IPL 2022: ಕೆಕೆಆರ್ ಎದುರಿನ ಪಂದ್ಯಕ್ಕೆ ಏನ್ರಿಚ್ ನೋಕಿಯ ಏಕೆ ಕಣಕ್ಕಿಳಿಯಲಿಲ್ಲ..?

Published : Apr 11, 2022, 12:08 PM IST
IPL 2022: ಕೆಕೆಆರ್ ಎದುರಿನ ಪಂದ್ಯಕ್ಕೆ ಏನ್ರಿಚ್ ನೋಕಿಯ ಏಕೆ ಕಣಕ್ಕಿಳಿಯಲಿಲ್ಲ..?

ಸಾರಾಂಶ

* ಕೋಲ್ಕತಾ ನೈಟ್ ರೈಡರ್ಸ್ ಎದುರು ಗೆದ್ದು ಬೀಗಿದ ಡೆಲ್ಲಿ ಕ್ಯಾಪಿಟಲ್ಸ್ * ಕೆಕೆಆರ್ ಎದುರಿನ ಪಂದ್ಯಕ್ಕೆ ತಂಡದಿಂದ ಹೊರಗುಳಿದ ಏನ್ರಿಚ್ ನೋಕಿಯ * ಮೊದಲ ಪಂದ್ಯದಲ್ಲೇ ಸಾಕಷ್ಟು ದುಬಾರಿಯಾಗಿದ್ದ ಮಾರಕ ವೇಗಿ 

ಮುಂಬೈ(ಏ.11): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯ ಸೂಪರ್ ಸಂಡೆಯ ಮೊದಲ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಬೌಲಿಂಗ್ ಮಾಡುವ ತೀರ್ಮಾನವನ್ನು ತೆಗೆದುಕೊಂಡಿತ್ತು. ಕೋಲ್ಕತಾ ನೈಟ್ ರೈಡರ್ಸ್ ತಂಡವು ತಂಡದಲ್ಲಿ ಯಾವುದೇ ಬದಲಾವಣೆ ಮಾಡದೇ ಕಣಕ್ಕಿಳಿದರೆ, ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಒಂದು ಮಹತ್ವದ ಬದಲಾವಣೆಯೊಂದಿಗೆ ಕಣಕ್ಕಿಳಿಯಿತು. ದಕ್ಷಿಣ ಆಫ್ರಿಕಾದ ಮಾರಕ ವೇಗಿ ಏನ್ರಿಚ್ ನೋಕಿಯ (Anrich Nortje) ಬದಲಿಗೆ ಎಡಗೈ ವೇಗಿ ಖಲೀಲ್ ಅಹಮ್ಮದ್ ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು.

ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದ ನೋಕಿಯಾ

4 ತಿಂಗಳ ಸುದೀರ್ಘ ಬಿಡುವಿನ ಬಳಿಕ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿದ್ದ ಮಾರಕ ವೇಗಿ ಏನ್ರಿಚ್ ನೋಕಿಯ, ಲಖನೌ ಸೂಪರ್ ಜೈಂಟ್ಸ್‌ ವಿರುದ್ದದ ಮೊದಲ ಪಂದ್ಯದಲ್ಲೇ ಸಾಕಷ್ಟು ದುಬಾರಿ ಬೌಲರ್ ಎನಿಸಿದ್ದರು. ಲಖನೌ ಎದುರಿನ ಕಳೆದ ಪಂದ್ಯದಲ್ಲಿ ನೋಕಿಯ ಎರಡು ಡೇಂಜರಸ್‌ ಬಾಲ್(ಭೀಮರ್) ಎಸೆದಿದ್ದರು. ಇದರ ಬೆನ್ನಲ್ಲೇ ನೋಕಿಯ ಬೌಲಿಂಗ್ ಮಾಡದಂತೆ ಅಂಪೈರ್‌ಗಳು ತಡೆದಿದ್ದರು. ಹೀಗಾಗಿ ಏನ್ರಿಚ್ ನೋಕಿಯ ತಮ್ಮ ಕೋಟಾದ 4 ಓವರ್‌ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಲಖನೌ ಎದುರು ನೋಕಿಯ ಕೇವಲ 2.2 ಓವರ್‌ಗಳಲ್ಲಿ ಯಾವುದೇ ವಿಕೆಟ್ ಪಡೆಯದೇ 35 ರನ್ ಬಿಟ್ಟುಕೊಟ್ಟಿದ್ದರು.

ಫಿಟ್ನೆಸ್‌ ಸಮಸ್ಯೆಯೇ ನೋಕಿಯ ಪಾಲಿಗೆ ದೊಡ್ಡ ತಲೆನೋವು:

ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಐಪಿಎಲ್ ಆಟಗಾರರ ಹರಾಜಿಗೂ ಮುನ್ನ ವೇಗಿ ಏನ್ರಿಚ್ ನೋಕಿಯ ಅವರನ್ನು ರೀಟೈನ್ ಮಾಡಿಕೊಂಡಿತ್ತು. ಹೀಗಾಗಿ ನೋಕಿಯ ಅವರಿಗೆ ಬರೋಬ್ಬರಿ 6.50 ಕೋಟಿ ರುಪಾಯಿ ಲಭಿಸಿತ್ತು. ಟೀಂ ಮ್ಯಾನೇಜ್‌ಮೆಂಟ್ ಕೂಡಾ ಅವರಿಂದ ಉತ್ತಮ ಪ್ರದರ್ಶನವನ್ನು ಎದುರು ನೋಡುತ್ತಿದೆ. ಡೆಲ್ಲಿ ಆಡಿದ ಮೊದಲೆರಡು ಪಂದ್ಯಗಳಿಂದ ಹೊರಗುಳಿದಿದ್ದ ನೋಕಿಯ, ಮೂರನೇ ಪಂದ್ಯದಲ್ಲಿ 15ನೇ ಆವೃತ್ತಿಯ ಐಪಿಎಲ್‌ನಲ್ಲಿ ಮೊದಲ ಪಂದ್ಯವನ್ನಾಡಿದ್ದರು. ಕೆಲವು ವರದಿಗಳ ಪ್ರಕಾರ, ಏನ್ರಿಚ್ ನೋಕಿಯ ಇನ್ನೂ ಫಿಟ್ನೆಸ್‌ ವಿಚಾರದಲ್ಲಿ ಸಂಪೂರ್ಣ ಗುಣಮುಖರಾಗಿಲ್ಲ ಎನ್ನಲಾಗುತ್ತಿದೆ. 

ಪೃಥ್ವಿ, ವಾರ್ನರ್‌ ಅಬ್ಬರಕ್ಕೆ ಕೆಕೆಆರ್‌ ತತ್ತರ

ಮುಂಬೈ: ಡೇವಿಡ್‌ ವಾರ್ನರ್‌, ಪೃಥ್ವಿ ಶಾ ಅಬ್ಬರದ ಬ್ಯಾಟಿಂಗ್‌ ಹಾಗೂ ಬೌಲರ್‌ಗಳ ಶಿಸ್ತುಬದ್ಧ ದಾಳಿಯ ನೆರವಿನಿಂದ ಕೋಲ್ಕತಾ ನೈಟ್‌ ರೈಡ​ರ್‍ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ 44 ರನ್‌ ಗೆಲುವು ಸಾಧಿಸಿದೆ. ಇದರೊಂದಿಗೆ ಕೆಕೆಆರ್‌ 5 ಪಂದ್ಯಗಳಲ್ಲಿ 2ನೇ ಸೋಲುಂಡರೆ, ಡೆಲ್ಲಿ 2 ಸೋಲುಗಳ ಬಳಿಕ ಮತ್ತೆ ಗೆಲುವಿನ ಹಳಿಗೆ ಮರಳಿತು. ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ ನಿಗದಿತ 20 ಓವರಲ್ಲಿ 5 ವಿಕೆಟ್‌ ಕಳೆದುಕೊಂಡು 215 ರನ್‌ ಕಲೆ ಹಾಕಿತು. ಕಠಿಣ ಗುರಿ ಬೆನ್ನತ್ತಿದ ಕೋಲ್ಕತಾ 19.4 ಓವರ್‌ಗಳಲ್ಲಿ 171 ರನ್‌ಗೆ ಆಲೌಟಾಗಿ ಸೋಲೊಪ್ಪಿಕೊಂಡಿತು.

ಆರಂಭಿಕರಾದ ವೆಂಕಟೇಶ್‌ ಅಯ್ಯರ್‌(18), ಅಜಿಂಕ್ಯ ರಹಾನೆ(08) ವಿಫಲರಾದರು. ನಿತೀಶ್‌ ರಾಣಾ 30 ರನ್‌ಗೆ ವಿಕೆಟ್‌ ಒಪ್ಪಿಸಿದರೆ, ಶ್ರೇಯಸ್‌ 33 ಎಸೆತಗಳಲ್ಲಿ 54 ರನ್‌ ಸಿಡಿಸಿದರು. ಆ್ಯಂಡ್ರೆ ರಸೆಲ್‌(24) ಕೊನೆವರೆಗೂ ದೊಡ್ಡ ಹೊಡೆತಗಳಿಗೆ ಪ್ರಯತ್ನಿಸಿದರೂ ಖಲೀಲ್‌ ಅಹ್ಮದ್‌, ಕುಲ್ದೀಪ್‌ ಯಾದವ್‌ ಮಾರಕ ದಾಳಿ ಮುಂದೆ ನಿರುತ್ತರರಾದರು. ಕುಲ್ದೀಪ್‌ ತಮ್ಮ ಮಾಜಿ ತಂಡದ ವಿರುದ್ಧ 4 ವಿಕೆಟ್‌ ಕಿತ್ತರೆ, ಖಲೀಲ್‌ 3 ವಿಕೆಟ್‌ ಎಗರಿಸಿದರು.

IPL 2022: ಗುಜರಾತ್ ಟೈಟಾನ್ಸ್ ಓಟಕ್ಕೆ ಬ್ರೇಕ್ ಹಾಕುತ್ತಾ ಸನ್‌ರೈಸರ್ಸ್..?

ಶಾ, ವಾರ್ನರ್‌ ಫಿಫ್ಟಿ: ತಮ್ಮ ಸ್ಫೋಟಕ ಲಯ ಮುಂದುವರಿಸಿದ ಪೃಥ್ವಿ ಶಾ ಸತತ 2ನೇ ಅರ್ಧಶತಕ ಬಾರಿಸಿದರು. ವಾರ್ನರ್‌ ಜೊತೆ ಸೇರಿ ಮೊದಲ ವಿಕೆಟ್‌ಗೆ 94 ರನ್‌ ಕಲೆ ಹಾಕಿದರು.ಪೃಥ್ವಿ 51 ರನ್‌ ಗಳಿಸಿದರೆ, ಐಪಿಎಲ್‌ನಲ್ಲಿ 51ನೇ ಅರ್ಧಶತಕ ದಾಖಲಿಸಿದ ವಾರ್ನರ್‌ 61 ರನ್‌ ಗಳಿಸಿ ಔಟಾದರು. ರಿಷಬ್‌ ಪಂತ್‌ 27 ರನ್‌ ಕೊಡುಗೆ ನೀಡಿದರು. ಅಕ್ಷರ್‌ ಪಟೇಲ್‌(ಔಟಾಗದೆ 22), ಶಾರ್ದೂಲ್‌ ಠಾಕೂರ್‌(ಔಟಾಗದೆ 29) ಕೊನೆ 3 ಓವರಲ್ಲಿ ಸ್ಫೋಟಕ ಆಟವಾಡಿ 6ನೇ ವಿಕೆಟ್‌ಗೆ 49 ರನ್‌ ಜೊತೆಯಾಟವಾಡಿ ತಂಡ 200 ರನ್‌ ದಾಟಲು ನೆರವಾದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮುಂಬೈಗೆ ಬಂದಿಳಿದ ವಿರುಷ್ಕಾ ದಂಪತಿ; ಮೆಸ್ಸಿಯನ್ನು ಭೇಟಿಯಾಗ್ತಾರಾ ವಿರಾಟ್ ಕೊಹ್ಲಿ?
ಟೀಂ ಇಂಡಿಯಾ ಕ್ರಿಕೆಟಿಗರಿಗೆ ದುಶ್ಚಟವಿದೆ, ಆದರೆ ನನ್ನ ಪತಿಗಿಲ್ಲ! ಈ ಕ್ರಿಕೆಟರ್ ಪತ್ನಿಯಿಂದ ವಿವಾದಾತ್ಮಕ ಹೇಳಿಕೆ