
ಧರ್ಮಶಾಲಾ (ಮೇ.17): ಆಲ್ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಪಂಜಾಬ್ ಕಿಂಗ್ಸ್ ತಂಡದ ಗೆಲುವಿಗಾಗಿ ವೀರಾವೇಶದ ಹೋರಾಟ ನಡೆಸಿದರೂ, ಕಟ್ಟಕಡೆಯಲ್ಲಿ ನಟಿ ಪ್ರೀತಿ ಜಿಂಟಾ ಮಾಲೀಕತ್ವದ ತಂಡ 15 ರನ್‌ಗಳಿಂದ ದೂರವುಳಿಯಿತು. ಬೃಹತ್ ಮೊತ್ತ ದಾಖಲಾದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಭರ್ಜರಿ ಗೆಲುವು ಕಂಡಿತು. ಈ ಸೋಲಿನೊಂದಿಗೆ ಪಂಜಾಬ್ ಕಿಂಗ್ಸ್ ತಂಡ ಐಪಿಎಲ್‌ನಿಂದ ಬಹುತೇಕ ಹೊರಬಿದ್ದಂತಾಗಿದೆ. ಎರಡೂ ತಂಡಗಳಿಗೆ ಇನ್ನು ಒಂದೊಂದು ಪಂದ್ಯ ಬಾಕಿ ಇದ್ದರೂ, ಪ್ಲೇ ಆಫ್‌ಗೇರಲು ಅಗತ್ಯವಿರುವ 16 ಅಂಕಗಳನ್ನು ಸಂಪಾದಿಸಲು ಸಾಧ್ಯವಾಗೋದಿಲ್ಲ. ಪಂಜಾಬ್ ತಂಡದ ಪ್ಲೇ ಆಫ್ ಸಾಧ್ಯತೆ ಎಲ್ಲಾ ಲೆಕ್ಕಾಚಾರದಲ್ಲೂ ಸ್ಲಿಮ್ ಆಗಿದೆ. ಧರ್ಮಶಾಲಾ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಿಲ್ಲಿ ರೋಸೌ (82 ರನ್, 37 ಎಸೆತ, 6 ಬೌಂಡರಿ, 6 ಸಿಕ್ಸರ್) ಅವರ ಸ್ಪೋಟಕ ಬ್ಯಾಟಿಂಗ್‌ನಿಂದ 2 ವಿಕೆಟ್‌ಗೆ 213 ರನ್ ಪೇರಿಸಿತ್ತು. ಪ್ರತಿಯಾಗಿ ಪಂಜಾಬ್ ಕಿಂಗ್ಸ್ ತಂಡ ಆರಂಭದಲ್ಲಿ ಸಂಕಷ್ಟ ಎದುರಿಸಿತಾದರೂ, ಲಿವಿಂಗ್‌ಸ್ಟೋನ್ ಸಾಹಸಿಕ ಬ್ಯಾಟಿಂಗ್‌ನಿಂದ ಕೊನೆಗ ಕೇವಲ 15 ರನ್‌ಗಳಿಂದ ಸೋಲು ಕಂಡಿತು.
ಐಪಿಎಲ್‌ನ 16ನೇ ಸೀಸನ್‌ನಿಂದ ಡೆಲ್ಲಿ ಕ್ಯಾಪಿಟಲ್ಸ್ ಈಗಾಗಲೇ ಹೊರಬಿದ್ದಿದೆ. ಆದರೆ, ಹೊರಬಿದ್ದ ಕ್ಷಣದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಡುವ ರೀತಿಯಲ್ಲಿ ದೊಡ್ಡ ಮಟ್ಟದ ಬದಲಾವಣೆ ಆಗಿದೆ. ಈಗ ಇತರ ತಂಡಗಳ ಪ್ಲೇ ಆಫ್ ಲೆಕ್ಕಾಚಾರವನ್ನು ಹಾಳು ಮಾಡುವ ನಿಟ್ಟಿನಲ್ಲಿ ಅದ್ಭುತವಾಗಿ ಆಡುತ್ತಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ ಬ್ಯಾಟ್ಸ್‌ಮನ್‌ಗಳು ಭರ್ಜರಿಯಾಗಿ ಬ್ಉಆಟಿಂಗ್ 20 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 213 ರನ್ ಗಳಿಸಿದರು. ನಾಯಕ ಡೇವಿಡ್ ವಾರ್ನರ್ 31 ಎಸೆತಗಳಲ್ಲಿ 46 ರನ್, ಪೃಥ್ವಿ ಶಾ 38 ಎಸೆತಗಳಲ್ಲಿ 54 ರನ್, ರೈಲಿ ರೊಸ್ಸೊ 37 ಎಸೆತಗಳಲ್ಲಿ 82 ರನ್ ಮತ್ತು ಫಿಲ್ ಸಾಲ್ಟ್ 14 ಎಸೆತಗಳಲ್ಲಿ 26 ರನ್ ಗಳಿಸಿ ತಂಡದ ದೊಡ್ಡ ಮೊತ್ತಕ್ಕೆ ಕಾರಣವಾದರು. ಈ ಇನ್ನಿಂಗ್ಸ್‌ನಲ್ಲಿ ಡೆಲ್ಲಿ ತಂಡ ಒಟ್ಟು 11 ಸಿಕ್ಸರ್ ಮತ್ತು 20 ಬೌಂಡರಿಗಳನ್ನು ಬಾರಿಸಿತು.
ಪ್ಲೇ ಆಫ್ ರೇಸ್‌ನಲ್ಲಿ ಅಚಲವಾಗಿ ಉಳಿದುಕೊಳ್ಳಲು ಪಂಜಾಬ್ ಕಿಂಗ್ಸ್ ತಂಡ 214 ರನ್ ಬಾರಿಸಬೇಕಿತ್ತು. ಆದರೆ, ನಾಯಕ ಶಿಖರ್ ಧವನ್ ಪ್ರಮುಖ ಪಂದ್ಯದಲ್ಲಿಯೇ ಕೈಕೊಟ್ಟರು. ಎದುರಿಸಿದ ಮೊದಲ ಎಸೆತದಲ್ಲಿಯೇ ಇಶಾಂತ್ ಶರ್ಮಗೆ ವಿಕೆಟ್ ನೀಡಿದರು. ಮತ್ತೊಬ್ಬ ಆರಂಭಿಕ ಆಟಗಾರ ಪ್ರಭ್‌ಸಿಮ್ರನ್ ಸಿಂಗ್ 19 ಎಸೆತಗಳಲ್ಲಿ 22 ರನ್ ಬಾರಿಸುವ ಮೂಲಕ ಹೆಚ್ಚಿನದೇನೂ ವಿಶೇಷವಾಗಿ ಮಾಡಲಿಲ್ಲ. ತಂಡದ ಮೊತ್ತ 50 ರನ್ ಆಗಿದ್ದಾಗ ಅಕ್ಷರ್ ಪಟೇಲ್‌ಗೆ ವಿಕೆಟ್ ನೀಡಿದರು.
ತಂಡ ಈ ಬಾರಿ ಏಕದಿನ ವಿಶ್ವಕಪ್ ಗೆಲ್ಲಲಿದೆ: ಭವಿಷ್ಯ ನುಡಿದ ಮಿಕಿ ಆರ್ಥರ್
ಈ ಹಂತದಲ್ಲಿ ಜೊತೆಯಾದ ಅಥರ್ವ ತೈಡೆ 42 ಎಸೆತಗಳಲ್ಲಿ 55 ರನ್ ಬಾರಿಸಿ ನಿವೃತ್ತಿಯಾಗಿ ಹೊರನಡೆದರು. ಈ ವೇಳೆ ಮೈದಾನಕ್ಕಿಳಿದ ಜಿತೇಶ್ ಶರ್ಮ, ಖಾತೆ ತೆರೆಯದೇ ವಿಕೆಟ್ ಒಪ್ಪಿಸಿದರು. ಸ್ಫೋಟಕ ಆಟಗಾರ ಶಾರುಖ್ ಖಾನ್ ಕೇವಲ 6 ರನ್ ಬಾರಿಸಿ ಔಟಾದಾಗ ಪಂಜಾಬ್ ಕಿಂಗ್ಸ್ ತಂಡ ಸೋಲು ಕಾಣುವುದು ಖಚಿತಗೊಂಡಿತ್ತು. ಆಲ್ರೌಂಡರ್ ಆಟಗಾರ ಸ್ಯಾಮ್ ಖರ್ರನ್ 11 ರನ್ ಬಾರಿಸಿದರೆ, ಹರ್‌ಪ್ರೀತ್ ಬ್ರಾರ್ ಮೊದಲ ಎಸೆತದಲ್ಲಿಯೇ ಔಟಾದರು.
ಹೊಸ ತಂತ್ರಜ್ಞಾನದೊಂದಿಗೆ ಐಪಿಎಲ್‌ಗೆ ಧರ್ಮಶಾಲಾ ಕ್ರಿಕೆಟ್ ಸ್ಟೇಡಿಯಂ ಸಜ್ಜು
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.