
ಮುಂಬೈ(ಏ.30): ಮೆಗಾ ಹರಾಜಿನ ಬಳಿಕ ಗುಜರಾತ್ ಟೈಟಾನ್ಸ್ (Gujarat Titans) ಸಿದ್ಧಪಡಿಸಿದ ತಂಡವನ್ನು ನೋಡಿ ಹಲವರು ಅಚ್ಚರಿ ವ್ಯಕ್ತಪಡಿಸಿದ್ದರು. ಈ ತಂಡ ಪ್ಲೇ-ಆಫ್ ಹತ್ತಿರಕ್ಕೂ ಬರುವುದಿಲ್ಲ ಎಂದು ವ್ಯಂಗ್ಯವಾಡಿದ್ದರು. ಆದರೆ ಆಡಿರುವ 8ರಲ್ಲಿ 7 ಪಂದ್ಯ ಗೆದ್ದು ಗುಜರಾತ್ ಪ್ಲೇ-ಆಫ್ ಹೊಸ್ತಿಲಿಗೆ ಬಂದು ನಿಂತಿದೆ. ಇನ್ನೊಂದು ಗೆಲುವು ತಂಡವನ್ನು ಪ್ಲೇ-ಆಫ್‌ಗೆ ಕರೆದೊಯ್ಯಲಿದೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಗುಜರಾತ್ ಸವಾಲನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) (Royal Challengers Bangalore) ಶನಿವಾರ ಎದುರಿಸಬೇಕಿದೆ.
ಗುಜರಾತ್ ಟೈಟಾನ್ಸ್‌ನ 7 ಗೆಲುವುಗಳ ಪೈಕಿ 6ರಲ್ಲಿ ಬೇರೆ ಬೇರೆ ಆಟಗಾರ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಇದೇ ತಂಡದ ಯಶಸ್ಸಿನ ರಹಸ್ಯ. ಪ್ರತಿ ಪಂದ್ಯದಲ್ಲೂ ಒಬ್ಬೊಬ್ಬ ಹೀರೋ ಹುಟ್ಟಿಕೊಳ್ಳುತ್ತಿದ್ದಾನೆ. ಮೊಹಮದ್ ಶಮಿ, ಲಾಕಿ ಫಗ್ರ್ಯೂಸನ್, ಶುಭ್‌ಮನ್ ಗಿಲ್, ಹಾರ್ದಿಕ್ ಪಾಂಡ್ಯ (Hardik Pandya), ಡೇವಿಡ್ ಮಿಲ್ಲರ್ (David Miller) ಹಾಗೂ ರಶೀದ್ ಖಾನ್ (Rashid Khan) ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸನ್ರೈಸರ್ಸ್ ವಿರುದ್ಧ ಕಳೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಗೆದ್ದರೂ, ಪಂದ್ಯಶ್ರೇಷ್ಠ ಗೌರವ ಉಮ್ರಾನ್ ಮಲಿಕ್ ಪಾಲಾಗಿತ್ತು. ಮ್ಯಾಥ್ಯೂ ವೇಡ್ ಬದಲಿಗೆ ಆಡುವ ಹನ್ನೊಂದರಲ್ಲಿ ಸ್ಥಾನ ಗಳಿಸಿದ ವೃದ್ಧಿಮಾನ್ ಸಾಹ ಸಹ ಕಳೆದ ಪಂದ್ಯದಲ್ಲಿ ಅಬ್ಬರಿಸಿ ತಂಡಕ್ಕೆ ನೆರವಾದರು. ಶುಭ್‌ಮನ್ ಗಿಲ್ ಲಯದ ಬಗ್ಗೆ ಕೊಂಚ ಆತಂಕ ಇದೆಯಾದರೂ, ಮಧ್ಯಮ ಕ್ರಮಾಂಕ ಆ ಆತಂಕವನ್ನು ದೂರಾಗಿಸುತ್ತಿದೆ.
ಆರ್‌ಸಿಬಿ (RCB) ಸ್ಥಿತಿ ವಿಭಿನ್ನವಾಗಿದೆ. ತಂಡ ತನ್ನ ತಾರಾ ಆಟಗಾರರ ಮೇಲೆ ಈ ವರ್ಷವೂ ಹೆಚ್ಚು ಅವಲಂಬಿತಗೊಂಡಿದೆ. ತಂಡ ಬ್ಯಾಟಿಂಗ್ ಸಮಸ್ಯೆ ಎದುರಿಸುತ್ತಿದೆ ಎನ್ನುವುದನ್ನು ವಿಶೇಷವಾಗಿ ಹೇಳಬೇಕಿಲ್ಲ. ಅಗ್ರ 4ರಲ್ಲಿ ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಇದ್ದರೂ ಹೆಚ್ಚು ಪ್ರಯೋಜನವಾಗುತ್ತಿಲ್ಲ. ಅಗ್ರ 4ರ ಒಟ್ಟು ಬ್ಯಾಟಿಂಗ್ ಸರಾಸರಿ 21.90 ಇದ್ದು, ಇದು ಟೂರ್ನಿಯಲ್ಲಿ 2ನೇ ಕನಿಷ್ಠ ಎನಿಸಿದೆ. ಕೊಹ್ಲಿ ತಮ್ಮ ವೃತ್ತಿಬದುಕಿನ ಅತ್ಯಂತ ಕೆಟ್ಟದಿನಗಳನ್ನು ಕಳೆಯುತ್ತಿದ್ದಾರೆ. ಫಾಫ್ ಡು ಪ್ಲೆಸಿಸ್ ರನ್ ಬರ ಎದುರಿಸುತ್ತಿದ್ದು, ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟ್ ಸದ್ದು ಮಾಡುತ್ತಿಲ್ಲ. ಫಾಫ್ ಡು ಪ್ಲೆಸಿಸ್ 30ಕ್ಕಿಂತ ಹೆಚ್ಚು ರನ್ ಗಳಿಸಿದ ಬಹುತೇಕ ಪಂದ್ಯಗಳಲ್ಲಿ ಅವರ ತಂಡ ಗೆಲ್ಲುತ್ತದೆ. ಆದರೆ ಈ ಆವೃತ್ತಿಯಲ್ಲಿ ಅವರು ಕೇವಲ 2 ಬಾರಿ ಮಾತ್ರ 30 ರನ್ ದಾಟಿದ್ದಾರೆ.
IPL 2022 ಸ್ನೇಹಿತರ ಸವಾಲ್ ನಲ್ಲಿ ಗೆದ್ದ ಕೆಎಲ್ ರಾಹುಲ್!
ಆರ್‌ಸಿಬಿ ಬೌಲರ್‌ಗಳೇ ಮತ್ತೊಮ್ಮೆ ಸಾಹಸ ತೋರಬೇಕಿದೆ. ಲಾಕಿ ಫಗ್ರ್ಯೂಸನ್, ಮೊಹಮ್ಮದ್ ಶಮಿ, ರಶೀದ್ ಖಾನ್‌ರಂತಹ ವಿಶ್ವ ಶ್ರೇಷ್ಠ ಬೌಲರ್‌ಗಳ ಎದುರು ಆರ್‌ಸಿಬಿ ಬ್ಯಾಟರ್‌ಗಳಿಗೆ ಮತ್ತೊಂದು ಅಗ್ನಿಪರೀಕ್ಷೆ ಎದುರಾದರೆ ಅಚ್ಚರಿಯಿಲ್ಲ. ತಂಡ ಈ ಪಂದ್ಯದಲ್ಲಿ ಸೋತರೆ ಪ್ಲೇ-ಆಫ್ ಹಾದಿ ಇನ್ನಷ್ಟು ಕಠಿಣಗೊಳ್ಳಲಿದೆ. ಆಗ ಉಳಿಯುವ 4 ಪಂದ್ಯಗಳಲ್ಲಿ 4ರಲ್ಲೂ ಗೆಲ್ಲಬೇಕಾದ ಅನಿವಾರ್ಯತೆ ಎದುರಾಗಬಹುದು.
ಸಂಭವನೀಯ ಆಟಗಾರರ ಪಟ್ಟಿ
ಆರ್‌ಸಿಬಿ: ಫಾಫ್ ಡು ಪ್ಲೆಸಿಸ್(ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟೀದರ್, ಗ್ಲೆನ್ ಮ್ಯಾಕ್ಸ್‌ವೆಲ್, ಸುಯಶ್ ಪ್ರಭುದೇಸಾಯಿ/ಮಹಿಪಾಲ್ ಲೊಮ್ರಾರ್, ದಿನೇಶ್ ಕಾರ್ತಿಕ್, ಶಾಬಾಜ್ ಅಹಮ್ಮದ್, ಹರ್ಷಲ್ ಪಟೇಲ್, ವನಿಂದು ಹಸರಂಗ, ಮೊಹಮ್ಮದ್ ಸಿರಾಜ್, ಜೋಶ್ ಹೇಜಲ್‌ವುಡ್.
ಟೈಟಾನ್ಸ್: ವೃದ್ದಿಮಾನ್ ಸಾಹ, ಶುಭ್‌ಮನ್ ಗಿಲ್, ಹಾರ್ದಿಕ್ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅಭಿನವ್ ಮನೋಹರ್, ಅಲ್ಜಾರಿ ಜೋಸೆಫ್, ಲಾಕಿ ಫಗ್ರ್ಯೂಸನ್, ಶಮಿ, ಯಶ್ ದಯಾಳ್.
ಸ್ಥಳ: ಮುಂಬೈ, ಬ್ರೆಬೋರ್ನ್ ಕ್ರೀಡಾಂಗಣ
ಪಂದ್ಯ: ಮಧ್ಯಾಹ್ನ 3.30ಕ್ಕೆ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.