ಈ ತಂಡ ಈ ಬಾರಿ ಏಕದಿನ ವಿಶ್ವಕಪ್ ಗೆಲ್ಲಲಿದೆ: ಭವಿಷ್ಯ ನುಡಿದ ಮಿಕಿ ಆರ್ಥರ್

By Naveen KodaseFirst Published May 17, 2023, 4:06 PM IST
Highlights

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಅಕ್ಟೋಬರ್ 05ರಿಂದ ಆರಂಭ
10 ತಂಡಗಳ ನಡುವೆ ಪ್ರಶಸ್ತಿಗಾಗಿ ಕಾದಾಟ
ವಿಶ್ವಕಪ್ ಗೆಲ್ಲಬಲ್ಲ ತಂಡದ ಬಗ್ಗೆ ಭವಿಷ್ಯ ನುಡಿದ ಮಿಕಿ ಆರ್ಥರ್

ಇಸ್ಲಾಮಾಬಾದ್‌(ಮೇ.17): ಮುಂಬರುವ ಅಕ್ಟೋಬರ್‌ನಲ್ಲಿ ಭಾರತದಲ್ಲಿ ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ವಿಶ್ವಕಪ್ ಗೆಲ್ಲಲು ಎಲ್ಲಾ ತಂಡಗಳು ಈಗಾಗಲೇ ಭಾರೀ ಕಸರತ್ತು ನಡೆಸುತ್ತಿವೆ. ಈಗಿರುವ ತಂಡಗಳನ್ನು ಗಮನಿಸಿದರೆ ಪಾಕಿಸ್ತಾನ ಕ್ರಿಕೆಟ್ ತಂಡವು ಈ ಬಾರಿ ವಿಶ್ವಕಪ್ ಗೆಲ್ಲುವ ಎಲ್ಲಾ ಸಾಮರ್ಥ್ಯವಿದೆ ಎಂದು ಪಾಕ್ ತಂಡದ ಡೈರೆಕ್ಟರ್ ಮಿಕಿ ಆರ್ಥರ್ ಅಭಿಪ್ರಾಯಪಟ್ಟಿದ್ದಾರೆ.

ನಮ್ಮ ತಂಡದಲ್ಲಿರುವ ಪ್ರತಿಭೆಗಳನ್ನು ಗಮನಿಸಿದರೆ ಪಾಕಿಸ್ತಾನವು ಈ ಬಾರಿ ವಿಶ್ವಕಪ್ ಜಯಿಸಲಿದೆ. ನಾನು ಆ ಕ್ಷಣವನ್ನು ನೋಡಬಯಸುತ್ತೇನೆ. ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಅದ್ಭುತವಾದ ಪ್ರತಿಭಾನ್ವಿತ ಆಟಗಾರರಿದ್ದಾರೆ. ಅವರೆಲ್ಲರೂ ತಂಡವನ್ನು ಎಷ್ಟು ದೂರ ಕೊಂಡೊಯ್ಯಲಿದ್ದಾರೆ ಎನ್ನುವುದನ್ನು ನೋಡಲು ಉತ್ಸುಕನಾಗಿದ್ದೇನೆ. ಅವರು ಮಹತ್ವದ ಟೂರ್ನಿಗಳಲ್ಲಿ ತಮ್ಮ ತಮ್ಮ ಪಾತ್ರವನ್ನು ಹೇಗೆ ನಿರ್ವಹಿಸಲಿದ್ದಾರೆ ಎನ್ನುವುದನ್ನು ವೀಕ್ಷಿಸಲು ಕುತೂಹಲದಿಂದ ಕಾಯುತ್ತಿದ್ದೇನೆ ಎಂದು ಮಿಕಿ ಆರ್ಥರ್ ಹೇಳಿದ್ದಾರೆ.

ಐಸಿಸಿ ಆದಾಯ ಹಂಚಿಕೆ ಬಗ್ಗೆ ಪಾಕಿಸ್ತಾನ ಆಕ್ಷೇಪ!

ನಾವು ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಗೆ ಸಕಲ ಸಿದ್ದತೆಗಳನ್ನು ನಡೆಸಿದ್ದೇವೆ. ಇನ್ನು ಅಭ್ಯಾಸದ ವೇಳೆ ನಾವು ಯಾವ ವಿಭಾಗದಲ್ಲಿ ಮತ್ತಷ್ಟು ಸುಧಾರಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಗಮನ ಹರಿಸಿದ್ದೇವೆ. ಅದರಲ್ಲೂ ಮುಖ್ಯವಾಗಿ ಮಧ್ಯದ ಓವರ್‌ಗಳಲ್ಲಿ ಸ್ಪಿನ್ ದಾಳಿಯನ್ನು ಎದುರಿಸುವ ಬಗ್ಗೆ ಹಾಗೂ ನಮ್ಮ ಶಕ್ತಿಯಾದ ಸ್ವೀಪ್ ಮಾಡುವ ಬಗ್ಗೆ ಹೆಚ್ಚು ಗಮನ ಹರಿಸಿದ್ದೇವೆ ಎಂದು ಮಿಕಿ ಆರ್ಥರ್ ಹೇಳಿದ್ದಾರೆ.

ಇನ್ನು ಇದಷ್ಟೇ ಅಲ್ಲದೇ ನಾವು ಮ್ಯಾಚ್ ಫಿನಿಶರ್ ಕಡೆಗೂ ಹೆಚ್ಚು ಗಮನ ಹರಿಸಿದ್ದೇವೆ. ನಮ್ಮ ಹುಡುಗರು ಬೌಂಡರಿ ಸಿಕ್ಸರ್ ಬಾರಿಸುವ ಮೂಲಕ ಪಂದ್ಯವನ್ನು ಮುಗಿಸುವುದರ ಕಡೆಗೆ ಒತ್ತು ನೀಡುವ ಮೂಲಕ ನಮ್ಮ ಬೆಂಚ್ ಸ್ಟ್ರೆಂಥ್ ಹೆಚ್ಚಿಸಿಕೊಂಡಿದ್ದೇವೆ. ಇನ್ನು ಬೌಲಿಂಗ್ ವಿಭಾಗದ ಬಗ್ಗೆ ಹೇಳಬೇಕೆಂದರೆ, ನಮ್ಮಲ್ಲಿ ಒಳ್ಳೆಯ ಬೌಲರ್‌ಗಳಿದ್ದಾರೆ ಎಂದು ಮಿಕಿ ಆರ್ಥರ್ ಹೇಳಿದ್ದಾರೆ.

ಎಲ್ಲವೂ ಅಂದುಕೊಂಡಂತೆ ಆದರೆ ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಅಕ್ಟೋಬರ್ 05ರಿಂದ ಆರಂಭವಾಗಲಿದ್ದು, ನಾಗ್ಪುರ, ಬೆಂಗಳೂರು, ತಿರುವನಂತಪುರಂ, ಮುಂಬೈ, ಡೆಲ್ಲಿ, ಲಖನೌ, ಗುವಾಹಟಿ, ಹೈದರಾಬಾದ್, ಕೋಲ್ಕತಾ, ರಾಜ್‌ಕೋಟ್, ಇಂದೋರ್ ಹಾಗೂ ಧರ್ಮಶಾಲಾದಲ್ಲಿ ವಿಶ್ವಕಪ್‌ ಚಾಂಪಿಯನ್ ಪಟ್ಟಕ್ಕಾಗಿ ತಂಡಗಳು ಕಾದಾಡಲಿವೆ.

ಈ ಎಲ್ಲಾ ನಗರಗಳ ಪೈಕಿ ಕೇವಲ 7 ನಗರಗಳ ಸ್ಟೇಡಿಯಂಗಳಲ್ಲಿ ಮಾತ್ರ ಟೀಂ ಇಂಡಿಯಾ ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯಗಳನ್ನು ಆಡಲಿದೆ. ಅಹಮದಾಬಾದ್‌ನಲ್ಲಿ ಭಾರತ ತಂಡವು ಎರಡು ಪಂದ್ಯಗಳನ್ನಾಡುವ ಸಾಧ್ಯತೆಯಿದೆ.  

ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ 10 ತಂಡಗಳು ಪಾಲ್ಗೊಳ್ಳುತ್ತಿದ್ದು, 48 ಪಂದ್ಯಗಳನ್ನಾಡಲಿವೆ. ಭಾರತ, ಇಂಗ್ಲೆಂಡ್‌, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಆಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಈಗಾಗಲೇ ವಿಶ್ವಕಪ್ ಟೂರ್ನಿಗೆ ನೇರ ಅರ್ಹತೆ ಗಿಟ್ಟಿಸಿಕೊಂಡಿವೆ. ಇನ್ನು ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ತಂಡ ಕೂಡಾ ವಿಶ್ವಕಪ್ ಟೂರ್ನಿಗೆ ನೇರ ಅರ್ಹತೆ ಪಡೆಯಲು ಯಶಸ್ವಿಯಾಗಿದೆ.  

ಇನ್ನೆರಡು ಸ್ಥಾನಗಳಿಗಾಗಿ ಜೂನ್ ಹಾಗೂ ಜುಲೈನಲ್ಲಿ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿದ್ದು, ಜಿಂಬಾಬ್ವೆಯಲ್ಲಿ ನಡೆಯಲಿರುವ ಅರ್ಹತಾ ಸುತ್ತಿನ ಪಂದ್ಯದಲ್ಲಿ ಮಾಜಿ ಚಾಂಪಿಯನ್‌ಗಳಾದ ವೆಸ್ಟ್‌ ಇಂಡೀಸ್, ಶ್ರೀಲಂಕ ಸೇರಿದಂತೆ ಆತಿಥೇಯ ಜಿಂಬಾಬ್ವೆ, ನೆದರ್‌ಲೆಂಡ್ಸ್‌, ಐರ್ಲೆಂಡ್‌, ನೇಪಾಳ, ಓಮನ್, ಸ್ಕಾಟ್ಲೆಂಡ್, ಯುಎಇ ತಂಡಗಳು ಸೆಣಸಾಡಲಿವೆ.

click me!