
ದುಬೈ(ಫೆ.25): ಮುಂಬರುವ ಮಹಿಳಾ ಏಕದಿನ ವಿಶ್ವಕಪ್‌ಗೆ (ICC Women's World Cup 2022) ಕೋವಿಡ್ ಭೀತಿ ಎದುರಾಗಿದ್ದು, ಟೂರ್ನಿ ಸುಗಮವಾಗಿ ನಡೆಯಲು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಹೊಸ ಮಾರ್ಗ ಕಂಡು ಹಿಡಿದಿದೆ. ಸೋಂಕಿನಿಂದಾಗಿ ಆಟಗಾರ್ತಿಯರು ತಂಡದಿಂದ ಹೊರಬಿದ್ದು ಕನಿಷ್ಠ 11 ಮಂದಿಯನ್ನು ಹೊಂದಿಸಲು ಸಾಧ್ಯವಾಗದಿದ್ದರೆ, 9 ಆಟಗಾರ್ತಿಯರೊಂದಿಗೆ ಆಡಲು ಉಭಯ ತಂಡಗಳಿಗೂ ವಿನಾಯಿತಿ ನೀಡಲು ಐಸಿಸಿ (ICC) ಉದ್ದೇಶಿಸಿದೆ.
ಈ ಬಗ್ಗೆ ಐಸಿಸಿ ಟೂರ್ನಿಗಳ ಮುಖ್ಯಸ್ಥೆ ಕ್ರಿಸ್ ಟೆಟ್ಲೆ ಮಾಹಿತಿ ನೀಡಿದ್ದು, ‘ಅಗತ್ಯ ಬಿದ್ದರೆ 9 ಆಟಗಾರ್ತಿಯರೊಂದಿಗೆ ಆಡಲು ಅವಕಾಶ ನೀಡುತ್ತೇವೆ. ತಂಡದ ಆಡಳಿತ ಮಂಡಳಿಯಲ್ಲಿ ಮಹಿಳೆಯರಿದ್ದರೆ ಇಬ್ಬರಿಗೆ ಫೀಲ್ಡಿಂಗ್ ಮಾಡಲು ಅನುಮತಿ ನೀಡುತ್ತೇವೆ’ ಎಂದು ತಿಳಿಸಿದ್ದಾರೆ. ಈ ನಿಯಮ ಈಗಾಗಲೇ ಐಸಿಸಿ ನಿಯಮಾವಳಿಗಳಲ್ಲಿದ್ದು, ಇತ್ತೀಚೆಗಷ್ಟೇ ಮುಕ್ತಾಯಗೊಂಡ ಅಂಡರ್-19 ಏಕದಿನ ವಿಶ್ವಕಪ್‌ನಲ್ಲಿ (ICC U-19 World Cup) ಇದನ್ನು ಅಳವಡಿಸಲಾಗಿತ್ತು. ಆದರೆ ಮಾರ್ಚ್ 4ರಿಂದ ನ್ಯೂಜಿಲೆಂಡ್‌ನಲ್ಲಿ ಆರಂಭವಾಗಲಿರುವ ಮಹಿಳಾ ವಿಶ್ವಕಪ್‌ನಲ್ಲಿ ಇದು ಜಾರಿಯಾಗುವ ಸಾಧ್ಯತೆ ಇದೆ.
ಏಕದಿನ ಸರಣಿ: ವೈಟ್‌ವಾಷ್ ತಪ್ಪಿಸಿದ ಭಾರತ ವನಿತೆಯರು
ಕ್ವೀನ್ಸ್‌ಟೌನ್: ನ್ಯೂಜಿಲೆಂಡ್ ವಿರುದ್ಧದ 5ನೇ ಹಾಗೂ ಕೊನೆ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡ 6 ವಿಕೆಟ್ ಜಯಗಳಿಸಿದ್ದು, ವೈಟ್‌ವಾಷ್ ಮುಖಭಂಗ ತಪ್ಪಿಸಿದೆ. ಮೊದಲ 4 ಪಂದ್ಯಗಳನ್ನು ಗೆದ್ದಿದ್ದ ಕಿವೀಸ್ 4-1ರಿಂದ ಸರಣಿ ಕೈವಶ ಮಾಡಿಕೊಂಡಿದೆ.
Ind vs SL : ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡಕ್ಕೆ ಭರ್ಜರಿ ಜಯ
ಮೊದಲು ಬ್ಯಾಟ್ ಮಾಡಿದ ಕಿವೀಸ್ 9 ವಿಕೆಟ್‌ಗೆ 251 ರನ್ ಕಲೆ ಹಾಕಿತು. ಅಮೇಲಿಯಾ ಕೆರ್ 66 ರನ್ ಗಳಿಸಿದರು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಭಾರತ 46 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ಸ್ಮೃತಿ ಮಂಧಾನ(71), ಹರ್ಮನ್‌ಪ್ರೀತ್ ಕೌರ್(63) ಹಾಗೂ ನಾಯಕಿ ಮಿಥಾಲಿ ರಾಜ್(ಔಟಾಗದೆ 57) ತಲಾ ಅರ್ಧಶತಕ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಮಂಧಾನ ಪಂದ್ಯಶ್ರೇಷ್ಠ, ಕೆರ್ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು.
ಟಿ20 ರ‍್ಯಾಂಕಿಂಗ್: ವೆಂಕಿ, ಸೂರ್ಯ ಭಾರೀ ಜಿಗಿತ
ದುಬೈ: ಐಸಿಸಿ ಟಿ20 ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ (ICC T20 Rankings) ಭಾರತದ ತಾರಾ ಬ್ಯಾಟರ್‌ಗಳಾದ ಸೂರ್ಯಕುಮಾರ್ ಯಾದವ್ (Suryakumar Yadav) ಹಾಗೂ ವೆಂಕಟೇಶ್ ಅಯ್ಯರ್ (Venkatesh Iyer) ಭಾರಿ ಪ್ರಗತಿ ಸಾಧಿಸಿದ್ದಾರೆ. ನೂತನ ರ‍್ಯಾಂಕಿಂಗ್‌ನಲ್ಲಿ ಸೂರ್ಯಕುಮಾರ್ ಯಾದವ್ 35 ಸ್ಥಾನ ಮೇಲಕ್ಕೇರಿ 21ನೇ ಸ್ಥಾನ ಪಡೆದಿದ್ದು, ವೆಂಕಟೇಶ್ ಅಯ್ಯರ್ ಬರೋಬ್ಬರಿ 203 ಸ್ಥಾನ ಜಿಗಿತ ಕಂಡ 115ನೇ ಸ್ಥಾನಕ್ಕೆ ಏರಿದ್ದಾರೆ. ಕೆ.ಎಲ್.ರಾಹುಲ್ (KL Rahul) 2 ಸ್ಥಾನ ಕುಸಿದು 6ನೇ ಸ್ಥಾನ ಪಡೆದರೆ, ವಿರಾಟ್ ಕೊಹ್ಲಿ (Virat Kohli) 10ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಬೌಲಿಂಗ್ ಹಾಗೂ ಆಲ್ರೌಂಡರ್‌ಗಳ ಪಟ್ಟಿಯಲ್ಲಿ ಭಾರತ ಆಟಗಾರರ ಸ್ಥಾನ ಗಳಿಸಲು ವಿಫಲರಾಗಿದ್ದಾರೆ.
ಅಂತಾರಾಷ್ಟ್ರೀಯ ಟಿ20ಯಲ್ಲಿ ಗರಿಷ್ಠ ರನ್: ರೋಹಿತ್ ಶರ್ಮಾ ದಾಖಲೆ
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಕಲೆಹಾಕಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ರೋಹಿತ್ ಶರ್ಮಾ (Rohit Sharma) ಅಗ್ರಸ್ಥಾನಕ್ಕೇರಿದ್ದಾರೆ. ಲಂಕಾ ವಿರುದ್ಧದ ಮೊದಲ ಟಿ20ಯಲ್ಲಿ ರೋಹಿತ್, ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್‌ರನ್ನು ಹಿಂದಿಕ್ಕಿದರು.
ಸದ್ಯ ರೋಹಿತ್ ಶರ್ಮಾ 123 ಪಂದ್ಯಗಳಲ್ಲಿ 3,307 ರನ್ ಗಳಿಸಿ ಮೊದಲ ಸ್ಥಾನಕ್ಕೇರಿದ್ದಾರೆ. ಗಪ್ಟಿಲ್ 112 ಪಂದ್ಯಗಳಲ್ಲಿ 3,299 ರನ್ ಕಲೆಹಾಕಿದ್ದು, 2ನೇ ಸ್ಥಾನ ಪಡೆದಿದ್ದಾರೆ. ವಿರಾಟ್ ಕೊಹ್ಲಿ 97 ಪಂದ್ಯಗಳಲ್ಲಿ 3,296 ರನ್‌ಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.