
ಬೆಂಗಳೂರು(ಡಿ.09): ಭಾರತ ಕ್ರಿಕೆಟ್ ತಂಡವು ಇದೀಗ ಹೊಸ ಗುರಿಯೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದೆ. ಹರಿಣಗಳ ನಾಡಿಗೆ ಬಂದಿಳಿದಿರುವ ಟೀಂ ಇಂಡಿಯಾ, ಇದೀಗ ಅಲ್ಲಿ ಅಭ್ಯಾಸವನ್ನು ಆರಂಭಿಸಿದೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೀಂ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿ, ಮೂರು ಪಂದ್ಯಗಳ ಟಿ20 ಸರಣಿ ಹಾಗೂ ಎರಡು ಪಂದ್ಯಗಳ ಟೆಸ್ಟ್ ಚಾಂಪಿಯನ್‌ಶಿಪ್ ಪಂದ್ಯಗಳನ್ನಾಡಲಿದೆ. ಇದೇ ಮೊದಲ ಬಾರಿಗೆ ಮೂರು ಮಾದರಿಯಲ್ಲಿ ಭಾರತದ ಮೂರು ನಾಯಕರು ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ.
ಹರಿಣಗಳೆದುರು ಟಿ20 ಸರಣಿಗೆ ಸೂರ್ಯಕುಮಾರ್ ಯಾದವ್ ಟೀಂ ಇಂಡಿಯಾ ನಾಯಕರಾದರೆ, ಏಕದಿನ ಸರಣಿಯನ್ನು ಕನ್ನಡಿಗ ಕೆ ಎಲ್ ರಾಹುಲ್ ಮುನ್ನಡೆಸಲಿದ್ದಾರೆ. ಇನ್ನು ಟೆಸ್ಟ್ ಸರಣಿಯನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. ಇನ್ನು ಟೀಂ ಇಂಡಿಯಾ ವೇಗದ ಬೌಲರ್ ಮುಕೇಶ್ ಕುಮಾರ್ ಭಾರತ ಟಿ20 ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿಡುತ್ತಿದ್ದಾರೆ. ಇದೀಗ ಮುಕೇಶ್ ಕುಮಾರ್, ಏಕದಿನ ಸರಣಿಗೂ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ತವರಿನಲ್ಲಿ ಮುಕ್ತಾಯವಾದ ಆಸ್ಟ್ರೇಲಿಯಾ ಎದುರಿನ ಟಿ20 ಸರಣಿಯಲ್ಲಿ ಮುಕೇಶ್ ಕುಮಾರ್ ಅದ್ಭುತ ಪ್ರದರ್ಶನ ತೋರಿದ್ದರು.
ಸೌತ್ ಆಫ್ರಿಕಾ ಸರಣಿಗೆ ಟೀಂ ಇಂಡಿಯಾ ಪ್ರಕಟ, ಕೆಎಲ್ ರಾಹುಲ್‌ಗೆ ಏಕದಿನ ನಾಯಕತ್ವ!
ಆಸ್ಟ್ರೇಲಿಯಾ ಎದುರಿನ ಮೊದಲೆರಡು ಟಿ20 ಪಂದ್ಯಗಳನ್ನಾಡಿದ್ದ ಮುಕೇಶ್ ಕುಮಾರ್, ತಮ್ಮ ಮದುವೆಯ ಕಾರಣದಿಂದಾಗಿ ಮೂರನೇ ಟಿ20 ಪಂದ್ಯವನ್ನು ಮಿಸ್ ಮಾಡಿಕೊಂಡಿದ್ದರು. ಈ ಕುರಿತಂತೆ ಮೂರನೇ ಟಿ20 ಪಂದ್ಯದ ಟಾಸ್ ವೇಳೆ ಮಾತನಾಡಿದ್ದ ನಾಯಕ ಸೂರ್ಯಕುಮಾರ್, 'ಇಂದು ಮುಕೇಶ್ ಬದಲಿಗೆ ಆವೇಶ್ ಖಾನ್ ಆಡಲಿದ್ದಾರೆ. ಯಾಕೆಂದರೆ ಮುಕೇಶ್ ಇಂದು ಅವರ ಪಾಲಿನ ದೊಡ್ಡ ಗೇಮ್ ಆಡುತ್ತಿದ್ದಾರೆ. ಅವರು ಇಂದು ಮದುವೆಯಾಗುತ್ತಿದ್ದು, ನಾವೆಲ್ಲರೂ ಶುಭ ಹಾರೈಸುತ್ತಿದ್ದೇವೆ" ಎಂದಿದ್ದರು.
ಇನ್ನು ಮದುವೆಯ ವೇಳೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದ ಮುಕೇಶ್ ಕುಮಾರ್, "ತುಂಬಾ ಖುಷಿ ಎನಿಸುತ್ತಿದೆ. ನಾನು ಈಕೆಯ ಜತೆ ಮೊದಲಿನಿಂದಲೂ ಇದ್ದೇನೆ. ಇದೀಗ ಈಕೆಯ ಜತೆ ಎರಡನೇ ಇನಿಂಗ್ಸ್ ಆರಂಭಿಸುತ್ತಿದ್ದೇನೆ. ಈಕೆಯ ಜತೆ ಮುಂದೆಯೂ ಮ್ಯಾಚ್ ಚೆನ್ನಾಗಿಯೇ ಆಡುತ್ತೇನೆ" ಎಂದಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
IPL ಹರಾಜಿನಲ್ಲಿ RCB ಈ ಇಬ್ಬರನ್ನು ಖರೀದಿಸಿದ್ರೆ, ಈ ಸಲ ಕಪ್ ನಮ್ದೇ...!
ಮುಕೇಶ್ ಕುಮಾರ್ ಮದುವೆ ಬೆನ್ನಲ್ಲೇ ಏನಂದ್ರೂ ಅಂತ ನೀವೇ ಒಮ್ಮೆ ಕೇಳಿ:
ದಕ್ಷಿಣ ಆಫ್ರಿಕಾ ಟಿ20ಗೆ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಡರ್ಬನ್: ಭಾನುವಾರ ಅಂದರೆ ಡಿಸೆಂಬರ್ 10ರಿಂದ ಆರಂಭಗೊಳ್ಳಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಗೆ ಟೀಂ ಇಂಡಿಯಾ ಆಟಗಾರರು ಶುಕ್ರವಾರ ಆಭ್ಯಾಸ ಆರಂಭಿಸಿದರು. ಇಲ್ಲಿನ ಕಿಂಗ್ಸ್‌ಮೀಡ್ ಕ್ರೀಡಾಂಗಣದಲ್ಲಿ ಮುಖ್ಯಕೋಚ್ ರಾಹುಲ್ ದ್ರಾವಿಡ್ ಜೊತೆ ಮಾತುಕತೆಯಲ್ಲಿ ತೊಡಗಿಸಿಕೊಂಡಿರುವ ಭಾರತದ ಆಟಗಾರರ ಫೋಟೋವನ್ನು ಬಿಸಿಸಿಐ ಟ್ವೀಟರ್‌ನಲ್ಲಿ ಪ್ರಕಟಿಸಿದೆ.
ಸೂರ್ಯಕುಮಾರ್ ನಾಯಕತ್ವದ ಭಾರತ ತಂಡ ಸರಣಿಯ ಮೊದಲ ಪಂದ್ಯವನ್ನು ಡರ್ಬನ್‌ನಲ್ಲಿ ಆಡಲಿದೆ. ಇನ್ನೆರಡು ಪಂದ್ಯಗಳು ಡಿ.12 ಮತ್ತು 14ಕ್ಕೆ ನಿಗದಿಯಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.