IPL 2022 ಮಿಂಚಿದ ಮಾರ್ಷ್, ವಾರ್ನರ್, ಡೆಲ್ಲಿಗೆ 8 ವಿಕೆಟ್ ಗೆಲುವು

By Santosh NaikFirst Published May 11, 2022, 11:14 PM IST
Highlights

ಕೇವಲ 11 ರನ್ ಗಳಿಂದ ಶತಕ ವಂಚಿತರಾದ ಮಿಚೆಲ್ ಮಾರ್ಷ್ ಹಾಗೂ ಡೇವಿಡ್ ವಾರ್ನರ್ ಅವರ ಸ್ಫೋಟಕ ಅರ್ಧಶತಕದಿಂದ ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ ನಲ್ಲಿ ತನ್ನ 6ನೇ ಗೆಲುವು ಕಂಡಿದೆ. ಅದರೊಂದಿಗೆ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಮುಂಬೈ (ಮೇ.11): ಡೇವಿಡ್ ವಾರ್ನರ್ (David Warner ) ಹಾಗೂ ಮಿಚೆಲ್ ಮಾರ್ಷ್ (Mitchell Marsh) 2ನೇ ವಿಕೆಟ್ ಗೆ ಆಡಿದ ಸ್ಫೋಟಕ ಜೊತೆಯಾಟದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡ ಪ್ಲೇ ಆಫ್ ಗೇರುವ ಆಸೆಯವನ್ನು ಜೀವಂತವಾಗಿರಿಸಿಕೊಂಡಿದೆ. 2022 ಐಪಿಎಲ್ ನ ( IPL 2022 ) ತನ್ನ 12ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ( DC ) ತಂಡ 8 ವಿಕೆಟ್ ಗಳಿಂದ ರಾಜಸ್ಥಾನ ರಾಯಲ್ಸ್ (Rajasthan Royals ) ತಂಡವನ್ನು ಸೋಲಿಸಿತು.

ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ( RR ) ತಂಡ 6 ವಿಕೆಟ್ ಗೆ 160 ರನ್ ಬಾರಿಸಿದರೆ, ಪ್ರತಿಯಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಡೇವಿಡ್ ವಾರ್ನರ್ (52* ರನ್, 41 ಎಸೆತ, 5 ಬೌಂಡರಿ, 1 ಸಿಕ್ಸರ್) ಹಾಗೂ ಮಿಚೆಲ್ ಮಾರ್ಷ್ (89 ರನ್, 62 ಎಸೆತ, 5 ಬೌಂಡರಿ, 7 ಸಿಕ್ಸರ್) 2ನೇ ವಿಕೆಟ್ ಗೆ ಆಡಿದ 144 ರನ್ ಗಳ ಆಕರ್ಷಕ ಜೊತೆಯಾಟದ ನೆರವಿನಿಂದ 18.1 ಓವರ್ ಗಳಲ್ಲಿ 2 ವಿಕೆಟ್ ಗೆ 161 ರನ್ ಬಾರಿಸಿತು.

ಚೇಸಿಂಗ್ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲ ಓವರ್ ನಲ್ಲಿಯೇ ಆಘಾತ ಕಂಡಿತು. ಟ್ರೆಂಟ್ ಬೌಲ್ಟ್ ಎಸೆತದಲ್ಲಿ ಶ್ರೀಕರ್ ಭರತ್ ವಿಕೆಟ್ ಒಪ್ಪಿಸಿದಾಗ ಡೆಲ್ಲಿ ಕ್ಯಾಪಿಟಲ್ಸ್ ರನ್ ಖಾತೆಯನ್ನೇ ತೆರೆದಿರಲಿಲ್ಲ. ಆ ಬಳಿಕ ಡೇವಿಡ್ ವಾರ್ನರ್ ಗೆ ಜೊತೆಯಾದ ಮಿಚೆಲ್ ಮಾರ್ಷ್ ಎಚ್ಚರಿಕೆಯಿಂದ ಬ್ಯಾಟಿಂಗ್ ನಡೆಸಿದರು. ಇದರಿಂದಾಗಿ ಮೊದಲ ಆರು ಓವರ್ ಗಳ ಪವರ್ ಪ್ಲೇ ಅಂತ್ಯಕ್ಕೆ ಡೆಲ್ಲಿ ತಂಡ ಕೇವಲ 38 ರನ್ ಬಾರಿಸಿತ್ತು.

ವಾರ್ನರ್ ಹಾಗೂ ಮಿಚೆಲ್ ಮಾರ್ಷ್ ಆಡಿದ ಸ್ಫೋಟಕ ಜೊತೆಯಾಟದಲ್ಲಿ ಸಾಕಷ್ಟು ಜೀವದಾನಗಳೂ ಸೇರಿದ್ದರು. ಯಜುವೇಂದ್ರ ಚಾಹಲ್ ಎಸೆದ ಒಂದು ಎಸೆತ, ಡೇವಿಡ್ ವಾರ್ನರ್ ಅವರ ಸ್ಟಂಪ್ ಗೆ ತಾಕಿತಾದರೂ, ಬೇಲ್ಸ್ ಉರುಳಿರಲಿಲ್ಲ. ಇನ್ನೊಂದೆಡೆ ಮಿಚೆಲ್ ಮಾರ್ಷ್ ಬೌಂಡರಿ ಲೈನ್ ನಲ್ಲಿ ಕ್ಯಾಚ್ ಡ್ರಾಪ್ ಜೀವದಾನ ಪಡೆದರು. ಒದರ ಲಾಭ ಪಡೆದ ಮಿಚೆಲ್ ಮಾರ್ಷ್ ಕೇವಲ 38 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿಕೊಂಡರು. 2ನೇ ವಿಕೆಟ್ ಗೆ  ಜೋಡಿ 101 ಎಸೆತಗಳಲ್ಲಿ 144 ರನ್ ಜೊತೆಯಾಟವಾಡಿತು.

IPL 2022 ಆರ್ ಅಶ್ವಿನ್, ಪಡಿಕ್ಕಲ್ ಹೋರಾಟ, ಡೆಲ್ಲಿ ತಂಡಕ್ಕೆ 161 ರನ್ ಗುರಿ!

ಚಾಹಲ್ ಎಸೆದ 18ನೇ ಓವರ್ ನ ಮೊದಲ ಎಸೆತದಲ್ಲಿ ಮಿಚೆಲ್ ಮಾರ್ಷ್ ಔಟಾದರೂ, ಆ ವೇಳೆಗೆ ಡೆಲ್ಲಿ ತಂಡದ ಗೆಲುವಿಗೆ ಕೇವಲ 37 ರನ್ ಗಳ ಅಗತ್ಯವಿತ್ತು. ಈ ಹಂತದಲ್ಲಿ ಮೈದಾನಕ್ಕೆ ಇಳಿದ ನಾಯಕ ರಿಷಭ್ ಪಂತ್ 4 ಎಸೆತಗಳಲ್ಲಿ 2 ಸಿಕ್ಸರ್ ಗಳಿದ್ದ ಅಜೇಯ 13 ರನ್ ಸಿಡಿಸಿದರೆ, ಡೇವಿಡ್ ವಾರ್ನರ್ ಗೆ ಅರ್ಧಶತಕ ಸಿಡಿಸುವ ಅವಕಾಶವನ್ನೂ ನೀಡಿದರು. ಈ ಜಯದೊಂದಿಗೆ ಡೆಲ್ಲಿ ತಂಡ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಆರ್ ಸಿಬಿ ತಂಡಕ್ಕೆ ಇನ್ನಷ್ಟು ಹತ್ತಿರವಾಗಿದೆ.

ಸಂಕಷ್ಟದಲ್ಲಿರುವ ಸಿಎಸ್‌ಕೆಗೆ ಮತ್ತೊಂದು ಆಘಾತ, IPL 2022 ಟೂರ್ನಿಗೆ ಜಡೇಜಾ ಡೌಟ್!

ಸೋಹೇಲ್ ತನ್ವೀರ್ ದಾಖಲೆ ಮುರಿದ ಚಾಹಲ್! : ಐಪಿಎಲ್ ನ ಒಂದೇ ಆವೃತ್ತಿಯಲ್ಲಿ ಗರಿಷ್ಠ ವಿಎಕಟ್ ಉರುಳಿಸಿದ ರಾಜಸ್ಥಾನ ಬೌಲರ್ ಗಳ ಪಟ್ಟಯಲ್ಲಿ ಯಜುವೇಂದ್ರ ಚಾಹಲ್ ಪಾಕಿಸ್ತಾನದ ಸೋಹೇಲ್ ತನ್ವೀರ್ ದಾಖಲೆಯನ್ನು ಮುರಿದು 2ನೇ ಸ್ಥಾನಕ್ಕೇರಿದರು. ಸೋಹೇಲ್ ತನ್ವೀರ್ 2008ರ ಆವೃತ್ತಿಯಲ್ಲಿ 22 ವಿಕೆಟ್ ಉರುಳಿಸಿದ್ದರೆ, ಚಾಹಲ್ ಈ ಆವೃತ್ತಿಯಲ್ಲಿ 23 ವಿಕೆಟ್ ಉರುಳಿಸಿದ್ದಾರೆ. 2019ರಲ್ಲಿ ಶ್ರೇಯಸ್ ಗೋಪಾಲ್  ಹಾಗೂ 2020ರಲ್ಲಿ ಜೋಫ್ರ ಆರ್ಚರ್ 20 ವಿಕೆಟ್ ಉರುಳಿಸಿದ್ದು ನಾಲ್ಕನೇ ಸ್ಥಾನದಲ್ಲಿದ್ದರೆ, 2013ರಲ್ಲಿ ಜೇಮ್ಸ್ ಫೌಲ್ಕನರ್ 28 ವಿಕೆಟ್ ಉರುಳಿಸಿದ್ದು ರಾಜಸ್ಥಾನ ಪರವಾಗಿ ದಾಖಲೆ ಎನಿಸಿದೆ.

click me!