ಇಂದಿನಿಂದ ಭಾರತ vs ಇಂಗ್ಲೆಂಡ್ T20I Series ಶುರು, ಇತಿಹಾಸ ನಿರ್ಮಿಸುತ್ತಾ ಕೌರ್ ಪಡೆ?

Published : Jun 28, 2025, 11:28 AM IST
Smriti Mandhana-Harmanpreet kaur

ಸಾರಾಂಶ

ಐಸಿಸಿ ಮಹಿಳಾ ಟಿ20 ವಿಶ್ವಕಪ್‌ಗೆ ಸಿದ್ಧತೆಯಾಗಿ ಭಾರತ ಮತ್ತು ಇಂಗ್ಲೆಂಡ್‌ ನಡುವೆ 5 ಪಂದ್ಯಗಳ ಟಿ20 ಸರಣಿ ಆರಂಭ. ಭಾರತ ತಂಡಕ್ಕೆ ಬೌಲಿಂಗ್‌ ವಿಭಾಗದಲ್ಲಿ ತಲೆನೋವು, ಇಂಗ್ಲೆಂಡ್‌ ತವರಿನ ಅಂಗಳದ ಲಾಭ ಪಡೆಯುವ ಆತ್ಮವಿಶ್ವಾಸದಲ್ಲಿ.

ನಾಟಿಂಗ್‌ಹ್ಯಾಮ್‌: ಮುಂದಿನ ವರ್ಷ ಜೂನ್‌ನಲ್ಲಿ ಇಂಗ್ಲೆಂಡ್‌ನಲ್ಲಿ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ನಡೆಯಲಿದೆ. ಅದಕ್ಕಾಗಿ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ಈಗಿಂದಲೇ ಸಿದ್ಧತೆ ಆರಂಭಿಸಲಿದ್ದು, ಶನಿವಾರದಿಂದ 5 ಪಂದ್ಯಗಳ ಟಿ20 ಸರಣಿಯಲ್ಲಿ ಕಣಕ್ಕಿಳಿಯಲಿವೆ. ಇಂಗ್ಲೆಂಡ್‌ನ 5 ನಗರಗಳಲ್ಲಿ ಪಂದ್ಯಗಳು ನಡೆಯಲಿವೆ.

ಭಾರತ ಈವರೆಗೂ ವಿಶ್ವಕಪ್‌ ಗೆದ್ದಿಲ್ಲ. ಮುಂದಿನ ವರ್ಷ ವಿಶ್ವಕಪ್‌ ಗೆಲ್ಲುವ ಗುರಿ ಇಟ್ಟುಕೊಂಡಿರುವ ತಂಡ ಅದಕ್ಕಾಗಿ ಬಲಿಷ್ಠ ತಂಡವನ್ನು ಕಟ್ಟಬೇಕಿದೆ. ಇಂಗ್ಲೆಂಡ್‌ನಲ್ಲೇ ವಿಶ್ವಕಪ್‌ ನಡೆಯಲಿರುವುದರಿಂದ ಅಲ್ಲಿನ ಪರಿಸ್ಥಿತಿಗೆ ತಕ್ಕಂತೆ ಆಡುವ ಆಟಗಾರ್ತಿಯರನ್ನು ಗುರುತಿಸಿ ಸಮರ್ಥ ತಂಡ ಕಟ್ಟುವುದು ಭಾರತದ ಮುಂದಿರುವ ಗುರಿ. ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವದ ತಂಡದಲ್ಲಿ ಅನುಭವಿ ಹಾಗೂ ಯುವ ಆಟಗಾರ್ತಿಯರಿದ್ದಾರೆ. ಉಪನಾಯಕಿ ಸ್ಮೃತಿ ಮಂಧನಾ, ತಂಡದಲ್ಲಿ ಮತ್ತೆ ಸ್ಥಾನ ಗಿಟ್ಟಿಸಿಕೊಂಡಿರುವ ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗ್ಸ್‌, ರಿಚಾ ಘೋಷ್‌ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.

ತಂಡಕ್ಕೆ ಹೆಚ್ಚಿನ ತಲೆನೋವು ತಂದಿರುವುದು ಬೌಲಿಂಗ್‌ ವಿಭಾಗ. ವೇಗಿಗಳಾದ ರೇಣುಕಾ ಸಿಂಗ್‌, ಪೂಜಾ ವಸ್ತ್ರಾಕರ್‌ ಗಾಯದಿಂದಾಗಿ ಸರಣಿಯಲ್ಲಿ ಆಡುತ್ತಿಲ್ಲ. ಅವರ ಅನುಪಸ್ಥಿತಿಯಲ್ಲಿ ಯುವ ಆಟಗಾರ್ತಿಯರಾದ ಕ್ರಾಂತಿ ಗೌಡ್‌, ಶ್ರೀ ಚರಣಿ ಹಾಗೂ ಸಯಾಲಿ ಸತ್ಗಾರೆ ಮೇಲೆ ಹೆಚ್ಚಿನ ಭರವಸೆ ಇದೆ. ತಾರಾ ಆಲ್ರೌಂಡರ್‌ಗಳಾದ ದೀಪ್ತಿ ಶರ್ಮಾ, ಸ್ನೇಹ ರಾಣಾ ಕೂಡಾ ತಮ್ಮ ಮೇಲಿನ ನಿರೀಕ್ಷೆ ಉಳಿಸಿಕೊಳ್ಳಬೇಕಿದೆ.

ಆತ್ಮವಿಶ್ವಾಸದಲ್ಲಿ ಇಂಗ್ಲೆಂಡ್‌: ಭಾರತಕ್ಕೆ ಹೋಲಿಸಿದರೆ ಆತಿಥೇಯ ಇಂಗ್ಲೆಂಡ್‌ ಹೆಚ್ಚಿನ ಆತ್ಮವಿಶ್ವಾಸದಲ್ಲೇ ಆಡಲಿದೆ. ಭಾರತ ಸರಣಿಗೂ ಮುನ್ನ ನಡೆದ 2 ಅಭ್ಯಾಸ ಪಂದ್ಯಗಳಲ್ಲೂ ಇಸಿಬಿ ತಂಡದ ವಿರುದ್ಧ ಸೋತಿದೆ. ಅತ್ತ ಇಂಗ್ಲೆಂಡ್‌ ಬಲಿಷ್ಠ ತಂಡವನ್ನು ಕಟ್ಟಿ ಆಡುವುದರ ಜೊತೆಗೆ ತವರಿನ ಅಂಗಳದ ಲಾಭವನ್ನೂ ಪಡೆಯಲಿದೆ. ನ್ಯಾಟ್‌ ಶೀವರ್‌ ಬ್ರಂಟ್‌ ನಾಯಕತ್ವದ ತಂಡದಲ್ಲಿ ಸೋಫಿ ಡಂಕ್ಲಿ, ಅಲೈಸ್‌ ಕ್ಯಾಪ್ಸಿ, ಇಸ್ಸಿ ವೊಂಗ್‌ ಇದ್ದಾರೆ. ಉಳಿದಂತೆ ಆ್ಯಮಿ ಜೋನ್ಸ್‌, ಸೋಫಿ ಎಕ್ಲೆಸ್ಟೋನ್‌, ಟಾಮಿ ಬ್ಯೂಮೊಂಟ್‌, ಡ್ಯಾನಿ ವ್ಯಾಟ್‌ ಹಾಡ್ಜ್‌ ಸೇರಿದಂತೆ ಹಲವು ಅನುಭವಿ ಆಟಗಾರ್ತಿಯರ ಬಲವೂ ತಂಡಕ್ಕಿದೆ.

5 ಟಿ20 ಪಂದ್ಯಗಳು ಜೂ.28(ನಾಟಿಂಗ್‌ಹ್ಯಾಮ್‌), ಜು.1(ಬ್ರಿಸ್ಟೋಲ್‌), ಜು.4(ಓವಲ್‌), ಜು.9(ಮ್ಯಾಂಚೆಸ್ಟರ್‌), ಜು.12(ಬರ್ಮಿಂಗ್‌ಹ್ಯಾಮ್‌)ರಂದು ನಡೆಯಲಿವೆ. ಏಕದಿನ ಪಂದ್ಯಗಳು ಜು.16, 19 ಹಾಗೂ 22ರಂದು ಕ್ರಮವಾಗಿ ಸೌಥಾಂಪ್ಟನ್‌, ಲಾರ್ಡ್ಸ್‌ ಹಾಗೂ ಚೆಸ್ಟರ್‌ ಲೆ ಸ್ಟ್ರೀಟ್‌ ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ.

ಪಂದ್ಯ: ಸಂಜೆ 7 ಗಂಟೆಗೆ(ಭಾರತೀಯ ಕಾಲಮಾನ)

ನೇರಪ್ರಸಾರ: ಸೋನಿ ಲೈವ್‌, ಸೋನಿ ಸ್ಪೋರ್ಟ್ಸ್‌

ಭಾರತ ತಂಡ ಹೀಗಿದೆ:

ಸ್ಮೃತಿ ಮಂಧನಾ, ಶಫಾಲಿ ವರ್ಮಾ, ಹರ್ಲೀನ್ ಡಿಯೋಲ್, ಹರ್ಮನ್‌ಪ್ರೀತ್ ಕೌರ್(ನಾಯಕಿ), ಜೆಮಿಯಾ ರೋಡ್ರಿಗ್ಸ್, ರಿಚಾ ಘೋಷ್(ವಿಕೆಟ್ ಕೀಪರ್), ರಾಧಾ ಯಾದವ್, ದೀಪ್ತಿ ಶರ್ಮಾ, ಅರುಂದತಿ ರೆಡ್ಡಿ, ಶ್ರೀಚರಣಿ, ಯಾಶ್ತಿಕಾ ಭಾಟಿಯಾ, ಅಮನ್‌ಜೋತ್ ಕೌರ್, ಸ್ನೆಹ್ ರಾಣಾ, ಸಯಾಲಿ ಸತ್ಗೆರೆ, ಕ್ರಾಂತಿ ಗೌಡ್.

ಇಂಗ್ಲೆಂಡ್ ತಂಡ: ಶೀವರ್‌ ಬ್ರಂಟ್‌(ನಾಯಕಿ), ಆ್ಯರ್ಲೊಟ್‌, ಟಾಮಿ ಬ್ಯೂಮೊಂಟ್‌, ಲಾರೆನ್ ಬೆಲ್‌, ಅಲೈಸ್‌ ಕ್ಯಾಪ್ಸಿ, ಚಾರ್ಲಿ ಡೀನ್‌, ಸೋಫಿಯಾ ಡಂಕ್ಲಿ, ಎಕ್ಲೆಸ್ಟೋನ್‌, ಲಾರೆನ್‌ ಫಿಲೆರ್‌, ಆ್ಯಮಿ ಜಾನ್ಸ್‌, ಸ್ಕೋಲ್‌ಫಿಲ್ಡ್‌, ಲಿನ್ಸೆ ಸ್ಮಿತ್‌, ಡ್ಯಾನಿ ವ್ಯಾಟ್‌, ಇಸ್ಸಿ ವೊಂಗ್‌.

ಇಂಗ್ಲೆಂಡ್‌ ವಿರುದ್ಧ ಟಿ20 ಸರಣಿ ಗೆದ್ದಿಲ್ಲ ಭಾರತ

ಭಾರತ ತಂಡ ಇಂಗ್ಲೆಂಡ್ ವಿರುದ್ಧ ಈವರೆಗೂ ಸರಣಿ ಗೆದ್ದಿಲ್ಲ. 2006ರಲ್ಲಿ ನಡೆದಿದ್ದ ಉಭಯ ತಂಡಗಳ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಭಾರತ ಗೆದ್ದಿತ್ತು. ಆ ಬಳಿಕ 6 ಸರಣಿಗಳು ನಡೆದಿದ್ದು, ಎಲ್ಲದರಲ್ಲೂ ಇಂಗ್ಲೆಂಡ್‌ ಜಯಗಳಿಸಿವೆ. ಒಟ್ಟಾರೆ 2 ತಂಡಗಳು 30 ಬಾರಿ ಮುಖಾಮುಖಿಯಾಗಿದ್ದು, ಇಂಗ್ಲೆಂಡ್ 22ರಲ್ಲಿ ಗೆದ್ದಿದ್ದರೆ, ಭಾರತ 8 ಪಂದ್ಯಗಳಲ್ಲಿ ಜಯಗಳಿಸಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ