IPL 2022: ಮೊದಲ ಗೆಲುವು ಕಾಣುತ್ತಾ ಮುಂಬೈ ಇಂಡಿಯನ್ಸ್‌?

By Kannadaprabha NewsFirst Published Apr 30, 2022, 11:30 AM IST
Highlights

* ಮುಂಬೈ ಇಂಡಿಯನ್ಸ್‌ ತಂಡಕ್ಕಿಂದು ಬಲಿಷ್ಠ ರಾಜಸ್ಥಾನ ರಾಯಲ್ಸ್ ಸವಾಲು

* ಟೂರ್ನಿಯಲ್ಲಿ ಮೊದಲ ಗೆಲುವಿನ ಕನವರಿಕೆಯಲ್ಲಿದೆ ಮುಂಬೈ ಇಂಡಿಯನ್ಸ್‌

* ಈಗಾಗಲೇ ಮೊದಲ 8 ಪಂದ್ಯಗಳಲ್ಲಿ ಸೋಲು ಕಂಡಿರುವ ರೋಹಿತ್ ಶರ್ಮಾ ಪಡೆ

ನವಿ ಮುಂಬೈ(ಏ.30): ಆಡಿರುವ ಎಂಟೂ ಪಂದ್ಯಗಳಲ್ಲಿ ಸೋತು 15ನೇ ಆವೃತ್ತಿ ಐಪಿಎಲ್‌ (IPL 2022) ಪ್ಲೇ-ಆಫ್‌ ರೇಸ್‌ನಿಂದ ಹೊರಬಿದ್ದಿರುವ ದಾಖಲೆಯ 5 ಬಾರಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ (Mumbai Indians) ಮೊದಲ ಗೆಲುವಿಗಾಗಿ ಹೆಣಗಾಡುತ್ತಿದ್ದು, ಶನಿವಾರ ಬಲಿಷ್ಠ ರಾಜಸ್ಥಾನ ರಾಯಲ್ಸ್‌ (Rajasthan Royals) ಸವಾಲನ್ನು ಎದುರಿಸಲಿದೆ. ರೋಹಿತ್‌ ಶರ್ಮಾ (Rohit Sharma) ನಾಯಕತ್ವದ ಮುಂಬೈ ಈ ಬಾರಿ ಎಲ್ಲಾ ವಿಭಾಗದಲ್ಲೂ ವೈಫಲ್ಯ ಅನುಭವಿಸುತ್ತಿದ್ದು, ಸೋಲು ಬೆಂಬಿಡದೆ ಕಾಡುತ್ತಿದೆ. ತಂಡ ಈಗಾಗಲೇ ಸೋಲಿನ ಮೂಲಕ ದಾಖಲೆ ಬರೆದಿದ್ದು, ಪ್ರತಿಷ್ಠೆಗಾಗಿ ಈ ಪಂದ್ಯದಲ್ಲಾದರೂ ಗೆದ್ದು ಅಂಕಪಟ್ಟಿಯಲ್ಲಿ ಖಾತೆ ತೆರೆಯಲು ಎದುರು ನೋಡುತ್ತಿದೆ.

ಮತ್ತೊಂದೆಡೆ ರಾಜಸ್ಥಾನ 8 ಪಂದ್ಯಗಳಲ್ಲಿ 6ರಲ್ಲಿ ಗೆದ್ದಿದ್ದು, ಎಲ್ಲಾ ವಿಭಾಗಗಳಲ್ಲೂ ಬಲಿಷ್ಠವಾಗಿ ತೋರುತ್ತಿದೆ. ಈ ಪಂದ್ಯದಲ್ಲೂ ಗೆದ್ದರೆ ಪ್ಲೇ-ಆಫ್‌ ಸ್ಥಾನಕ್ಕೆ ಮತ್ತಷ್ಟು ಹತ್ತಿರವಾಗಲಿದೆ. ಈ ಪಂದ್ಯವನ್ನು ಆಸ್ಪ್ರೇಲಿಯಾ ಲೆಗ್‌ ಸ್ಪಿನ್‌ ದಂತಕತೆ, ಚೊಚ್ಚಲ ಐಪಿಎಲ್‌ ಆವೃತ್ತಿಯಲ್ಲಿ ತಂಡಕ್ಕೆ ಪ್ರಶಸ್ತಿ ಗೆದ್ದುಕೊಟ್ಟ ನಾಯಕ ಶೇನ್‌ ವಾರ್ನ್‌ (Shane Warne) ಅವರ ನೆನಪಿನಲ್ಲಿ ಆಡುವುದಾಗಿ ತಿಳಿಸಿದೆ.

Latest Videos

ಮುಂಬೈ ಇಂಡಿಯನ್ಸ್ ತಂಡದ ಅಗ್ರಕ್ರಮಾಂಕದ ಬ್ಯಾಟಿಂಗ್ ವೈಫಲ್ಯ ತಂಡದ ಆಡಳಿತ ಮಂಡಳಿಯ ತಲೆನೋವು ಹೆಚ್ಚುವಂತೆ ಮಾಡಿದೆ. ದುಬಾರಿ ಮೊತ್ತದೊಂದಿಗೆ ಮುಂಬೈ ಪಾಲಾಗಿದ್ದ ಇಶಾನ್ ಕಿಶನ್ ಬ್ಯಾಟಿಂದ ದೊಡ್ಡ ಇನಿಂಗ್ಸ್ ಮೂಡಿ ಬರುತ್ತಿಲ್ಲ. ಪೊಲ್ಲಾರ್ಡ್‌ ಕೂಡಾ ಸ್ಪೋಟಕ ಬ್ಯಾಟಿಂಗ್ ಮಾಡಲು ವಿಫಲವಾಗುತ್ತಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ ಜಸ್ಪ್ರೀತ್ ಬುಮ್ರಾ ಹಿಂದೆಂದು ಕಂಡು-ಕೇಳರಿಯದ ವೈಫಲ್ಯ ಅನುಭವಿಸಿದ್ದಾರೆ. ಈ ಹಿಂದಿನ ಹಳೆಯ ವೈಪಲ್ಯಗಳನ್ನು ಮರೆತು ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಲು ರೋಹಿತ್ ಶರ್ಮಾ ಪಡೆ ಎದುರು ನೋಡುತ್ತಿದೆ.

ICC T20 World Cupಗೂ ಮುನ್ನ ಟೆನ್ಷನ್​ ತಂದೊಡ್ಡಿದ ಸ್ಟಾರ್ ಪ್ಲೇಯರ್ಸ್..!

ಐಪಿಎಲ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ ರಾಯಲ್ಸ್‌ ತಂಡಗಳು ಇದುವರೆಗೂ 25 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಈ ಪೈಕಿ ಉಭಯ ತಂಡಗಳು ಸಮಾನ ಪೈಪೋಟಿ ತೋರಿದ್ದು, ಮುಂಬೈ ಕೊಂಚ ಮೇಲುಗೈ ಸಾಧಿಸಿದೆ. 25 ಪಂದ್ಯಗಳ ಪೈಕಿ ಮುಂಬೈ ಇಂಡಿಯನ್ಸ್ ತಂಡವು 13 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ರಾಜಸ್ತಾನ ರಾಯಲ್ಸ್‌ ತಂಡವು 12 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

ಮುಂಬೈ ಇಂಡಿಯನ್ಸ್‌ ಸೇರಿದ ವೇಗಿ ಕುಲಕರ್ಣಿ

ಮುಂಬೈ: ಐಪಿಎಲ್‌ ಮೆಗಾ ಹರಾಜಿನಲ್ಲಿ ಬಿಕರಿಯಾಗದೆ, ಬಳಿಕ ಕಾಮೆಂಟ್ರಿ ಮಾಡುತ್ತಿದ್ದ ವೇಗಿ ಧವಳ್‌ ಕುಲಕರ್ಣಿ ಅವರು ಮತ್ತೆ ಮುಂಬೈ ಇಂಡಿಯನ್ಸ್‌ ತಂಡವನ್ನು ಸೇರಿದ್ದಾರೆ. ವರದಿಗಳ ಪ್ರಕಾರ 33 ವರ್ಷದ ಕುಲಕರ್ಣಿ ಈಗಾಗಲೇ ತಂಡ ಸೇರಿದ್ದು, ಶೀಘ್ರದಲ್ಲೇ ತರಬೇತಿ ಆರಂಭಿಸಲಿದ್ದಾರೆ ಎಂದು ಗೊತ್ತಾಗಿದೆ. ಕುಲಕರ್ಣಿ ಈ ಮೊದಲು ಮುಂಬೈ, ರಾಜಸ್ಥಾನ, ಗುಜರಾತ್‌ ಲಯನ್ಸ್‌ ಪರ ಒಟ್ಟು 92 ಪಂದ್ಯಗಳನ್ನಾಡಿರುವ ಅನುಭವ ಹೊಂದಿದ್ದು, 86 ವಿಕೆಟ್‌ ಕಬಳಿಸಿದ್ದಾರೆ. ಕಳೆದ ಬಾರಿ ಮುಂಬೈ ತಂಡದಲ್ಲೇ ಇದ್ದ ಅವರು, 2022ರ ಹರಾಜಿನಲ್ಲಿ ಬಿಕರಿಯಾಗದೆ ಉಳಿದಿದ್ದರು.

ಸಂಭವನೀಯ ಆಟಗಾರರ ಪಟ್ಟಿ

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ‌(ನಾಯಕ), ಇಶಾನ್ ಕಿಶನ್‌, ಡೆವಾಲ್ಡ್ ಬ್ರೆವಿಸ್‌, ಸೂರ್ಯಕುಮಾರ್‌ ಯಾದವ್, ತಿಲಕ್ ವರ್ಮಾ‌, ಕೀರನ್ ಪೊಲ್ಲಾರ್ಡ್‌, ಡೇನಿಯಲ್ ಸ್ಯಾಮ್ಸ್‌, ಜಯದೇವ್ ಉನಾದ್ಕತ್‌, ಹೃತಿಕ್ ಶೊಕೀನ್‌, ರಿಲೇ ಮೆರೆಡಿತ್‌, ಜಸ್ಪ್ರೀತ್ ಬುಮ್ರಾ.

ರಾಜಸ್ಥಾನ ರಾಯಲ್ಸ್: ಜೋಸ್ ಬಟ್ಲರ್‌, ದೇವದತ್ ಪಡಿಕ್ಕಲ್‌, ಸಂಜು ಸ್ಯಾಮ್ಸನ್‌(ನಾಯಕ), ಶಿಮ್ರೊನ್ ಹೆಟ್ಮೇಯರ್‌, ಡೇರೆಲ್ ಮಿಚೆಲ್‌, ರಿಯಾನ್‌ ಪರಾಗ್, ಆರ್‌.ಅಶ್ವಿನ್‌, ಟ್ರೆಂಟ್ ಬೌಲ್ಟ್‌, ಪ್ರಸಿದ್‌್ಧ ಕೃಷ್ಣ, ಯುಜುವೇಂದ್ರ ಚಹಲ್‌, ಕುಲ್ದೀಪ್ ಸೆನ್‌.
 

click me!