ಒಂದು ಬಾಲ್ ಎಸೆಯದೆ ಮಳೆಗೆ ರದ್ದಾದ ಅಂಧರ ಏಷ್ಯಾ ಕಪ್; ನಿಯಮ ಉಲ್ಲಂಘಿಸಿ ಪಾಕ್‌ಗೆ ಟ್ರೋಫಿ, ಬಹಿಷ್ಕರಿಸಿದ ಭಾರತ!

Published : Nov 20, 2026, 09:18 PM IST
pakistan team and indian team

ಸಾರಾಂಶ

ಮಳೆಯಿಂದ ರದ್ದಾದ ಅಂಧರ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಏಕಪಕ್ಷೀಯವಾಗಿ ವಿಜೇತರೆಂದು ಘೋಷಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಈ ತೀರ್ಮಾನದ ವಿರುದ್ಧ ಭಾರತೀಯ ತಂಡವು ಪ್ರಶಸ್ತಿ ವಿತರಣಾ ಸಮಾರಂಭವನ್ನು ಬಹಿಷ್ಕರಿಸಿದೆ.

ಢಾಕಾ (ನ.20): ಮಳೆಯಿಂದಾಗಿ ಒಂದೇ ಒಂದು ಎಸೆತವನ್ನೂ ಎಸೆಯಲು ಸಾಧ್ಯವಾಗದೆ ರದ್ದಾದ ಅಂಧರ (ದೃಷ್ಟಿಹೀನರ) ಏಷ್ಯಾ ಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ, ಪಾಕಿಸ್ತಾನವನ್ನು ಏಕಪಕ್ಷೀಯವಾಗಿ ವಿಜೇತರೆಂದು ಘೋಷಿಸಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ. ಈ ಅನ್ಯಾಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಭಾರತೀಯ ಅಂಧರ ಕ್ರಿಕೆಟ್ ತಂಡವು ಪ್ರಶಸ್ತಿ ವಿತರಣಾ ಸಮಾರಂಭವನ್ನು ಬಹಿಷ್ಕರಿಸಿದೆ.

ಭಾರತ ಮತ್ತು ಪಾಕಿಸ್ತಾನ ತಂಡಗಳನ್ನು ಜಂಟಿ ವಿಜೇತರೆಂದು (Joint Winners) ಘೋಷಿಸಬೇಕೆಂಬ ತಾಂತ್ರಿಕ ಸಮಿತಿಯ (Technical Committee) ಆರಂಭಿಕ ನಿರ್ಧಾರವನ್ನು ಉದ್ದೇಶಪೂರ್ವಕವಾಗಿ ಬುಡಮೇಲು ಮಾಡಲಾಗಿದೆ ಎಂದು ಭಾರತ ತಂಡ ಗಂಭೀರ ಆರೋಪ ಮಾಡಿದೆ.

ಸುಲ್ತಾನ್ ಶಾ ವಿರುದ್ಧ ಅಧಿಕಾರ ದುರುಪಯೋಗದ ಆರೋಪ

ಮಳೆಯಿಂದಾಗಿ ಫೈನಲ್ ಪಂದ್ಯ ರದ್ದಾದಾಗ, ಟೂರ್ನಮೆಂಟ್ ನಿಯಮಾವಳಿಯ 27ನೇ ನಿಯಮದ (Rule 27) ಪ್ರಕಾರ ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲು ವಿಶ್ವ ಅಂಧರ ಕ್ರಿಕೆಟ್ ಮಂಡಳಿಯ (WBCC) ತಾಂತ್ರಿಕ ಸಮಿತಿ ಮೊದಲಿಗೆ ನಿರ್ಧರಿಸಿತ್ತು. ಆದರೆ, WBCC ಅಧ್ಯಕ್ಷ ಮತ್ತು ಪಾಕಿಸ್ತಾನ ಅಂಧರ ಕ್ರಿಕೆಟ್ ಮಂಡಳಿಯ (PBCC) ಮುಖ್ಯಸ್ಥರೂ ಆಗಿರುವ ಸೈಯದ್ ಸುಲ್ತಾನ್ ಶಾ ಅವರ ಹಸ್ತಕ್ಷೇಪದಿಂದಾಗಿ ಈ ನಿರ್ಧಾರವನ್ನು ಕೊನೇ ಕ್ಷಣದಲ್ಲಿ ಬದಲಾಯಿಸಲಾಗಿದೆ ಎಂದು ಕ್ರಿಕೆಟ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ ಇನ್ ಇಂಡಿಯಾ (CABI) ಆರೋಪಿಸಿದೆ.

ನೆಟ್ ರನ್ ರೇಟ್‌ನಲ್ಲಿ (NRR) ಪಾಕಿಸ್ತಾನ ಮುಂದಿದೆ ಎಂಬ ಕಾರಣ ನೀಡಿ ಚಾಂಪಿಯನ್ ಎಂದು ಘೋಷಿಸಿರುವುದು ನಿಯಮಗಳ ಸ್ಪಷ್ಟ ಉಲ್ಲಂಘನೆ ಮತ್ತು ಕುತಂತ್ರ ಎಂದು ಭಾರತ ವಾದಿಸಿದೆ.

WBCC ಮತ್ತು PBCC ಎರಡೂ ಸಂಸ್ಥೆಗಳ ಅಧ್ಯಕ್ಷ ಸ್ಥಾನವನ್ನು ಒಟ್ಟಿಗೇ ನಿಭಾಯಿಸುತ್ತಿರುವ ಸುಲ್ತಾನ್ ಶಾ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಭಾರತೀಯ ತಂಡ ಮತ್ತು ಅಧಿಕಾರಿಗಳು ಕಿಡಿಕಾರಿದ್ದಾರೆ.

ಪಾಕ್ ವಿರುದ್ಧ ಆಡುವುದಿಲ್ಲ: CABI ಖಡಕ್ ಎಚ್ಚರಿಕೆ

ಪಾಕಿಸ್ತಾನವನ್ನು ಏಕಪಕ್ಷೀಯವಾಗಿ ವಿಜೇತರೆಂದು ಘೋಷಿಸಿರುವುದನ್ನು ತೀವ್ರವಾಗಿ ಖಂಡಿಸಿರುವ CABI, ಭಾರತವನ್ನೂ ಜಂಟಿ ವಿಜೇತರೆಂದು ಘೋಷಿಸಬೇಕು ಎಂದು ಆಗ್ರಹಿಸಿದೆ. ಒಂದು ವೇಳೆ ಭಾರತವನ್ನು ಜಂಟಿ ಚಾಂಪಿಯನ್ ಎಂದು ಘೋಷಿಸದಿದ್ದರೆ, ಭವಿಷ್ಯದಲ್ಲಿ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಪಾಕಿಸ್ತಾನದ ವಿರುದ್ಧ ಯಾವುದೇ ಪಂದ್ಯವನ್ನು ಆಡುವುದಿಲ್ಲ ಎಂದು CABI ಪ್ರಧಾನ ಕಾರ್ಯದರ್ಶಿ ಶೈಲೇಂದ್ರ ಯಾದವ್ ಹಾಗೂ ಅಧ್ಯಕ್ಷ ಮಹಾಂತೇಶ್ ಜಿ.ಕೆ. ಖಡಕ್ ಎಚ್ಚರಿಕೆ ನೀಡಿದ್ದಾರೆ.

ಟೂರ್ನಿಯಲ್ಲಿ ಭಾರತದ ಅಜೇಯ ಪ್ರದರ್ಶನ

ಈ ಟೂರ್ನಿಯಲ್ಲಿ ಭಾರತ ಅಮೋಘ ಪ್ರದರ್ಶನ ನೀಡಿ ಫೈನಲ್ ತಲುಪಿತ್ತು: ನವೆಂಬರ್ 18ರಂದು ನಡೆದ ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ನೀಡಿದ್ದ 124 ರನ್‌ಗಳ ಗುರಿಯನ್ನು ಸುನಿಲ್ ರಮೇಶ್ (63 ನಾಟೌಟ್)* ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ಕೇವಲ 13.2 ಓವರ್‌ಗಳಲ್ಲಿ ಬೆನ್ನಟ್ಟಿ ಗೆಲುವು ಸಾಧಿಸಿತ್ತು. ಇದಕ್ಕೂ ಮುನ್ನ ಟೂರ್ನಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾವನ್ನು ಬರೋಬ್ಬರಿ 179 ರನ್‌ಗಳಿಂದ ಭಾರತ ಧೂಳೀಪಟ ಮಾಡಿತ್ತು.

ಮತ್ತೆ ನೆನಪಾದ 'ಟ್ರೋಫಿ ಕಳ್ಳತನ' ವಿವಾದ!

2025ರ ಪುರುಷರ ಏಷ್ಯಾ ಕಪ್ ಫೈನಲ್ ಹಾಗೂ 2026ರ ಮಹಿಳೆಯರ ಏಷ್ಯಾ ಕಪ್ ಫೈನಲ್‌ಗಳಲ್ಲಿ ಭಾರತ ಚಾಂಪಿಯನ್ ಆದಾಗ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಹಾಗೂ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಭಾರತೀಯ ತಂಡ ನಿರಾಕರಿಸಿತ್ತು. ಆಗ 2025ರಲ್ಲಿ ನಖ್ವಿ ಟ್ರೋಫಿಯೊಂದಿಗೆ ವೇದಿಕೆಯಿಂದ ಹೊರನಡೆದಿದ್ದು ಭಾರಿ ವಿವಾದವಾಗಿತ್ತು ಹಾಗೂ 2026ರಲ್ಲಿ ಅಧಿಕೃತ ಟ್ರೋಫಿ ವಿತರಣೆಯೇ ನಡೆದಿರಲಿಲ್ಲ. ಈ ಘಟನೆಗಳನ್ನು ಭಾರತೀಯ ಕ್ರಿಕೆಟ್ ವಲಯದಲ್ಲಿ ಪಾಕಿಸ್ತಾನದ 'ಟ್ರೋಫಿ ಕಳ್ಳತನ' ಎಂದು ಟ್ರೋಲ್ ಮಾಡಲಾಗುತ್ತಿತ್ತು. ಇದೀಗ ಅಂಧರ ಕ್ರಿಕೆಟ್‌ನಲ್ಲೂ ಅಂತಹದ್ದೇ ವಿವಾದ ಮರುಕಳಿಸಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಾಜಿ ವಿಶ್ವ ಸುಂದರಿ ಮೇಲೆ ಪ್ರೀತಿಯ ಸುರಿಮಳೆ ಸುರಿಸಿದ ಲಲಿತ್ ಮೋದಿ; 'ನೀವು ಇನ್ನೂ ಬಿಟ್ಟಿಲ್ವಾ' ಎಂದ ಫ್ಯಾನ್ಸ್
RCB ಕಪ್ ಗೆಲ್ಲುವ ಮೊದಲು ದಿನೇಶ್ ಕಾರ್ತಿಕ್ ಹೇಳಿದ್ದ ಗುಟ್ಟು ಬಿಚ್ಚಿಟ್ಟ ಭುವನೇಶ್ವರ್ ಕುಮಾರ್!