
ಪುಣೆ (ಮೇ. 14): ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಸನ್ ರೈಸರ್ಸ್ ( Sunrisers Hyderabad) ತಂಡವನ್ನು ಏಕಾಂಗಿಯಾಗಿ ಹಿಮ್ಮೆಟ್ಟಿಸಿದ ಆಲ್ರೌಂಡರ್ ಆಂಡ್ರೆ ರಸೆಲ್ (Andre Russell), ಕೆಕೆಆರ್ (KKR) ತಂಡಕ್ಕೆ ಐಪಿಎಲ್ 2022 (IPL 2022) ಅಲ್ಲಿ 6ನೇ ಗೆಲುವು ನೀಡಿದ್ದಾರೆ. ತನ್ನ 13ನೇ ಪಂದ್ಯದಲ್ಲಿ ಕೆಕೆಆರ್ (Kolkata Knight Riders) ತಂಡ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 54 ರನ್ ಗಳಿಂದ ಸೋಲಿಸಿತು.
ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಉಮ್ರಾನ್ ಮಲೀಕ್ (33 ಕ್ಕೆ 3) ಮಾರಕ ದಾಳಿಯ ನಡುವೆಯೂ ಸ್ಯಾಮ್ ಬಿಲ್ಲಿಂಗ್ಸ್ (34 ರನ್, 29 ಎಸೆತ, 3 ಬೌಂಡರಿ, 1 ಸಿಕ್ಸರ್) ಹಾಗೂ ಆಂಡ್ರೆ ರಸೆಲ್ (49 *ರನ್, 28 ಎಸೆತ, 3 ಬೌಂಡರಿ, 4 ಸಿಕ್ಸರ್) ಸ್ಪೋಟಕ ಇನ್ನಿಂಗ್ಸ್ ನಿಂದಾಗಿ ಕೋಲ್ಕತ ನೈಟ್ ರೈಡರ್ಸ್ ತಂಡ 6 ವಿಕೆಟ್ ಗೆ 177 ರನ್ ಪೇರಿಸಿತು.
ಪ್ರತಿಯಾಗಿ ಉತ್ತಮವಾಗಿ ಚೇಸಿಂಗ್ ಆರಂಭಿಸಿದ ಸನ್ ರೈಸರ್ಸ್ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಆಂಡ್ರೆ ರಸೆಲ್ (22 ಕ್ಕೆ 3) ನೇತೃತ್ವದಲ್ಲಿ ಕೆಕೆಆರ್ ತಂಡ ಘಾತಕ ಏಟು ನೀಡಿದ್ದರಿಂದ 20 ಓವರ್ ಗಳಲ್ಲಿ 8 ವಿಕೆಟ್ ಗೆ 128 ರನ್ ಬಾರಿಸಲಷ್ಟೇ ಶಕ್ತವಾಯಿತು.
ಈ ಸೋಲಿನಿಂದಾಗಿ ಮತ್ತೊಬ್ಬ ಮಾಜಿ ಚಾಂಪಿಯನ್ ತಂಡ ಪ್ಲೇ ಆಫ್ ರೇಸ್ ನಿಂದ ಬಹುತೇಕ ಹೊರಬಿದ್ದಂತಾಗಿದೆ. ಸನ್ ರೈಸರ್ಸ್ ತಂಡ ಮುಂದಿನ ಎರಡೂ ಪಂದ್ಯಗಳಲ್ಲಿ ಜಯ ಕಂಡರೂ ಗರಿಷ್ಠ 14 ಅಂಕ ಸಂಪಾದಿಸಲಿದೆ. ಉಳಿದೆಲ್ಲಾ ತಂಡಗಳ ಮುಖಾಮುಖಿ ತನ್ನ ಪರವಾಗಿ ಬಂದು, ರನ್ ರೇಟ್ ಕೂಡ ಉತ್ತಮವಾಗಿದ್ದಲ್ಲಿ ಮಾತ್ರವೇ ಸನ್ ರೈಸರ್ಸ್ ಮುಂದಿನ ಹಂತ ಪ್ರವೇಶಿಸಬಹುದು. ಈಗಾಗಲೇ ಮಾಜಿ ಚಾಂಪಿಯನ್ ಗಳಾದ ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ಅಧಿಕೃತವಾಗಿ ಹೊರ ಬಿದ್ದಿದ್ದರೆ, ಕೆಕೆಆರ್ ತಂಡ ಇಂದಿನ ಗೆಲುವಿನಿಂದ ಪ್ಲೇ ಆಫ್ ಆಸೆಯನ್ನು ಕೆಲ ಮಟ್ಟಿಗೆ ಜೀವಂತವಾಗಿಟ್ಟಿದೆ. ಈಗ ಹೊರ ಬೀಳುವವರ ಈ ಸಾಲಿಗೆ ಸೇರ್ಪಡೆಯಾಗುವ ಹಾದಿಯಲ್ಲಿ ಸನ್ ರೈಸರ್ಸ್ ತಂಡವಿದೆ.
ಬ್ಯಾಟಿಂಗ್ ನಲ್ಲಿ ಭರ್ಜರಿಯಾಗಿ ಆಟವಾಡಿದ ಬಳಿಕ, ಆಂಡ್ರೆ ರಸೆಲ್ ಬೌಲಿಂಗ್ ನಲ್ಲೂ ಕೇನ್ ವಿಲಿಯಮ್ಸನ್ ಅವರ ಪ್ರಮುಖ ವಿಕೆಟ್ ನೊಂದಿಗೆ ಒಟ್ಟು ಮೂರು ವಿಕಟ್ ಉರುಳಿಸಿ ಮಿಂಚಿದರು. ಆ ಮೂಲಕ ಹಾಲಿ ಆವೃತ್ತಿಯ ಐಪಿಎಲ್ ನಲ್ಲಿ ಗರಿಷ್ಠ ವಿಕೆಟ್ ಉರುಳಿಸಿದ ಕೆಕೆಆರ್ ಬೌಲರ್ ಎನಿಸಿದ್ದಾರೆ. ಐಪಿಎಲ್ 2022ಅಲ್ಲಿ ರಸೆಲ್ ಈವರೆಗೂ 17 ವಿಕೆಟ್ ಉರುಳಿಸಿದ್ದಾರೆ. ಒಟ್ಟಾರೆ ಐಪಿಎಲ್ ನಲ್ಲೂ ಇದು ಅವರು 89ನೇ ವಿಕೆಟ್ ಎನಿಸಿದೆ. ಆ ಮೂಲಕ ಪ್ರಜ್ಞಾನ್ ಓಜಾ (89) ಅವರ ದಾಖಲೆ ಸರಿಗಟ್ಟಿದರು. ಇನ್ನೊಂದೆಡೆ ಟಿಮ್ ಸೌಥಿ 23 ರನ್ ಗೆ 2 ವಿಕೆಟ್ ಉರುಳಿಸಿ ಗಮನಸೆಳೆದರು.
ಸನ್ ರೈಸರ್ಸ್ ತಂಡದ ಪರವಾಗಿ ಅಭಿಷೇಕ್ ಶರ್ಮ ಬ್ಯಾಟಿಂಗ್ ನಲ್ಲಿ ಗಮನಸೆಳೆದರು. ಐಪಿಎಲ್ ದಿಗ್ಗಜ ರಶೀದ್ ಖಾನ್ ಅವರ 23 ಎಸೆತಗಳಲ್ಲಿ 47 ರನ್ ಸಿಡಿಸಿದ್ದ ಅಭಿಷೇಕ್ ವರ್ಮ ಈ ಬಾರಿ ಸುನೀಲ್ ನಾರಾಯಣ್ ಒಂದೇ ಓವರ್ ನಲ್ಲಿ 17 ರನ್ ಚಚ್ಚಿದರು. 28 ಎಸೆತ ಎದುರಿಸಿದ ಅಭಿಷೇಕ್ ಶರ್ಮ (Abhishek Sharma) 4 ಬೌಂಡರಿ, 2 ಸಿಕ್ಸರ್ ಗಳಿದ್ದ 43 ರನ್ ಸಿಡಿಸಿ ವರುಣ್ ಚಕ್ರವರ್ತಿಗೆ ವಿಕೆಟ್ ನೀಡಿದರು. ಕೇನ್ ವಿಲಿಯಮನ್ಸ್ ಹಾಗೂ ರಾಹುಲ್ ತ್ರಿಪಾಠಿ ತಲಾ 9 ರನ್ ಗೆ ಔಟಾದರೆ, ಏಡೆನ್ ಮಾರ್ಕ್ರಮ್ 25 ಎಸೆತಗಳಲ್ಲಿ 3 ಸಿಕ್ಸರ್ ಗಳಿದ್ದ 32 ರನ್ ಬಾರಿಸಿ ಉಮೇಶ್ ಯಾದವ್ ಗೆ ಔಟಾದರು. ಮಾರ್ಕ್ರಮ್ 5ನೇ ವಿಕಟ್ ರೂಪದಲ್ಲಿ ಔಟಾಗುವ ವೇಳೆ ಸನ್ ರೈಸರ್ಸ್ 99 ರನ್ ಬಾರಿಸಿತ್ತು. ಹಾಗಾಗಿ ತಂಡದ ಸೋಲೂ ಕೂಡ ಖಚಿತಗೊಂಡಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.