
ಮುಂಬೈ(ಏ.27): ಈ ಸೀಸನ್ ಐಪಿಎಲ್‌ನಲ್ಲಿ ಎಲ್ಲವೂ ಉಲ್ಟಾ ಪಲ್ಟಾ ಆಗ್ತಿದೆ. ಬಲಿಷ್ಠ ಎನಿಸಿಕೊಂಡಿದ್ದ ತಂಡಗಳೆಲ್ಲಾ ಸೋಲುತ್ತಿವೆ. ದುರ್ಬಲ ಅಂದುಕೊಂಡಿದ್ದ ತಂಡಗಳು ಗೆಲ್ಲುತ್ತಿವೆ. ಮಾಜಿ ಚಾಂಪಿಯನ್ಸ್ ಮಕಾಡೆ ಮಲಗಿದ್ರೆ, ಹೊಸ ತಂಡಗಳು ಅದ್ಭುತ ಪ್ರದರ್ಶನ ನೀಡ್ತಿವೆ. ಸ್ಟಾರ್ ಆಟಗಾರರು ರನ್ ಗಳಿಸಲು, ವಿಕೆಟ್ ಪಡೆಯಲು ಪರದಾಡುತ್ತಿದ್ದಾರೆ. ಆದರೆ ಯಂಗ್‌ಸ್ಟರ್ಸ್ ಮಾತ್ರ ಈ ಸೀಸನ್ನಲ್ಲಿ ಅದ್ಭುತ ಪ್ರದರ್ಶನ ನೀಡ್ತಿದ್ದಾರೆ. ಅವರಾಡುತ್ತಿರುವ ತಂಡಗಳು ಸೋಲಿನ ನಡುವೆಯೂ ಯುವ ಆಟಗಾರರು ಗಮನ ಸೆಳೆದಿದ್ದಾರೆ.
ಮುಂಬೈನಲ್ಲಿ ಬೇಬಿ ಎಬಿಡಿ ಆರ್ಭಟ:
ಸೌತ್ ಆಫ್ರಿಕಾದ ಬೇಬಿ ಎಬಿಡಿ ಎಂದೇ ಖ್ಯಾತರಾಗಿರುವ ಡೆವಾಲ್ಡ್ ಬ್ರೇವಿಸ್ (Dewald Brevis), ಈ ವರ್ಷದ ಅಂಡರ್-19 ವಿಶ್ವಕಪ್ನಲ್ಲಿ (ICC U19 World Cup) ಅದ್ಭುತ ಪ್ರದರ್ಶನ ನೀಡಿ ಐಪಿಎಲ್ಗೆ ಎಂಟ್ರಿ ಕೊಟ್ಟಿದ್ದಾರೆ. 3 ಕೋಟಿಗೆ ಮುಂಬೈ ಇಂಡಿಯನ್ಸ್ (Mumbai Indians) ಪಾಲಾಗಿರುವ ಬ್ರೇವಿಸ್, 6 ಪಂದ್ಯಗಳಿಂದ 155ರ ಸ್ಟ್ರೈಕ್ರೇಟ್ನಲ್ಲಿ 129 ರನ್ ಬಾರಿಸಿದ್ದಾರೆ. ಕೆಕೆಆರ್ ವಿರುದ್ಧ 29, ಪಂಜಾಬ್ ಕಿಂಗ್ಸ್ ವಿರುದ್ಧ 49 ಮತ್ತು ಲಖನೌ ಸೂಪರ್ ಜೈಂಟ್ಸ್ ವಿರುದ್ಧ 31 ರನ್ ಹೊಡೆದಿದ್ದಾರೆ. ಆ ಮೂರು ಪಂದ್ಯಗಳನ್ನೂ ಮುಂಬೈ ಸೋತರೂ ಬ್ರೇವಿಸ್ ಸ್ಫೋಟಕ ಬ್ಯಾಟಿಂಗ್ ಎಲ್ಲರ ಗಮನ ಸೆಳೆಯಿತು. ರಾಹುಲ್ ಚಹರ್ಗೆ ಸತತ 4 ಸಿಕ್ಸರ್ ಸಿಡಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು.
ವೇಗಕ್ಕೆ ಮತ್ತೊಂದು ಹೆಸರು ಉಮ್ರಾನ್ ಮಲಿಕ್:
ಈ ಐಪಿಎಲ್‌ನಲ್ಲಿ ಗಮನ ಸೆಳೆಯುತ್ತಿರುವ ಮತ್ತೊಬ್ಬ ಯುವ ಆಟಗಾರ ಅಂದ್ರೆ ಅದು ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡದ ಉಮ್ರಾನ್ ಮಲಿಕ್ (Umran Malik). ತನ್ನ ವೇಗ ಹಾಗೂ ನಿಖರ ಬೌಲಿಂಗ್ ದಾಳಿಯ ಮೂಲಕ ಉಮ್ರಾನ್, ಕ್ರಿಕೆಟ್ ಪ್ರೇಮಿಗಳ ಮನ ಗೆದ್ದಿದ್ದಾರೆ. ಜಮ್ಮು ಕಾಶ್ಮೀರದ 22ರ ಹರೆಯದ ಯುವ ಬೌಲರ್, 150 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡ್ತಿದ್ದಾರೆ. 7 ಪಂದ್ಯಗಳಿಂದ 10 ವಿಕೆಟ್ ಪಡೆದು ಎದುರಾಳಿಗೆ ಸಿಂಹಸ್ವಪ್ನರಾಗಿದ್ದಾರೆ. ಸನ್ ರೈಸರ್ಸ್ ಸಹ ಸತತ ಐದು ಪಂದ್ಯ ಗೆದ್ದಿದೆ.
ಮುಂಬೈ ಇಂಡಿಯನ್ಸ್ನಲ್ಲಿ ಅನಾವರಣಗೊಂಡ ತಿಲಕ್:
ಮುಂಬೈ ಇಂಡಿಯನ್ಸ್ ತಂಡ ಸತತ 8 ಪಂದ್ಯ ಸೋತು, ಪ್ಲೇ ಆಫ್ ಕನಸನ್ನ ನುಚ್ಚುನೂರು ಮಾಡಿಕೊಂಡಿದೆ. ಮುಂಬೈನಲ್ಲಿರುವ ಸ್ಟಾರ್ ಆಟಗಾರರೆಲ್ಲಾ ವಿಫಲರಾದ್ರೂ ಹೈದ್ರಾಬಾದ್ ಹೈದ ತಿಲಕ್ ವರ್ಮಾ (Tilak Verma) ಮಾತ್ರ ಅದ್ಭುತ ಪ್ರದರ್ಶನದಿಂದ ಭರವಸೆ ಮೂಡಿಸಿದ್ದಾರೆ. 19 ವರ್ಷದ ಯುವ ಬ್ಯಾಟರ್, 8 ಪಂದ್ಯಗಳಿಂದ 45.33ರ ಸರಾಸರಿಯಲ್ಲಿ 272 ರನ್ ಬಾರಿಸಿದ್ದು, ಮುಂಬೈ ಪರ ಈ ಸೀಸನ್ನಲ್ಲಿ ಅತಿಹೆಚ್ಚು ರನ್ ಹೊಡೆದ ಸಾಧನೆ ಮಾಡಿದ್ದಾರೆ.
ICC T20 World Cupಗೂ ಮುನ್ನ ಟೆನ್ಷನ್ ತಂದೊಡ್ಡಿದ ಸ್ಟಾರ್ ಪ್ಲೇಯರ್ಸ್..!
ಡೆಲ್ಲಿಯಲ್ಲಿ ಹುಟ್ಟಿ ಲಖನೌದಲ್ಲಿ ಅರಳಿದ ಪ್ರತಿಭೆ ಬದೋನಿ:
22 ವರ್ಷದ ಆಯುಷ್ ಬದೋನಿ(Ayush Badoni), ಭಾರತ ಅಂಡರ್-19 ಪ್ಲೇಯರ್ ಆಗಿದ್ದರೂ ಕಳೆದೆರಡು ಸಲ ಐಪಿಎಲ್ ಬಿಡ್ನಲ್ಲಿ ಅನ್‌ಸೋಲ್ಡ್ ಆಗಿದ್ದರು. ಆದ್ರೆ ಈ ಸಲ ಲಖನೌ ಸೂಪರ್ ಜೈಂಟ್ಸ್ (Lucknow Supergiants) ತಂಡ ಬದೋನಿಯನ್ನು ಖರೀದಿಸ್ತು. ಲಖನೌ ತಂಡಕ್ಕೆ ಈತನೇ ಈಗ ಮ್ಯಾಚ್ ಫಿನಿಶರ್. 8 ಪಂದ್ಯದಿಂದ ಒಂದು ಅರ್ಧಶತಕ ಹೊಡೆದಿದ್ದರೂ, ಚಿಕ್ಕ ಚಿಕ್ಕ ಇನ್ನಿಂಗ್ಸ್ ಆಡಿ ಕಡಿಮೆ ಬಾಲ್ನಲ್ಲಿ ಹೆಚ್ಚು ರನ್ ಹೊಡೆದಿದ್ದಾರೆ. ಈ ಮೂಲಕ ಭವಿಷ್ಯದ ಸ್ಟಾರ್ ಆಟಗಾರನಾಗುವ ಭರವಸೆ ಮೂಡಿಸಿದ್ದಾರೆ.
ವಿವಾದ ಹುಟ್ಟಿಸಿದಷ್ಟೇ ಭರವಸೆ ಹುಟ್ಟಿಸಿದ ತೀಕ್ಷಣ:
ಶ್ರೀಲಂಕಾದ ಯುವ ಆಟಗಾರ ಮಹೀಶ್ ತೀಕ್ಷಣ (Maheesh Theekshana) ಅವರನ್ನ ಸಿಎಸ್ಕೆ 70 ಲಕ್ಷಕ್ಕೆ ಖರೀದಿಸೋ ಮೂಲಕ ದೊಡ್ಡ ವಿವಾದವನ್ನೇ ಸೃಷ್ಟಿಸಿದ್ದರು. ಸಿಎಸ್ಕೆ ಪ್ಲೇ ಆಫ್ ಕನಸನ್ನು ಬಿಟ್ಟಿದೆ. ಆದ್ರೂ ಮಹೀಶ್ ಮಾತ್ರ ಉತ್ತಮ ಪ್ರದರ್ಶನದಿಂದ ಗಮನ ಸೆಳೆಯುತ್ತಿದ್ದು, 5 ಪಂದ್ಯಗಳಲ್ಲಿ 8 ವಿಕೆಟ್ ಸಂಪಾದಿಸಿದ್ದಾರೆ. ಈ ಪ್ರದರ್ಶನದಿಂದ ಐಪಿಎಲ್‌ನಲ್ಲಿ ಮಾತ್ರವಲ್ಲದೆ ಲಂಕಾ ಪರವಾಗಿಯೂ ಸ್ಟಾರ್ ಆಟಗಾರನಾಗುವ ವಿಶ್ವಾಸ ಮೂಡಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.