CSK ತಂಡಕ್ಕೆ ಬಿಗ್ ಶಾಕ್, ಸ್ಟಾರ್ ಆಟಗಾರ ರವೀಂದ್ರ ಜಡೇಜಾ IPL ಟೂರ್ನಿಯಿಂದಲೇ ಔಟ್..!

Published : May 12, 2022, 08:42 AM ISTUpdated : May 12, 2022, 09:21 AM IST
CSK ತಂಡಕ್ಕೆ ಬಿಗ್ ಶಾಕ್, ಸ್ಟಾರ್ ಆಟಗಾರ ರವೀಂದ್ರ ಜಡೇಜಾ IPL ಟೂರ್ನಿಯಿಂದಲೇ ಔಟ್..!

ಸಾರಾಂಶ

* ಐಪಿಎಲ್ ಟೂರ್ನಿಯಿಂದ ಹೊರಬಿದ್ದ ರವೀಂದ್ರ ಜಡೇಜಾ * ಪಕ್ಕೆಲುಬಿನ ಗಾಯಕ್ಕೊಳಗಾಗಿರುವ ಸಿಎಸ್‌ಕೆ ಮಾಜಿ ನಾಯಕ * ಮಹತ್ವದ ಪಂದ್ಯಕ್ಕೂ ಮುನ್ನ ಜಡ್ಡು ಟೂರ್ನಿಯಿಂದಲೇ ಔಟ್

ಮುಂಬೈ(ಮೇ.12): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯಲ್ಲಿ ನಾಯಕತ್ವದಲ್ಲಿ ದಯನೀಯ ವೈಫಲ್ಯ ಅನುಭವಿಸಿದ್ದ ರವೀಂದ್ರ ಜಡೇಜಾ (Ravindra Jadeja Ruled out of IPL), ಇದೀಗ ಗಾಯದ ಸಮಸ್ಯೆಯಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್‌ (Chennai Super Kings) ತಂಡದಿಂದಲೇ ಹೊರಬಿದ್ದಿದ್ದಾರೆ. ಸಾಂಪ್ರದಾಯಿಕ ಎದುರಾಳಿ ಮುಂಬೈ ಇಂಡಿಯನ್ಸ್ ಎದುರಿನ ಮಹತ್ವದ ಪಂದ್ಯಕ್ಕೂ ಮುನ್ನವೇ ರವೀಂದ್ರ ಜಡೇಜಾ, ಐಪಿಎಲ್ ಟೂರ್ನಿಯಿಂದ ಹೊರಬಿದ್ದಿರುವುದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಮೇ 04ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ ನಡೆದ ಪಂದ್ಯದ ವೇಳೆ ಓಡಿಬಂದು ಕ್ಯಾಚ್ ಹಿಡಿಯುವ ವೇಳೆಯಲ್ಲಿ ರವೀಂದ್ರ ಜಡೇಜಾ ಅವರಿಗೆ ಪಕ್ಕೆಲುಬಿನ ಗಾಯಕ್ಕೊಳಗಾಗಿದ್ದಾರೆ (Rib Injury). ನಮಗೆ ಇನ್ನು ಕೇವಲ ಎರಡು ಪಂದ್ಯಗಳು ಬಾಕಿ ಇರುವುದರಿಂದ, ಜಡೇಜಾ ಅವರ ಅಂತಾರಾಷ್ಟ್ರೀಯ ಪಂದ್ಯಾವಳಿಗಳನ್ನು ಗಮನದಲ್ಲಿಟ್ಟುಕೊಂಡು, ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಎಇ ಕಾಶಿ ವಿಶ್ವನಾಥನ್ ತಿಳಿಸಿದ್ದಾರೆ.

ಸಿಎಸ್‌ಕೆ ಮೂಲಗಳ ಪ್ರಕಾರ, ರವೀಂದ್ರ ಜಡೇಜಾ ಅವರಿಗೆ ಪಕ್ಕೆಲುಬಿನಲ್ಲಿ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಕೈಬಿಡಲಾಗಿದೆ. ಅವರು ಬೌಲಿಂಗ್ ಹಾಗೂ ಬ್ಯಾಟಿಂಗ್ ಮಾಡುವ ವೇಳೆ ಪಕ್ಕೆಲುಬಿನ ನೋವು ಎದುರಿಸುತ್ತಿದ್ದರು. ಹೀಗಾಗಿ ಅವರಿಗೆ ವಿಶ್ರಾಂತಿ ನೀಡುವುದೇ ಒಳ್ಳೆಯದು ಎಂದು ನಾವು ತೀರ್ಮಾನಿಸಿದೆವು. ಈ ವಿಚಾರವನ್ನು ನಾವು ಈಗಾಗಲೇ ಬಿಸಿಸಿಐಗೂ ತಿಳಿಸಿದ್ದೇವೆ ಎಂದು ಕಾಶಿ ವಿಶ್ವನಾಥನ್ ಹೇಳಿದ್ದಾರೆ.

ರಾಯಲ್ ಚಾಲೆಂಜರ್ಸ್‌ ಬೆಂಗಳೂರು (Royal Challengers Bangalore) ವಿರುದ್ದದ ಪಂದ್ಯದ ವೇಳೆ ಡೈವ್ ಕ್ಯಾಚ್ ಮಾಡುವ ಯತ್ನದಲ್ಲಿ ರವೀಂದ್ರ ಜಡೇಜಾ ಪಕ್ಕೆಲುಬಿನ ನೋವಿಗೆ ಒಳಗಾಗಿದ್ದರು. ಇದಾದ ಬಳಿಕ ಮೇ 08ರಂದು ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದದ ಪಂದ್ಯದಲ್ಲಿ ರವೀಂದ್ರ ಜಡೇಜಾಗೆ ವಿಶ್ರಾಂತಿ ನೀಡಲಾಗಿತ್ತು. ಇದೀಗ ಮೇ 12ರಂದು ಮುಂಬೈನ ವಾಂಖೇಡೆ ಮೈದಾನದಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಒಂದು ವೇಳೆ ಈ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಗೆಲುವು ಸಾಧಿಸಿದರೆ, ಅಂಕಪಟ್ಟಿಯಲ್ಲಿ 9ನೇ ಸ್ಥಾನದಿಂದ 6ನೇ ಸ್ಥಾನಕ್ಕೆ ಜಿಗಿಲಿದೆ. ಇನ್ನು ಈ ಪಂದ್ಯದಲ್ಲಿ ಸೋಲು ಕಂಡರೆ, ಸಿಎಸ್‌ಕೆ ತಂಡವು ಪ್ಲೇ ಆಫ್‌ ರೇಸ್‌ನಿಂದ ಅಧಿಕೃತವಾಗಿ ಹೊರಬೀಳಲಿದೆ. ಇನ್ನು ಸಿಎಸ್‌ಕೆ ತಂಡವು ಮೇ 15ರಂದು ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ತಂಡವನ್ನು ಎದುರಿಸಲಿದೆ.

ಸಂಕಷ್ಟದಲ್ಲಿರುವ ಸಿಎಸ್‌ಕೆಗೆ ಮತ್ತೊಂದು ಆಘಾತ, IPL 2022 ಟೂರ್ನಿಗೆ ಜಡೇಜಾ ಡೌಟ್!

ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ತಂಡವು 11 ಪಂದ್ಯಗಳನ್ನಾಡಿ 4 ಗೆಲುವು ಹಾಗೂ 7 ಸೋಲುಗಳೊಂದಿಗೆ 8 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಧೋನಿ ನೇತೃತ್ವದ ಸಿಎಸ್‌ಕೆ ತಂಡವು ಲೀಗ್ ಹಂತದ ಇನ್ನುಳಿದ ಎರಡು ಪಂದ್ಯಗಳನ್ನು ಭಾರೀ ಅಂತರದಲ್ಲಿ ಜಯಿಸುವುದರ ಜತೆಗೆ ಅದೃಷ್ಟವೂ ಕೈಹಿಡಿದರೆ, ಅಂಕಪಟ್ಟಿಯಲ್ಲಿ ಟಾಪ್ 4 ನೊಳಗೆ ಸ್ಥಾನ ಪಡೆದು ಪ್ಲೇ ಆಫ್‌ ಪ್ರವೇಶಿಸಬಹುದಾಗಿದೆ. ಆದರೆ ಒಂದು ಸೋಲು ಸಿಎಸ್‌ಕೆ ತಂಡವನ್ನು ಅಧಿಕೃತವಾಗಿ ಪ್ಲೇ ಆಫ್‌ ರೇಸ್‌ನಿಂದ ಹೊರಬೀಳುವಂತೆ ಮಾಡಬಹುದಾಗಿದೆ. ರವೀಂದ್ರ ಜಡೇಜಾ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 8 ಪಂದ್ಯಗಳನ್ನಾಡಿ 2 ಗೆಲುವು ಹಾಗೂ 6 ಸೋಲು ಕಂಡಿತ್ತು. ಇದಾದ ಬಳಿಕ ಸಿಎಸ್‌ಕೆ ನಾಯಕತ್ವದಿಂದ ಜಡ್ಡು ಕೆಳಗಿಳಿದಿದ್ದರು. ಇದಾದ ಬಳಿಕ ಧೋನಿ ನಾಯಕತ್ವದಡಿ ಸಿಎಸ್‌ಕೆ 3 ಪಂದ್ಯಗಳನ್ನಾಡಿ 2 ಗೆಲುವು ಹಾಗೂ ಒಂದು ಸೋಲು ಕಾಣುವ ಮೂಲಕ ಪ್ಲೇ ಆಫ್‌ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ
ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷ, ಚುನಾವಣಾ ಫಲಿತಾಂಶ ಪ್ರಕಟ