IPL 2022: ಈ ಬಾರಿ ಹೊಸ ರೂಪದಲ್ಲಿ ಐಪಿಎಲ್‌ ಝಲಕ್‌..!

By Kannadaprabha News  |  First Published Feb 26, 2022, 6:11 AM IST

* 15ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ 10 ತಂಡಗಳು ಭಾಗಿ

* ಹೊಸ ರೂಪದಲ್ಲಿ ನಡೆಯಲಿದೆ ಈ ಬಾರಿಯ ಐಪಿಎಲ್ ಟೂರ್ನಿ

* ಈ ಬಾರಿ ಐಪಿಎಲ್‌ನಲ್ಲಿ 10 ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದೆ


ನವದೆಹಲಿ(ಫೆ.26): 15ನೇ ಆವೃತ್ತಿಯ ಐಪಿಎಲ್‌ನ (IPL 2022) ಮಾದರಿಯನ್ನು ಬಿಸಿಸಿಐ ಬದಲಾವಣೆ ಮಾಡಿದ್ದು, 10 ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಎಲ್ಲಾ ತಂಡಗಳು ಈ ಹಿಂದಿನಂತೆ ಲೀಗ್‌ ಹಂತದಲ್ಲಿ ತಲಾ 14 ಪಂದ್ಯಗಳನ್ನು ಆಡಲಿವೆ. ಟೂರ್ನಿಯು ಮಾರ್ಚ್‌ 26ರಿಂದ ಮೇ 29ರ ವರೆಗೂ ನಡೆಯಲಿದೆ ಎಂದು ಬಿಸಿಸಿಐ ಶುಕ್ರವಾರ ಅಧಿಕೃತವಾಗಿ ಘೋಷಿಸಿದೆ. 

ಬಿಸಿಸಿಐ (BCCI) ಪ್ರಕಟಣೆ ಪ್ರಕಾರ ‘ಎ’ ಗುಂಪಿನಲ್ಲಿ ಮುಂಬೈ ಇಂಡಿಯನ್ಸ್‌ (Mumbai Indians), ಕೋಲ್ಕತಾ ನೈಟ್‌ ರೈಡರ್ಸ್‌ , ರಾಜಸ್ಥಾನ ರಾಯಲ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಲಖನೌ ಸೂಪರ್‌ಜೈಂಟ್ಸ್‌ ತಂಡಗಳು ಸ್ಥಾನ ಪಡೆದಿವೆ. ‘ಬಿ’ ಗುಂಪಿನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌, ಸನ್‌ರೈಸ​ರ್ಸ್‌ ಹೈದರಾಬಾದ್‌, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ಪಂಜಾಬ್‌ ಕಿಂಗ್ಸ್‌ ಹಾಗೂ ಗುಜರಾತ್‌ ಟೈಟಾನ್ಸ್‌ ತಂಡಗಳಿವೆ. ಈ ಬಾರಿಯ ಐಪಿಎಲ್‌ ಟೂರ್ನಿಯಲ್ಲಿ ಹೊಸದಾಗಿ ಗುಜರಾತ್ ಸೂಪರ್ ಜೈಂಟ್ಸ್‌ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಪಾಲ್ಗೊಳ್ಳುತ್ತಿರುವುದರಿಂದ ಟೂರ್ನಿಯ ಮಾದರಿಯಲ್ಲಿ ಕೊಂಚ ಬದಲಾವಣೆಯನ್ನು ಮಾಡಲಾಗಿದೆ.

Latest Videos

undefined

ಟೂರ್ನಿ ಮಾದರಿ ಹೇಗೆ?

ಲೀಗ್‌ ಹಂತದಲ್ಲಿ ಒಟ್ಟು 70 ಪಂದ್ಯಗಳು ನಡೆಯಲಿದ್ದು, ಪ್ಲೇ-ಆಫ್‌ ಹಂತದಲ್ಲಿ 4 ಪಂದ್ಯಗಳು ಇರಲಿವೆ. ಆಯಾ ಗುಂಪಿನಲ್ಲಿರುವ ತಂಡಗಳು ಪರಸ್ಪರ ಎರಡು ಬಾರಿ ಎದುರಾಗಲಿವೆ. ಮತ್ತೊಂದು ಗುಂಪಿನಲ್ಲಿರುವ ಒಂದು ತಂಡದ ವಿರುದ್ಧ 2 ಬಾರಿ, ಉಳಿದ 4 ತಂಡಗಳ ವಿರುದ್ಧ ತಲಾ ಒಮ್ಮೆ ಸೆಣಸಲಿವೆ. ತಂಡಗಳು ಗೆದ್ದಿರುವ ಒಟ್ಟು ಟ್ರೋಫಿ ಹಾಗೂ ಪ್ರವೇಶಿಸಿರುವ ಒಟ್ಟು ಫೈನಲ್‌ಗಳನ್ನು ಆಧರಿಸಿ ಶ್ರೇಯಾಂಕ ನೀಡಲಾಗಿದೆ. ಇದರ ಅನುಸಾರ 5 ಬಾರಿ ಚಾಂಪಿಯನ್‌ ಆಗಿರುವ ಮುಂಬೈಗೆ ಮೊದಲ ಸ್ಥಾನ ಸಿಕ್ಕಿದ್ದು, ‘ಎ’ ಗುಂಪಿನಲ್ಲಿದೆ. 4 ಟ್ರೋಫಿ ಗೆದ್ದಿರುವ ಚೆನ್ನೈ 2ನೇ ಸ್ಥಾನ ಸಿಕ್ಕಿದ್ದು, ‘ಬಿ’ ಗುಂಪಿನಲ್ಲಿ ಸ್ಥಾನ ನೀಡಲಾಗಿದೆ.

ಉದಾಹರಣೆಗೆ ‘ಎ’ ಗುಂಪಿನಲ್ಲಿರುವ ಮುಂಬೈ ತಂಡವು ಕೆಕೆಆರ್‌, ರಾಜಸ್ಥಾನ, ಡೆಲ್ಲಿ ಹಾಗೂ ಲಖನೌ ತಂಡಗಳ ವಿರುದ್ಧ ತಲಾ 2 ಪಂದ್ಯಗಳನ್ನು ಆಡಲಿದೆ. ಅಲ್ಲಿಗೆ 8 ಪಂದ್ಯಗಳು ಪೂರ್ಣಗೊಳ್ಳಲಿವೆ. ಇನ್ನು ‘ಬಿ’ ಗುಂಪಿನ ಮೊದಲ ಸ್ಥಾನದಲ್ಲಿರುವ ಚೆನ್ನೈ ವಿರುದ್ಧ 2, ಆರ್‌ಸಿಬಿ, ಸನ್‌ರೈಸ​ರ್ಸ್‌ ಹೈದರಾಬಾದ್, ಪಂಜಾಬ್‌ ಕಿಂಗ್ಸ್‌ ಹಾಗೂ ಗುಜರಾತ್‌ ಟೈಟಾನ್ಸ್ ವಿರುದ್ಧ ತಲಾ 1 ಪಂದ್ಯವನ್ನಾಡಲಿದೆ. ಈ ಮೂಲಕ 14 ಪಂದ್ಯಗಳು ಪೂರ್ಣಗೊಳ್ಳಲಿವೆ.

IPL 2022: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಸ್ಥಾನ ಅಲಂಕರಿಸಿದ ಅಜಿತ್ ಅಗರ್‌ಕರ್

ಆರ್‌ಸಿಬಿ ತಂಡವು ಸನ್‌ರೈಸ​ರ್ಸ್‌ , ಪಂಜಾಬ್‌ ಕಿಂಗ್ಸ್, ಚೆನ್ನೈ ಸೂಪರ್ ಕಿಂಗ್ಸ್‌ ಹಾಗೂ ಗುಜರಾತ್‌ ಟೈಟಾನ್ಸ್‌ ವಿರುದ್ಧ ತಲಾ 2 ಪಂದ್ಯವನ್ನಾಡಲಿದ್ದು, ‘ಎ’ ಗುಂಪಿನಲ್ಲಿರುವ ರಾಜಸ್ಥಾನ ವಿರುದ್ಧ 2 ಪಂದ್ಯವನ್ನಾಡಲಿದೆ. ಇನ್ನುಳಿದ 4 ತಂಡಗಳ ವಿರುದ್ಧ ತಲಾ ಒಂದು ಪಂದ್ಯ ಆಡಲಿದೆ. ವಿರಾಟ್ ಕೊಹ್ಲಿ (Virat Kohli) ಆರ್‌ಸಿಬಿ ನಾಯಕತ್ವಕ್ಕೆ ಗುಡ್‌ ಬೈ ಹೇಳಿರುವುದರಿಂದ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನಾಯಕ ಯಾರಾಗಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ.

ಇನ್ನುಳಿದಂತೆ 2 ತಿಂಗಳ ಅವಧಿಯಲ್ಲಿ 74 ಪಂದ್ಯಗಳನ್ನು ಪೂರ್ಣಗೊಳಿಸಬೇಕು ಎನ್ನುವ ಉದ್ದೇಶದಿಂದ ಮಾದರಿಯಲ್ಲಿ ಬದಲಾವಣೆ ತರಲಾಗಿದೆ. ಮಾದರಿಯ ರಚನೆ ಹಿಂದೆ ತರ್ಕವಿಲ್ಲ ಎಂದೇ ಹೇಳಲಾಗುತ್ತದೆ.

ಪಂದ್ಯಗಳು ಎಲ್ಲೆಲ್ಲಿ?

ತಂಡಗಳು ಮುಂಬೈನ ವಾಂಖೇಡೆ ಕ್ರೀಡಾಂಗಣ ಹಾಗೂ ಡಿ.ವೈ.ಪಾಟೀಲ್‌ ಕ್ರೀಡಾಂಗಣದಲ್ಲಿ ತಲಾ 4 ಪಂದ್ಯಗಳನ್ನಾಡಲಿದ್ದು, ಬ್ರಾಬೊರ್ನ್‌ ಕ್ರೀಡಾಂಗಣ(ಸಿಸಿಐ) ಹಾಗೂ ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ತಲಾ 3 ಪಂದ್ಯಗಳನ್ನು ಆಡಲಿವೆ.


 

click me!