
ನವದೆಹಲಿ(ಮೇ.05): ಯಾವುದೇ ಅನುಮತಿ ಇಲ್ಲದೇ ನಕಲಿ ಮಾನ್ಯತಾ ಪತ್ರದೊಂದಿಗೆ ಮೇ 02ರಂದು ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಪಂದ್ಯದ ವೇಳೆ ಮೈದಾನ ಪ್ರವೇಶಿಸಿದ್ದ ಇಬ್ಬರು ಬುಕಿಗಳನ್ನು ಬಂಧಿಸಿ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಘಟನೆ ನಡೆದಿದೆ.
ಈ ವಿಚಾರವನ್ನು ಇಂದು(ಮೇ.05) ಎಎನ್‌ಐ ಸುದ್ದಿಸಂಸ್ಥೆ ಟ್ವೀಟ್ ಮೂಲಕ ಖಚಿತಪಡಿಸಿದ್ದು, ಕಾನೂನುಬಾಹಿರವಾಗಿ ಮೈದಾನ ಪ್ರವೇಶಿಸಿದ ಈ ಬುಕಿಗಳಿಬ್ಬರ ಮೇಲೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಇಬ್ಬರು ಬುಕಿಗಳ ಮೇಲೆ ಐಪಿಸಿ ಸೆಕ್ಷನ್ ಹಾಗೂ ಸಾಂಕ್ರಾಮಿಕ ರೋಗಗಳ ಕಾಯ್ದೆ(ಎಪಿಡೆಮಿಕ್ ಡಿಸೀಸ್ ಆಕ್ಟ್) ಅನ್ವಯ ಕೇಸ್ ದಾಖಲಿಸಲಾಗಿದೆ. ಈ ಇಬ್ಬರು ಬುಕಿಗಳು ಇದೀಗ 5 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ.
14ನೇ ಆವೃತ್ತಿಯ ಐಪಿಎಲ್ ಟೂರ್ನಿಯ 29ನೇ ಪಂದ್ಯವಾದ ರಾಜಸ್ಥಾನ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯಕ್ಕೆ ನವದೆಹಲಿಯ ಅರುಣ್ ಜೇಟ್ಲಿ ಮೈದಾನ ಆತಿಥ್ಯವನ್ನು ವಹಿಸಿತ್ತು. ಈ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಈ ಆವೃತ್ತಿಯಲ್ಲಿ ಮೊದಲ ಬಾರಿಗೆ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮುನ್ನಡೆಸಿದ್ದರು. ಜೋಸ್ ಬಟ್ಲರ್ ಸಿಡಿಸಿದ ಸ್ಪೋಟಕ ಶತಕದ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡವು ಆ ಪಂದ್ಯದಲ್ಲಿ 55 ರನ್‌ಗಳ ಅಂತರದ ಭರ್ಜರಿ ಗೆಲುವು ದಾಖಲಿಸಿತ್ತು. ಈ ಪಂದ್ಯದ ಬಳಿಕ ಬಯೋ ಬಬಲ್‌ನಲ್ಲಿ ಕೋವಿಡ್ 19 ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ ಈ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಬಿಸಿಸಿಐ ಅನಿರ್ದಿಷ್ಟಾವಧಿಗೆ ಮುಂದೂಡಿದೆ.
ಐಪಿಎಲ್ 2021: ಸಿಎಸ್‌ಕೆ ಬ್ಯಾಟಿಂಗ್ ಕೋಚ್ ಮೈಕ್ ಹಸ್ಸಿಗೆ ಕೋವಿಡ್ 19 ದೃಢ..!
ಈ ಇಬ್ಬರು ಕ್ರಿಕೆಟ್ ಬುಕಿಗಳು ರಾಜಸ್ಥಾನ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಸಲು ಬಂದಿದ್ದರೇ ಎನ್ನುವ ಕುರಿತಂತೆ ಡೆಲ್ಲಿ ಪೊಲೀಸ್ ಅಪರಾಧ ವಿಭಾಗ ತನಿಖೆ ನಡೆಸಲಾರಂಭಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಬಂಧಿತರನ್ನು ಕ್ರಿಶನ್ ಗರ್ಗ್ ಹಾಗೂ ಮನೀಶ್ ಕೌನ್ಸಲ್ ಎಂದು ಗುರುತಿಸಲಾಗಿದೆ. ಹೆಚ್ಚಿನ ತನಿಖೆ ನಡೆದ ಬಳಿಕವಷ್ಟೇ ಈ ಇಬ್ಬರು ಬುಕಿಗಳು ಏಕಾಗಿ ಮೈದಾನ ಪ್ರವೇಶಿಸಿದ್ದರು ಎನ್ನುವ ಸತ್ಯ ಹೊರಬೀಳಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.