IPL 2022: ಚುಟುಕು ಕ್ರಿಕೆಟ್ ಹಬ್ಬ ಐಪಿಎಲ್ ಆರಂಭಕ್ಕೆ ಡೇಟ್ ಫಿಕ್ಸ್‌, ಅಧಿಕೃತ ಪ್ರಕಟಣೆ ಬಾಕಿ..!

By Kannadaprabha News  |  First Published Feb 25, 2022, 7:32 AM IST

* ಬಹುನಿರೀಕ್ಷಿತ 15ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೆ ದಿನಾಂಕ ನಿಗದಿ

* ಲೀಗ್ ಹಂತದ ಪಂದ್ಯಗಳಿಗೆ ಮುಂಬೈ ಹಾಗೂ ಪುಣೆ ಆತಿಥ್ಯ

* ಐಪಿಎಲ್ ಟೂರ್ನಿಯು ಮಾರ್ಚ್‌ 26ರಿಂದ ಆರಂಭಗೊಳ್ಳಲಿದ್ದು ಮೇ 29ಕ್ಕೆ ಫೈನಲ್‌ ಪಂದ್ಯ ನಡೆಯಲಿದೆ


ನವದೆಹಲಿ(ಫೆ.25): 15ನೇ ಆವೃತ್ತಿಯ ಐಪಿಎಲ್‌ ಟಿ20 (IPL 2022) ಟೂರ್ನಿಯು ಮಾರ್ಚ್‌ 26ರಿಂದ ಆರಂಭಗೊಳ್ಳಲಿದ್ದು ಮೇ 29ಕ್ಕೆ ಫೈನಲ್‌ ಪಂದ್ಯ ನಡೆಯಲಿದೆ. ಗುರುವಾರ ನಡೆದ ಐಪಿಎಲ್‌ ಆಡಳಿತ ಮಂಡಳಿ ಸಭೆಯಲ್ಲಿ ದಿನಾಂಕಗಳನ್ನು ನಿಗದಿಪಡಿಸಲಾಗಿದೆ. ಈ ಬಗ್ಗೆ ಐಪಿಎಲ್‌ ಅಧ್ಯಕ್ಷ ಬ್ರಿಜೇಶ್‌ ಪಟೇಲ್‌ ಮಾಧ್ಯಮವೊಂದಕ್ಕೆ ಖಚಿತಪಡಿಸಿದ್ದಾರೆ. ಕೋವಿಡ್‌ ಪ್ರಕರಣಗಳು (COVID 19) ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ 15ನೇ ಆವೃತ್ತಿಯ ಐಪಿಎಲ್‌ ಟೂರ್ನಿಯನ್ನು ಭಾರತದಲ್ಲೇ ನಡೆಸಲು ನಿರ್ಧರಿಸಿರುವ ಬಿಸಿಸಿಐ(BCCI), ಮಹಾರಾಷ್ಟ್ರದಲ್ಲಿ ಟೂರ್ನಿಯನ್ನು ಆಯೋಜಿಸಲು ಸಿದ್ಧತೆ ಆರಂಭಿಸಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ.

ಲೀಗ್‌ ಹಂತದ ಪಂದ್ಯಗಳನ್ನು ಮುಂಬೈ (Mumbai) ಹಾಗೂ ಪುಣೆಯಲ್ಲಿ (Pune) ನಡೆಸಲು ನಿರ್ಧರಿಸಲಾಗಿದೆ. ಮುಂಬೈನ 3 ಕ್ರೀಡಾಂಗಣ ಹಾಗೂ ಪುಣೆಯ 1 ಕ್ರೀಡಾಂಗಣದಲ್ಲಿ ಪಂದ್ಯಾವಳಿ ನಡೆಯಲಿದೆ. ಮುಂಬೈಯಲ್ಲಿರುವ ವಾಂಖೆಡೆ ಕ್ರೀಡಾಂಗಣದಲ್ಲಿ 20, ಬ್ರಬೋರ್ನ್‌ 15 ಹಾಗೂ ಡಿ.ವೈ.ಪಾಟೀಲ್‌ ಕ್ರೀಡಾಂಗಣದಲ್ಲಿ 20 ಪಂದ್ಯಗಳು ನಿಗದಿಯಾಗಿವೆ. ಪುಣೆಯಲ್ಲಿರುವ ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆಯ ಕ್ರೀಡಾಂಗಣದಲ್ಲಿ 15 ಪಂದ್ಯಗಳು ನಡೆಯಲಿವೆ ಎಂದು ತಿಳಿದುಬಂದಿದೆ.

Latest Videos

undefined

ಆದರೆ ಪ್ಲೇ-ಆಫ್‌ ಪಂದ್ಯಗಳು ಎಲ್ಲಿ ನಡೆಸಬೇಕೆಂದು ಬಿಸಿಸಿಐ ಇನ್ನೂ ನಿರ್ಧರಿಸಿಲ್ಲ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium) ನಾಕೌಟ್‌ ಪಂದ್ಯಗಳು ನಡೆಯಲಿದೆ ಎಂದು ಹೇಳಲಾಗುತ್ತಿದ್ದು, ಶೀಘ್ರದಲ್ಲೇ ಈ ಬಗ್ಗೆ ಬಿಸಿಸಿಐ ಅಂತಿಮ ನಿರ್ಧಾರ ಪ್ರಕಟಿಸಲಿದೆ.

ಪ್ರೇಕ್ಷಕರಿಗೆ ಅನುಮತಿ

ಕಳೆದೆರಡು ಆವೃತ್ತಿಗಳಲ್ಲಿ ಐಪಿಎಲ್‌ ಪಂದ್ಯ ವೀಕ್ಷಣೆಗೆ ಅವಕಾಶ ಸಿಗದೆ ನಿರಾಸೆ ಅನುಭವಿಸಿದ್ದ ಕ್ರೀಡಾಭಿಮಾನಿಗಳಿಗೆ ಈ ಬಾರಿ ಸಿಹಿ ಸುದ್ದಿ ಸಿಕ್ಕಿದೆ. ಈ ಬಗ್ಗೆ ಮತನಾಡಿರುವ ಐಪಿಎಲ್‌ ಮುಖ್ಯಸ್ಥ ಬ್ರಿಜೇಶ್‌ ಪಟೇಲ್‌, ಪ್ರೇಕ್ಷಕರಿಗೆ ಅನುಮತಿ ಸಿಗುವ ಕುರಿತು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ‘ಮಾ.26ಕ್ಕೆ ಐಪಿಎಲ್‌ ಆರಂಭವಾಗಲಿದ್ದು, ವೇಳಾಪಟ್ಟಿ ಶೀಘ್ರ ಬಿಡುಗಡೆಯಾಗಲಿದೆ. ಈ ಬಾರಿ ಪ್ರೇಕ್ಷಕರಿಗೆ ಅವಕಾಶ ನೀಡಲು ಉದ್ದೇಶಿಸಿದ್ದೇವೆ. ಸರ್ಕಾರದ ನಿಯಮ ಪ್ರಕಾರ ಶೇ.25 ಅಥವಾ 50ರಷ್ಟು ಪ್ರೇಕ್ಷಕರಿಗೆ ಅನುಮತಿ ಸಿಗುವ ಸಾಧ್ಯತೆ ಇದೆ’ ಎಂದು ಹೇಳಿದ್ದಾರೆ.

IPL 2022: ಮುಂಬೈನಲ್ಲಿ 55 ಪಂದ್ಯಗಳು, ಪುಣೆಯಲ್ಲಿ 15 ಪಂದ್ಯಗಳು..?

ಒತ್ತಡ ತಪ್ಪಿಸಲು ಆರ್‌ಸಿಬಿ ನಾಯಕತ್ವ ಬಿಟ್ಟೆ: ವಿರಾಟ್‌

ಮುಂಬೈ: ಐಪಿಎಲ್‌ನ ರಾಯಲ್‌ ಚಾಲೆಂಜ​ರ್ಸ್‌ ಬೆಂಗಳೂರು(ಆರ್‌ಸಿಬಿ) ತಂಡದ ನಾಯಕತ್ವದಿಂದ ಕೆಳಗಿಳಿದಿರುವ ವಿರಾಟ್‌ ಕೊಹ್ಲಿ (Virat Kohli), ತಮ್ಮ ನಿರ್ಧಾರಕ್ಕೆ ಕೆಲಸದ ಒತ್ತಡ ಕಾರಣ ಎಂದಿದ್ದಾರೆ. 

ಗುರುವಾರ ಆರ್‌ಸಿಬಿಗೆ (RCB) ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ನಿರ್ವಹಿಸಲು ಸಾಧ್ಯವಿಲ್ಲದ್ದನ್ನು ನಾನು ಮಾಡಲು ಹೋಗುವುದಿಲ್ಲ. ನನ್ನಿಂದ ಎಷ್ಟು ಆಗುತ್ತೋ ಅಷ್ಟನ್ನೇ ಮಾಡುತ್ತೇನೆ. ಆದರೆ ನನ್ನ ನಿರ್ಧಾರವನ್ನು ಸಾರ್ವಜನಿಕರಿಗೆ ಅರ್ಥ ಮಾಡಿಸಲು ಬಹಳ ಕಷ್ಟವಿದೆ. ಇದರಲ್ಲಿ ಯಾವುದೇ ಆಶ್ಚರ್ಯಕರ ಸಂಗತಿಯಿಲ್ಲ. ನಾನು ನನ್ನ ಕೆಲಸದ ಹೊರೆಯನ್ನು ತಗ್ಗಿಸಲು ನಾಯಕತ್ವ ಬಿಟ್ಟಿದ್ದೇನೆ. ನಾನು ಏನಾದರೂ ನಿರ್ಧಾರ ಕೈಗೊಂಡರೆ ಆಗಲೇ ಮಾಡಿ ಬಿಡುತ್ತೇನೆ. ಅದಕ್ಕಾಗಿ ಕಾಯುತ್ತಾ ಕೂರುವುದಿಲ್ಲ’ ಎಂದಿದ್ದಾರೆ. 

ಐಪಿಎಲ್‌ನಿಂದ ಗಾಯಾಳು ದೀಪಕ್‌ ಚಹರ್‌ ಔಟ್‌?

ನವದೆಹಲಿ: ಇತ್ತೀಚೆಗೆ ನಡೆದಿದ್ದ ಮೆಗಾ ಹರಾಜಿನಲ್ಲಿ (IPL Mega Auction) 14 ಕೋಟಿ ರು.ಗೆ ಚೆನ್ನೈ ತಂಡದ ಪಾಲಾಗಿದ್ದ ವೇಗದ ಬೌಲಿಂಗ್‌ ಆಲ್ರೌಂಡರ್‌ ದೀಪಕ್‌ ಚಹರ್‌ (Deepak Chahar) ಐಪಿಎಲ್‌ ಟೂರ್ನಿಯಿಂದ ಹೊರಬೀಳುವ ಸಾಧ್ಯತೆ ಇದೆ. ವಿಂಡೀಸ್‌ ವಿರುದ್ಧದ 3ನೇ ಪಂದ್ಯದ ವೇಳೆ ಸ್ನಾಯು ಸೆಳತಕ್ಕೆ ಒಳಗಾಗಿದ್ದ ಚಹರ್‌, ಲಂಕಾ ವಿರುದ್ಧದ ಟಿ20 ಸರಣಿಯಿಂದ ಹೊರಬಿದ್ದಿದ್ದು, ಕನಿಷ್ಠ 6ರಿಂದ 8 ವಾರಗಳ ಕಾಲ ಅವರು ಕ್ರಿಕೆಟ್‌ನಿಂದ ದೂರ ಉಳಿಯಬೇಕಾಗಬಹುದು ಎನ್ನಲಾಗಿದೆ.
 

click me!