
ಬೆಂಗಳೂರು: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ನಾಲ್ಕನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಸರಣಿಯಲ್ಲಿ 2-2ರ ಸಮಬಲ ಸಾಧಿಸಿದೆ. ಇದೀಗ ಐದನೇ ಪಂದ್ಯದಲ್ಲಿ ಭಾರತ ಪ್ರಮುಖ 4 ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯು ಇದೀಗ ರೋಚಕ ಘಟ್ಟ ತಲುಪಿದೆ. ಸರಣಿ 2-2ರಲ್ಲಿ ಸಮಬಲವಾಗಿರುವುದರಿಂದ ಬೆಂಗಳೂರಿನಲ್ಲಿ ನಡೆಯಲಿರುವ ಐದನೇ ಟಿ20 ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ನಾಲ್ಕನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್ಗಳು ಮತ್ತೊಮ್ಮೆ ವೈಫಲ್ಯ ಅನುಭವಿಸಿದ್ದಾರೆ.
ಹೀಗಾಗಿ ವೆಸ್ಟ್ ಇಂಡೀಸ್ ಎದುರಿನ ಐದನೇ ಹಾಗೂ ನಿರ್ಣಾಯಕ ಟಿ20 ಪಂದ್ಯದಲ್ಲಿ ಭಾರತ ತಂಡವು ಕೆಲವು ಬದಲಾವಣೆಗಳನ್ನು ಮಾಡುವ ಸಾಧ್ಯತೆ ದಟ್ಟವಾಗಿದೆ. ಭಾರತದ ದುರ್ಬಲ ಬೌಲಿಂಗ್ ಪಡೆಯ ಲಾಭವನ್ನು ವೆಸ್ಟ್ ಇಂಡೀಸ್ ತಂಡವು ಪಡೆದುಕೊಳ್ಳುತ್ತಿದೆ. ಭಾರತದ ಬ್ಯಾಟಿಂಗ್ ವಿಭಾಗವನ್ನು ಬಲಪಡಿಸುವ ಉದ್ಧೇಶದಿಂದ ಗಂಭೀರ್-ಅಯ್ಯರ್ ಜೋಡಿ ಬೌಲಿಂಗ್ ಕೊಂಚ ವೀಕ್ ಆಗುವಂತೆ ಮಾಡುತ್ತಿದೆ. ಹೀಗಾಗಿ ನಾಲ್ಕನೇ ಟಿ20 ಸೋಲಿನ ಬಳಿಕ ಟೀಂ ಇಂಡಿಯಾ ಎಚ್ಚೆತ್ತುಕೊಂಡಿದ್ದು, ಐದನೇ ಪಂದ್ಯದಲ್ಲಿ 4 ಪ್ರಮುಖ ಬದಲಾವಣೆಗಳೊಂಗೆ ಭಾರತ ಕಣಕ್ಕಿಳಿಯುವುದು ಬಹುತೇಕ ಪಕ್ಕಾ ಎನ್ನಲಾಗುತ್ತಿದೆ.
ನಮನ್ ಧೀರ್ ಆಲ್ರೌಂಡರ್ ಆಟಗಾರನಾಗಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುತ್ತಿದ್ದಾರೆ. ಆದರೆ ಈ ಸರಣಿಯಲ್ಲಿ ನಮನ್ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬಂದಿಲ್ಲ. ನಾಲ್ಕನೇ ಟಿ20 ಪಂದ್ಯದಲ್ಲಿ ನಮನ್ ಕೇವಲ 1.9 ಓವರ್ ಅಷ್ಟೇ ಬೌಲಿಂಗ್ ಮಾಡಿದ್ದರು.ಇನ್ನು ಬ್ಯಾಟಿಂಗ್ನಲ್ಲೂ ನಿರೀಕ್ಷಿತ ಪ್ರದರ್ಶನ ನೀಡುತ್ತಿಲ್ಲ. ಹೀಗಾಗಿ ಐದನೇ ಟಿ20 ಪಂದ್ಯದಲ್ಲಿ ನಮನ್ ಧೀರ್ ಬದಲಿಗೆ ತಾರಾ ಆಲ್ರೌಂಡರ್ ಶಿವಂ ದುಬೆಗೆ ಆಡುವ ಹನ್ನೊಂದರ ಬಳಗದಲ್ಲಿ ಮಣೆಹಾಕುವ ಸಾಧ್ಯತೆ ದಟ್ಟವಾಗಿದೆ..
ಇನ್ನು ವೇಗದ ಬೌಲರ್ ಮಯಾಂಕ್ ಯಾದವ್ ಪದೇ ಪದೇ ದುಬಾರಿಯಾಗುತ್ತಿದ್ದಾರೆ. ನಾಲ್ಕನೇ ಟಿ20 ಪಂದ್ಯದಲ್ಲಿ ಮಯಾಂಕ್ ಯಾದವ್ 4 ಓವರ್ ಬೌಲಿಂಗ್ ಮಾಡಿ 52 ರನ್ ಚಚ್ಚಿಸಿಕೊಂಡಿದ್ದರು. ಪವರ್ಪ್ಲೇನಲ್ಲೇ ಮಯಾಂಕ್ ದುಬಾರಿಯಾಗುತ್ತಿದ್ದು, ತಂಡದ ನಿದ್ದೆಗೆಡಿಸಿದೆ. ಹೀಗಾಗಿ ಮಯಾಂಕ್ ಹೊರಗಿಟ್ಟು, ಬೆಂಗಳೂರಿನ ಸ್ಪಿನ್ ಸ್ನೇಹಿ ಪಿಚ್ ಮನದಲ್ಲಿಟ್ಟುಕೊಂಡು ಕುಲ್ದೀಪ್ ಯಾದವ್ಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ.
ಇನ್ನು ವಿಂಡೀಸ್ ಎದುರಿನ ನಿರ್ಣಾಯಕ ಟಿ20 ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಕೂಡಾ ಆಡುವ ಹನ್ನೊಂದರ ಬಳಗದಿಂದ ಹೊರಬೀಳುವ ಸಾಧ್ಯತೆಯಿದೆ. ಸತತ ಟಿ20 ಪಂದ್ಯಗಳನ್ನಾಡಿ ದಣಿದಂತೆ ಕಾಣುತ್ತಿರುವ ಅಭಿಷೇಕ್ ಶರ್ಮಾ, ವೆಸ್ಟ್ ಇಂಡೀಸ್ ಎದುರಿನ ನಾಲ್ಕನೇ ಟಿ20 ಪಂದ್ಯದಲ್ಲಿ 24 ಎಸೆತಗಳಲ್ಲಿ 29 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಹೀಗಾಗಿ ಕೊನೆಯ ಪಂದ್ಯದಲ್ಲಿ ಅಭಿಷೇಕ್ ಶರ್ಮಾಗೆ ವಿಶ್ರಾಂತಿ ನೀಡಿ 15 ವರ್ಷದ ವೈಭವ್ ಸೂರ್ಯವಂಶಿಗೆ ಮಣೆ ಹಾಕುವ ಸಾಧ್ಯತೆ ಹೆಚ್ಚಿದೆ.
ಇನ್ನು ಅರ್ಶದೀಪ್ ಸಿಂಗ್ ಅವರ ಪಾಲಿಗೂ ಈ ಟಿ20 ಸರಣಿ ಅಷ್ಟೇನೂ ಉತ್ತಮವಾಗಿಲ್ಲ. ಹೀಗಾಗಿ ಅರ್ಶದೀಪ್ಗೆ ವಿಶ್ರಾಂತಿ ನೀಡಿ, ಈಗಾಗಲೇ ಬೆಂಗಳೂರಿನಲ್ಲಿ ಅಭ್ಯಾಸ ಆರಂಭಿಸಿರುವ ಭುವನೇಶ್ವರ್ ಕುಮಾರ್ ಅವರನ್ನು ಅಚ್ಚರಿಯ ರೀತಿಯಲ್ಲಿ ತಂಡಕ್ಕೆ ಸೇರಿಸಿಕೊಂಡು ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡುವ ಸಾಧ್ಯತೆಯಿದೆ. ಭುವನೇಶ್ವರ್ ಕುಮಾರ್ ಸದ್ಯ ನ್ಯೂಜಿಲೆಂಡ್ ಎದುರಿನ ಟಿ20 ಸರಣಿಗೆ ಆಯ್ಕೆಯಾಗಿದ್ದಾರೆ.
ಸಂಜು ಸ್ಯಾಮ್ಸನ್, ವೈಭವ್ ಸೂರ್ಯವಂಶಿ, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್(ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ಪ್ರಿನ್ಸ್ ಯಾದವ್, ಭುವನೇಶ್ವರ್ ಕುಮಾರ್, ಕುಲ್ದೀಪ್ ಯಾದವ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.