
ಬಾರ್ಬಡಾಸ್(ಆ.02): ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ 5 ಪಂದ್ಯಗಳ ಟಿ20 ಸರಣಿಯು ಆಗಸ್ಟ್ 03ರಿಂದ ಆರಂಭವಾಗಲಿದ್ದು, ಈ ಸರಣಿಗೆ ಬಲಿಷ್ಠ ವೆಸ್ಟ್ ಇಂಡೀಸ್ ಕ್ರಿಕಟ್ ತಂಡ ಪ್ರಕಟವಾಗಿದೆ. ಭಾರತ ಎದುರಿನ ಸರಣಿಗೆ ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ಶಾಯ್ ಹೋಪ್ ಹಾಗೂ ಮಾರಕ ವೇಗಿ ಒಶಾನೆ ಥಾಮಸ್ ಅವರು ವೆಸ್ಟ್ ಇಂಡೀಸ್ ಟಿ20 ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ.
ವೆಸ್ಟ್ ಇಂಡೀಸ್ ಏಕದಿನ ತಂಡದ ನಾಯಕರಾಗಿರುವ ಶಾಯ್ ಹೋಪ್, ಕಳೆದ ವರ್ಷದ ಫೆಬ್ರವರಿಯಲ್ಲಿ ಕೊನೆಯ ಬಾರಿಗೆ ವಿಂಡೀಸ್ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದರು. ಏಕದಿನ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿರುವ ಶಾಯ್ ಹೋಪ್, ಇದೀಗ ಟಿ20 ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ. ಇನ್ನೊಂದೆಡೆ 2021ರ ಡಿಸೆಂಬರ್‌ನಲ್ಲಿ ಕೊನೆಯ ಬಾರಿಗೆ ವೆಸ್ಟ್ ಇಂಡೀಸ್ ಟಿ20 ತಂಡದ ಪರ ಕಣಕ್ಕಿಳಿದಿದ್ದ ವೇಗಿ ಒಶಾನೆ ಥಾಮಸ್ ಕೂಡಾ ಇದೀಗ ವಿಂಡೀಸ್ ಆಯ್ಕೆ ಸಮಿತಿ ಆಯ್ಕೆ ಮಾಡಿದ 15 ಆಟಗಾರರ ವೆಸ್ಟ್ ಇಂಡೀಸ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿಗೆ ಭಾರತ ತಂಡ ಪ್ರಕಟ, ಕೊಹ್ಲಿ-ರೋಹಿತ್ ಇಬ್ರೂ ಇಲ್ಲ!
ಅನುಭವಿ ಬ್ಯಾಟರ್ ರೋವ್ಮನ್ ಪೋವೆಲ್, ವೆಸ್ಟ್ ಇಂಡೀಸ್ ತಂಡವನ್ನು ಮುನ್ನಡೆಸಲಿದ್ದು, ಕೈಲ್ ಮೇಯರ್ಸ್ ಉಪನಾಯಕರಾಗಿ ನೇಮಕವಾಗಿದ್ದಾರೆ. ವೆಸ್ಟ್ ಇಂಡೀಸ್ ತಂಡದಲ್ಲಿ ಟಿ20 ಸ್ಪೆಷಲಿಸ್ಟ್ ಆಟಗಾರರ ದಂಡೇ ಇದ್ದು, ಜೇಸನ್ ಹೋಲ್ಡರ್, ನಿಕೋಲಸ್ ಪೂರನ್, ಶಿಮ್ರೊನ್ ಹೆಟ್ಮೇಯರ್ ಅವರಂತಹ ಸ್ಪೋಟಕ ಬ್ಯಾಟರ್‌ಗಳು ಸ್ಥಾನ ಪಡೆದಿದ್ದಾರೆ.
ಎರಡು ಬಾರಿಯ ಏಕದಿನ ವಿಶ್ವಕಪ್ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವು ಇದೇ ಮೊದಲ ಬಾರಿಗೆ 2023ರ ಏಕದಿನ ವಿಶ್ವಕಪ್ ಟೂರ್ನಿಗೆ ಅರ್ಹತೆಗಿಟ್ಟಿಸಿಕೊಳ್ಳಲು ವಿಫಲವಾಗಿದೆ. ಇನ್ನು ಇದರ ಜತೆಗೆ ಗಾಯದ ಮೇಲೆ ಬರೆ ಎಳೆದಂತೆ ತವರಿನಲ್ಲಿ ಭಾರತ ಎದುರು ಟೆಸ್ಟ್ ಹಾಗೂ ಏಕದಿನ ಸರಣಿ ಸೋತು ಮುಖಭಂಗ ಅನುಭವಿಸಿದೆ. ಆದರೆ ಟಿ20 ಕ್ರಿಕೆಟ್‌ನಲ್ಲಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿರುವ ವಿಂಡೀಸ್, 2024ರಲ್ಲಿ ಯುಎಸ್‌ಎ ಜತೆಗೂಡಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸಿದೆ. ಹೀಗಾಗಿ ಟೆಸ್ಟ್ ಹಾಗೂ ಏಕದಿನ ಸರಣಿ ಸೋಲು ಮರೆತು, ಭಾರತ ಎದುರು ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಲು ವೆಸ್ಟ್ ಇಂಡೀಸ್ ತಂಡವು ಸಜ್ಜಾಗಿದೆ.
ಐರ್ಲೆಂಡ್ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟ, ಕಮ್‌ಬ್ಯಾಕ್ ಮಾಡಿದ ಜಸ್ಪ್ರೀತ್ ಬುಮ್ರಾ ನಾಯಕ ಪಟ್ಟ!
ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಆಗಸ್ಟ್ 3ರಿಂದ ಟ್ರಿನಿಡಾಡ್ನಲ್ಲೇ 5 ಪಂದ್ಯಗಳ ಟಿ20 ಸರಣಿ ಆರಂಭವಾಗಲಿದ್ದು, 2 ಮತ್ತು 3ನೇ ಪಂದ್ಯ ಕ್ರಮವಾಗಿ ಆಗಸ್ಟ್ 6, 8ಕ್ಕೆ ಗಯಾನದಲ್ಲಿ, 4 ಮತ್ತು 5ನೇ ಪಂದ್ಯ ಆಗಸ್ಟ್ 12 ಮತ್ತು 13ರಂದು ಫ್ಲೋರಿಡಾದಲ್ಲಿ ನಡೆಯಲಿದೆ.
ವೆಸ್ಟ್ ಇಂಡೀಸ್ ತಂಡ ಹೀಗಿದೆ:
ರೋವ್ಮನ್ ಪೋವೆಲ್(ನಾಯಕ), ಕೈಲ್ ಮೇಯರ್ಸ್(ಉಪನಾಯಕ), ಜಾನ್ಸನ್ ಚಾರ್ಲ್ಸ್, ರೋಸ್ಟನ್ ಚೇಸ್, ಶಿಮ್ರೊನ್ ಹೆಟ್ಮೇಯರ್, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಕೆಲ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರೆಂಡನ್ ಕಿಂಗ್, ಒಬೆಡ್ ಮೆಕಾಯ್, ನಿಕೋಲಸ್ ಪೂರನ್, ರೊಮೆರಿಯೋ ಶೆಫರ್ಡ್, ಒಡೆನ್ ಸ್ಮಿತ್, ಒಶಾನೆ ಥಾಮಸ್.
ಭಾರತದ ತಂಡ:
ಇಶಾನ್ ಕಿಶನ್ (ವಿ.ಕೀ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಸೂರ್ಯ ಕುಮಾರ್ ಯಾದವ್ (ಉಪನಾಯಕ), ಸಂಜು ಸ್ಯಾಮ್ಸನ್ (ವಿ.ಕೀ), ಹಾರ್ದಿಕ್ ಪಾಂಡ್ಯ (ನಾಯಕ), ಅಕ್ಸರ್ ಪಟೇಲ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಅವೇಶ್ ಖಾನ್, ಮುಖೇಶ್ ಕುಮಾರ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.