2008ರಲ್ಲಿ 8 ತಂಡಕ್ಕೆ 3,000 ಕೋಟಿ ರೂ, ಈಗ ಒಂದು ಐಪಿಎಲ್‌ ತಂಡಕ್ಕೆ 7 ಸಾವಿರ ಕೋಟಿ ರೂ..!

Suvarna News   | Asianet News
Published : Oct 27, 2021, 08:57 AM ISTUpdated : Oct 27, 2021, 09:31 AM IST
2008ರಲ್ಲಿ 8 ತಂಡಕ್ಕೆ 3,000 ಕೋಟಿ ರೂ, ಈಗ ಒಂದು ಐಪಿಎಲ್‌ ತಂಡಕ್ಕೆ 7 ಸಾವಿರ ಕೋಟಿ ರೂ..!

ಸಾರಾಂಶ

* ಹೊಸ 2 ಐಪಿಎಲ್‌ ತಂಡಗಳ ಖರೀದಿಯಲ್ಲಿ ಬಿಸಿಸಿಐಗೆ ಜಾಕ್‌ಪಾಟ್‌ * ದಾಖಲೆಯ ಮೊತ್ತಕ್ಕೆ ಹೊಸ ಎರಡು ತಂಡಗಳು ಹರಾಜು * ಹಲವರ ಪಾಲಿಗೆ ಚಿನ್ನದ ಮೊಟ್ಟೆಯಿಡುವ ಕೋಳಿಯಾದ ಐಪಿಎಲ್

ನವದೆಹಲಿ(ಅ.27): ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) (IPL) ಟೂರ್ನಿಯು 2008ರಲ್ಲಿ ಆರಂಭಗೊಂಡಾಗ ಅದು ‘ಚಿನ್ನದ ಮೊಟ್ಟೆ ಇಡುವ ಕೋಳಿ’ ಎಂದು ಬಹುತೇಕರಿಗೆ ಗೊತ್ತಿರಲಿಲ್ಲ. ತಂಡಗಳನ್ನು ಬಿಡ್‌ ಮಾಡುವುದು, ಆಟಗಾರರನ್ನು ಹರಾಜು ಹಾಕುವುದು, ಕ್ರೀಡಾಂಗಣದಲ್ಲಿ ಸುಂದರ ಹುಡುಗಿಯರ ನೃತ್ಯ, ಹೃದಯ ಬಡಿತ ಹೆಚ್ಚಿಸುವ ಸಂಗೀತ ಇವೆಲ್ಲವೂ ಕೇವಲ ಮನರಂಜನೆಯಂತೆ ಕಂಡಿತು. ಆದರೆ ಐಪಿಎಲ್‌ ಎನ್ನುವುದು ಎಷ್ಟು ದೊಡ್ಡ ವ್ಯಾಪರ ಎನ್ನುವುದು ಈಗೀಗ ಎಲ್ಲರಿಗೂ ಗೊತ್ತಾಗುತ್ತಿದೆ.

ಇತ್ತೀಚೆಗಷ್ಟೇ 2 ಹೊಸ ಐಪಿಎಲ್‌ ತಂಡಗಳಿಗಾಗಿ ಹರಾಜು ಪ್ರಕ್ರಿಯೆ (IPL New Teams Bidding) ನಡೆಯಿತು. ಲಖನೌ ತಂಡವನ್ನು ಆರ್‌ಪಿ-ಸಂಜೀವ್‌ ಗೋಯೆಂಕಾ (RP Sanjiv Goenka) ಸಂಸ್ಥೆಯು ಬರೋಬ್ಬರಿ 7,090 ಕೋಟಿಗೆ ಖರೀದಿಸಿತು. ಅಹಮದಾಬಾದ್‌ ತಂಡವು (Ahmedabad Team) 5,625 ಕೋಟಿಗೆ ಯುರೋಪ್‌ನ ಸಿವಿಸಿ (CVS Group) ಪಾಲಾಯಿತು. 2 ತಂಡಗಳ ಮಾರಾಟದಿಂದ ಬಿಸಿಸಿಐ (BCCI) ಬೊಕ್ಕಸಕ್ಕೆ 12,700 ಕೋಟಿ ರುಪಾಯಿ ಹರಿದುಬಂತು. ಆದರೆ 2008ರಲ್ಲಿ ಒಟ್ಟು 8 ತಂಡಗಳ 3,000 ಕೋಟಿ ರುಪಾಯಿಗೂ ಕಡಿಮೆ ಮೊತ್ತಕ್ಕೆ ಮಾರಾಟವಾಗಿದ್ದವು ಎನ್ನುವ ಅಂಶ ಎಲ್ಲರ ಕಣ್ಣು ಕುಕ್ಕುತ್ತದೆ. 2 ವರ್ಷಗಳ ಬಳಿಕ ಕೊಚ್ಚಿ ಟಸ್ಕ​ರ್ಸ್‌ 1,533 ಕೋಟಿ ರು.ಗೆ ಮಾರಾಟವಾಗಿತ್ತು. ಪುಣೆ ವಾರಿಯರ್ಸ್‌ 1,702 ಕೋಟಿ ರುಪಾಯಿಗೆ ಬಿಡ್‌ ಆಗಿತ್ತು.

IPL 2022: ಎರಡು ಹೊಸ ತಂಡ ಸೇರ್ಪಡೆ; ಲಖನೌ ತಂಡಕ್ಕೆ ಹೊಸ ಹೆಸರಿಟ್ಟ ಯೋಗಿ...!

ದುಬಾರಿ ಆಗಲು ಕಾರಣವೇನು?

2008ರಲ್ಲಿ ಗರಿಷ್ಠ ಮೊತ್ತಕ್ಕೆ ಮಾರಾಟವಾದ ತಂಡ ಎಂದರೆ ಮುಂಬೈ ಇಂಡಿಯನ್ಸ್‌ (Mumbai Indians). 111.9 ಮಿಲಿಯನ್‌ ಡಾಲರ್‌ (447.6 ಕೋಟಿ ರುಪಾಯಿ)ಗೆ ಮುಖೇಶ್‌ ಅಂಬಾನಿ (Mukesh Ambani) ತಂಡ ಖರೀದಿಸಿದ್ದರು. ಆಗ ಒಂದು ಅಮೆರಿಕನ್‌ ಡಾಲರ್‌ಗೆ ಸುಮಾರು 43 ರುಪಾಯಿ ಇತ್ತು. ಈಗ ಡಾಲರ್‌ ಮೌಲ್ಯ 74.93 ರು. ಇದೆ. ಐಪಿಎಲ್‌ ಅನ್ನು ಒಂದು ವ್ಯವಹಾರವಾಗಿ ಹೇಗೆ ನಿರ್ವಹಿಸಬೇಕು ಎನ್ನುವ ಮಾಹಿತಿ ಬಹುತೇಕ ಮಾಲಿಕರಿಗೆ ಇರಲಿಲ್ಲ. ಅಲ್ಲದೇ ಸ್ವತಃ ಬಿಸಿಸಿಐಗೇ ಐಪಿಎಲ್‌ ಟೂರ್ನಿ ಇಷ್ಟು ದೊಡ್ಡದಾಗಿ ಬೆಳೆಯಲಿದೆ ಎನ್ನುವ ಸುಳಿವು ಇರಲಿಲ್ಲ. 2008ರಲ್ಲಿ ಸೋನಿ ಸಂಸ್ಥೆಯು 918 ಮಿಲಿಯನ್‌ ಡಾಲರ್‌ (ಅಂದಿನ ಡಾಲರ್‌ ಮೌಲ್ಯದಲ್ಲಿ ಅಂದಾಜು 4,000 ಕೋಟಿ ರು.)ಗೆ ಮಾಧ್ಯಮ ಹಕ್ಕು ಖರೀದಿಸಿತ್ತು. 2017ರಲ್ಲಿ ಸ್ಟಾರ್‌ ಸಂಸ್ಥೆಯು ಬರೋಬ್ಬರಿ 16,347.5 ಕೋಟಿ ರು. ನೀಡಿ 5 ವರ್ಷಕ್ಕೆ ಮಾಧ್ಯಮ ಹಕ್ಕು ಖರೀದಿ ಮಾಡಿತ್ತು.

180 ಕೋಟಿ ಆಸ್ತಿ, ಖಾಸಗಿ ಜೆಟ್: IPL ಹೊಸ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಐಷಾರಾಮಿ ಲೈಫ್!

ತಂಡಗಳಿಗೆ ಲಾಭ ಹೇಗೆ?

ಬಿಸಿಸಿಐ ತನಗೆ ಐಪಿಎಲ್‌ನಿಂದ ಬರುವ ಒಟ್ಟು ಆದಾಯದಲ್ಲಿ ಶೇ.50ರಷ್ಟು ಹಣವನ್ನು ಫ್ರಾಂಚೈಸಿಗಳಿಗೆ ಸಮನಾಗಿ ಹಂಚಲಿದೆ. ಜೊತೆಗೆ ಪ್ರಾಯೋಜಕತ್ವ, ಜೆರ್ಸಿ ಮಾರಾಟ, ಟಿಕೆಟ್‌ ಮಾರಾಟದಿಂದ ಪ್ರತಿ ವರ್ಷ ಫ್ರಾಂಚೈಸಿಗಳು ಹಣ ಸಂಪಾದಿಸಲಿದ್ದಾರೆ. ಪ್ರತಿ ಫ್ರಾಂಚೈಸಿಗೆ ಒಂದು ಆವೃತ್ತಿ ಅಂದಾಜು 300-350 ಕೋಟಿ ರು. ಹಣ ಸಂಪಾದನೆ ಆಗಲಿದೆ.

ಪ್ರಮುಖ ಉಧ್ಯಮಿಗಳಿಂದ ತಂಡ ಖರೀದಿಸಲು ಆಸಕ್ತಿ: 2022ನೇ ಸಾಲಿನ ಐಪಿಎಲ್ ಟೂರ್ನಿಗೆ ಫ್ರಾಂಚೈಸಿಗಳಾಗಲು ಖ್ಯಾತ ಉಧ್ಯಮಿಗಳಾದ ಅದಾನಿ ಗ್ರೂಪ್, ಕೋಟಕ್, ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ತಂಡದ ಮಾಲೀಕರು ಸೇರಿದಂತೆ ಪ್ರಮುಖ ಉಧ್ಯಮಿಗಳು ಆಸಕ್ತಿ ತೋರಿದ್ದರು. ಆದರೆ ಸಿವಿಸಿ ಗ್ರೂಪ್ ಹಾಗೂ ಆರ್‌ಪಿಎಸ್‌ಜಿ ಗ್ರೂಪ್‌ ಹೊಸ ತಂಡಗಳನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?