ಅರ್ಜುನ್ ತೆಂಡುಲ್ಕರ್ ಮುಂಬೈ ಇಂಡಿಯನ್ಸ್ ತಂಡದಲ್ಲಿ ಯಾಕೆ ಸ್ಥಾನ ನೀಡಲಿಲ್ಲ ಗೊತ್ತಾ?

By Naveen KodaseFirst Published Jun 4, 2022, 6:11 PM IST
Highlights

* ಐಪಿಎಲ್‌ಗೆ ಪಾದಾರ್ಪಣೆ ಮಾಡಲು ತುದಿಗಾಲಿನಲ್ಲಿ ನಿಂತಿರುವ ಅರ್ಜುನ್ ತೆಂಡುಲ್ಕರ್

* ಈ ಆವೃತ್ತಿಯಲ್ಲೂ ಮುಂಬೈ ತಂಡದಲ್ಲಿ ಸ್ಥಾನ ಪಡೆಯಲು ಅರ್ಜುನ್ ವಿಫಲ

* ಅರ್ಜುನ್ ಸ್ಥಾನ ಪಡೆಯದೇ ಇರುವುದರ ಬಗ್ಗೆ ಪ್ರತಿಕ್ರಿಯೆ ಕೊಟ್ಟ ಬೌಲಿಂಗ್ ಕೋಚ್

ನವದೆಹಲಿ(ಜೂ.04): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ತಂಡದ ಪರ ಅರ್ಜುನ್ ತೆಂಡುಲ್ಕರ್ (Arjun Tendulkar) ಐಪಿಎಲ್‌ಗೆ ಪಾದಾರ್ಪಣೆ ಮಾಡಬಹುದು ಎನ್ನುವ ನಿರೀಕ್ಷೆ ಮತ್ತೆ ಹುಸಿಯಾಗಿದೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ (Sachin Tendulkar) ಪುತ್ರ ಅರ್ಜುನ್ ತೆಂಡುಲ್ಕರ್, ಐಪಿಎಲ್‌ಗೆ ಪಾದಾರ್ಪಣೆ ಮಾಡಲು ಇನ್ನೂ ಕೆಲವು ಸಮಯ ಕಾಯಬೇಕಿದೆ. 

5 ಬಾರಿಯ ಐಪಿಎಲ್ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ತಂಡವು 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆಡಿದ 14 ಪಂದ್ಯಗಳ ಪೈಕಿ ಕೇವಲ 4 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದು ಟೂರ್ನಿಯಿಂದ ಹೊರಬಿದ್ದು ಮುಖಭಂಗ ಅನುಭವಿಸಿತ್ತು. ರೋಹಿತ್ ಶರ್ಮಾ (Rohit Sharma) ನೇತೃತ್ವದ ಮುಂಬೈ ಇಂಡಿಯನ್ಸ್ ಹಲವು ಪ್ರಯೋಗಗಳನ್ನು ನಡೆಸಿತಾದರೂ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ ಮೇಲೇರಲು ಸಾಧ್ಯವಾಗಲೇ ಇಲ್ಲ. ಇದೆಲ್ಲದರ ಹೊರತಾಗಿಯು ಅರ್ಜುನ್ ತೆಂಡುಲ್ಕರ್‌ಗೆ ಮಾತ್ರ ಮುಂಬೈ ಇಂಡಿಯನ್ಸ್ ತಂಡದಲ್ಲಿ ಸ್ಥಾನ ದೊರೆಯದೇ ಹೋದದ್ದು ಸಾಕಷ್ಟು ಅಚ್ಚರಿಗೆ ಕಾರಣವಾಗಿತ್ತು.

ಮುಂಬೈ ಇಂಡಿಯನ್ಸ್ ತಂಡವು ಪದೇ ಪದೇ ಸೋಲು ಅನುಭವಿಸಿದ ಬಳಿಕ ಆಡುವ ಹನ್ನೊಂದರ ಬಳಗದಲ್ಲಿ ಡೆವಾಲ್ಡ್‌ ಬ್ರೆವೀಸ್, ರಮಣ್‌ದೀಪ್ ಸಿಂಗ್, ಸಂಜಯ್ ಯಾದವ್‌, ಕುಮಾರ್ ಕಾರ್ತಿಕೇಯ ಸೇರಿದಂತೆ ಹಲವು ಯುವ ಆಟಗಾರರಿಗೆ ಮಣೆ ಹಾಕಿತು. ಆದರೆ ಆಲ್ರೌಂಡರ್ ಅರ್ಜುನ್ ತೆಂಡುಲ್ಕರ್‌ಗೆ ಮಾತ್ರ ಸ್ಥಾನ ಸಿಗಲಿಲ್ಲ. ಐಪಿಎಲ್‌ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದ ಬಳಿಕ ಲೀಗ್ ಹಂತದ ಕೊನೆಯ ಕೆಲ ಪಂದ್ಯಗಳಲ್ಲಾದರೂ ಅರ್ಜುನ್ ತೆಂಡುಲ್ಕರ್‌ಗೆ, ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಸ್ಥಾನ ನೀಡಿ ಎಂದು ಅಭಿಮಾನಿಗಳು ಒತ್ತಾಯಿಸಿದರೂ ಸಹಾ, ಮುಂಬೈ ಇಂಡಿಯನ್ಸ್‌ ಮ್ಯಾನೇಜ್‌ಮೆಂಟ್ ಈ ಆಗ್ರಹಕ್ಕೆ ಕಿವುಡಾಯಿತು.

2023ರ ಐಪಿಎಲ್ ಟೂರ್ನಿಗೂ ಮುನ್ನ ಈ 5 ಆಟಗಾರರಿಗೆ ಆರ್‌ಸಿಬಿಯಿಂದ ಗೇಟ್‌ಪಾಸ್ ಗ್ಯಾರಂಟಿ..! 

ಇದೀಗ ಅರ್ಜುನ್ ತೆಂಡುಲ್ಕರ್ ಅವರಿಗೆ ಮುಂಬೈ ಇಂಡಿಯನ್ಸ್ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡದೇ ಇರುವುದರ ಬಗ್ಗೆ ತಂಡದ ಬೌಲಿಂಗ್ ಕೋಚ್ ಶೇನ್ ಬಾಂಡ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಯುವ ಆಲ್ರೌಂಡರ್‌ ಅರ್ಜುನ್‌ ತೆಂಡುಲ್ಕರ್, ಕೆಲವು ವಿಭಾಗಗಳಲ್ಲಿ ಇನ್ನೂ ಸುಧಾರಿಸಿಕೊಳ್ಳಬೇಕಿದೆ. ಅದರಲ್ಲೂ ಮುಖ್ಯವಾಗಿ ಬ್ಯಾಟಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಸಾಕಷ್ಟು ಸುಧಾರಿಸಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

22 ವರ್ಷದ ಯುವ ಆಲ್ರೌಂಡರ್ ಅರ್ಜುನ್ ತೆಂಡುಲ್ಕರ್ ಅವರನ್ನು ಐಪಿಎಲ್ ಆಟಗಾರರ ಮೆಗಾ ಹರಾಜಿನಲ್ಲಿ (IPL Auction 2022) ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು 30 ಲಕ್ಷ ರುಪಾಯಿ ನೀಡಿ ಖರೀದಿಸಿತ್ತು. ಅರ್ಜುನ್ ತೆಂಡುಲ್ಕರ್ ಮುಂಬೈ ಇಂಡಿಯನ್ಸ್ ತಂಡದ ಪರ ನೆಟ್ ಬೌಲರ್‌ ಆಗಿ ಕಾಣಿಸಿಕೊಂಡರೇ ಹೊರತು, ಆಡುವ ಹನ್ನೊಂದರ ಬಳಗದಲ್ಲಿ ಮಾತ್ರ ಕಾಣಿಸಿಕೊಳ್ಳಲೇ ಇಲ್ಲ. 

ಈ ಬಗ್ಗೆ ಮಾತನಾಡಿರುವ ಶೇನ್ ಬಾಂಡ್ (Shane Bond), ಅವರು ಇನ್ನಷ್ಟು ಸುಧಾರಣೆ ಕಾಣಬೇಕಿದೆ. ಮುಂಬೈನಂತಹ ಬಲಿಷ್ಠ ತಂಡದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಬೇಕಿದ್ದರೇ ಸಾಕಷ್ಟು ಪರಿಶ್ರಮ ಪಡಬೇಕು. ಅವರು ಇನ್ನಷ್ಟು ಕಠಿಣ ಪರಿಶ್ರಮ ಪಡಬೇಕು ಹಾಗೂ ಸುಧಾರಣೆ ಕಾಣಬೇಕು. ಐಪಿಎಲ್‌ನಂತಹ ಟೂರ್ನಿಯಲ್ಲಿ ಆಡಬೇಕಿದ್ದರೇ, ಎಲ್ಲವೂ ಸರಿಯಿರಬೇಕು. ಅರ್ಜುನ್ ತೆಂಡುಲ್ಕರ್ ಮುಂಬೈ ಇಂಡಿಯನ್ಸ್ ತಂಡದಲ್ಲಿ ಸ್ಥಾನ ಪಡೆಯಬೇಕಿದ್ದರೇ ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ಕ್ಷೇತ್ರದಲ್ಲಿ ಸುಧಾರಣೆ ಕಾಣಬೇಕು. ಮುಂಬರುವ ದಿನಗಳಲ್ಲಿ ಅವರು ಮುಂಬೈ ಇಂಡಿಯನ್ಸ್ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸವಿದೆ ಎಂದು ಶೇನ್ ಬಾಂಡ್‌ ಸ್ಪೋರ್ಟ್ಸ್‌ಕೀಡಾ ವೆಬ್‌ಸೈಟ್‌ಗೆ ತಿಳಿಸಿದ್ದಾರೆ.

click me!