IPL Playoffs ರದ್ದಾಗುವುದನ್ನು ತಡೆಯಲು ಬಿಸಿಸಿಐ ಮಾಸ್ಟರ್ ಪ್ಲಾನ್..!

By Kannadaprabha NewsFirst Published May 24, 2022, 11:46 AM IST
Highlights

* ಐಪಿಎಲ್ ಪ್ಲೇ ಆಫ್ ಪಂದ್ಯಗಳ ಆರಂಭಕ್ಕೆ ಕ್ಷಣಗಣನೆ 

* ಪ್ಲೇ ಆಫ್‌ ಪಂದ್ಯಗಳು ರದ್ದಾಗದಂತೆ ತಡೆಯಲು ಬಿಸಿಸಿಐ ಮಾಸ್ಟರ್ ಪ್ಲಾನ್

* ಫೈನಲ್‌ ಸೇರಿ ಪ್ಲೇ-ಆಫ್‌ನ ಒಟ್ಟು 4 ಪಂದ್ಯಗಳಿಗೆ ನಿಗದಿತ 200 ನಿಮಿಷಗಳ ಜೊತೆಗೆ ಹೆಚ್ಚುವರಿ 2 ಗಂಟೆಗಳ ಸಮಯಾವಕಾಶ

ನವದೆಹಲಿ(ಮೇ.24): 15ನೇ ಆವೃತ್ತಿಯ ಐಪಿಎಲ್‌ ಪ್ಲೇ-ಆಫ್‌ ಹಂತದ (Countdown begins for IPL Playoffs) ಪಂದ್ಯಗಳಿಗೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದ್ದು, ಬಿಸಿಸಿಐ (BCCI) ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಒಂದೊಮ್ಮೆ ನಿಗದಿತ ಸಮಯದೊಳಿಗೆ ಪಂದ್ಯ ನಡೆಸಲು ಸಾಧ್ಯವಾಗದೆ ಇದ್ದರೆ ಕೇವಲ ಸೂಪರ್‌ ಓವರ್‌ ವಿಜೇತರನ್ನು ನಿರ್ಧರಿಸಲಿದೆ. ಟಿ20 ಕ್ರಿಕೆಟ್‌ನಲ್ಲಿ ಕೇವಲ ಸೂಪರ್‌ ಓವರ್‌ನಿಂದಲೇ ಫಲಿತಾಂಶ ನಿರ್ಧರಿಸುವ ನಿಯಮ ಇದೇ ಮೊದಲು.

ಫೈನಲ್‌ ಸೇರಿ ಪ್ಲೇ-ಆಫ್‌ನ ಒಟ್ಟು 4 ಪಂದ್ಯಗಳಿಗೆ ನಿಗದಿತ 200 ನಿಮಿಷಗಳ ಜೊತೆಗೆ ಹೆಚ್ಚುವರಿ 2 ಗಂಟೆಗಳ ಸಮಯಾವಕಾಶವನ್ನು ನೀಡಲಾಗಿದೆ. ಮೊದಲ 3 ಪಂದ್ಯಗಳು ಮಳೆಯಿಂದಾಗಿ ವಿಳಂಬಗೊಂಡರೆ ಓವರ್‌ ಕಡಿತಗೊಳಿಸದೆ ರಾತ್ರಿ 9.40ಕ್ಕೆ ಆರಂಭಿಸಲು ಗಡುವು ನೀಡಲಾಗಿದೆ. ಒಂದು ವೇಳೆ ತಲಾ 5 ಓವರ್‌ ಪಂದ್ಯ ನಡೆಸಲು ಅವಕಾಶ ಸಿಕ್ಕರೆ ಆ ಪಂದ್ಯವನ್ನು ಆರಂಭಿಸಲು ರಾತ್ರಿ 11.56ರ ವರೆಗೂ ಸಮಯವಿರಲಿದೆ. 5 ಓವರ್‌ ಪಂದ್ಯದಲ್ಲಿ ಟೈಮ್‌ ಔಟ್‌ ಇರುವುದಿಲ್ಲ. ಅಲ್ಲದೇ ಮಧ್ಯರಾತ್ರಿ 12.50ರೊಳಗೆ ಪಂದ್ಯ ಮುಗಿಯಬೇಕು.

5 ಓವರ್‌ ಪಂದ್ಯವೂ ಸಾಧ್ಯವಾಗದೆ ಇದ್ದಲ್ಲಿ ಸೂಪರ್‌ ಓವರ್‌ ನಡೆಯಲಿದೆ. ಸೂಪರ್‌ ಓವರ್‌ (Super Over) ಆರಂಭಿಸಲು ಮಧ್ಯರಾತ್ರಿ 12.50ರ ವರೆಗೂ ಸಮಯವಿರಲಿದೆ. ಮಳೆ ನಿಲ್ಲದೆ ಪಂದ್ಯ ನಡೆಸಲು ಸಾಧ್ಯವಾಗದೆ ಇದ್ದರೆ ಅಂಕಪಟ್ಟಿಯಲ್ಲಿ ಗಳಿಸಿದ ಸ್ಥಾನಗಳ ಮೇಲೆ ವಿಜೇತರ ನಿರ್ಧಾರವಾಗಲಿದೆ. ಕ್ವಾಲಿಫಯರ್‌-1 ಮಳೆಗೆ ಬಲಿಯಾದರೆ, ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ಗುಜರಾತ್‌ ಟೈಟಾನ್ಸ್ ನೇರವಾಗಿ ಫೈನಲ್‌ಗೇರಲಿದೆ. ರಾಜಸ್ಥಾನ ರಾಯಲ್ಸ್ ಕ್ವಾಲಿಫಯರ್‌-2ರಲ್ಲಿ ಆಡಬೇಕಾಗುತ್ತದೆ. ಎಲಿಮಿನೇಟರ್‌ ಪಂದ್ಯ ಮಳೆಗೆ ಆಹುತಿಯಾದರೆ, ಆರ್‌ಸಿಬಿ ಹೊರಬೀಳಲಿದ್ದು, 2ನೇ ಕ್ವಾಲಿಫಯರ್‌ ಪಂದ್ಯಕ್ಕೆ ಲಖನೌ ಸೂಪರ್ ಜೈಂಟ್ಸ್‌ ಪ್ರವೇಶ ಪಡೆಯಲಿದೆ.

IPL 2022: ಫೈನಲ್‌ ಟಿಕೆಟ್‌ಗಾಗಿ ಟೈಟಾನ್ಸ್‌-ರಾಯಲ್ಸ್‌ ನಡುವೆ ಬಿಗ್‌ ಫೈಟ್‌

ಫೈನಲ್‌ಗೆ ಮೀಸಲು ದಿನ

ಮೇ 29ಕ್ಕೆ ನಿಗದಿಯಾಗಿರುವ ಐಪಿಎಲ್ ಫೈನಲ್‌ ಪಂದ್ಯ ರಾತ್ರಿ 8ಕ್ಕೆ ಆರಂಭಗೊಳ್ಳುವ ಕಾರಣ ಮಳೆಯಿಂದ ತಡವಾದರೆ ಓವರ್‌ ಕಡಿತವಿಲ್ಲದೆ ಪಂದ್ಯ ಆರಂಭಿಸಲು ರಾತ್ರಿ 10.10ರ ವರೆಗೂ ಅವಕಾಶವಿರಲಿದೆ. 5 ಓವರ್‌ ಪಂದ್ಯ ನಡೆಸಲು ಮಧ್ಯರಾತ್ರಿ 12.26ರ ವರೆಗೂ ಕಾಲಾವಕಾಶವಿರಲಿದ್ದು, ಮೇ 30 ಅನ್ನು ಮೀಸಲು ದಿನವಾಗಿಡಲಾಗಿದೆ. ಮೊದಲ ದಿನ ಪಂದ್ಯ ಅರ್ಧ ನಡೆದಿದ್ದರೆ, ಮೀಸಲು ದಿನದಂದು ಪಂದ್ಯ ಮುಂದುವರಿಯಲಿದೆ. ಕೇವಲ ಟಾಸ್‌ ಅಷ್ಟೇ ಆಗಿ ಪಂದ್ಯ ನಡೆಯದಿದ್ದರೆ, 2ನೇ ದಿನ ಹೊಸದಾಗಿ ಟಾಸ್‌ ಹಾಕಲಾಗುತ್ತದೆ. 

ಒಂದು ವೇಳೆ ಮೊದಲ ಇನ್ನಿಂಗ್ಸ್‌ ಮುಗಿದು, 2ನೇ ಇನ್ನಿಂಗ್ಸ್‌ನಲ್ಲಿ 5 ಓವರ್‌ ಪೂರ್ಣಗೊಂಡ ಬಳಿಕ ಮಳೆ ಸುರಿದರೆ, ಡಕ್ವರ್ತ್‌ ಲೂಯಿಸ್‌ ನಿಯಮವನ್ನು ಅಳವಡಿಸಿ ವಿಜೇತರನ್ನು ನಿರ್ಧರಿಸಲಾಗುತ್ತದೆ. ಮೀಸಲು ದಿನದಂದು ಕೇವಲ ಸೂಪರ್‌ ಓವರ್‌ನಿಂದಲೂ ಫಲಿತಾಂಶ ನಿರ್ಧರಿಸಬಹುದಾಗಿದೆ. ಫೈನಲ್‌ನಲ್ಲಿ ಸೂಪರ್‌ ಓವರ್‌ ಆರಂಭಿಸಲು ಮಧ್ಯರಾತ್ರಿ 1.20ರ ವರೆಗೂ ಅವಕಾಶವಿರಲಿದೆ.


 

click me!