"ಟೀಂ ಇಂಡಿಯಾ ಆಟಗಾರನಾಗುವುದು....": ಫಿಫ್ಟಿ ಬಾರಿಸಿ ಅಚ್ಚರಿಯ ಹೇಳಿಕೆ ನೀಡಿದ ಸಂಜು ಸ್ಯಾಮ್ಸನ್‌..!

By Naveen KodaseFirst Published Aug 2, 2023, 4:39 PM IST
Highlights

ವೆಸ್ಟ್ ಇಂಡೀಸ್ ಎದುರು ಆಕರ್ಷಕ ಅರ್ಧಶತಕ ಚಚ್ಚಿದ ಸಂಜು ಸ್ಯಾಮ್ಸನ್
ಏಕದಿನ ವಿಶ್ವಕಪ್‌ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಎದುರು ನೋಡುತ್ತಿರುವ ಸಂಜು
ಭಾರತೀಯ ಆಟಗಾರನಾಗುವುದು ಸವಾಲೆಂದ ಸಂಜು ಸ್ಯಾಮ್ಸನ್

ಟ್ರಿನಿಡ್ಯಾಡ್‌(ಆ.02): ವೆಸ್ಟ್ ಇಂಡೀಸ್ ಎದುರಿನ ಎರಡನೇ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಟೀಂ ಇಂಡಿಯಾ ಕ್ರಿಕೆಟಿಗ ಸಂಜು ಸ್ಯಾಮ್ಸನ್‌, ವಿಂಡೀಸ್ ಎದುರಿನ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದಾರೆ. ಮೂರನೇ ಏಕದಿನ ಪಂದ್ಯದಲ್ಲಿ ಕೇರಳ ಮೂಲದ ಕ್ರಿಕೆಟಿಗ ಸಂಜು ಸ್ಯಾಮ್ಸನ್‌, 41 ಎಸೆತಗಳನ್ನು ಎದುರಿಸಿ ಆಕರ್ಷಕ 51 ರನ್ ಸಿಡಿಸಿದ್ದರು. 

ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾಗೆ ಆರಂಭಿಕರಾದ ಶುಭ್‌ಮನ್ ಗಿಲ್‌(85) ಹಾಗೂ ಇಶಾನ್ ಕಿಶನ್‌(77) ಆಕರ್ಷಕ 140 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಭದ್ರಬುನಾದಿ ಹಾಕಿಕೊಟ್ಟರು. ಇಶಾನ್ ಕಿಶನ್‌ ವಿಕೆಟ್ ಪತನದ ಬಳಿಕ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಳಿದ ಋತುರಾಜ್ ಗಾಯಕ್ವಾಡ್‌ ಕೇವಲ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು. 

ಭಾರತೀಯ ಆಟಗಾರನಾಗುವುದು ಸವಾಲೆಂದ ಸಂಜು ಸ್ಯಾಮ್ಸನ್:

ಟೀಂ ಇಂಡಿಯಾ ಪರ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಳಿದ ಸಂಜು ಸ್ಯಾಮ್ಸನ್‌, ಇನಿಂಗ್ಸ್‌ನಲ್ಲಿ ತಾವೆದುರಿಸಿದ ಎರಡನೇ ಎಸೆತದಲ್ಲೇ ಸಿಕ್ಸರ್ ಸಿಡಿಸುವ ಮೂಲಕ ಸ್ಪೋಟಕ ಇನಿಂಗ್ಸ್ ಆಡುವ ಮುನ್ಸೂಚನೆ ನೀಡಿದರು. ಇದಾಗಿ ಮತ್ತೆರಡು ಎಸೆತಗಳ ಬಳಿಕ ಸಂಜು ಸ್ಯಾಮ್ಸನ್‌ ಮತ್ತೊಂದು ಸಿಕ್ಸರ್ ಚಚ್ಚಿದರು. ಸಂಜು ಸ್ಯಾಮ್ಸನ್‌ ಅವರ ಸೊಗಸಾದ ಇನಿಂಗ್ಸ್‌ನಲ್ಲಿ 4 ಸಿಕ್ಸರ್‌ಗಳು ಸೇರಿದ್ದವು. ಸಂಜು ಸ್ಯಾಮ್ಸನ್ ಆಡಿದ ಸ್ಪೋಟಕ ಇನಿಂಗ್ಸ್‌ನಿಂದಾಗಿ ಟೀಂ ಇಂಡಿಯಾ ರನ್‌ ವೇಗಕ್ಕೆ ಮತ್ತಷ್ಟು ಚುರುಕು ಸಿಕ್ಕಂತ್ತಾಯಿತು. ಸಂಜು ಸ್ಯಾಮ್ಸನ್ ಕೇವಲ 39 ಎಸೆತಗಳನ್ನು ಎದುರಿಸಿ ಅರ್ಧಶತಕ ಪೂರೈಸುವಲ್ಲಿ ಯಶಸ್ವಿಯಾದರು. ಅರ್ಧಶತಕ ಬಾರಿಸಿದ ಬಳಿಕ ಮತ್ತೊಂದು ಬೌಂಡರಿ ಬಾರಿಸುವ ಯತ್ನದಲ್ಲಿ ಸಂಜು ಸ್ಯಾಮ್ಸನ್, ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.

ಸೆಕ್ಸ್‌ ಹಗರಣದಲ್ಲಿ ಸಿಕ್ಕಿಬಿದ್ದ ಟಾಪ್ 5 ಸ್ಟಾರ್ ಕ್ರಿಕೆಟಿಗರು..! ಇವರೇನು ಸಾಮಾನ್ಯ ಕ್ರಿಕೆಟಿಗರಲ್ಲ..!

ಇನಿಂಗ್ಸ್‌ ಮುಕ್ತಾಯದ ಬಳಿಕ, ವಿವಿಧ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದರ ಕುರಿತಂತೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಜು ಸ್ಯಾಮ್ಸನ್, ಭಾರತ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವುದು ಎಷ್ಟು ಸವಾಲಿನ ಕೆಲಸ ಎನ್ನುವುದನ್ನು ವಿವರಿಸಿದ್ದಾರೆ. ಇದೇ ವೇಳೆ ಕಳೆದ 8-10 ವರ್ಷಗಳಿಂದ ಭಾರತ ತಂಡದಲ್ಲಿ ವಿವಿಧ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದರ ಸವಾಲು ಹೇಗಿದೆ ಎನ್ನುವುದರ ಬಗ್ಗೆಯೂ ತುಟಿಬಿಚ್ಚಿದ್ದಾರೆ.

"ಭಾರತೀಯ ಕ್ರಿಕೆಟಿಗನಾಗಿರುವುದು ನಿಜಕ್ಕೂ ಸವಾಲಿನ ಕೆಲಸ. ನಾನಿಲ್ಲಿ ಕಳೆದ 8-10 ವರ್ಷಗಳಿಂದ ಬೇರೆ ಬೇರೆ ಕ್ರಮಾಂಕದಲ್ಲಿ ಆಡಿದ್ದೇನೆ. ಇನಿಂಗ್ಸ್‌ನಲ್ಲಿ ಎಷ್ಟು ಓವರ್ ಉಳಿದಿದೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಪರಿಸ್ಥಿತಿಗನುಗುಣವಾಗಿ ಬ್ಯಾಟ್ ಮಾಡಬೇಕಾಗುತ್ತದೆ" ಎಂದು ಸಂಜು ಸ್ಯಾಮ್ಸನ್ ತಿಳಿಸಿದ್ದಾರೆ.

'ನಾವೇನೂ ಲಕ್ಸುರಿ ಕೇಳುತ್ತಿಲ್ಲ, ಕನಿಷ್ಠ ಮೂಲ ಸೌಕರ್ಯ ಕೊಡಿ': ವಿಂಡೀಸ್ ಮಂಡಳಿ ಮೇಲೆ ಕಿಡಿಕಾರಿದ ಹಾರ್ದಿಕ್‌ ಪಾಂಡ್ಯ

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ನಿರ್ಣಾಯಕ ಪಂದ್ಯದ ಬಗ್ಗೆ ಹೇಳುವುದಾದರೇ, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ, ಇಶಾನ್ ಕಿಶನ್, ಶುಭ್‌ಮನ್ ಗಿಲ್, ಸಂಜು ಸ್ಯಾಮ್ಸನ್ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ ಬಾರಿಸಿದ ಆಕರ್ಷಕ ಅರ್ಧಶತಕಗಳ ನೆರವಿನಿಂದ ಭಾರತ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 351 ರನ್ ಬಾರಿಸಿತ್ತು. 

ಇನ್ನು ಕಠಿಣ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡಕ್ಕೆ, ಮುಕೇಶ್ ಕುಮಾರ್ ಆರಂಭದಲ್ಲೇ ಶಾಕ್‌ ನೀಡಿದರು. ಮೊದಲ 3 ಓವರ್‌ನಲ್ಲೇ 7 ರನ್‌ ಗಳಿಸುವಷ್ಟರಲ್ಲಿ ವಿಂಡೀಸ್ ಆರಂಭಿಕರಿಬ್ಬರನ್ನು ಬಲಿ ಪಡೆಯುವಲ್ಲಿ ಮುಕೇಶ್ ಕುಮಾರ್ ಯಶಸ್ವಿಯಾದರು. ಇದಾದ ಬಳಿಕ ಒಂದು ತುದಿಯಲ್ಲಿ ಅಲಿಕ್ ಅಥಂಜೆ 50 ಎಸೆತಗಳನ್ನು ಎದುರಿಸಿ 3 ಬೌಂಡರಿ ಸಹಿತ 32 ರನ್ ಬಾರಿಸುವ ಮೂಲಕ ಕೊಂಚ ಪ್ರತಿರೋಧ ತೋರಿದರು. ಆದರೆ ಮತ್ತೊಂದು ತುದಿಯಲ್ಲಿ ಶಾಯ್ ಹೋಪ್(5), ಕೇಸಿ ಕಾರ್ಟಿ(6), ಶಿಮ್ರೊನ್ ಹೆಟ್ಮೇಯರ್(4) ಹಾಗೂ ರೊಮ್ಯಾರಿಯೋ ಶೆಫರ್ಡ್‌(8) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರು. ವೆಸ್ಟ್ ಇಂಡೀಸ್ ತಂಡವು 88 ರನ್‌ ಗಳಿಸುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಗಿತ್ತು.

ಭಾರತ ಎದುರಿನ ಟಿ20 ಸರಣಿಗೆ ಬಲಿಷ್ಠ ವೆಸ್ಟ್ ಇಂಡೀಸ್ ತಂಡ ಪ್ರಕಟ; ಸ್ಟಾರ್ ಆಟಗಾರರಿಗೆ ಮಣೆ ಹಾಕಿದ ವಿಂಡೀಸ್..!

ಇನ್ನು ಕೊನೆಯಲ್ಲಿ ಯಾನಿಕ್‌ ಕಾರಿಯ್‌(19), ಅಲ್ಜಾರಿ ಜೋಸೆಫ್(26) ಹಾಗೂ ಗುದಕೇಶ್ ಮೋಟಿ ಅಜೇಯ 39 ರನ್‌ ಬಾರಿಸುವ ಮೂಲಕ ತಂಡ 150ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.  ವೆಸ್ಟ್ ಇಂಡೀಸ್ ಎದುರು ಮಾರಕ ದಾಳಿ ನಡೆಸಿದ ಶಾರ್ದೂಲ್ ಠಾಕೂರ್ 37 ರನ್ ನೀಡಿ 4 ವಿಕೆಟ್ ಪಡೆದರೆ, ಮುಕೇಶ್ ಕುಮಾರ್ 30 ರನ್‌ಗೆ 3, ಕುಲ್ದೀಪ್ ಯಾದವ್ 2 ಹಾಗೂ ಜಯದೇವ್ ಉನಾದ್ಕತ್ ಒಂದು ವಿಕೆಟ್ ಪಡೆದರು. 

click me!