ಇಂದೋರ್ ಟೆಸ್ಟ್ ಗೆದ್ದು ಇತಿಹಾಸ ಬರೆದ ವಿರಾಟ್ ಕೊಹ್ಲಿ..!

By Web DeskFirst Published Nov 16, 2019, 7:03 PM IST
Highlights

ಈಗಾಗಲೇ ಭಾರತ ಪರ ಅತಿಹೆಚ್ಚು ಟೆಸ್ಟ್ ಪಂದ್ಯ ಗೆದ್ದುಕೊಟ್ಟ ನಾಯಕ ಎಂಬ ದಾಖಲೆ ಬರೆದಿರುವ ವಿರಾಟ್ ಕೊಹ್ಲಿ, ಇದೀಗ ಧೋನಿ ಹೆಸರಿನಲ್ಲಿದ್ದ ಮತ್ತೊಂದು ದಾಖಲೆ ಅಳಿಸಿ ಹಾಕಿದ್ದಾರೆ. ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಗೆದ್ದು ಭಾರತದ ಪರ ಐತಿಹಾಸಿಕ ದಾಖಲೆ ಮಾಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಬೆಂಗಳೂರು[ನ.16]: ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಟೆಸ್ಟ್ ಚಾಂಪಿಯನ್’ಶಿಪ್’ನಲ್ಲಿ ಗೆಲುವಿನ ನಾಗಾಲೋಟ ಮುಂದುವರೆಸಿದೆ. ಬಾಂಗ್ಲಾದೇಶ ವಿರುದ್ಧ ಇನಿಂಗ್ಸ್ ಹಾಗೂ 130 ರನ್’ಗಳಲ್ಲಿ ಜಯಭೇರಿ ಬಾರಿಸಿದ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸತತ 6ನೇ ಟೆಸ್ಟ್ ಗೆಲುವು ದಾಖಲಿಸಿದೆ. ಇದರ ಜತೆಗೆ ಕೊಹ್ಲಿ ಅಪರೂಪದ ದಾಖಲೆಯನ್ನೂ ಬರೆದಿದ್ದಾರೆ.

ಭಾರತದ ದಾಳಿಗೆ ಬಾಂಗ್ಲಾ ಖಲ್ಲಾಸ್; ಮೂರೇ ದಿನಕ್ಕೆ ಪಂದ್ಯ ಕ್ಲೋಸ್!

ಹೌದು, ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 10ನೇ ಬಾರಿಗೆ ಇನಿಂಗ್ಸ್ ಜಯ ದಾಖಲಿಸಿದ ಸಾಧನೆ ಮಾಡಿದೆ. ಈ ಮೂಲಕ ಟೀಂ ಇಂಡಿಯಾದ ಯಶಸ್ವಿ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿಹಾಕಿದ್ದಾರೆ. ಈ ಮೊದಲು ಮಹೇಂದ್ರ ಸಿಂಗ್ ಧೋನಿ ಭಾರತಕ್ಕೆ 9 ಇನಿಂಗ್ಸ್ ಜಯ ತಂದಿತ್ತ ನಾಯಕ ಎನಿಸಿದ್ದರು.

ಚಪ್ಪಾಳೆ ನನಗಲ್ಲ, ಶಮಿಗಿರಲಿ; ಅಭಿಮಾನಿಗಳಿಗೆ ಕೊಹ್ಲಿ ವಿಶೇಷ ಮನವಿ!

ಇನ್ನು ಮೊಹಮ್ಮದ್ ಅಜರುದ್ದೀನ್ ಹಾಗೂ ಸೌರವ್ ಗಂಗೂಲಿ ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿದ್ದು, ಕ್ರಮವಾಗಿ ಭಾರತಕ್ಕೆ 8 ಹಾಗೂ 7 ಸರಣಿ ಗೆಲುವುಗಳ ಸಿಹಿ ಉಣಬಡಿಸಿದ್ದರು. ರಾಹುಲ್ ದ್ರಾವಿಡ್, ಕಪಿಲ್ ದೇವ್ ಹಾಗೂ ಪಾಲಿ ಉಮ್ರಿಗಾರ್ ನೇತೃತ್ವದ ಟೀಂ ಇಂಡಿಯಾ ಎರಡೆರಡು ಬಾರಿ ಇನಿಂಗ್ಸ್ ಗೆಲುವಿನ ಸಿಹಿ ಉಂಡಿದೆ. 

ಭಾರತ-ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಇಂದೋರ್’ನ ಹೋಳ್ಕರ್ ಮೈದಾನ ವಹಿಸಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಬಾಂಗ್ಲಾದೇಶ ಮೊದಲ ಇನಿಂಗ್ಸ್’ನಲ್ಲಿ 150 ರನ್ ಬಾರಿಸಿ ಆಲೌಟ್ ಆಗಿತ್ತು. ಇನ್ನು ಮೊದಲ ಇನಿಂಗ್ಸ್ ಆರಂಭಿಸಿದ ಭಾರತ, ಮಯಾಂಕ್ ಅಗರ್ ವಾಲ್ ಆಕರ್ಷಕ ದ್ವಿಶತಕದ ನೆರವಿನಿಂದ 6 ವಿಕೆಟ್ ಕಳೆದುಕೊಂಡು 493 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿತು. ಒಟ್ಟು 343 ರನ್’ಗಳ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಕ ಬಾಂಗ್ಲಾದೇಶ ಮೊಹಮ್ಮದ್ ಶಮಿ ಮಾರಕ ದಾಳಿಗೆ ತತ್ತರಿಸಿ 213 ರನ್’ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತ ಇನಿಂಗ್ಸ್ 130 ರನ್’ಗಳ ಭರ್ಜರಿ ಜಯ ದಾಖಲಿಸಿತು. ಇದರೊಂದಿಗೆ 2 ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ. ನವೆಂಬರ್ 22ರಿಂದ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಹಗಲು-ರಾತ್ರಿಯ ಪಂದ್ಯ ನಡೆಯಲಿದೆ.
 

click me!