'ನಾನಿಲ್ಲಿ ಸೆಹ್ವಾಗ್ 2.0 ಆಗಲು ಬಂದಿಲ್ಲ, ಮೊದಲ ಆರ್ಯವೀರ್ ಆಗಬೇಕು': ತಂದೆಯೊಂದಿಗಿನ ಹೋಲಿಕೆ ಬಗ್ಗೆ ವೀರೂ ಪುತ್ರನ ಖಡಕ್ ಮಾತು

Published : Nov 20, 2026, 05:23 PM IST
Aaryavir Sehwag

ಸಾರಾಂಶ

ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಏಷ್ಯಾಕಪ್‌ನಲ್ಲಿ ಮಿಂಚಿದ್ದಾರೆ. ತಂದೆಯಂತೆ ಆಡಬಲ್ಲೆ, ಆದರೆ ತನ್ನದೇ ಗುರುತು ಮೂಡಿಸುವೆ ಎಂದಿದ್ದಾರೆ. ಪಾಕಿಸ್ತಾನ ವಿರುದ್ಧದ ಫೈನಲ್‌ನಲ್ಲಿ ಗಾಯದ ನಡುವೆಯೂ ಆರ್ಯವೀರ್ 58 ರನ್ ಸಿಡಿಸಿ ಗಮನ ಸೆಳೆದರು.

ಬೆಂಗಳೂರು(ನ.20): ಭಾರತದ ಕ್ರಿಕೆಟ್ ದಂತಕಥೆ, ಸ್ಫೋಟಕ ಬ್ಯಾಟರ್ ವಿರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಸೆಹ್ವಾಗ್ ಇದೀಗ ಕ್ರಿಕೆಟ್ ವಲಯದಲ್ಲಿ ಭಾರೀ ಸುದ್ದಿಯಲ್ಲಿದ್ದಾರೆ. 2026ರ ಅಂಡರ್-19 ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಆರ್ಯವೀರ್, ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ. ಆದರೆ ತಂದೆಯೊಂದಿಗಿನ ಹೋಲಿಕೆಗಳ ನಡುವೆಯೇ, ತಮ್ಮದೇ ಆದ ಗುರುತನ್ನು ರೂಪಿಸಿಕೊಳ್ಳುವ ಬಯಕೆಯನ್ನು ಅವರು ಸ್ಪಷ್ಟಪಡಿಸಿದ್ದಾರೆ.

ತಂದೆ ವೀರೇಂದ್ರ ಸೆಹ್ವಾಗ್ ಅವರಂತೆಯೇ ತಾನೂ ಕ್ರಿಕೆಟ್‌ನಲ್ಲಿ ದೊಡ್ಡ ಹೆಸರು ಮಾಡಬೇಕೆಂಬ ನಿರೀಕ್ಷೆ ಹಾಗೂ ಹೋಲಿಕೆಗಳು ಸಹಜ ಎಂದು ಒಪ್ಪಿಕೊಂಡಿರುವ ಆರ್ಯವೀರ್, ತಾನು 'ಸೆಹ್ವಾಗ್ 2.0' ಆಗಲು ಬಯಸುವುದಿಲ್ಲ, ಬದಲಿಗೆ ಮೊದಲ ಆರ್ಯವೀರ್ ಸೆಹ್ವಾಗ್ ಆಗಿ ಗುರುತಿಸಿಕೊಳ್ಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.

5 ಪಂದ್ಯಗಳಲ್ಲಿ 361 ರನ್, ಟೂರ್ನಿ ಶ್ರೇಷ್ಠ ಪ್ರಶಸ್ತಿ

2026ರ ಅಂಡರ್-19 ಏಷ್ಯಾಕಪ್‌ನಲ್ಲಿ ಆರ್ಯವೀರ್ ಸೆಹ್ವಾಗ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆಡಿದ ಐದು ಪಂದ್ಯಗಳಲ್ಲಿ 90.25ರ ಸರಾಸರಿಯಲ್ಲಿ ಒಟ್ಟು 361 ರನ್ ಗಳಿಸಿದರು. ಅವರ ಸ್ಟ್ರೈಕ್‌ರೇಟ್ 95ಕ್ಕಿಂತ ಹೆಚ್ಚಿತ್ತು. ಟೂರ್ನಿಯುದ್ದಕ್ಕೂ ಸ್ಥಿರ ಪ್ರದರ್ಶನ ನೀಡಿದ ಅವರು, ಪಾಕಿಸ್ತಾನ ವಿರುದ್ಧದ ಫೈನಲ್‌ನಲ್ಲೂ ನಿರ್ಣಾಯಕ ಪಾತ್ರ ವಹಿಸಿದರು. ರೋಚಕ ಫೈನಲ್ ಪಂದ್ಯದಲ್ಲಿ ಭಾರತ ತಂಡ ಒಂದು ವಿಕೆಟ್‌ನಿಂದ ಪಾಕಿಸ್ತಾನವನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತು. ಈ ಗೆಲುವಿನಲ್ಲಿ ಆರ್ಯವೀರ್ ಅವರ ಕೊಡುಗೆ ಮಹತ್ವದ್ದಾಗಿತ್ತು. ಟೂರ್ನಿಯುದ್ದಕ್ಕೂ ತೋರಿದ ಪ್ರದರ್ಶನಕ್ಕಾಗಿ ಅವರಿಗೆ 'ಪ್ಲೇಯರ್ ಆಫ್ ದಿ ಟೂರ್ನಮೆಂಟ್' ಪ್ರಶಸ್ತಿಯೂ ಒಲಿಯಿತು.

ಈ ಯಶಸ್ಸಿನ ಬೆನ್ನಲ್ಲೇ ಆರ್ಯವೀರ್ ಅವರ ಬ್ಯಾಟಿಂಗ್ ಶೈಲಿಯನ್ನು ತಂದೆ ವೀರೇಂದ್ರ ಸೆಹ್ವಾಗ್ ಅವರ ಆಟದೊಂದಿಗೆ ಹೋಲಿಕೆ ಮಾಡಲಾಗುತ್ತಿದೆ. ಈ ಕುರಿತು ಜಿಯೋಸ್ಟಾರ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, “ನನ್ನ ಕ್ರಿಕೆಟ್ ವೃತ್ತಿಜೀವನದ ಆರಂಭದಲ್ಲೇ ತಂದೆಯೊಂದಿಗೆ ನನ್ನನ್ನು ಹೋಲಿಕೆ ಮಾಡುವುದು ಅನಿವಾರ್ಯ ಎಂಬುದನ್ನು ಒಪ್ಪಿಕೊಂಡಿದ್ದೇನೆ. ಇದನ್ನು ತಡೆಯಲು ನನ್ನಿಂದ ಏನೂ ಮಾಡಲು ಸಾಧ್ಯವಿಲ್ಲ. ನನ್ನ ಆಟದಲ್ಲಿ ಜನರಿಗೆ ಸಾಮ್ಯತೆ ಕಂಡುಬಂದರೆ, ಅದು ಅವರ ಅಭಿಪ್ರಾಯ. ಹಾಗೆಯೇ ನನ್ನ ತಂದೆಯ ಮೇಲಿರುವ ಪ್ರೀತಿಯ ಅಭಿವ್ಯಕ್ತಿಯೂ ಹೌದು. ಆದರೆ ನಾನು ಸೆಹ್ವಾಗ್ 2.0 ಆಗಲು ಬಂದಿಲ್ಲ. ನಾನು ಆರ್ಯವೀರ್ ಸೆಹ್ವಾಗ್ ಆಗಲು ಬಂದಿದ್ದೇನೆ. ಎರಡನೇ ಸೆಹ್ವಾಗ್ ಆಗುವುದಕ್ಕಿಂತ ಮೊದಲ ಆರ್ಯವೀರ್ ಆಗಿ ಗುರುತಿಸಿಕೊಳ್ಳಲು ಬಯಸುತ್ತೇನೆ” ಎಂದು ಹೇಳಿದ್ದಾರೆ.

ಮೊಣಕೈಗೆ ಗಾಯವಾದರೂ ಪಾಕಿಸ್ತಾನ ವಿರುದ್ಧ ಬ್ಯಾಟಿಂಗ್ ಮುಂದುವರಿಕೆ

ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ಆರ್ಯವೀರ್ ಬ್ಯಾಟಿಂಗ್ ಮಾಡುವಾಗ ಮೊಣಕೈಗೆ ಚೆಂಡು ಬಡಿದಿತ್ತು. ತೀವ್ರ ನೋವಿನ ನಡುವೆಯೂ ಅವರು ಮೈದಾನ ತೊರೆಯದೆ ಬ್ಯಾಟಿಂಗ್ ಮುಂದುವರಿಸಿದರು. ಭಾರತದ 338 ರನ್‌ಗಳ ಗುರಿ ಬೆನ್ನಟ್ಟುವ ಹೋರಾಟದಲ್ಲಿ 61 ಎಸೆತಗಳನ್ನು ಎದುರಿಸಿ 58 ರನ್ ಗಳಿಸಿದರು. ಗಾಯದ ನಡುವೆಯೂ ಹೇಗೆ ಬ್ಯಾಟಿಂಗ್ ಮುಂದುವರಿಸಿದರು ಎಂಬ ಪ್ರಶ್ನೆಗೆ ಉತ್ತರಿಸಿದ ಆರ್ಯವೀರ್, ಆ ಸಂದರ್ಭದಲ್ಲಿ ಅನುಭವಿಸಿದ ನೋವು ಹಾಗೂ ತಂಡಕ್ಕಾಗಿ ಆಡಲೇಬೇಕೆಂಬ ಹಠದ ಬಗ್ಗೆ ವಿವರಿಸಿದ್ದಾರೆ.

“ಚೆಂಡು ನನ್ನ ಮೊಣಕೈಗೆ ಬಡಿದಾಗ ತುಂಬಾ ನೋವಾಗುತ್ತಿತ್ತು. ಮೊಣಕೈಯನ್ನು ಹೆಚ್ಚು ಚಲಿಸಲೂ ಸಾಧ್ಯವಾಗುತ್ತಿರಲಿಲ್ಲ. ಆಗ ಫಿಸಿಯೋ ಬಂದು ನೋವು ನಿವಾರಕ ಮಾತ್ರೆಗಳನ್ನು ನೀಡಿದರು. ಆದರೆ ಮೊದಲ ಡೋಸ್‌ನಿಂದ ಹೆಚ್ಚು ಪ್ರಯೋಜನವಾಗಲಿಲ್ಲ. ನೋವು ತುಂಬಾ ಇತ್ತು. ಹೀಗಾಗಿ ಹೆಚ್ಚು ಹೊತ್ತು ಬ್ಯಾಟಿಂಗ್ ಮಾಡಲು ಸಾಧ್ಯವಾಗುತ್ತದೆಯೇ ಎಂಬ ಅನುಮಾನವೂ ಮೂಡಿತ್ತು. ಆದರೂ ನೋವನ್ನು ಸಹಿಸಿಕೊಂಡು ಆಡಬೇಕಿತ್ತು. ತಂಡಕ್ಕಾಗಿ ಸಾಧ್ಯವಾದಷ್ಟು ಹೆಚ್ಚು ರನ್ ಗಳಿಸಬೇಕು ಎಂಬುದೇ ನನ್ನ ಗುರಿಯಾಗಿತ್ತು” ಎಂದು ಹೇಳಿದ್ದಾರೆ.

“ನೋವಿನ ನಡುವೆಯೂ ಯಾವ ರೀತಿಯ ಹೊಡೆತಗಳನ್ನು ಆಡಬಹುದು ಎಂದು ಯೋಚಿಸುತ್ತಿದ್ದೆ. ಮೇಲಿನ ಕೈಯ (ಟಾಪ್ ಹ್ಯಾಂಡ್) ಬಲ ಬಳಸಿ ಆಡಬಹುದಾದ ಹೊಡೆತಗಳ ಬಗ್ಗೆ ಗಮನ ಹರಿಸಿದ್ದೆ. ಚೆಂಡು ನೇರವಾಗಿ ಬಂದರೆ ವಿ ಆಕಾರದಲ್ಲಿ ಅಥವಾ ಕವರ್ಸ್ ಮೇಲಿನಿಂದ ಹೊಡೆಯಬಹುದು ಎಂದು ಯೋಚಿಸಿದ್ದೆ. ಒಂದು ಕೈಯಿಂದಲೂ ಆಡಬಹುದಾದ ಹೊಡೆತಗಳನ್ನು ಮನಸ್ಸಿನಲ್ಲಿ ಲೆಕ್ಕ ಹಾಕುತ್ತಿದ್ದೆ. ಚೆಂಡು ಮುಂದೆ ಸಿಕ್ಕರೆ ಅದನ್ನು ಮೇಲಕ್ಕೆತ್ತಿ ಬೌಂಡರಿ ಅಥವಾ ಸಿಕ್ಸರ್‌ಗೆ ಅಟ್ಟುವ ಮೂಲಕ ತಂಡಕ್ಕೆ ಸಾಧ್ಯವಾದಷ್ಟು ಕೊಡುಗೆ ನೀಡಲು ಬಯಸಿದ್ದೆ” ಎಂದು ತಮ್ಮ ಬ್ಯಾಟಿಂಗ್ ಯೋಜನೆಯನ್ನು ವಿವರಿಸಿದ್ದಾರೆ.

40 ರನ್ ದಾಟಿದ ಬಳಿಕ ಎರಡನೇ ಡೋಸ್ ಮಾತ್ರೆ

“ನಾನು ರನ್ ಗಳಿಸುತ್ತಾ 40ರ ಆಸುಪಾಸಿಗೆ ತಲುಪಿದಾಗ ಎರಡನೇ ಬಾರಿ ನೋವು ನಿವಾರಕ ಮಾತ್ರೆ ತೆಗೆದುಕೊಂಡೆ. ಆ ಬಳಿಕ ನೋವು ಸ್ವಲ್ಪ ಕಡಿಮೆಯಾಯಿತು. ಪರಿಸ್ಥಿತಿ ಸುಧಾರಿಸಿತು. ಆದರೆ ಕೊನೆಗೆ 58 ರನ್ ಗಳಿಸಿದ್ದಾಗ ಔಟಾದೆ. ಆಗ ನನಗೆ ತುಂಬಾ ನಿರಾಸೆಯಾಯಿತು. ಏಕೆಂದರೆ ಆ ವೇಳೆಗೆ ನೋವು ಅಷ್ಟಾಗಿ ಇರಲಿಲ್ಲ. ಇನ್ನಷ್ಟು ಹೊತ್ತು ಬ್ಯಾಟಿಂಗ್ ಮುಂದುವರಿಸಿ ತಂಡಕ್ಕೆ ಹೆಚ್ಚಿನ ರನ್ ಗಳಿಸಿಕೊಡಬಹುದಿತ್ತು” ಎಂದು ಆರ್ಯವೀರ್ ಹೇಳಿದ್ದಾರೆ.

ತಂದೆ ವಿರೇಂದ್ರ ಸೆಹ್ವಾಗ್ ಅವರ ಹೆಸರಿನೊಂದಿಗೆ ಗುರುತಿಸಿಕೊಳ್ಳುವ ಅವಕಾಶ ಹಾಗೂ ಸವಾಲು ಎರಡನ್ನೂ ಸಮಾನವಾಗಿ ಸ್ವೀಕರಿಸಿರುವ ಆರ್ಯವೀರ್, ತಮ್ಮದೇ ಆಟದ ಮೂಲಕ ಕ್ರಿಕೆಟ್‌ನಲ್ಲಿ ಹೊಸ ಗುರುತು ಮೂಡಿಸುವ ಗುರಿ ಹೊಂದಿದ್ದಾರೆ. ಮುಂಬರುವ ದಿನಗಳಲ್ಲಿ ಆರ್ಯವೀರ್ ಯಾವ ರೀತಿ ಪ್ರದರ್ಶನ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೇವಲ 1 ಸೆಕೆಂಡ್ ಬಾಕಿ, DRS ಕೈಬಿಟ್ಟ ನ್ಯೂಜಿಲೆಂಡ್! ಔಟ್ ಆಗಿದ್ದ ಕನ್ನಡಿಗ ಕೆಎಲ್ ರಾಹುಲ್‌ಗೆ ಸಿಕ್ತು ಜೀವದಾನ..! ಸಿಟ್ಟಾದ ಬೌಲರ್
'ಅವನ ಹೆಸರು ಸಿರಾಜ್‌, ಇದೊಂದೇ ಕಾರಣ ಸಾಕಲ್ಲವೇ?': ಟೀಂ ಇಂಡಿಯಾ ಸೆಲೆಕ್ಷನ್‌ನಲ್ಲಿ 'ಧರ್ಮ' ಎಳೆದು ತಂದ ಕಾಂಗ್ರೆಸ್‌ ಸಂಸದ