಲಾ ಗುರ್ಬಾಜ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ(ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ಶಾರ್ದೂಲ್ ಠಾಕೂರ್, ಸುನಿಲ್ ನರೇನ್, ವೈಭವ್ ಅರೋರ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಸುಯಶ್ ಶರ್ಮಾ.
ಪಂದ್ಯ: ಸಂಜೆ 7.30ರಿಂದ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್/ಜಿಯೋ ಸಿನಿಮಾ
ಪಿಚ್ ರಿಪೋರ್ಟ್
ಈ ವರ್ಷ ಈಡನ್ ಗಾರ್ಡನ್ಸ್‌ನಲ್ಲಿ ನಡೆದಿರುವ 6 ಪಂದ್ಯಗಳಲ್ಲಿ ಮೊದಲ 3 ಪಂದ್ಯವನ್ನು ಮೊದಲು ಬ್ಯಾಟ್ ಮಾಡಿದ ತಂಡ ಗೆದ್ದರೆ, ಕೊನೆಯ 3 ಪಂದ್ಯಗಳನ್ನು ಚೇಸ್ ಮಾಡಿದ ತಂಡ ಗೆದ್ದಿದೆ. ಮೊದಲ 3 ಪಂದ್ಯಗಳ 4 ಇನ್ನಿಂಗ್ಸಲ್ಲಿ 200+ ರನ್ ದಾಖಲಾಗಿತ್ತು. ಕೊನೆಯ 3 ಪಂದ್ಯಗಳಲ್ಲೂ ದೊಡ್ಡ ಮೊತ್ತ ದಾಖಲಾದರೂ 200 ರನ್ ದಾಟಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.