
ಮುಂಬೈ(ಏ.10): ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಶಿಮ್ರೋನ್ ಹೆಟ್ಮೆಯರ್ ಹಾಗೂ ರವಿಚಂದ್ರನ್ ಅಶ್ವಿನ್ ಜೊತೆಯಾಟದಿಂದ ರಾಜಸ್ಥಾನ ರಾಯಲ್ಸ್ ಅಲ್ಪ ಮೊತ್ತದ ಭೀತಿಯಿಂದ ಪಾರಾಯಿತು. ಜೊತೆಗೆ ಉತ್ತಮ ಹೋರಾಟ ನೀಡಿ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಟಾಪ್ ಆರ್ಡರ್ ಬ್ಯಾಟ್ಸ್‌ಮನ್ ಕುಸಿತದಿಂದ ರಾಜಸ್ಥಾನ ರಾಯಲ್ಸ್ 6 ವಿಕೆಟ್ ನಷ್ಟಕ್ಕೆ 165 ರನ್ ಸಿಡಿಸಿತು.
ರಾಜಸ್ಥಾನ ರಾಯಲ್ಸ್ ಸ್ಫೋಟಕ ಬ್ಯಾಟ್ಸ್‌ಮನ್ ದಂಡೇ ಹೊಂದಿದೆ. ಆದರೆ ಲಖನೌ ತಂಡದ ದಾಳಿಗೆ ರಾಜಸ್ಥಾನ ಅಬ್ಬರಿಸಲು ಸಾಧ್ಯವಾಗಲಿಲ್ಲ. ಆರಂಭದಲ್ಲೇ ಜೋಸ್ ಬಟ್ಲರ್ ವಿಕೆಟ್ ಪತನಗೊಂಡಿತು. ಬಟ್ಲರ್ 13 ರನ್ ಸಿಡಿಸಿ ಔಟಾದರು. ಇತ್ತ ನಾಯಕ ಸಂಜು ಸ್ಯಾಮ್ಸನ್ 13 ರನ್ ಸಿಡಿಸಿ ನಿರ್ಗಮಿಸಿದರು.
RCBಗೆ ಆಘಾತ, ಹರ್ಷಲ್ ಪಟೇಲ್ ಸಹೋದರಿ ನಿಧನ, ಮುಂಬೈಗೆ ತೆರಳಿದ ವೇಗಿ
ಈ ವೇಳೆ ಕನ್ನಡಿಗ ಕೆ ಗೌತಮ್ ಬೌಲಿಂಗ್ ರಾಜಸ್ಥಾನ ತಂಡವನ್ನು ಇನ್ನಿಲ್ಲದಂತೆ ಕಾಡಿತು. ದಿಟ್ಟ ಹೋರಾಟದ ಸೂಚನೆ ನೀಡಿದ ದೇವದತ್ ಪಡಿಕ್ಕಲ್ 29 ರನ್ ಸಿಡಿಸಿ ಗೌತಮ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ರಸಿ ವ್ಯಾಂಡರ್ ಡಸೆನ್ ಕೇವಲ 4 ರನ್ ಸಿಡಿಸಿ ಔಟಾದರು.
ಶಿಮ್ರೋನ್ ಹೆಟ್ಮೆಯರ್ ಹಾಗೂ ಆರ್ ಅಶ್ವಿನ್ ಜೊತೆಯಾಟದಿಂದ ರಾಜಸ್ಥಾನ ರಾಯಲ್ಸ್ ಚೇತರಿಸಿಕೊಂಡಿತು. ಇವರಿಬ್ಬರ ಜೊತೆಯಾಟದಿಂದ ರಾಜಸ್ಥಾನ ಅಲ್ಪ ಮೊತ್ತದ ಭೀತಿಯಿಂದ ಪಾರಾಯಿತು. ಅಂತಿಮ ಹಂತದಲ್ಲಿ ಶಿಮ್ರೋನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇತ್ತ ಆರ್ ಅಶ್ವಿನ್ ರಿಟೈರ್ಡ್ ಹರ್ಟ್ ಆಗಿ ಪೆವಿಲಿಯನ್‌ಗೆ ವಾಪಾಸದರು. ಅಶ್ವಿನ್ 28 ರನ್ ಸಿಡಿಸಿದರು.
ರಿಯಾನ್ ಪರಾಗ್ 8 ರನ್ ಸಿಡಿಸಿ ಔಟಾದರು. ಹೆಟ್ಮೆಯರ್ 36 ಎಸೆತದಲ್ಲಿ 6 ಭರ್ಜರಿ ಸಿಕ್ಸರ್ ಹಾಗೂ ಒಂದು ಬೌಂಡರಿ ಮೂಲಕ 36 ಎಸೆತದಲ್ಲಿ 59 ರನ್ ಸಿಡಿಸಿದರು.ಈ ಮೂಲಕ ರಾಜಸ್ಥಾನ ರಾಯಲ್ಸ್ 6 ವಿಕೆಟ್ ನಷ್ಟಕ್ಕೆ 165 ರನ್ ಸಿಡಿಸಿತು.
IPL 2022: ಅನಿಲ್ ಕುಂಬ್ಳೆ ಬೆನ್ನಿಗೆ ಬಿದ್ದ ಬೇತಾಳ..!
ಡೆಲ್ಲಿಗೆ ಗೆಲುವಿನ ಟಾನಿಕ್
ಇಂದು ನಡೆದ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನ ನಗೆ ಬೀರಿದೆ. ಕೋಲ್ಕತಾ ನೈಟ್ ರೈಡರ್ಸ್ ವಿರುದ್ದ 215 ರನ್ ಸಿಡಿಸಿದ ಡೆಲ್ಲಿ ಕ್ಯಾಪಿಟಲ್ಸ್ 44 ರನ್ ಗೆಲವು ದಾಖಲಿಸಿತು. ಪೃಥ್ವಿ ಶಾ ಹಾಗೂ ಡೇವಿಡ್ ವಾರ್ನರ್ ಸ್ಪೋಟಕ ಆರಂಭ ನೀಡಿದ್ದರು. ವಾರ್ನರ್ 61 ರನ್ ಸಿಡಿಸಿದರೆ, ಪೃಥ್ವಿ ಶಾ 51 ರನ್ ಸಿಡಿಸಿದರು. ಇನ್ನು ಅಕ್ಸರ್ ಪಟೇಲ್ ಅಜೇಯ 22 ಹಾಗೂ ಶಾರ್ದೂಲ್ ಠಾಕೂರ್ ಅಜೇಯ 29 ರನ್ ಸಿಡಿಸಿದರು. ಡೆಲ್ಲಿ 5 ವಿಕೆಟ್ ನಷ್ಟಕ್ಕೆ 215 ರನ್ ಸಿಡಿಸಿತು. ಈ ಗುರಿ ಬೆನ್ನಟ್ಟಿದ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ನಾಯಕ ಶ್ರೇಯಸ್ ಅಯ್ಯರ್ 54 ರನ್ ಕಾಣಿಕೆ ನೀಡಿದರು. ನಿತೀಶ್ ರಾಣಾ 30, ಆ್ಯಂಡ್ರೆ ರಸೆಲ್ 24 ರನ್ ಕಾಣಿಕೆ ನೀಡಿದರು. ಆದರೆ ಇತರ ಬ್ಯಾಟ್ಸ್‌ಮನ್‌ಗಳು ಅಬ್ಬರಿಸಲಿಲ್ಲ. ಖಲೀಲ್ ಅಹಮ್ಮದ್ ದಾಳಿಯಿಂದ ಕೆಕೆಆರ್ 19.4 ಓವರ್‌ಗಳಲ್ಲಿ 171 ರನ್‌ಗೆ ಆಲೌಟ್ ಆದರು.
ಸದ್ಯ ಅಂಕಪಟ್ಟಿಯಲ್ಲಿ ಲಖನೌ ಸೂಪರ್ ಜೈಂಟ್ಸ್ 4ನೇ ಸ್ಥಾನದಲ್ಲಿದೆ. 4 ಪಂದ್ಯದಲ್ಲಿ 3 ಗೆಲುವು ದಾಖಲಿಸಿ 6 ಅಂಕಗಳನ್ನು ಸಂಪಾದಿಸಿದೆ. ಇತ್ತ 5ನೇ ಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್ 3 ಪಂದ್ಯದಲ್ಲಿ 2 ಗೆಲುವು ಸಾಧಿಸಿ 4 ಅಂಕ ಸಪಾದಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.