
ಪುಣೆ (ಏ.29): ಸ್ನೇಹಿತರ ಸವಾಲ್ ಕಾರಣದಂದಾಗಿ ಗಮನಸೆಳೆದಿದ್ದ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ಹಾಗೂ ಪಂಜಾಬ್ ಕಿಂಗ್ಸ್ (Punjab Kings) ನಡುವಿನ ಮುಖಾಮುಖಿಯಲ್ಲಿ ಕೆಎಲ್ ರಾಹುಲ್ (KL Rahul) ಟೀಮ್ ಗೆಲುವಿನ ನಗು ಬೀರಿದೆ. ಬೌಲಿಂಗ್ ವಿಭಾಗದ ಭರ್ಜರಿ ನಿರ್ವಹಣೆಯ ನೆರವಿನಿಂದ 153 ರನ್ ಗಳ ಸಾಧಾರಣ ಮೊತ್ತವನ್ನು ರಕ್ಷಿಸಿಕೊಳ್ಳಲು ಲಕ್ನೋ ತಂಡ ಯಶಸ್ವಿಯಾಯಿತು.
ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡ, ಉತ್ತಮ ಆರಂಭದ ಹೊರತಾಗಿಯೂ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯ ಕಂಡು, 8 ವಿಕೆಟ್ ಗೆ 153 ರನ್ ಪೇರಿಸಿತು. ಕ್ವಿಂಟನ್ ಡಿ ಕಾಕ್ (46 ರನ್, 37 ಎಸೆತ, 4 ಬೌಂಡರಿ, 2 ಸಿಕ್ಸರ್) ಹಾಗೂ ದೀಪಕ್ ಹೂಡಾ (34 ರನ್, 28 ಎಸೆತ, 1 ಬೌಂಡರಿ, 2 ಸಿಕ್ಸರ್) ಲಕ್ನೋ ತಂಡ ಉತ್ತಮ ಮೊತ್ತ ಪೇರಿಸಿಲು ನೆರವಾಗಿದ್ದರು.
ಬಳಿಕ ಲಕ್ನೋ ತಂಡದ ಸಂಘಟಿತ ಬೌಲಿಂಗ್ ಮುಂದೆ ಮಂಡಿಯೂರಿದ ಮಯಾಂಕ್ ಅಗರ್ವಾಲ್ (Mayank Agarwal) ನೇತೃತ್ವದ ಪಂಜಾಬ್ ಕಿಂಗ್ಸ್ (PBKS) ತಂಡ 8 ವಿಕೆಟ್ ಗೆ 133 ರನ್ ಬಾರಿಸಿ 20 ರನ್ ಸೋಲು ಕಂಡಿತು. ಗೆಲುವಿನಲ್ಲಿ ಪ್ರಮಖ ಪಾತ್ರ ವಹಿಸಿದ ಕೃನಾಲ್ ಪಾಂಡ್ಯ ಹಾಗೂ ದುಷ್ಮಂತಾ ಚಾಮೀರ ತಲಾ 2 ವಿಕೆಟ್ ಉರುಳಿಸಿದರೆ, ಮೊಹ್ಸಿನ್ ಖಾನ್ ಮೂರು ವಿಕೆಟ್ ಉರುಳಿಸಿ ಮಿಂಚಿದರು.
ಚೇಸಿಂಗ್ ಆರಂಭಿಸಿದ ಪಂಜಾಬ್ ಕಿಂಗ್ಸ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭದಲ್ಲಿಯೇ ಬಿರುಸಿನ ಬ್ಯಾಟಿಂಗ್ ಮಾಡಲು ಇಳಿದ ಮಯಾಂಕ್ ಅಗರ್ವಾಲ್ ತಾವು ಎದುರಿಸಿದ 17 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ಗಳೊಂದಿಗೆ 25 ರನ್ ಬಾರಿಸಿ ಮಯಾಂಕ್ ಅಗರ್ವಾಲ್, ದುಷ್ಮಂತ ಚಾಮೀರ ಎಸೆದ 5ನೇ ಓವರ್ ನಲ್ಲಿ ವಿಕೆಟ್ ನೀಡಿ ಹೊರನಡೆದರು. ಈ ಮೊತ್ತಕ್ಕೆ 11 ರನ್ ಸೇರಿಸುವಾಗ 15 ಎಸೆತಗಳಲ್ಲಿ ಕೇವಲ 5 ರನ್ ಬಾರಿಸಿ ಪರದಾಟ ನಡೆಸಿದ್ದ ಶಿಖರ್ ಧವನ್, ರವಿ ಬಿಷ್ಣೋಯಿ ಎಸೆತದಲ್ಲಿ ಬೌಲ್ಡ್ ಆಗಿ ನಿರ್ಗಮಿಸಿದರು.
ಕಳೆದ ಕೆಲವು ಪಂದ್ಯಗಳಿಂದ ಪಂಜಾಬ್ ತಂಡದ ಬ್ಯಾಟಿಂಗ್ ಬಲವಾಗಿದ್ದ ಭಾನುಕಾ ರಾಜಪಕ್ಷ 7 ಎಸೆತಗಳಲ್ಲಿ 9 ರನ್ ಸಿಡಿಸಿ ಕೃನಾಲ್ ಪಾಂಡ್ಯಗೆ ದಿನದ ಮೊದಲ ಬಲಿಯಾದರು. ಬಳಿಕ ಜೊತೆಯಾದ ಜಾನಿ ಬೇರ್ ಸ್ಟೋ (32ರನ್, 28 ಎಸೆತ, 5 ಎಸೆತ) ಹಾಗೂ ಲಿಯಾಮ್ ಲಿವಿಂಗ್ ಸ್ಟೋನ್ (18 ರನ್, 16 ಎಸೆತ, 2 ಸಿಕ್ಸರ್) 4ನೇ ವಿಕೆಟ್ ಗೆ 30 ರನ್ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡುವ ಪ್ರಯತ್ನ ಮಾಡಿದರು. ಆದರೆ ಲಕ್ನೋ ಬೌಲರ್ ಗಳು ಗೆಲುವಿಗೆ ಶ್ರಮ ವಹಿಸುವುದನ್ನು ನಿಲ್ಲಿಸಿರಲಿಲ್ಲ.
IPL 2022 ರಬಾಡ ದಾಳಿಗೆ ದಿಕ್ಕು ತಪ್ಪಿದ ಲಕ್ನೋ ಬ್ಯಾಟಿಂಗ್!
13ನೇ ಓವರ್ ನಲ್ಲಿ ಲಿಯಾಮ್ ಲಿವಿಂಗ್ ಸ್ಟೋನ್ ಹೊರನಡೆದರೆ ಈ ಮೊತ್ತಕ್ಕೆ 4 ರನ್ ಕೂಡಿಸುವ ವೇಳೆಗೆ ವಿಕೆಟ್ ಕೀಪರ್ ಜಿತೇಶ್ ಶರ್ಮ ಕೂಡ ಹೊರನಡೆದರು. ತಂಡದ ಏಕೈಕ ಆಸರೆಯಾಗಿ ಉಳಿದಿದ್ದ ಜಾನಿ ಬೇರ್ ಸ್ಟೋ ತಂಡದ ಮೊತ್ತ 100ರ ಗಡಿ ದಾಟಿದ ಬಳಿಕ ನಿರ್ಗಮಿಸುವುದರೊಂದಿಗೆ ಲಕ್ನೋ ತಂಡದ ಗೆಲುವು ಖಚಿತವಾಗಿತ್ತು.
IPL 2022 ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡ ಬೌಲಿಂಗ್ ಆಯ್ಕೆ
ಕೃನಾಲ್ ಪಾಂಡ್ಯ ಸೂಪರ್ ಬೌಲಿಂಗ್: ಹಾಲಿ ಐಪಿಎಲ್ ನಲ್ಲಿ ಬೌಲಿಂಗ್ ಮೂಲಕ ಭರ್ಜರಿ ಫಾರ್ಮ್ ನಲ್ಲಿರುವ ಕೃನಾಲ್ ಪಾಂಡ್ಯ ಮತ್ತೊಮ್ಮೆ ತಮ್ಮ 24 ಎಸೆತಗಳ ದಾಳಿಯಲ್ಲಿ ಗಮನ ಸೆಳೆದರು. 1 ಮೇಡನ್ ಸಹಿತ ಕೇವಲ 11 ರನ್ ನೀಡಿದ ಕೃನಾಲ್ ಪಾಂಡ್ಯ, ಭಾನುಕಾ ರಾಜಪಕ್ಷ ಹಾಗೂ ಜಿತೇಶ್ ಶರ್ಮ ವಿಕೆಟ್ ಉರುಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.